ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ರಾಜಕಾರಣಿ, ಅಂತರ್ ರಾಷ್ಟ್ರೀಯ ಛಾಯಾಗ್ರಾಹಕ ಎಂ.ವೈ. ಘೋರ್ಪಡೆ ಇನ್ನಿಲ್ಲ

Last Updated 29 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಸಚಿವ, ಅಂತರ್ ರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಎಂ.ವೈ. ಘೋರ್ಪಡೆ (80) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಿಧನರಾದರು. ಕೆಲ ಕಾಲದಿಂದ ಅವರು ಅಸ್ವಸ್ಥರಾಗಿದ್ದರು.

ಸಂಸತ್ ಸದಸ್ಯ ಹಾಗೂ ಕರ್ನಾಟಕದಲ್ಲಿ ಎಸ್. ಎಂ. ಕೃಷ್ಣ ಸರ್ಕಾರ ಸೇರಿದಂತೆ ವಿವಿಧ ಸರ್ಕಾರಗಳಲ್ಲಿ ಸಚಿವರಾಗಿದ್ದ ಘೋರ್ಪಡೆ ವಿಭಿನ್ನ ನಡೆ ನುಡಿಯ ವ್ಯಕ್ತಿಯಾಗಿದ್ದು, ಅಪೂರ್ವ ಛಾಯಾಗ್ರಾಹಕರಾಗಿಯೂ ಖ್ಯಾತರಾಗಿದ್ದರು.

~ಡೌನ್ ಮೆಮೋರಿ ಲೇನ್: ಎ. ಮೆಮೊರಿ~ ಎಂಬ ಆತ್ಮಕಥನದ ಅಪರೂಪ ಗ್ರಂಥವನ್ನು ಬರೆದಿರುವ ಅವರು ಅದರಲ್ಲಿ ತಮ್ಮ ಬದುಕಿನ ವಿವಿಧ ಅನುಭವಗಳನ್ನು ಚಿತ್ರಿಸಿದ್ದಾರೆ. ಈ ಕೃತಿ ~ನೆನಪಿನ ಚಿತ್ರಗಳು~ ಹೆಸರಿನಲ್ಲಿ ಕನ್ನಡಕ್ಕೂ ಅನುವಾದಗೊಂಡು ಪ್ರಕಟವಾಗಿದೆ. ಇಂಗ್ಲಿಷ್ ನಲ್ಲಿ ರಚಿಸಿದ ಅವರ ವಿವಿಧ ಗ್ರಂಥಗಳಲ್ಲಿ ಪ್ರಮುಖವಾದ ಕೆಲವು ಗ್ರಂಥಗಳು  ~ಕಂಚಿಯ ಪರಮಾಚಾರ್ಯ~, ಪಕ್ಷಿಗಳಿಗೆ ಸಂಬಂಧಿಸಿದ ~ರೆಕ್ಕೆಯ ಮಿತ್ರರು~, ~ಅಭಿವೃದ್ಧಿಯ ಆಳಿಕೆ ಮತ್ತು ಮಾನವೀಯ ಮೌಲ್ಯಗಳು~  ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿವೆ.

1931ರಲ್ಲಿ ಬ್ರಿಟಿಷರ ಕಾಲದಲ್ಲಿ ಸಂಡೂರಿನ ರಾಜಕುಟುಂಬದಲ್ಲಿ ಜನಿಸಿದ ಘೋರ್ಪಡೆ ತಮ್ಮ ಸರಳ ನಡೆ, ನಡೆ - ನುಡಿ, ವಿನಮ್ರ ಸ್ವಭಾವಗಳಿಂದ ಅತ್ಯಂತ ಜನಪ್ರಿಯರಾಗಿದ್ದರು.

ಪಕ್ಷಿಗಳು, ಪ್ರಾಣಿಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಘೋರ್ಪಡೆ, ಈ ಕಾರಣದಿಂದಲೇ ಪ್ರಾಣಿ, ಪಕ್ಷಿಗಳ, ವಿಶೇಷವಾಗಿ ಕಾಡುಪ್ರಾಣಿಗಳ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.

22ರ ಹರೆಯದಲ್ಲಿ ಮದುವೆಯಾಗಿದ್ದ ಘೋರ್ಪಡೆ, ರಾಜಕೀಯಕ್ಕೆ ಕಾಲಿರಿಸಿದ್ದು 23ನೇ ವಯಸ್ಸಿನಲ್ಲಿ. ತೇಕೂರು ಸುಬ್ರಹ್ಮಣ್ಯಂ ಮತ್ತು ಇಂದಿರಾಗಾಂಧಿ ಅವರ ರಾಜಕೀಯ ಗುರುಗಳು. ಸಮಾಜ ಸುಧಾರಣೆ, ಲಿಂಗ ಸಮಾನತೆ ಮತ್ತು ಎಲ್ಲರಿಗೂ ಶಿಕ್ಷಣ ವಿಚಾರಗಳಲ್ಲಿ ಅವರು ಅಚಲ ನಂಬಿಕೆ ಹೊಂದಿದ್ದರು.

ಕರ್ನಾಟಕ ವಿಧಾನಸಭೆಯಲ್ಲಿ ಸಂಡೂರನ್ನು ಪ್ರತಿನಿಧಿಸಿದ್ದ ಅವರು ನೀರಾವರಿ, ವಿದ್ಯುತ್, ಮತ್ತು ತಳಮಟ್ಟದಲ್ಲಿ ಶಿಕ್ಷಣ ಒದಗಿಸುವುದಕ್ಕಾಗಿ ಶ್ರಮ ವಹಿಸಿದ್ದರು. ಪಂಚಾಯತ್ ರಾಜ್, ಹಣಕಾಸು ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ವಿವಿಧ ಹಂತಗಳಲ್ಲಿ ದುಡಿದ ಅವರು ತಮ್ಮ ಬದ್ಧತೆಗಳನ್ನು ಅನುಷ್ಠಾನ ಗೊಳಿಸಲು ಶ್ರಮಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಸಂಡೂರಿನಿಂದ ಏಳು ಬಾರಿ ಗೆದ್ದದ್ದು ಅವರ ಅಪಾರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

ಸಮಾಜ ಸೇವೆಯ ಈ ಎಲ್ಲ ಕೆಲಸಗಳ ಮಧ್ಯೆ ಛಾಯಾಗ್ರಹಣದ ಮೇಲಿನ ತಮ್ಮ ಒಲವು ಮುಂದುವರೆಸಿದ್ದ ಘೋರ್ಪಡೆ, 1983ರಲ್ಲಿ ಅಂತರ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ವಿಶ್ವದ ಪ್ರಪ್ರಥಮ ವನ್ಯಜೀವಿ ಛಾಯಾಗ್ರಾಹಕರೆನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT