ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ದರ ಏರಿಕೆ ಪರಿಹಾರವೇ?

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಪ್ರತಿ ಬಾರಿ ಹಾಲಿನ ದರ ಏರಿಕೆ ಮಾಡಿದಾಗಲೂ ರೈತರನ್ನು ಗುರಾಣಿಯನ್ನಾಗಿ ಇರಿಸಿಕೊಂಡಿದೆ.  ದರ ಹೆಚ್ಚಳವಾದಾಗ ಖರೀದಿದಾರರನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕಿತ್ತು.

ಕೆಎಂಎಫ್ ಲೀಟರ್‌ಗೆ ಐದು ರೂಪಾಯಿ ಹೆಚ್ಚು ಮಾಡಿ ಎಂಬ ಬೇಡಿಕೆ ಇಡುವುದು, ಗ್ರಾಹಕರ ಹಿತ ಕಾಯುವ ನೆಪದಲ್ಲಿ ಸರ್ಕಾರ ಅದನ್ನು ತುಸು ಇಳಿಸಿ ಬಳಿಕ ಬೆಲೆ ಏರಿಕೆಗೆ ಅನುಮತಿ ನೀಡುವ ತಂತ್ರ ನಡೆಯುತ್ತಿದೆ ಎನ್ನುವ ಭಾವನೆ ಗ್ರಾಹಕರಲ್ಲಿದೆ.

1999ರಲ್ಲಿ ಲೀಟರ್‌ಗೆ ಹತ್ತು ರೂಪಾಯಿ ಇದ್ದ ನಂದಿನಿ ಹಾಲಿನ ಬೆಲೆ 2012ರಲ್ಲಿ 24 ರೂಪಾಯಿಗೆ ಏರಿದೆ. ಹಾಲಿನ ಬೆಲೆ ಏರಿದಾಕ್ಷಣ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆ ಸಹ ಎರಡು ರೂಪಾಯಿ ಹೆಚ್ಚಾಗಿದೆ.

ಹಾಲನ್ನು ಬಳಸಿ ಸಿದ್ಧಪಡಿಸುವ ಸಿಹಿ ತಿಂಡಿ ಬೆಲೆ ಸಹ ಹೆಚ್ಚಾಗಿದೆ. ಆದರೆ ಬೆಲೆ ಏರಿದೆ ಎಂದಾಕ್ಷಣ ಕುಟುಂಬದ ಆದಾಯ ಹೆಚ್ಚಾಗುವುದೇ, ಸಂಬಳ ಹೆಚ್ಚಾಗುವುದೇ. ಇದು ಮಧ್ಯಮವರ್ಗದ ಪ್ರಶ್ನೆ. ದಿನಕ್ಕೆ ಒಂದು ಲೀಟರ್ ಖರೀದಿಸುವ ಕುಟುಂಬಕ್ಕೆ ದರ ಏರಿಕೆಯಿಂದ ತಿಂಗಳಿಗೆ ನೂರು ರೂಪಾಯಿ ಹೊರೆ ಬೀಳುತ್ತಿದೆ.

ಕುಡಿಯುವ ಬಾಟಲಿ ನೀರಿಗೆ ಲೀಟರ್‌ಗೆ ರೂ 14ರಿಂದ 25ರವರೆಗೆ ನೀಡುವಾಗ ಹಾಲಿಗೆ 24 ರೂಪಾಯಿ ನೀಡುವುದರಲ್ಲಿ ತಪ್ಪೇನು? ಗ್ರಾಹಕ ನೀಡಿದ ಹಣದಲ್ಲಿ ಶೇ 95ಕ್ಕಿಂತ ಹೆಚ್ಚು ಭಾಗ ಹೈನುಗಾರರಿಗೆ ನೀಡಲಾಗುತ್ತದೆ. ಹಾಲು ಉತ್ಪಾದಿಸುವ ಕೃಷಿಕನೂ ಬೆಲೆ ಏರಿಕೆಯ ಸಂಕಷ್ಟದಲ್ಲಿ ಸಿಲುಕಿರುವಾಗ ಹಾಲಿನ ಬೆಲೆ ಏರಿಸಿದರೆ ತಪ್ಪೇನು ಎನ್ನುವ ಪ್ರಶ್ನೆಯೂ ಕೇಳಿಬರುತ್ತಿದೆ. ಆದರೆ ಹೈನುಗಾರರ ಕಷ್ಟವನ್ನು ಅವಲೋಕಿಸಿದರೆ ಹಾಲಿನ ಬೆಲೆ ಏರಿಕೆ ಅನಿವಾರ್ಯ ಎನ್ನುವುದು ವೇದ್ಯವಾಗುತ್ತದೆ.

ಬೆಲೆ ಏರಿಕೆಯ ಬಿಸಿ ಸಮಾಜದ ಯಾವ ವರ್ಗವನ್ನೂ ಬಿಟ್ಟಿಲ್ಲ. ಇದು ಹೈನುಗಾರಿಕೆಯಲ್ಲಿ ತೊಡಗಿರುವ ರೈತನಿಗೂ ತಟ್ಟಿದೆ. ಹಾಲನ್ನು ಕೊಳ್ಳುವ ಯಾವ ವರ್ಗವನ್ನೂ ಬಿಟ್ಟಿಲ್ಲ. ಬೆಲೆ ಏರಿಕೆಯ ವಿಷವರ್ತುಲದಿಂದ ತಪ್ಪಿಸಿಕೊಳ್ಳಲು, ಬೆಲೆ ಏರಿಕೆಯೊಂದೇ ಪರಿಹಾರವೇ?

ಹಾಲಿನ ಉತ್ಪಾದನೆಯಲ್ಲಿ ದೇಸಿ ಹಸುವನ್ನು ಅವಲಂಬಿಸುವ ಪದ್ಧತಿಗೆ ಯಾವುದೋ ಕಾಲದಲ್ಲಿ ತಿಲಾಂಜಲಿ ಇತ್ತಾಗಿದೆ. ದೇಸಿ ಗಿಡ್ಡ ಹಸುಗಳನ್ನು ಕಾಡಿನಂಚಿನಲ್ಲಿ, ಮಲೆನಾಡಿನಲ್ಲಿ ಸಾಕುವ ರೂಢಿ ಇಂದಿಗೂ ಇದ್ದರೂ, ಅವುಗಳನ್ನು ಸಗಣಿಗಾಗಿ ಅವಲಂಬಿಸಲಾಗುತ್ತಿದೆ.
 
ಹಾಲು ಉತ್ಪಾದನೆಯಲ್ಲಿ ವಿದೇಶಿ ತಳಿಗಳಿಗೆ ಮೊರೆ ಹೋಗಲಾಗಿದೆ. ಹೈನುಗಾರಿಕೆಯಲ್ಲಿ ಏನಿದ್ದರೂ ಯೂರೋಪ್‌ನ ಹೋಸ್ಟೈನ್ ಪ್ರಿಷಿಯನ್, ಜರ್ಸಿ ಮಿಶ್ರತಳಿಗಳು ಮಾತ್ರವೇ ಕಾಣುತ್ತವೆ. ಈ ಹಸುಗಳು ದಿನಕ್ಕೆ ಕನಿಷ್ಠ ಹತ್ತು ಲೀಟರ್ ಹಾಲು ಕರೆಯುವುದರಿಂದ ರಾಜ್ಯದ ಯಾವುದೇ ಹಳ್ಳಿಯಲ್ಲಾದರೂ ಈ ವಿದೇಶಿ ತಳಿಗಳಿಗೆ ಮಾತ್ರವೇ ಬೇಡಿಕೆ.

ನಾಲ್ಕೈದು ವರ್ಷಗಳ ಹಿಂದೆ 35 ಸಾವಿರ ರೂಪಾಯಿಗೆ ದೊರಕುತ್ತಿದ್ದ ಮಿಶ್ರತಳಿ ಹಸು ಒಂದರ ಬೆಲೆ 45- 60 ಸಾವಿರ ರೂಪಾಯಿಗೆ ಏರಿದೆ. ಕೆಲ ಹೈನುಗಾರರಿಗೆ ಸ್ವಂತ ಬತ್ತದ ಗದ್ದೆಯಿಂದ ಹಸುಗಳಿಗೆ ಮೇವು ದೊರೆತರೂ, ಕೃಷಿಕರಲ್ಲದ ಹೈನುಗಾರರು ಒಣಹುಲ್ಲಿಗೂ ಹಣ ತೆರಬೇಕಾಗಿದೆ. ಹಸಿರು ಹುಲ್ಲಂತೂ ದುಬಾರಿಯಾಗುತ್ತಿದೆ. ಮೇವಿನ ಜೊತೆಗೆ ನೀಡುವ ಹಿಂಡಿ, ಬೂಸಾ, ಮೆಕ್ಕೆ ಜೋಳ, ಹತ್ತಿಬೀಜ, ಅಕ್ಕಿ ತೌಡಿನ ಬೆಲೆ ಸಹ ಗಗನಮುಖಿಯಾಗುತ್ತಿದೆ.

ಹಸುಗಳನ್ನು ನೋಡಿಕೊಳ್ಳುವ ಕಾರ್ಮಿಕರ ಕೂಲಿ, ಹಸುಗಳ ವೈದ್ಯಕೀಯ ವೆಚ್ಚ, ವಿದ್ಯುತ್ ಹೀಗೆ ಪ್ರತಿಯೊಂದು ವೆಚ್ಚವೂ ಹೆಚ್ಚಾಗುತ್ತಿದ್ದು ಹಾಲಿನ ಉತ್ಪಾದನಾ ವೆಚ್ಚ ಸಹ ಏರಿದೆ. ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚ ಪ್ರತಿ ಲೀಟರ್‌ಗೆ ರೂ. 22.81 (ವಿವರಕ್ಕೆ ಬಾಕ್ಸ್ 1 ನೋಡಿ) ಎನ್ನುತ್ತಾರೆ ಕೆಎಂಎಫ್ ವ್ಯವಸ್ಥಾಪನಾ ನಿರ್ದೇಶಕ ಎ.ಎಸ್. ಪ್ರೇಮನಾಥ್.

ಹಾಲು ಕೊಳ್ಳುವ ದರದ ಮೇಲೆ ಶೇ 3.5ರಷ್ಟು ಲಾಭಾಂಶವನ್ನು ಇರಿಸಿಕೊಂಡು ಕೆಎಂಎಫ್ ಹಾಲು ಮಾರಾಟ ಮಾಡುತ್ತಿದೆ. ಈ ಲಾಭಾಂಶದಲ್ಲೇ ಹಾಲಿನ ಶೇಖರಣೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಮಂಡಲಿ ಮಾಡಬೇಕಾಗಿದೆ.
(ವಿವರಕ್ಕೆ ಬಾಕ್ಸ್ 2) ಡೀಸೆಲ್ ವೆಚ್ಚ ಏರಿದಂತೆ ಸಾಗಣೆ ವೆಚ್ಚ ಸಹ ಏರುತ್ತದೆ. ಇದರ ಜೊತೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚಿಸಲು ಹಾಲಿನಲ್ಲಿ ಅತಿ ಬೇಗ ಬೆಳೆಯುವ ಬ್ಯಾಕ್ಟೀರಿಯ ನಿಯಂತ್ರಿಸಲು ಕೆಎಂಎಫ್ 3-4 ಹಳ್ಳಿಗೆ ಪುಟ್ಟ ಶೀತಲೀಕರಣ ಘಟಕವನ್ನು ಸ್ಥಾಪಿಸುತ್ತಿದೆ. ಇದಕ್ಕೆ ತಲಾ 12ರಿಂದ 15 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದೆ. ಒಟ್ಟಾರೆ ಆಧುನೀಕರಣ ಪ್ರಕ್ರಿಯೆಯಿಂದ ಸಂಸ್ಕರಣಾ ವೆಚ್ಚ ಹೆಚ್ಚಾಗುತ್ತಿದೆ.

ಆದರೂ ದೇಶದ ಉಳಿದ ರಾಜ್ಯಗಳ ಸಹಕಾರ ಹಾಲು ಮಹಾಮಂಡಲಗಳು ನಿಗದಿಪಡಿಸಿರುವ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ದರವೇ ಅತಿ ಕಡಿಮೆ (ಬಾಕ್ಸ್ 3). ರೈತರಿಗೆ ವರ್ಗಾಯಿಸುತ್ತಿರುವ ಖರೀದಿ ದರ ಸಹ ಹೆಚ್ಚೇ ಆಗಿದೆ (ಬಾಕ್ಸ್ 4). ಜನವರಿ 8ರಂದು ಲೀಟರ್‌ಗೆ ಮೂರು ರೂಪಾಯಿ ಹಾಲಿನ ದರ ಏರಿಕೆಯ ನಂತರವೂ ಜಿಲ್ಲಾ ಹಾಲು ಒಕ್ಕೂಟಗಳು ರೂ. 2.50ರಿಂದ 3 ರೂಪಾಯಿವರೆಗೆ ಖರೀದಿ ದರವನ್ನು ಹೆಚ್ಚಿಸಿವೆ. ಈ ದರ ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗುತ್ತಿದೆ.

ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಪ್ರತಿ ವಾರ ಹಣ ಪಾವತಿಯಾಗುತ್ತಿದೆ. ಇದರ ಪ್ರಮಾಣವೇ ವಾರಕ್ಕೆ 63 ಕೋಟಿ ರೂಪಾಯಿ. ಇದರ ಜೊತೆಯಲ್ಲಿ ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ದೊರಕುತ್ತಿದೆ. ಜಿಲ್ಲಾ ಹಾಲು ಒಕ್ಕೂಟಗಳು ಪ್ರತಿ ವರ್ಷ ಬರುವ ಲಾಭಾಂಶವನ್ನು ಸಹ ರೈತರಿಗೆ ಪ್ರೋತ್ಸಾಹ ಧನದ ರೂಪದಲ್ಲಿ ನೀಡುತ್ತಿವೆ. ಈ ಹಣವನ್ನು ರೈತರಿಗೆ ವರ್ಗಾಯಿಸದಿದ್ದರೆ ಆದಾಯ ತೆರಿಗೆ ನೀಡಬೇಕಾಗುತ್ತದೆ.

ಕೃಷಿಯಲ್ಲಿ ಹಾಕಿದ ಬಂಡವಾಳವೂ ಬಾರದು ಎನ್ನುವ ಸ್ಥಿತಿಯಿರುವಾಗ ಕೆಎಂಎಫ್‌ಗೆ ಹಾಲು ಮಾರಿದರೆ ವಾರಕ್ಕೊಮ್ಮೆ ಹಣ ಬರುವುದು ಖಾತ್ರಿ. ಆದರೂ ಏರುತ್ತಿರುವ ವೆಚ್ಚ ಹೈನುಗಾರರನ್ನು ಕಂಗಾಲಾಗಿ ಮಾಡುತ್ತಿದೆ. ಇದು ಸಾಮಾನ್ಯ ಹೈನುಗಾರರ ಸ್ಥಿತಿಯಾದರೆ, ಈ ವಲಯ ಸಂಪೂರ್ಣವಾಗಿ ಕೆಟ್ಟಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆಗಳಿವೆ.

 ಸಾಫ್ಟ್‌ವೇರ್ ಕ್ಷೇತ್ರದಿಂದ ಹೈನುಗಾರಿಕೆಗೆ ಮರಳಿರುವ ಮೈಸೂರು ಮೂಲದ ಚಿದಂಬರ ಹಾಗೂ ಚಿತ್ರ ನಿರ್ದೇಶಕ ರತ್ನಜ ಮಂಡ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಯಶಸ್ಸನ್ನು ಗಳಿಸುತ್ತಿದ್ದಾರೆ ಎಂದು ಪ್ರೇಮನಾಥ್ ಹೇಳುತ್ತಾರೆ.

ಇದು ಹಾಲು ಉತ್ಪಾದನಾ ವೆಚ್ಚದ ವಿಷಯವಾದರೆ, ವೆಚ್ಚ ಕಡಿಮೆ ಮಾಡಿಕೊಳ್ಳಲು ಸಹ ರೈತರು ಹಾಗೂ ಕೆಎಂಎಫ್ ಗಮನ ಹರಿಸಬೇಕಾಗುತ್ತದೆ. ಸಗಣಿಯಿಂದ ಅನಿಲ ಉತ್ಪಾದಿಸಿ ಮಾರುವ ವಿಧಾನ ಹುಡುಕಿಕೊಳ್ಳುವುದು, ಹಟ್ಟಿ ಗೊಬ್ಬರವನ್ನು ಪ್ಯಾಕ್ ಮಾಡಿ ನಂದಿನಿ ಬ್ರ್ಯಾಂಡ್ ಮೂಲಕ ಉತ್ತಮ ಬೆಲೆಗೆ ಮಾರಬಹುದು. ಕೆಎಂಎಫ್ ಸಹ ಆಡಳಿತ ವೆಚ್ಚ ಕಡಿಮೆ ಮಾಡಿಕೊಳ್ಳುವ ಬಗೆಯನ್ನು ಹುಡುಕಬೇಕು. ಇಲ್ಲವಾದರೆ ಉತ್ಪಾದನಾ ವೆಚ್ಚಕ್ಕೆ ದರ ಏರಿಕೆ ಮಾತ್ರವೇ ಪರಿಹಾರ ಎನ್ನುವಂತಾಗುತ್ತದೆ.

ಕೆಎಂಎಫ್ ಪ್ರಸ್ತುತ 45 ಲಕ್ಷ ಲೀಟರ್ ಹಾಲನ್ನು ನಿತ್ಯ ಸಂಗ್ರಹಿಸುತ್ತಿದೆ. ಇದರಲ್ಲಿ 32 ಲಕ್ಷ ಲೀಟರ್ ರಾಜ್ಯದಲ್ಲಿ ಮಾರಾಟವಾದರೆ, ಮೂರು ಲಕ್ಷ ಲೀಟರ್ ಕೇರಳಕ್ಕೂ, 30 ಸಾವಿರ ಲೀಟರ್ ಮಹಾರಾಷ್ಟ್ರಕ್ಕೂ ರವಾನೆಯಾಗುತ್ತದೆ. ಉಳಿದ ಹಾಲನ್ನು ಪುಡಿ ಮಾಡಲಾಗುತ್ತಿದೆ. ಇದರಿಂದ ಅಂತಹ ಲಾಭ ಬರುತ್ತಿಲ್ಲ. ಹೀಗಾಗಿ ಹಾಲು ಮಾರಾಟದ ಮಾರುಕಟ್ಟೆ ವಿಸ್ತರಿಸಬೇಕಾದ ಅಗತ್ಯವೂ ಕೆಎಂಎಫ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT