ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸೆಮಣೆಗೆ ಗೈರು ಪರೀಕ್ಷೆಗೆ ಹಾಜರು

Last Updated 9 ಏಪ್ರಿಲ್ 2013, 6:54 IST
ಅಕ್ಷರ ಗಾತ್ರ

ಕುಷ್ಟಗಿ: ಅವರೆಲ್ಲ ಉದಾಸೀನ ಮಾಡಿದ್ದರೆ ಇಂದು ಕೊರಳಿಗೆ ಮಾಂಗಲ್ಯ ಬಿಗಿಯಲಾಗುತ್ತಿತ್ತು, ಅದೃಷ್ಟ, ಸರ್ಕಾರಿ ಸಂಸ್ಥೆಗಳು ಸಕಾಲದಲ್ಲಿ ಜಾಗೃತರಾಗಿದ್ದರಿಂದ ಒಂದೆ ಕಲ್ಲಿಗೆ ಎರಡು ಹಣ್ಣು ಎಂಬಂತೆ ಒಲ್ಲದ ಮನಸ್ಸಿನಿಂದ ಹಸೆ ಮಣೆ ಏರುತ್ತಿದ್ದ ಬಾಲೆ ಬಾಲ್ಯ ವಿವಾಹದಿಂದ ಬಚಾವ್ ಆದರೆ ನಗುಮೊಗದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಹಾಜರಾದಳು.....

ಆಗಿದ್ದಿಷ್ಟು, ತಾಲ್ಲೂಕಿನ ಬಿಜಕಲ್ ಗ್ರಾಮದ 16 ವರ್ಷದ ಬಾಲಕಿ ಹುಲಿಗೆಮ್ಮ ತಂದಿ ಶರಣಪ್ಪ ಕೊಪ್ಪಳ ಎಂಬ ಬಾಲಕಿಯ  ರೋಚಕ ಕಥೆ ಇದು. ಆಕೆಯ ಇಷ್ಟ ಕಷ್ಟ ಕಿವಿಗೆ ಹಾಕಿಕೊಳ್ಳದ ಪಾಲಕರು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಮೂರು ಪತ್ರಿಕೆಗಳಿಗೆ ಉತ್ತರ ಬರೆದರೂ ಮುಂದಿನದನ್ನು ಬಿಡಿಸಿ ಗ್ರಾಮದಲ್ಲಿ ಏ.8ರಂದು ನಡೆದ ಸಾಮೂಹಿಕ ವಿವಾಹದಲ್ಲಿ ಸ್ಥಳೀಯ ವರನೊಂದಿಗೆ ತಾಳಿ ಕಟ್ಟಲು ನಿಶ್ಛಯಿಸಿದ್ದರಲ್ಲದೇ ಮನೆಯಲ್ಲಿ ಮದುವೆ ವಾತಾವರಣವಿತ್ತು.

ಆದರೆ ಅನಾಮಧೇಯ ಕರೆ ಜಿಲ್ಲಾಡಳಿತಕ್ಕೆ ಹೋಗಿದ್ದ ತಡ ಜಾಗೃತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯೂನಿಸೆಫ್, ಚೈಲ್ಡ್ ಲೈನ್ ಮತ್ತು ಪೊಲೀಸ್ ಸಿಬ್ಬಂದಿ ಏ.7ರ ಸಂಜೆ 4ಕ್ಕೆ ಬಾಲಕಿಯ ಮನೆಗೆ ಹಾಜರಾದರು. ಆದರೆ ಅಲ್ಲಿ ನಡೆದದ್ದೇ ಬೇರೆ, ಬಾಲ್ಯ ವಿವಾಹ ಕುರಿತು ತಿಳಿವಳಿಕೆ ಮೂಡಿಸಲು ಯತ್ನಿಸಿದ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದ ಮನೆ ಮಂದಿ `ನಮ್ಮ ಹುಡ್ಗಿನ್ ಲಗ್ನಾ ಮಾಡಬ್ಯಾಡಂತ ಹೇಳಾಕ ನೀವ್ಯಾರು?' ಎಂದೆ ಕ್ಯಾತೆ ತೆಗೆದಿದ್ದಾರೆ. ಅಷ್ಟೇ ಅಲ್ಲ ನೀವು ಹೇಗೆ ತೆಡೆಯುತ್ತೀರೊ ನೋಡುತ್ತೇವೆ ಎಂದು ಧಮಕಿ ಬೇರೆ ಹಾಕಿದ್ದರು.  ಸಾಕಷ್ಟು ಪ್ರತಿರೋಧದ ನಡುವೆಯೂ ಪಟ್ಟು ಬಿಡದ ಸಿಬ್ಬಂದಿ ನಡುರಾತ್ರಿ ವರೆಗೂ ಮದುವೆ ಮನೆಯ ಮುಂದೆ ಠಿಕಾಣಿ ಹೂಡಿದ್ದರಿಂದ ಪಾಲಕರು ಮಣಿಯಬೇಕಾಯಿತು. ಒಂದೆಡೆ ಬಾಲ್ಯ ವಿವಾಹ ತಪ್ಪಿಸಿದ್ದು ಇನ್ನೊಂದೆಡೆ ಆಕೆಯನ್ನು ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಸಿಬ್ಬಂದಿಗೆ ಸಮಾಧಾನ ತಂದಿತು.

ಇಷ್ಟೆಲ್ಲ ನಡೆಯುತ್ತಿದ್ದಂತೆ ಜನ ಜಾತ್ರೆ ನೆರೆದು ಮನೆಯವರು ಮುಜುಗರಕ್ಕೊಳಗಾಗುವಂತಾಗಿತ್ತು.
ಬಾಲ್ಯವಿವಾಹ ಕಾನೂನಿನ ಕ್ರಮದ ಎಚ್ಚರಿಕೆ ನೀಡಿದ ಸಿಬ್ಬಂದಿ ಆಕೆಯನ್ನು ಜಿಲ್ಲಾಡಳಿತದ ವಶಕ್ಕೆ ನೀಡುವಂತೆ ಒತ್ತಾಯಿಸಿದಾಗ ಊರಿನ ಹಿರಿಯರೂ ಬೇಡವೆಂದು ಬುದ್ಧಿ ಹೇಳಿದ್ದಕ್ಕೆ ಮಣಿದು ಮದುವೆ ಮಾಡುವುದಿಲ್ಲ ಎಂಬ ತಪ್ಪೊಪ್ಪಿಗೆ ಲಿಖಿತ ಪತ್ರ ನೀಡಿದರು. ಮದುವೆ ಮಾಡುವುದಕ್ಕೆ ಪಾಲಕರು ನೀಡಿದ ಕಾರಣವೆಂದರೆ ಬಾಲಕಿಯ ತಂದೆ ಅನಾರೋಗ್ಯಪೀಡಿತನಾಗಿ ಹಾಸಿಗೆ ಹಿಡಿದಿರುವುದು. ಆತನಿಂದ ಮಗಳ ತಲೆಯಮೇಲೆ ನಾಲ್ಕು ಅಕ್ಷತೆ ಹಾಕಿಸಬೇಕೆಂಬ ಬಯಕೆ ಅವರದರು. ಆದರೆ ತಂದೆಯ ಆಸೆ ಈಡೇರಿಸುವುದಕ್ಕೆ ಮಗಳ ತಲೆಯ ಮೇಲೆ ಚಪ್ಪಡಿ ಎಳೆಯಬೇಡಿ ಎಂದ್ದದ್ದು ಅವರಿಗೂ ಅರ್ಥವಾಗಿ ಮದುವೆ ಕೈಬಿಟ್ಟರು.

ಇಷ್ಟಾಗುತ್ತಿದ್ದಂತೆ ಬಾಲಕಿಯ ಆನಂದಕ್ಕೆ ಪಾರವೇ ಇರಲಿಲ್ಲ, ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಗುನಗುತ್ತಲೇ ಹಾಜರಾದಾಗಿ ಉತ್ತರ ಬರೆದು ಬಂದ ಸಂತೃಪ್ತಿ ಭಾವನೆ ಆಕೆಯದಾಗಿತ್ತು ಎಂದು ಯುನಿಸೆಫ್ ತಾಲ್ಲೂಕು ಸಂಚಾಲಕ ಶರಣಪ್ಪ ಮಾದರ ಸಂತಸ ಹಂಚಿಕೊಂಡರು.
ಬಾಲ್ಯವಿವಾಹ ಮತ್ತು ಅದರ ಬಗೆಗಿನ ಕಾನೂನು ಕ್ರಮ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ಕಾರ್ಯಕ್ಷಮತೆ ಕುರಿತು ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ್ದೇವೆ. ಹಾಗಾಗಿ ಜನ ಇಂಥ ಪ್ರಕರಣಗಳು ಕಂಡು ಬಂದಾಗ ಮಾಹಿತಿ ನೀಡುವಷ್ಟರ ಮಟ್ಟಿಗೆ ವ್ಯವಸ್ಥೆ ಸುಧಾರಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT