ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಿಂದಿ ಹಾಡುಗಳತ್ತ ಎಫ್‌ಎಂ ಪಯಣ' (ಜ.16) ಲೇಖನ ಪ್ರತಿಕ್ರಿಯೆ ಮುಂದುವರೆಯುವಿಕೆ...

Last Updated 22 ಜನವರಿ 2013, 19:59 IST
ಅಕ್ಷರ ಗಾತ್ರ

ಜಾಹೀರಾತುಗಳೂ ಬೇಕು ಕನ್ನಡದಲ್ಲಿ

ಇತ್ತೀಚೆಗೆ ಪ್ರಜಾವಾಣಿ `ಮೆಟ್ರೊ' ಪುರವಣಿಯಲ್ಲಿ ಪ್ರಕಟವಾದ `ಹಿಂದಿ ಹಾಡುಗಳತ್ತ ಎಫ್‌ಎಂ ಪಯಣ' (ಜ.16) ಲೇಖನ ಸೂಕ್ತವಾಗಿದ್ದು, ಬೆಂಗಳೂರಿನ ಸಾಮಾನ್ಯ ಜನರಿಗೆ ಆಗುವ ಅನುಭವವನ್ನು ವಿವರಿಸಿದಂತೆ ಇತ್ತು. ಕನ್ನಡ ಹಾಡು ಪ್ರಸಾರ ಮಾಡುತ್ತೇವೆ ಎಂದು ಹೇಳಿ ಈಗ ಹಿಂದಿ ಹಾಡು ಪ್ರಸಾರ ಮಾಡುತ್ತಿರುವ ಈ ವಾಹಿನಿಗಳ ನಂಬುವುದನ್ನು ಜನರು ನಿಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಮುಂಚೆ ಬೆಂಗಳೂರಿನ ಎಲ್ಲಾ ಎಫ್‌ಎಂಗಳಲ್ಲೂ ಕನ್ನಡದ ಘಮ ಇತ್ತು. ಇದರಿಂದ ಬೆಂಗಳೂರು ಮತ್ತು ಸುಮಾರು 50 ಕಿ.ಮೀ ಸುತ್ತಲಿನ ಪ್ರದೇಶದಲ್ಲಿ ಉಚಿತವಾಗಿ ಸಿಗುತ್ತಿದ್ದ ಮನೋರಂಜನೆಯ ಭಾಷೆ ಕನ್ನಡವೇ ಆಗಿತ್ತು.

ಬೆಂಗಳೂರಿನ ಬಸ್ ಪ್ರಯಾಣ ಕನ್ನಡ ಹಾಡುಗಳಿಂದಾಗಿ ಸುಗಮವಾಗಿತ್ತು. ಎಲ್ಲರೂ ಇಷ್ಟಪಟ್ಟು ಹಾಡುಗಳನ್ನು ಕೇಳುತ್ತಾ ಪ್ರಯಾಣ ಮಾಡುವಾಗ ಅನೇಕರ ನಡುವೆ
ಗೆಳೆತನ ಏರ್ಪಡುತ್ತಿತ್ತು. ಬೆಂಗಳೂರಿಗೆ ಬರುತ್ತಿದ್ದ ಕನ್ನಡೇತರರೂ ಈ ಹಾಡುಗಳನ್ನು ಗುನುಗುವ ಮೂಲಕ ಕನ್ನಡ ಕಲಿಯುವ ಮನಸ್ಸು ಮಾಡುತ್ತಿದ್ದರು.
ಈಗ ಹಿಂದಿ ಹಾಡುಗಳನ್ನು ಹಾಕುವ ಮೂಲಕ ಈ ಎಫ್‌ಎಂ ವಾಹಿನಿಗಳು ಬೆಂಗಳೂರಿನಲ್ಲಿ ಕಸ್ತೂರಿ ಕನ್ನಡದ ಘಮವನ್ನು ಕಿತ್ತೊಗೆದಂತಾಗಿದೆ. ಹೆಚ್ಚಿನ ಜನರ ಹೃದಯಕ್ಕೆ ಹತ್ತಿರವಾಗಿರುವ ಕನ್ನಡ ಹಾಡುಗಳನ್ನು ಬದಿಗೊತ್ತಿ ಕನ್ನಡಿಗರ ಮೇಲೆ ಹಿಂದಿಯ ಹೊರೆ ಹೊರಿಸಲಾಗಿದೆ. ಕೇವಲ ಹಿಂದಿ ಹಾಡುಗಳನ್ನು ಮಾತ್ರವಲ್ಲ, ಹಾಡುಗಳ ನಡುವೆ ಬರುವ ಜಾಹೀರಾತುಗಳೂ ಹಿಂದಿಯಲ್ಲೇ ಇವೆ. ಈ ಮಟ್ಟಕ್ಕೆ ಕನ್ನಡ ದ್ವೇಷಿಗಳಾದರೆ ಹೇಗೆ?

ಕನ್ನಡ ಭಾಷೆಯ ಮೂಲಕವೇ ಜನರನ್ನು ರಂಜಿಸುವಷ್ಟು ಸಾಮರ್ಥ್ಯ ಅವರಲ್ಲಿರಬೇಕು. ಜಾಹೀರಾತುಗಳೂ ಕನ್ನಡದಲ್ಲೇ ಪ್ರಸಾರವಾಗಬೇಕು. ಜತೆಗೆ ತಮ್ಮ ಕಾರ್ಯಕ್ರಮಗಳ ಕುರಿತು ಶ್ರೋತೃಗಳ ಅಭಿಪ್ರಾಯ ಪಡೆದು, ಅದನ್ನು ಗೌರವಿಸಬೇಕು.
-ರೋಹಿತ್ ಬಾಟ್ನಿ

ಕನ್ನಡಕ್ಕೇ ಬೇಡಿಕೆ

ಬೆಂಗಳೂರಿನ ಎಫ್‌ಎಂ ರೇಡಿಯೊಗಳಲ್ಲಿ ಮೊದಲಿನಿಂದಲೂ ಕನ್ನಡ ಹಾಡುಗಳಿಗೆ ಬಹಳ ಬೇಡಿಕೆ ಇದೆ. ಕೆಲವು ಎಫ್‌ಎಂ ವಾಹಿನಿಗಳು ಹಿಂದಿ ಹಾಡುಗಳನ್ನು ಹಾಕಲು ಶುರುಮಾಡಲು ಹಿಂದಿ ಹಾಡುಗಳನ್ನು ಕೇಳುವವರು ಹೆಚ್ಚಾಗಿದ್ದಾರೆ ಎಂಬುದಾಗಲೀ ಅಥವಾ ಕನ್ನಡ ಹಾಡುಗಳ ಗುಣಮಟ್ಟ ಕಡಿಮೆ ಇದೆ ಎಂಬುದಾಗಲೀ ಕಾರಣವಲ್ಲ ಎಂದೆನಿಸುತ್ತದೆ. ನನ್ನ ಪ್ರಕಾರ ಕನ್ನಡದಲ್ಲೇ ಬೇಕಾದಷ್ಟು ಒಳ್ಳೆಯ ಹಾಡುಗಳು ಇರುವುದರಿಂದ ಅನ್ಯಭಾಷೆಯ ಸಂಗೀತದ ಅಗತ್ಯವಿಲ್ಲ. ನಮ್ಮ ಭಾಷೆಯ ಹಾಡುಗಳ ಸಾಹಿತ್ಯದ ಆಪ್ತತೆ ಬೇರೆಯದರಲ್ಲಿ ಸಿಗುವುದಿಲ್ಲ. ಕನ್ನಡ ಸಿನಿಮಾ ಹಾಡುಗಳು ಮತ್ತು ಭಾವಗೀತೆಗಳು, ಸುಗಮ ಸಂಗೀತ ಪ್ರಸಾರವಾಗಬೇಕು. ಹೊಸ ಸಿನಿಮಾ ಹಾಡುಗಳನ್ನೇ ಪದೇಪದೇ ಪ್ರಸಾರ ಮಾಡುವ ಬದಲು ಹಳೇ ಸಿನಿಮಾ ಹಾಡುಗಳನ್ನೂ ಹಾಕಬೇಕು. ಪ್ರಚಲಿತ ಮುಖ್ಯ ಸುದ್ದಿಗಳು ಮತ್ತು ನಗರದಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ, ವಿಜ್ಞಾನ ಮುಂತಾದ ಕಾರ್ಯಕ್ರಮಗಳ ಮಾಹಿತಿ ಕೊಡುತ್ತಿರಬೇಕು. ಆರೋಗ್ಯಕರ ತಮಾಷೆಯ ಕಾರ್ಯಕ್ರಮಗಳಿರಬೇಕು. ಅವು ಖುಷಿ ಕೊಡುತ್ತವೆ. ದಿನದಲ್ಲಿ ಒಂದು ಗಂಟೆಯಾದರೂ ಸಾಧಕರ, ಸಾಧನೆಯ ಪರಿಚಯದ ಗಂಭೀರ ಕಾರ್ಯಕ್ರಮ ಇರಲಿ. ಒಟ್ಟಾರೆ ಮನರಂಜನೆಯ ಜೊತೆಜೊತೆಗೆ ಮಾಹಿತಿ, ಜ್ಞಾನ ಒದಗಿಸುವ ಸಾಧನವಾದರೆ ನಾನಂತೂ ಬೇಕಿದ್ದರೆ ದುಡ್ಡು ಕೊಟ್ಟು ರೇಡಿಯೋ ಕೇಳಲು ಸಿದ್ಧನಿದ್ದೇನೆ.
-ವಿಕಾಸ್ ಹೆಗಡೆ

ಪರಭಾಷೆ ಹೇರುವ ಹುನ್ನಾರ

ತಂತ್ರಜ್ಞಾನದ ಹೊಸ ಆವಿಷ್ಕಾರಗಳು ನಮ್ಮ ಬದುಕಿನಲ್ಲಿ ಹೊಸ ಬೆಳವಣಿಗೆ-ಬದಲಾವಣೆಗೆ ಕಾರಣವಾಗುವಂತೆ ಟೀವಿ ವಾಹಿನಿಗಳ ಭರಾಟೆಯಲ್ಲಿ ಮರೆಯಾಗಿದ್ದ ರೇಡಿಯೋಗಳಿಗೆ ಹೊಸ ಉಸಿರು ಕೊಟ್ಟಿದ್ದು ಎಫ್‌ಎಂ ರೇಡಿಯೋ ವಾಹಿನಿಗಳು. ಅಂದು ಕೇಂದ್ರ ಸರ್ಕಾರ ಖಾಸಗಿಯವರಿಗೂ ವಾಹಿನಿ ಆರಂಭಿಸಲು ಅವಕಾಶ ನೀಡಿದ್ದು ಒಂದು ಕ್ರಾಂತಿಕಾರಿ ಬೆಳವಣಿಗೆ. ಕರ್ನಾಟಕ- ಬೆಂಗಳೂರಿನಲ್ಲಿ ಕನ್ನಡ ಚಿತ್ರೋದ್ಯಮ ಮತ್ತು ಸಂಗೀತ ಕ್ಷೇತ್ರಗಳಿಗೆ ಹೊಸ ಹುಮ್ಮಸ್ಸು ತುಂಬುವ ಭರವಸೆಗೂ ಇದು ಕಾರಣವಾಗಿತ್ತು. ಎಫ್‌ಎಂ ರೇಡಿಯೋ ವಾಹಿನಿಗಳು 2006ರಲ್ಲಿ ಬೆಂಗಳೂರಿನಲ್ಲಿ ಪ್ರಸಾರ ಆರಂಭಿಸಿದಾಗ ಕನ್ನಡ ಚಲನಚಿತ್ರ ಕಲಾವಿದರು, ನಾಟಕಕಾರರು, ಸಾಹಿತಿಗಳು, ಹಾಡುಗಾರರು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕೆಲ ರಾಜಕಾರಣಿಗಳು ಹೀಗೆ ಕರ್ನಾಟಕದ ಗಣ್ಯರನ್ನು ತಮ್ಮ ವಾಹಿನಿಯ ಪ್ರಚಾರಕ್ಕೆ ಬಳಸಿಕೊಂಡು ಬೆಳೆದರು.


ನಿಧಾನವಾಗಿ ಬೆಂಗಳೂರು ಜನಜೀವನದ-ಕನ್ನಡಿಗರ ಸಂಸ್ಕೃತಿಯ ಬದುಕಿನ ಅವಿಭಾಜ್ಯ ಅಂಗವಾಗಬೇಕಿದ್ದ ಈ ವಾಹಿನಿಗಳು ಕನ್ನಡವನ್ನು ಕಡೆಗಣಿಸತೊಡಗಿದವು. ಹೊಸ ವರ್ಷಾಚರಣೆ, ವ್ಯಾಲೆಂಟೈನ್ಸ್ ಡೇ, ಹೋಳಿ, ಸಲ್ಲು-ಕತ್ರಿನಾ ಬರ್ತ್‌ಡೇ, ಅವರ ಚೆಲ್ಲಾಟಗಳು, ತಲೆ ಮಾಸಿದ ಹಿಂದಿ ಚಿತ್ರಗಳ ವಿಮರ್ಶೆ ಹೀಗೆ ಕನ್ನಡೇತರ ಸಂಸ್ಕೃತಿ ಪ್ರಸಾರ ಮಾಡುವ ಇವರುಗಳಿಗೆ ಕುವೆಂಪು-ಪುಟ್ಟಣ್ಣ-ರಾಜ್‌ಕುಮಾರ್ ಕುರಿತ ಕಾರ್ಯಕ್ರಮಗಳು, ನಮ್ಮ ಜನಪದ ಗೀತ-ಗಾಯನ, ಯುಗಾದಿ, ಬಸವ ಜಯಂತಿ, ರಾಜ್ಯೋತ್ಸವ ವಿಶೇಷಗಳನ್ನು ಎಂದೂ ಮಾಡಬೇಕೆನಿಸಲಿಲ್ಲ. ನೆಲೆಸಲು ಬರುವ ವಲಸಿಗರಿಗೆ, ಕನ್ನಡೇತರರಿಗೆ ಇಲ್ಲಿನ ಬದುಕು- ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮ ರೂಪಿಸಿ, ಆಕರ್ಷಿಸಿ ಎಲ್ಲರನ್ನು ಕನ್ನಡದ ಮುಖ್ಯ ವಾಹಿನಿಯಲ್ಲಿ ಬೆಸೆಯುವ ರಾಯಭಾರಿಯಾಗಳಾಗಲಿಲ್ಲ.

ಈಗ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿ ಪರಭಾಷೆಯ ಹಾಡುಗಳನ್ನು- ಕನ್ನಡಕ್ಕೆ ಸಂಬಂಧ ಪಡದ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವುದು ಕನ್ನಡಿಗರನ್ನು ಆಸರೆಯಾಗಿ ಬಳಸಿಕೊಂಡು ಬೆಳೆದು, ಹತ್ತಿದ ಏಣಿಯನ್ನು ಒದೆಯುವ ಇವರ ಕುತಂತ್ರದ ಚಾಳಿಯಂತಿದೆ. ಕನ್ನಡೇತರ ಕಾರ್ಯಕ್ರಮ ಪ್ರಸಾರ ಮಾಡುವುದರ ಮೂಲಕ ಕನ್ನಡಿಗರ ಮೇಲೆ ಪರಭಾಷೆ ಹೇರುವ ಹುನ್ನಾರ ಸಹ ಇದಾಗಿದೆ. ಇಂತಹ ವಾಹಿನಿಗಳ ಪ್ರಸಾರ ತಡೆ ಹಿಡಿಯುವ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಂಸ್ಕೃತಿ ಇಲಾಖೆ ಮುಂದಾಗಬೇಕಿದೆ. ಕನ್ನಡಿಗರು ಇಂತಹ ವಾಹಿನಿಗಳ ಪ್ರಸಾರವನ್ನು ಬಹಿಷ್ಕರಿಸಿ ಕನ್ನಡ ಕಾರ್ಯಕ್ರಮ ಪ್ರಸಾರ ಮಾಡುವ ವಾಹಿನಿಗಳನ್ನು ಮಾತ್ರ ಪುರಸ್ಕರಿಸಬೇಕಿದೆ.
-ಕಲ್ಯಾಣರಾಮನ್ ಚಂದ್ರಶೇಖರನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT