ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಪ್ರೀತಿಗೆ ಮಾದರಿ ಕಾಲೇಜು

Last Updated 9 ಸೆಪ್ಟೆಂಬರ್ 2011, 8:10 IST
ಅಕ್ಷರ ಗಾತ್ರ

ತುಮಕೂರು:  ವಿವಿಧ ಜಾತಿಯ ಮರಗಳು, ಹೂವಿನ ಸಸಿಗಳು, ಅಂಗಳಕ್ಕೆಲ್ಲಾ ಹಸಿರು ಓಕಳಿ ಹರಡಿದಂತೆ ಭಾಸವಾಗುವ ಮೆತ್ತನೆ ಹಸಿರು ಹೊದಿಕೆ, ಹೊರಗಿನಿಂದ ನಿಂತು ನೋಡಿದರೆ ಯಾರೋ ಅಪ್ಪಟ ರೈತರ ತೋಟವಿರಬೇಕು ಎನ್ನಿಸುತ್ತದೆ. ಆದರೆ, ಒಳಹೊಕ್ಕ ನಂತರವೇ ತಿಳಿಯುವುದು ಕಾಲೇಜು ಆವರಣ ಎಂದು.

ನಗರದಿಂದ ಸುಮಾರು 15 ಕಿ.ಮೀ ಅಂತರದಲ್ಲಿರುವ ನೇರಳಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರದ ಕುರಿತು ಪಾಠ ಹೇಳುವ ಜೊತೆಗೆ 3 ಎಕರೆಯಷ್ಟು ಇರುವ ಕಾಲೇಜು ಆವರಣದಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕೂಡಿಕೊಂಡು ವಿಶೇಷ ಆಸಕ್ತಿಯಿಂದ ಸುಂದರ ಉದ್ಯಾನ ರೂಪಿಸಿದ್ದಾರೆ.

ಇಲ್ಲಿ ಸುಮಾರು 600ಕ್ಕೂ ಹೆಚ್ಚು ಮರಗಿಡಗಳನ್ನು ಬೆಳೆಸಲಾಗಿದೆ. ತೇಗ, ಬೆಟ್ಟದ ನೆಲ್ಲಿ, ಸಿಲ್ವರ್, ಬೇವು, ಹೂವಿನ ಗಿಡಗಳು ಸೇರಿದಂತೆ 15ಕ್ಕೂ ಹೆಚ್ಚು ಜಾತಿಯ ಮರಗಳಿವೆ. ದಿನನಿತ್ಯ ವಿದ್ಯಾರ್ಥಿಗಳು ಒಂದು ಗಂಟೆ ಕಾಲ ಮರಗಿಡಗಳ ಪೋಷಣೆ ಮಾಡುತ್ತಾರೆ. ಎತ್ತ ನೋಡಿದರೂ ಹಸಿರು ಕಂಗೊಳಿಸುತ್ತದೆ.

ಪಿಯುಸಿಯಲ್ಲಿ ಒಟ್ಟು 48 ವಿದ್ಯಾರ್ಥಿಗಳಿದ್ದಾರೆ. 3 ಮಂದಿಯ ತಂಡವೊಂದಕ್ಕೆ ಒಂದು ಜಾತಿಯ ಮರ ಹಾಗೂ ಗಿಡಗಳನ್ನು ದತ್ತು ನೀಡಲಾಗುತ್ತದೆ. ಅವುಗಳ ಸಂರಕ್ಷಣೆಯ ಹೊಣೆ ಆ ತಂಡದ್ದಾಗಿರುತ್ತದೆ. ಹೀಗೆ, ಸುಮಾರು 15 ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಪೈಪೋಟಿಗೆ ಬಿದ್ದವರಂತೆ ವಿದ್ಯಾರ್ಥಿಗಳು ಮರಗಿಡ ಪೋಷಿಸುತ್ತಿದ್ದಾರೆ. ಅವುಗಳಿಗೆ ಘಾಸಿಯಾದರೆ ಸಹಿಸುವುದಿಲ್ಲ. ನಮಗೆ ವಿದ್ಯಾರ್ಥಿಗಳಿಂದ ದೂರುಗಳೇನಾದರು ಬಂದರೆ, ಅದು ಅವರ ಗಿಡಮರಗಳಿಗೆ ಯಾರೋ ಘಾಸಿ ಮಾಡಿದ್ದಾರೆ ಎಂಬುದಾಗಿರುತ್ತದೆ. ಅವರು ಗಿಡಮರಗಳೊಂದಿಗೆ ಇಟ್ಟುಕೊಂಡಿರುವ ಭಾವನಾತ್ಮಕ ಒಡನಾಟ ಎಂತವರಿಗೂ ಬೆರಗು ಹುಟ್ಟಿಸುತ್ತದೆ.

ಅಲ್ಲದೆ ಪರಿಸರಕ್ಕೆ ಸಂಬಂಧಿಸಿದ ಹಲವು ಸ್ಪರ್ಧೆ ನಡೆಸಲಾಗುತ್ತದೆ. ಪ್ರಾಜೆಕ್ಟ್ ರೂಪದಲ್ಲಿ ವಿದ್ಯಾರ್ಥಿಗಳು ಗಿಡ ಮರಗಳ ಭಾಗಗಳನ್ನು ಸಂಗ್ರಹಿಸಿ ಅವುಗಳ ಗುಣ ವಿಶೇಷಗಳನ್ನು ವಿವರಿಸುತ್ತಾರೆ. ಜತೆಗೆ ಇದರ ಮೇಲೆ ಪ್ರಬಂಧ, ಪ್ರಶ್ನೋತ್ತರ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ನಗದು ಬಹುಮಾನ ನೀಡುತ್ತೇವೆ ಹಾಗೂ ತಿಂಗಳಿಗೆ ಒಮ್ಮೆಯಾದರೂ ಪರಿಸರ ತಜ್ಞರು, ವೈದ್ಯರು, ಪಠ್ಯವಿಷಯ ತಜ್ಞರನ್ನು ಕರೆಸಿ ಕಾರ್ಯಾಗಾರ ಸಹ ನಡೆಸಲಾಗುತ್ತಿದೆ ಎನ್ನುತ್ತಾರೆ ಉಪನ್ಯಾಸಕಿ ಹಂಸ ನಂದಿನಿ.

`ವಾರಕ್ಕೆರಡು ಬಾರಿ ಗಿಡಮರಗಳಿಗೆ ನೀರು ಹಾಯಿಸುತ್ತೇವೆ. ಅವುಗಳ ಸುತ್ತಲೂ ಪಾತಿ ಮಾಡಿ ಸೊಪ್ಪು, ಎಲೆಗಳನ್ನು ಹಾಕಿ ಮೇಲೆ ಮಣ್ಣು ಹರಡುತ್ತೇವೆ. ಇದು ಸಾವಯವ ಪದ್ದತಿ, ತೇವಾಂಶ ಹಿಡಿದಿಡುತ್ತದೆ. ನಮಗೆ ಕಾಲೇಜು ಬೇಸರವಾಗುವುದಿಲ್ಲ. ನಾವೇನಾದರು ಸಪ್ಪಗಿದ್ದರೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳು ಮನೇಲಿ ಏನಾದರು ಸಮಸ್ಯೆ ಇದೆಯೇನೊ ಎನ್ನತ್ತಾರೆ. ಕೆಲವೊಮ್ಮೆ ನೆರವಿಗೆ ಬರುತ್ತಾರೆ. ನಾವೆಲ್ಲರೂ ಒಂದೇ ಕುಟುಂಬಂದಂತೆ ಇದ್ದೀವಿ~ ಎನ್ನುತ್ತಾನೆ ವಿದ್ಯಾರ್ಥಿ ನರಸಿಂಹಮೂರ್ತಿ.

ಇಷ್ಟು ದೊಡ್ಡಉದ್ಯಾನ ಕಾಪಾಡುವುದು ಸುಲಭವಲ್ಲ. ನಮ್ಮ ಶ್ರಮ ಏನೂ ಇಲ್ಲ. ಅದೇನಿದ್ದರೂ ವಿದ್ಯಾರ್ಥಿಗಳ ಕ್ರೀಯಾಶೀಲತೆ ಹಾಗೂ ಹುಮ್ಮಸ್ಸು. ಉದ್ಯಾನದ ಹುಲ್ಲನ್ನು ಹರಾಜು ಹಾಕುತ್ತೇವೆ. ಇದರಿಂದ ತಮ್ಮ ಪ್ರಾಣಿಗಳಿಗೆ ಹುಲ್ಲು ಕೊಂಡವರು ಉದ್ಯಾನ ಕಾಯುತ್ತಾರೆ. ಸುತ್ತಲೂ ಆವರಣ ಗೋಡೆ ನಿರ್ಮಾಣಗೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಉದ್ದೇಶವಿದೆ. 2007ರಲ್ಲಿ ಸ್ಥಪಾನೆಗೊಂಡ ಕಾಲೇಜು ಆರಂಭದಲ್ಲಿ ಸೌಲಭ್ಯಗಳಿಲ್ಲದೆ ನಲುಗಿತ್ತು. ನಂತರ, ಸುತ್ತಲಿನ ಗ್ರಾಮಸ್ಥರ ಸಹಕಾರದಿಂದ ಸೌಕರ್ಯ ವೃದ್ಧಿಸುತ್ತಿದೆ. ಸರ್ಕಾರದಿಂದ ಎಲ್ಲವನ್ನು ನಿರೀಕ್ಷೆ ಮಾಡುವುದು ಸರಿಯಲ್ಲ. ಸಮುದಾಯ ಸಹಭಾಗಿತ್ವ ಬೇಕಲ್ಲವೇ ಎನ್ನುತ್ತಾರೆ ಪ್ರಾಂಶುಪಾಲ ಮರಿಬಸಪ್ಪ.

ಸುತ್ತಲಿನ ಗ್ರಾಮಗಳಿಂದ ನಡೆದು ಅಥವಾ ಸೈಕಲ್‌ನಲ್ಲಿ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳಿಲ್ಲ. ಇಷ್ಟಾದರೂ ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಓದಿನಲ್ಲೂ ಮುಂದಿರುವ ವಿದ್ಯಾರ್ಥಿಗಳು ಎಲ್ಲರಂತಲ್ಲ, ನಿಜಕ್ಕೂ ಭಿನ್ನ ಎಂದು ಶಿಷ್ಯಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಉಪನ್ಯಾಸಕ ಎಸ್.ಸಿ.ನಂಜುಂಡಪ್ಪ.
 

ವಿದ್ಯಾರ್ಥಿಗಳ ವೇದಿಕೆ `ಕ್ಯಾಂಪಸ್~
ವಿದ್ಯಾರ್ಥಿಗಳ ಸಾಧನೆ, ಅನಿಸಿಕೆ ಹಂಚಿಕೊಳ್ಳಲು ಇರುವ ಮುಕ್ತ ವೇದಿಕೆ `ಕ್ಯಾಂಪಸ್~. ನಿಮ್ಮೂರಿನ ಶಾಲೆ- ಕಾಲೇಜುಗಳಲ್ಲಿ ನಡೆಯುವ ವಿಶೇಷ ಸಮಾರಂಭ, ಸೇವಾ ಚಟುವಟಿಕೆ, ಅನ್ವೇಷಣೆ, ಅಪರೂಪದ ಪ್ರಾಜೆಕ್ಟ್‌ಗಳು, ಸಾಂಸ್ಕೃತಿಕ ಚಟುವಟಿಕೆಗಳು, ಆಕರ್ಷಕ ಕಲಿನಲಿ ಮಾದರಿಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಯ ಬಗ್ಗೆ `ಪ್ರಜಾವಾಣಿ~ಗೆ ನೀವೂ ಬರೆಯಬಹುದು. ಈ ಅಂಕಣ ಪ್ರತಿ ಗುರುವಾರ ಪ್ರಕಟವಾಗಲಿದೆ. ನಮ್ಮ ಈ ಮೇಲ್- editorialtumkur@prajavani.co.iದೂರವಾಣಿ- 9448470165.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT