ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಾಗಿಲ ಸಂಧಾನ ಇಲ್ಲ: ಕೇಂದ್ರ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸತ್ಯಾಗ್ರಹ ನಡೆಸುತ್ತಿರುವ ಬಾಬಾ ರಾಮ್‌ದೇವ್ ಅವರೊಂದಿಗೆ ಸಂಧಾನ ನಡೆಸಲು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಕೇಂದ್ರ ಸರ್ಕಾರ ಕಳುಹಿಸಿಲ್ಲ ಎಂದು ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಶನಿವಾರ ಇಲ್ಲಿ ಸ್ಪಷ್ಟಪಡಿಸಿದರು.

`ಕೇಂದ್ರ ಸರ್ಕಾರ ಹಿಂಬಾಗಿಲ ಮೂಲಕ ಸಂಧಾನ ನಡೆಸುತ್ತಿದೆ ಎಂಬುದು ಸರಿಯಲ್ಲ, ರವಿಶಂಕರ್ ಅವರು ಸೌಜನ್ಯದ ದೃಷ್ಟಿಯಿಂದ ರಾಮ್‌ದೇವ್ ಅವರೊಂದಿಗೆ ಮಾತುಕತೆ ನಡೆಸಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದಾರೆ. ಇದು ಅವರು ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾಡಿರುವ ಕೆಲಸವೇ ಹೊರತು ಸರ್ಕಾರದ ಪ್ರತಿನಿಧಿಯಾಗಿ ಅಲ್ಲ~ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

`ರವಿಶಂಕರ್ ಹರಿದ್ವಾರಕ್ಕೆ ತೆರಳುವ ಮುನ್ನ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದ್ದರು. ಆಗ ಕಪ್ಪುಹಣ ವಾಪಸ್ ತರುವ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ರಾಮ್‌ದೇವ್ ಅವರೊಂದಿಗೆ ಕೇಂದ್ರದ ನಾಲ್ವರು ಸಚಿವರು ನಡೆಸಿದ ಸಂಧಾನದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ರಾಮ್‌ದೇವ್ ಅವರೊಂದಿಗೆ ಮಾತನಾಡುವಾಗ ನಿಮ್ಮ ಹೆಸರನ್ನು ಪ್ರಸ್ತಾಪಿಸುತ್ತೇನೆ ಎಂಬುದಾಗಿ ರವಿಶಂಕರ್ ನನ್ನ ಬಳಿ ಹೇಳಿದ್ದರು ಅಷ್ಟೇ~ ಎಂದರು.

ಕಪ್ಪುಹಣಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಆದರೆ ಯುಪಿಎ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಪ್ಪುಹಣವನ್ನು ರಾಷ್ಟ್ರೀಕರಣಗೊಳಿಸಿ, ತಪ್ಪಿತಸ್ಥರನ್ನು ಶಿಕ್ಷಿಸುವ ಸಂಬಂಧ ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಈ ಸಂಬಂಧ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ. ಇದನ್ನು ರಾಮ್‌ದೇವ್ ಅವರಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯಾಗ್ರಹ ಕೈಬಿಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಮಾತಿಗೆ ತಪ್ಪಿ ಉಪವಾಸ ನಡೆಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಸತ್ಯಾಗ್ರಹ ಆರಂಭಿಸುವ ಮೊದಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣಾ ವ್ಯವಸ್ಥೆಯ ಸುಧಾರಣೆ ಮತ್ತು ಲೋಕಪಾಲ್ ಮಸೂದೆ ಜಾರಿ ಬಗ್ಗೆ ಚರ್ಚೆ ನಡೆಸಿದ್ದರು. ಕೇಂದ್ರ ಸರ್ಕಾರ ಪ್ರಬಲವಾದ ಜನಲೋಕಪಾಲ್ ಮಸೂದೆ ಜಾರಿಗೆ ಬದ್ಧವಾಗಿದ್ದು, ಇದೇ 30ರಂದು ಕರಡು ಸಿದ್ಧವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಕರಡು ಸಿದ್ಧವಾದ ನಂತರ ಅಂದಾಜು ಸಮಿತಿಯ ಮುಂದೆ ಬರಲಿದೆ. ಅದಾದ ನಂತರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಸಂಸತ್‌ನಲ್ಲಿ ಮಂಡಿಸಲಾಗುವುದು ಎಂದರು.

ಪರ, ವಿರೋಧ-ನಿಲ್ಲದ ವಾಗ್ದಾಳಿ


ನವದೆಹಲಿ, ಶ್ರೀನಗರ (ಪಿಟಿಐ/ ಐಎಎನ್‌ಎಸ್): ಬಾಬಾ ರಾಮ್‌ದೇವ್ ಅವರ ಪರ, ವಿರೋಧ ವಾಗ್ದಾಳಿ ಮುಂದುವರಿದಿದೆ.

`ರಾಮ್‌ದೇವ್ ಅವರ ಸತ್ಯಾಗ್ರಹ ಮಹತ್ವ ಕಳೆದುಕೊಂಡಿದೆ. ಅವರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿರುವುದರಿಂದ ಕೂಡಲೇ ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಬೇಕು~ ಎಂದು ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಪಿ.ಎಲ್.ಪುನಿಯಾ ಹೇಳಿದ್ದಾರೆ.

`ರಾಮ್‌ದೇವ್ ಅಸ್ವಸ್ಥರಾಗಿರುವುದು ಉಪವಾಸದ ಕಾರಣದಿಂದಲ್ಲ, ಅವರ ಟ್ರಸ್ಟ್‌ನ ಆಸ್ತಿಪಾಸ್ತಿಯನ್ನು ತನಿಖೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿರುವುದರಿಂದ~ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಹತಾಶ ಕ್ರಮ: ರಾಮ್‌ದೇವ್ ಸತ್ಯಾಗ್ರಹವನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಸಮಗ್ರ ಕ್ರಾಂತಿಗೆ ಹೋಲಿಕೆ ಮಾಡಿದ್ದಾರೆ.
ತುರ್ತು ಪರಿಸ್ಥಿತಿ ವಿರುದ್ಧ ದನಿ ಎತ್ತಿದ್ದ ಜಯಪ್ರಕಾಶ್ ನಾರಾಯಣ್ ಅವರನ್ನು ಕೂಡಾ ಕಾಂಗ್ರೆಸ್ ಇದೇ ರೀತಿ `ಆರ್‌ಎಸ್‌ಎಸ್ ಸಹಕಾರ ಪಡೆದಿರುವ ವ್ಯಕ್ತಿ~ ಎಂದೇ ಟೀಕೆ ಮಾಡಿತ್ತು. ಅಣ್ಣಾ ಹಜಾರೆ ಅವರನ್ನೂ ಆರ್‌ಎಸ್‌ಎಸ್ ಜೊತೆಗೂಡಿಸುವ ಪ್ರಯತ್ನ ನಡೆಸಿತ್ತು ಎಂದರು.
ಅತ್ಯಂತ ಭ್ರಷ್ಟ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಹಾಗೂ ರಾಹುಲ್ ಅವರ ಒಡೆತನದ ಕಂಪೆನಿಯೊಂದರ ಸಿಇಒ ಅಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ಎಚ್ಚರಿಕೆ: ರಾಮ್‌ದೇವ್ ಅವರ ಜೀವಕ್ಕೆ ಏನಾದರೂ ಅಪಾಯ ಉಂಟಾದರೆ ಮುಂದಾಗುವ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಿರಬೇಕಾಗುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಎಚ್ಚರಿಸಿದ್ದಾರೆ.

ಸರ್ಕಸ್: ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆ ಮತ್ತು ರಾಮ್‌ದೇವ್ ಅವರ ಹೋರಾಟವನ್ನು `ಜಂತರ್ ಮಂತರ್ ಮತ್ತು ರಾಮಲೀಲಾ ಮೈದಾನದಲ್ಲಿನ ಸರ್ಕಸ್~ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಲೇವಡಿ ಮಾಡಿದ್ದಾರೆ. ಅಲ್ಲದೆ ಯುಪಿಎ ಸರ್ಕಾರ ಈ ಘಟನೆಗಳನ್ನು ನಿರ್ವಹಿಸಿದ ರೀತಿಯನ್ನೂ ಅವರು ಟೀಕಿಸಿದ್ದಾರೆ.
ಸಚಿವರ ಭೇಟಿ: ಮಧ್ಯಪ್ರದೇಶದ ಆರೋಗ್ಯ ಸಚಿವ ನರೋತ್ತಮ ಮಿಶ್ರಾ ಅವರು ಶನಿವಾರ ರಾಮ್‌ದೇವ್ ಅವರನ್ನು ಡಾರ್ಜಿಲಿಂಗ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ರೋಗಿ ಬಳಗಕ್ಕೆ ಕಿರಿಕಿರಿ: ರಾಮ್‌ದೇವ್ ಅವರನ್ನು ದಾಖಲಿಸಿರುವ ಆಸ್ಪತ್ರೆಯಲ್ಲಿ ಇದೀಗ ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ಧಕ್ಕೆ ಉಂಟಾಗಿದೆ.

`ರೋಗಿಗಳ ಬಂಧು ಬಳಗ ಸರಾಗವಾಗಿ ಒಳಗೆ ಪ್ರವೇಶಿಸಲು ಅಧಿಕಾರಿಗಳು ನಿರ್ಬಂಧ ವಿಧಿಸುತ್ತಿದ್ದಾರೆ~  ಎಂದು ಬಂಧುಗಳು ದೂರಿದ್ದಾರೆ. ಆದರೆ ಇದನ್ನು ಆಸ್ಪತ್ರೆಯ ಆಡಳಿತ ವಿಭಾಗ ನಿರಾಕರಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT