ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಜಾವೇ ಮುಖಂಡನ ಮೇಲೆ ಹಲ್ಲೆ; ಗುಂಪು ಘರ್ಷಣೆ

Last Updated 1 ಜುಲೈ 2012, 8:15 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿಯ ವ್ಯಾಪಾರಿ ಹಾಗೂ ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಘಟನಾ ಸಂಚಾಲಕ ಎಸ್.ಆರ್.ಸುಬ್ರಮಣಿ ಅವರ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಜರುಗಿದೆ. ಗಾಯಗೊಂಡಿರುವ ಸುಬ್ರಮಣಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಸುಬ್ರಮಣಿ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯನ್ನು ಮುಚ್ಚಿ ಈರಣ್ಣಕಾಲೋನಿಯಲ್ಲ್ಲಿರುವ ತಮ್ಮ ಮನೆಗೆ ಆಟೊದಲ್ಲಿ ಮರಳುತ್ತಿದ್ದರು. ಇದೇ ಸಮಯದಲ್ಲಿ ಹಿಂದಿನಿಂದ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಾವೇರಿ ಕಾಲೇಜಿನ ಬಳಿ ಇವರನ್ನು ಅಡ್ಡಗಟ್ಟಿ ಕತ್ತಿ ಹಾಗೂ ಹಾಕಿ ಸ್ಟಿಕ್‌ನಿಂದ ಏಕಾಏಕಿ ಹಲ್ಲೆ ನಡೆಸಿದರು ಎನ್ನಲಾಗಿದೆ. ಮುಖ, ಕುತ್ತಿಗೆ ಭಾಗಕ್ಕೆ ಕತ್ತಿ ಏಟು ಬಿದ್ದದ್ದರಿಂದ ಸುಬ್ರಮಣಿ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆ ಹಲ್ಲೆ ನಡೆಸಿದವರು ಕಾರು ಹತ್ತಿ ಪರಾರಿಯಾಗಿದ್ದಾರೆ. ಆರೋಪಿಗಳು ಆಟೋ ಅಡ್ಡಗಟ್ಟುತ್ತಿದ್ದಂತೆ ಆಟೊ ಚಾಲಕ ದೇವಪ್ಪ ಹೆದರಿ ಓಡಿ ಹೋಗಿದ್ದಾನೆ.

ಕೂಡಲೇ ಗಾಯಾಳು ಸುಬ್ರಮಣಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಯಿತು. ಶನಿವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆಯ ಕೆಲ ಕಾರ್ಯಕರ್ತರು ಪಟ್ಟಣದ ಮಾರುಕಟ್ಟೆಯಲ್ಲಿ  ವ್ಯಾಪಾರ ಮಾಡುತ್ತಿದ ಒಂದು ಕೋಮಿನವರ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ರೆಹಮತುಲ್ಲಾ, ಅಬ್ದುಲ್ ಮಜೀದ್ ಎಸ್.ಕೆ.ಗೌಸ್, ಮುಸ್ತಾಕ್, ಇಂತ್ಯಾಜ್, ಎಂ.ಎಸ್. ಸಫೀಯಾ ಗಾಯಗೊಂಡಿದ್ದಾರೆ. ಇತ್ತ ಹಿಂಜಾವೇ ಸಂಘಟನೆಯ ಕಿಸನ್, ಬಿದ್ದಪ್ಪ ಅವರಿಗೂ ಗಾಯಗಳಾಗಿವೆ. ಇದೀಗ ಎರಡೂ ಗುಂಪಿನವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಗಾಯಗಳಾಗಿರುವ ರೆಹಮತುಲ್ಲಾ, ಎಸ್.ಕೆ.ಗೌಸ್ ಅವರನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಘ ಪರಿವಾರದವರೆನ್ನಲಾದ ಕೆಲ ಕಾರ್ಯಕರ್ತರು ಮಾರುಕಟ್ಟೆ  ಮಳಿಗೆಯ ಒಂದು ಕೋಮಿಗೆ ಸೇರಿದ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಬಾಗಿಲುಗಳ ಗಾಜುಗಳನ್ನು ಜಖಂ ಗೊಳಿಸಿದರು ಎಂದು ವ್ಯಾಪಾರಿಗಳು ದೂರಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ ಸಂಘಪರಿವಾರದ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು. ಘಟನೆಗೆ ಕಾರಣಕರ್ತರಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಂಘಪರಿವಾರದ ನಾಯಕರು ಒತ್ತಾಯಿಸಿದರು.

   ಶನಿವಾರ ಬೆಳಿಗ್ಗೆ ಘಟನೆ ನಡೆಯುತ್ತಿದ್ದಂತೆ ಒಂದು ಕೋಮಿಗೆ ಸೇರಿದ ಅಂಗಡಿಮುಂಗಟ್ಟುಗಳು ಬಂದ್ ಆದವು. ಮಾರುಕಟ್ಟೆಯೂ ಮುಚ್ಚಲ್ಪಟ್ಟಿತು. ಬಿಜೆಪಿ ಮುಖಂಡರಾದ ಎಂ.ಎಂ.ರವೀಂದ್ರ, ಪ್ರಭು ಸುಬ್ರಮಣಿ, ಪಂದ್ಯಂಡ ಹರೀಶ್, ಕಬೀರ್ ದಾಸ್, ಗಿರಿಶ್ ಗಣಪತಿ, ರಾಜೇಶ್, ಸಿ.ಕೆ.ಬೋಪಣ್ಣ, ಸಂಘ ಪರಿವಾರದ ಚೆಕ್ಕೆರ ಮನು, ಲಾಲಾ ಅಯ್ಯಣ,್ಣ ಕಾಂಗ್ರೆಸ್ ಮುಖಂಡರಾದ ಸಿ. ಎಸ್. ಅರಣ್ ಮಾಚಯ್ಯ, ಅಜಿತ್ ಅಯ್ಯಪ್ಪ, ಸರಿತಾ ಪೂಣಚ್ಚ, ಬಿ.ಎನ್ ಪಥ್ಯು, ಹಬೀಬುನ್ನೀಸ ಆಗಮಿಸಿ ಎರಡೂ ಗುಂಪಿನವರಿಗೆ ಸಾಂತ್ವನ ಹೇಳಿದರು.

ತನಿಖಾ ತಂಡ ರಚನೆ: ತಲೆಮರೆಸಿಕೊಂಡಿರುವ ಆರೋಪಿಗಳ ಸೆರೆಗೆ ಪೊಲೀಸ್ ವೃತ್ತ ನಿರೀಕ್ಷಕ ಶೈಲೇಂದ್ರ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದು ಡಿವೈಎಸ್‌ಪಿ ಅಣ್ಣಪ್ಪನಾಯಕ ತಿಳಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎರಡು ತುಕಡಿಗಳು ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.  ವೃತ್ತ ನಿರೀಕ್ಷಕ ಶೈಲೇಂದ್ರ, ಸಬ್                 ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್, ಪೊನ್ನಂಪೇಟೆ ಸಬ್                    ಇನ್ಸ್‌ಪೆಕ್ಟರ್ ಸುಬ್ರಮಣಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT