ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಡಾಗಳ ನಿಯಂತ್ರಣಕ್ಕೆ ಅಮಾನವೀಯ ಕಾಯ್ದೆ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಪೊಲೀಸ್ ಕಾಯಿದೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಹುಟ್ಟು ಅಪರಾಧಿಗಳೆಂದು ಪರಿಗಣಿಸುವಂತಹ ತಿದ್ದುಪಡಿಗಳನ್ನು ತರಲಾಗಿದೆ. ಜಗತ್ತಿನಲ್ಲೇ ಇಂತಹದ್ದೊಂದು ಕಾಯಿದೆ ಇರಲು ಸಾಧ್ಯವಿಲ್ಲ!!

ಈ ತಿದ್ದುಪಡಿ ಹೀಗಿದೆ: `ಕರ್ನಾಟಕ ಪೊಲೀಸ್ ಅಧಿನಿಯಮ 1964 ತಿದ್ದುಪಡಿ (1964ರ ಕರ್ನಾಟಕ ಅಧಿನಿಯಮ 4) 368 ಪ್ರಕರಣದ ತರುವಾಯ ಈ ಮುಂದಿನ ಪ್ರಕರಣವನ್ನು ಸೇರಿಸತಕ್ಕದ್ದು. ಎಂದರೆ ಅದು ಈ ಕೆಳಕಂಡಂತಿದೆ~.

`36 ಎ ನಪುಂಸಕರ ನಿಯಂತ್ರಣಕ್ಕೆ ಅಧಿಕಾರ: 1.ಆಯುಕ್ತರು, ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ನಪುಂಸಕರ ಅನಪೇಕ್ಷಣೀಯ ಚಟುವಟಿಕೆಗಳನ್ನು ನಿಷೇಧಿಸಲು ಅಥವಾ ದಮನಗೊಳಿಸಲು ಆದೇಶವನ್ನು ಹೊರಡಿಸಬಹುದು ಎಂದರೆ, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ನಪುಂಸಕರ ಮತ್ತು ಗಂಡು ಮಕ್ಕಳನ್ನು ಅಪಹರಿಸುವ ಅಥವಾ ಅವರನ್ನು ನಿರ್ವೀರ್ಯರನ್ನಾಗಿ ಮಾಡುವ ಅಥವಾ ಅಸ್ವಾಭಾವಿಕ ಅಪರಾಧಗಳನ್ನು ಮಾಡುವುದಕ್ಕೆ ದುರುದ್ದೇಶದಿಂದ ಪ್ರೇರಿಸುವ ಸಂಬಂಧದಲ್ಲಿ ನಂಬಬಹುದಾದ ಅನುಮಾನಗಳಿಗೆ ಅವಕಾಶ ನೀಡುವ ವ್ಯಕ್ತಿಗಳ ಹೆಸರುಗಳು ಮತ್ತು ವಾಸಸ್ಥಳಗಳ ವಿವರಗಳನ್ನು ಒಳಗೊಂಡು ಒಂದು ರಿಜಿಸ್ಟರ್ ಅನ್ನು ತಯಾರಿಸಲು ಮತ್ತು ನಿರ್ವಹಿಸಲು... ಇತ್ಯಾದಿ

ಈ ತಿದ್ದುಪಡಿಯಲ್ಲಿ ಬರುವ ಅಂಶಗಳನ್ನು ಕಂಡರೆ ಈ ಹಿಂದೆ ವಸಾಹತುಶಾಹಿ ಸಂದರ್ಭದಲ್ಲಿ ಇದ್ದ ಅಲೆಮಾರಿ, ಬುಡಕಟ್ಟುಗಳಿಗೆ ಸೇರಿದ ಕೆಲ ಸಮುದಾಯದವರನ್ನು ಹುಟ್ಟಿನಿಂದಲೇ `ಅಪರಾಧಿ ಬುಡಕಟ್ಟುಗಳು~ ಎಂದು ಪರಿಗಣಿಸುವ ಕ್ರೂರ ಅಮಾನವೀಯ ಕಾಯಿದೆ ನೆನಪಿಗೆ ಬರುತ್ತದೆ.

ದೇಶ ಸ್ವತಂತ್ರವಾದ ನಂತರದಲ್ಲಿ ಈ ಕಾಯಿದೆಯನ್ನು ರದ್ದು ಮಾಡಲಾಯಿತು. ಆ ಕಾಯಿದೆ `ನಪುಂಸಕ~ರನ್ನೂ ಒಳಗೊಂಡಿತ್ತು. ಆದರೆ ಈಗಿನ ಪೊಲೀಸ್ ಕಾಯಿದೆ ತಿದ್ದುಪಡಿಯಲ್ಲಿ `ನಪುಂಸಕರು~ ಎಂದಿರುವುದು Eunuches ಎಂಬ ಆಂಗ್ಲ ಪದದ ಅರ್ಥವೇ ಆಗಿದೆ.
 
ಆದರೆ ಸದರಿ ತಿದ್ದುಪಡಿಯಲ್ಲಿ ಕಾನೂನು `ಬೃಹಸ್ಪತಿ~ಗಳು ನಪುಂಸಕರು ಎಂದು ಬಳಸಿರುವ ಪದದ ಹಿಂದೆ ಅವರ ಮನಸ್ಸಿನಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಹಿಜಾ, ಹಿಜಡಾ, ಡಬಲ್ ಡೆಕರ್‌ಗಳು ಎಂಬುದು. ಈ ಮಸೂದೆ ಈಗಾಗಲೇ 2011ರ ವಿಧಾನಸಭೆಯಲ್ಲಿ ಚರ್ಚೆಯಾಗದೆ ಮನ್ನಣೆ ಪಡೆದಿದೆ.
 
`ಹೈದ್ರಾಬಾದ್ ಯೂನಕ್ಸ್ ಆಕ್ಟ್~ ಅನ್ನು ಕರ್ನಾಟಕ ಈಗ ಬಳಸಿಕೊಂಡಿದೆ. ಈ ಕಾಯ್ದೆ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತರು ಹುಟ್ಟಿನಿಂದಲೇ ಗಂಡು ಮಕ್ಕಳನ್ನು ಅಪಹರಿಸುವ ಹಾಗೂ ಅವರನ್ನು ನಿರ್ವೀಯರನ್ನಾಗಿ ಮಾಡುವ ಕ್ರಿಮಿನಲ್‌ಗಳು!!

ಈ ಕಾಯಿದೆಯ ಕುರಿತು ಕಾನೂನು ಸಚಿವ ಸುರೇಶ್‌ಕುಮಾರ್ ಅವರು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅಕ್ಕಾಯ್ ಪದ್ಮಶಾಲಿ ಎಂಬುವರಿಗೆ 2011ರ ಜೂನ್ 30 ರಂದು ಪತ್ರವೊಂದನ್ನು ಬರೆದು `ಲೈಂಗಿಕ ಅಲ್ಪಸಂಖ್ಯಾತರನ್ನು ನಮ್ಮ ಸಮಾಜ ಸದಾ ಒಂದು ಅಂತರವನ್ನು ಕಾಯ್ದುಕೊಂಡೇ ನೋಡುತ್ತಿರುವುದು ನಿಜಕ್ಕೂ ಅಮಾನವೀಯ.

ಇದು ಯಾರೂ ತಾವಾಗಿಯೇ ಬಯಸಿ ತಂದುಕೊಂಡಂತಹ ಜೈವಿಕಸ್ಥಿತಿ ಅಲ್ಲ. ಹಾಗಿರುವಾಗ ಸ್ವಾಭಾವಿಕವಾಗೇ ಲಿಂಗವೈಕಲ್ಯಕ್ಕೆ ಒಳಗಾಗುವ ವ್ಯಕ್ತಿಗಳನ್ನು ನಿಸರ್ಗದ ಎಲ್ಲಾ ಸಹಜ ಸೃಷ್ಟಿಯಂತೆ ನೋಡಬೇಕಾದದ್ದು ನಮ್ಮ ಧರ್ಮ.

ಆದರೆ ನಾವು ಈ ಲಿಂಗವಿಕಲ್ಪಕ್ಕೆ ಒಳಗಾದ ಲೈಂಗಿಕ ಅಲ್ಪಸಂಖ್ಯಾತರನ್ನು ನೋಡುವ ದೃಷ್ಟಿ ಬೇರೆಯೇ ಆಗಿದೆ, ಅವರ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿವೆ ಎನ್ನುವುದರ ಬಗ್ಗೆ ಆ ಸಮುದಾಯ ಸದಾ ಗಮನ ಸೆಳೆಯುತ್ತಲೇ ಬಂದಿದೆ. ಅಲ್ಲದೆ ಸಾಮಾಜಿಕ ತಾರತಮ್ಯದ ನೋವು ಅವರಿಗಿದೆ..~ ಎಂದು ಮಾನವೀಯತೆ ಮೆರೆದಿದ್ದಾರೆ.

ಸರ್ಕಾರ ತಂದಿರುವ ಜೀವವಿರೋಧಿ ಕಾಯಿದೆಯ ಬಗ್ಗೆ ಮುಂದೆ `...ಅವರ ಮೇಲಿನ ದೌರ್ಜನ್ಯ, ಸಾಮಾಜಿಕ ಅಸಮಾನತೆ ಹಾಗೂ ಶೋಷಣೆ ತಡೆಯಲು ಕರ್ನಾಟಕ ಪೊಲೀಸ್ ಅಧಿನಿಯಮ 2009ನ್ನು ಮಾರ್ಚ್ 2011ರ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದಿಸಲಾಗಿದೆ.
 
ಈ ಅಧಿನಿಯಮದಡಿ ಇನ್ನೂ ಹೆಚ್ಚಿನ ರಕ್ಷಣೆ ಮತ್ತು ಹಕ್ಕು ಒದಗಿಸುವ ನಿಟ್ಟಿನಲ್ಲಿ ಮತ್ತಷ್ಟು ಅಂಶಗಳನ್ನು ಸೇರಿಸಬೇಕು ಎಂಬ ಲೈಂಗಿಕ ಅಲ್ಪಸಂಖ್ಯಾತರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ~ ಎಂದೂ ಬರೆಯುತ್ತಾರೆ.

ಇದೇ ತಿದ್ದುಪಡಿ ಬಗ್ಗೆ ಸರ್ಕಾರದ ಮತ್ತೊಬ್ಬ ಮಂತ್ರಿ ಶೋಭಾ ಕರಂದ್ಲಾಜೆ ಅವರು 2011 ಜೂನ್ 17ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದ ಟಿಪ್ಪಣಿ ಹೀಗಿದೆ: `ರಾಜ್ಯ ಸರ್ಕಾರವು ಈಗಾಗಲೇ ಲಿಂಗತ್ವ ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡಲು ಹಲವಾರು ಸಭೆಗಳನ್ನು ನಡೆಸಿ ಅವರ ಅಭಿವೃದ್ಧಿಗೆ ಯೋಜನೆಗಳನ್ನು ಹಾಕಿಕೊಂಡಿದೆ.
 
ಕಳೆದ ವಿಧಾನ ಸಭೆಯಲ್ಲಿ ಅಸ್ವಾಭಾವಿಕ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸರಿಗೆ ಅಧಿಕಾರ ನೀಡುವ ತಿದ್ದುಪಡಿ ಅಧಿಸೂಚನೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಅಧಿನಿಯಮ 1964ರ (1964ರ ಕರ್ನಾಟಕದ ಅಧಿನಿಯಮ - 4) 36 (ಎ) ಪ್ರಕರಣದಲ್ಲಿ ನಪುಂಸಕರ ನಿಯಂತ್ರಣಕ್ಕೆ ಅಧಿಕಾರ 36 (ಎ) ಎಂಬಲ್ಲಿ `ತನ್ನ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ನಪುಂಸಕರ~ ಎಂಬುದಾಗಿ ಉಲ್ಲೇಖಿಸಲಾಗಿದೆ.
 
ಇದರಿಂದ ಸದರಿ ಪ್ರಕರಣಗಳಲ್ಲಿ ಭಾಗವಹಿಸದೇ ಇರುವ ನಿರಪರಾಧಿ ಹಿಜ್ರಾಗಳ ವಿರುದ್ಧವೂ ಸಹ ಕ್ರಮ ಜರುಗಿಸಬಹುದಾಗಿರುತ್ತದೆ ಹಾಗೂ ಈ ಪ್ರಾಂತದಲ್ಲಿ ವಾಸಿಸುವ ಎಲ್ಲಾ ಹಿಜ್ರಾಗಳನ್ನು ಒಳಗೊಂಡು ರಿಜಿಸ್ಟರ್‌ನಲ್ಲಿ ವಿವರಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ. ಆದಕಾರಣ, ಈ ವಿಚಾರದಲ್ಲಿ ಸೂಕ್ತ ತಿದ್ದುಪಡಿಯನ್ನು ಮಾಡುವ ಅನಿವಾರ್ಯತೆ ಇದೆ.

ಈ ತಿದ್ದುಪಡಿಯ ಆಧಾರದಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳು ಹಿಜ್ರಾಗಳಿಗೆ ತೊಂದರೆ ಕೊಡುವುದು ಆರಂಭವಾಗಿದೆ. ಮಾನವ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಈ ತಿದ್ದುಪಡಿಯನ್ನು ವಾಪಸು ಪಡೆಯುವ ತನಕ ತಾವು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹಿಜ್ರಾಗಳ ಹಿತರಕ್ಷಣೆ ಮಾಡಲು ಮತ್ತು ಅನಗತ್ಯ ಕಿರುಕುಳವಾಗದಂತೆ ನೋಡಿಕೊಳ್ಳಲು ಸಂಬಂಧಿಸಿದವರಿಗೆ ಸೂಕ್ತ ಲಿಖಿತ ನಿರ್ದೇಶನ ನೀಡಬೇಕೆಂದು ಕೋರುತ್ತೇನೆ~.

ಇದರಲ್ಲಿ ಶೋಭಾ ಅವರ ಕಾಳಜಿ ವ್ಯಕ್ತವಾಗುತ್ತದೆ. ಆದರೆ ಒಂದೇ ಸರ್ಕಾರದಲ್ಲಿ ಮಾಡಿದ ಒಂದು ಕ್ರೂರ ತಿದ್ದುಪಡಿಯ ಬಗ್ಗೆ ಸುರೇಶ್‌ಕುಮಾರ್ ಹಾಗೂ ಶೋಭಾ ಕರಂದ್ಲಾಜೆಯವರ ಅಭಿಪ್ರಾಯಗಳು ಪರಸ್ಪರ ವಿರುದ್ಧವಾಗಿರುವುದು ಇಲ್ಲಿ ಕಾಣುತ್ತದೆ.

ಸರ್ಕಾರದ ಎಡಬಿಡಂಗಿತನಕ್ಕೆ ಸಂಬಂಧಪಟ್ಟ ಮತ್ತೊಂದು ಅಂಶವಿದೆ. ಕಳೆದ ವರ್ಷ ಈ ಸಮುದಾಯಕ್ಕಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸೊಂದನ್ನು ಮಾಡಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಕೆಲವು ಕಲ್ಯಾಣ ಕಾರ್ಯಕ್ರಮಗಳನ್ನು ಸೂಚಿಸಿತ್ತು.
 
ಅದರ ಆಧಾರದ ಮೇಲೆ 2010ರ ಆಗಸ್ಟ್ 11 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮತ್ತು 2011ರ ಸೆಪ್ಟಂಬರ್ 29 ರಂದು ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಕೆಲ ನಡಾವಳಿಗಳನ್ನು ಅಂಗೀಕರಿಸಲಾಯಿತು.
 
ಅದರ ಪ್ರಕಾರ ಹಿಜ್ರಾ, ಕೋಥಿ, ಜೋಗಪ್ಪಂದಿರು, ಮಂಗಳಮುಖಿಯರೇ ಮುಂತಾದವರಿಗಾಗಿ ಸುಮಾರು ಒಂಬತ್ತು ಅಂಶಗಳ ತೀರ್ಮಾನಗಳನ್ನು `ತಕ್ಷಣ ಕ್ರಮ ಜರುಗಿಸಬೇಕೆಂದು~ ಸೂಚಿಸಲಾಯಿತು.
 
ಇದೆಲ್ಲಾ ಆಗಿ ಒಂದು ವರ್ಷದ ಮೇಲಾದರೂ ಈ ನತದೃಷ್ಟರಿಗಾಗಿ ಏನೂ ಒಳ್ಳೆಯದನ್ನು ಮಾಡಲಾಗಿಲ್ಲ. ಬದಲಾಗಿ ಈ ಕ್ರೂರ ಕಾಯಿದೆ ತರಲಾಗಿದೆ! ಈ ಕ್ರೂರ ತಿದ್ದುಪಡಿ ಕಾಯಿದೆಯನ್ನು ವಾಪಸು ಪಡೆಯದಿದ್ದರೆ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ರಾಜ್ಯ ಸರ್ಕಾರ ಅಮಾನವೀಯವಾಗಿ ವರ್ತಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT