ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ರೌಡಿಯ ಬರ್ಬರ ಕೊಲೆ

Last Updated 21 ಡಿಸೆಂಬರ್ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೈಸೂರು ರಸ್ತೆಯ ಹಳೇ ಪೆನ್ಶನ್‌ ಮೊಹಲ್ಲಾದಲ್ಲಿ ದುಷ್ಕರ್ಮಿಗಳು ಶನಿವಾರ ಹಾಡಹಗಲೇ ಜೀವನ್‌ ಅಲಿಯಾಸ್ ಜೀವೇಂದ್ರ (25) ಎಂಬ ರೌಡಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಹಳೇ ಪೆನ್ಶನ್‌ ಮೊಹಲ್ಲಾ ನಿವಾಸಿಯಾದ ಜೀವನ್‌, ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಹಚರರನ್ನು ಭೇಟಿ ಮಾಡಲು ಸಮೀಪದ ಮಸೀದಿಗೆ ನಡೆದು ಹೋಗುತ್ತಿದ್ದ. ಈ ವೇಳೆ ಏಕಾಏಕಿ ಆತನ ಮೇಲೆ ದಾಳಿ ನಡೆಸಿದ ನಾಲ್ಕೈದು ಮಂದಿ ದುಷ್ಕರ್ಮಿಗಳು, ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಆತ ಸಹಚರರನ್ನು ನೆರವಿಗೆ ಕೂಗುತ್ತಾ ರಕ್ತದ ಮಡುವಿನಲ್ಲೇ ಗಲ್ಲಿಯೊಳಗೆ ಓಡಿದ್ದಾನೆ. ಆಗ ಪುನಃ ಆತನನ್ನು ಬೆನ್ನಟ್ಟಿದ ದುಷ್ಕರ್ಮಿಗಳು, ಸ್ಥಳದಲ್ಲಿದ್ದ ಕೈಪಂಪಿಗೆ ತಲೆ ಗುದ್ದಿಸಿದ್ದಾರೆ. ಆಗ ಕೆಳಗೆ ಬಿದ್ದ ಆತನನ್ನು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದ್ದಾರೆ ಎಂದು ಪೊಲೀಸರು ಹೇಳಿದರು.

‘ಪೆನ್ಶನ್‌ ಮೊಹಲ್ಲಾದ ನಾಲ್ಕನೇ ಅಡ್ಡರಸ್ತೆಯ ನಿವಾಸಿಗಳು ಗಾಬರಿ­ಯಿಂದ ಮನೆಯೊಳಗೆ ಓಡಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಏನಾಗಿದೆ ಎಂದು ನೋಡಲು ಅಂಗಡಿಯಿಂದ ಹೊರ­ಬಂದಾಗ ದುಷ್ಕರ್ಮಿಗಳ ಗುಂಪು ಜೀವನ್‌ನನ್ನು ಓಡಿಸಿಕೊಂಡು ಬರು­ತ್ತಿತ್ತು. ಐದು ನಿಮಿಷದ ಅಂತರದಲ್ಲಿ ಕಣ್ಣೆದುರೇ ಕೊಲೆ ನಡೆದು ಹೋಯಿತು’ ಎಂದು ಸ್ಥಳೀಯ ವ್ಯಾಪಾರಿ ಮನ್ಸೂರ್ ಆಲಿ ತಿಳಿಸಿದರು.

4ರಂದು ಜೈಲಿನಿಂದ ಹೊರಬಂದಿದ್ದ:
ಕಾಟನ್‌ಪೇಟೆಯ ಸಿದ್ದಾರ್ಥ­ನಗರ­ದಲ್ಲಿ 2012ರ ಆಗಸ್ಟ್‌ ತಿಂಗಳಲ್ಲಿ ನಡೆದಿದ್ದ ರೌಡಿ ಗುಪೇಂದ್ರ ಅಲಿಯಾಸ್ ಗುಪ್ಪ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಜೀವನ್, ಡಿ.4ರಂದು ಹೊರ ಬಂದಿದ್ದ.

ಮನೆಗಳ ಒಡೆತನದ ವಿಷಯವಾಗಿ ಗುಪೇಂದ್ರ ಹಾಗೂ ಆತನ ಅಕ್ಕನ ಮಗ ನವೀನ್‌ ನಡುವೆ ಭಿನ್ನಾಭಿಪ್ರಾಯವಿತ್ತು. ಈ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ್ದ ಜೀವನ್‌, ನವೀನ್‌ ಜತೆ ಸೇರಿಕೊಂಡು ಗುಪೇಂದ್ರನನ್ನು ಕೊಲೆ ಮಾಡಿದ್ದ.

ಮೊದಲು ಕೆಂಪಾಪುರ ಅಗ್ರಹಾರ­ದಲ್ಲಿ ವಾಸವಾಗಿದ್ದ ಜೀವನ್‌ ಆರು ತಿಂಗಳ ಹಿಂದಷ್ಟೇ ಪತ್ನಿಯೊಂದಿಗೆ ಹಳೇ ಪೆನ್ಶನ್‌ ಮೊಹಲ್ಲಾಕ್ಕೆ ಬಂದು ವಾಸವಾಗಿದ್ದ. ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಟೆಯಾಡಿದ್ದ ರೀತಿಯಲ್ಲೇ ಬೇಟೆಯಾದ
ಜೀವನ್‌ ತನ್ನ ಸಹಚರರೊಂದಿಗೆ ಸೇರಿಕೊಂಡು ಗುಪೇಂದ್ರನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಂಡು ಓಡಿದ್ದ ಆತ ಮನೆಯೊಂದರಲ್ಲಿ ರಕ್ಷಣೆ ಪಡೆದುಕೊಂಡಿದ್ದ. ಆದರೆ, ಪುನಃ ಆತನನ್ನು ಬೆನ್ನಟ್ಟಿ ಹೋಗಿದ್ದ ದುಷ್ಕರ್ಮಿಗಳು, ಆ ಮನೆಯೊಳಗೆ ನುಗ್ಗಿ ಮಚ್ಚು ಲಾಂಗ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರು.

ಈಗ ಅದೇ ಮಾದರಿಯಲ್ಲಿ ಜೀವನ್‌ ಕೊಲೆಯಾಗಿದ್ದು, ಗುಪೇಂದ್ರನ ಸಹಚರರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಪೊಲೀಸರು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT