ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿರಾಯನ ರಕ್ಷಣೆಗೆ ದಿಟ್ಟಹೆಜ್ಜೆ

Last Updated 30 ಮಾರ್ಚ್ 2011, 6:40 IST
ಅಕ್ಷರ ಗಾತ್ರ

ಚಾಮರಾಜನಗರ: ಹುಲಿ ಗಣತಿ-2010ರ ವರದಿ ಹೊರಬಿದ್ದಿರುವ ಬೆನ್ನಲ್ಲೇ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಹುಲಿರಾಯನ ಸಂರಕ್ಷಣೆಗೆ ಅರಣ್ಯ ಇಲಾಖೆ ದಿಟ್ಟಹೆಜ್ಜೆ ಇಟ್ಟಿದೆ.ಅರಣ್ಯದಲ್ಲಿ ಕಳ್ಳಬೇಟೆ ತಡೆ ಸೇರಿದಂತೆ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ತಪ್ಪಿಸಲು ಸೋಲಾರ್ ಬೇಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ರೈತರ ಬೆಳೆ ನಾಶ ತಪ್ಪಿಸುವುದರೊಂದಿಗೆ ಪ್ರಾಣಿಗಳನ್ನು ಸಂರಕ್ಷಿಸಲು ಇಲಾಖೆ ಮುಂದಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು ಮಧುಮಲೈ, ಸತ್ಯಮಂಗಲ, ನಾಗರಹೊಳೆ ಅರಣ್ಯದಿಂದ ಸುತ್ತುವರಿದಿದೆ. 2006ರಲ್ಲಿ ನಡೆದ ಗಣತಿ ವೇಳೆ 82 ಹುಲಿಗಳಿರುವ ಬಗ್ಗೆ ಅಂದಾಜಿಸಲಾಗಿತ್ತು. ಪ್ರಸ್ತುತ ಹೊರಬಿದ್ದಿರುವ ಗಣತಿ ಅನ್ವಯ ಹುಲಿಗಳ ಸಂಖ್ಯೆ ವೃದ್ಧಿಸಿದೆ. ಆದರೆ, ಅಂದಾಜಿಸಿರುವ ನಿಖರ ಸಂಖ್ಯೆ ಲಭಿಸಿಲ್ಲ ಎಂಬುದು ಅಧಿಕಾರಿಗಳ ವಿವರಣೆ.
ಈ ಉದ್ಯಾನದ ಉತ್ತರ ಗಡಿ 200 ಕಿ.ಮೀ.ನಷ್ಟು ಉದ್ದವಿದೆ. ಈಗಾಗಲೇ, 175 ಕಿ.ಮೀ. ದೂರದವರೆಗೆ ಸೋಲಾರ್ ಬೇಲಿ ಅಳವಡಿಸಲಾಗಿದೆ. ಇನ್ನುಳಿದ ಪ್ರದೇಶದಲ್ಲಿ ಸೋಲಾರ್ ಬೇಲಿ ಅಳವಡಿಕೆ ಕಾರ್ಯ ಪೂರ್ಣಗೊಂಡರೆ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತಪ್ಪಿಸಬಹುದು ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ಜತೆಗೆ, ಹುಲಿ ಯೋಜನೆಯಡಿ ಬಂಡೀಪುರಕ್ಕೆ ವಿಶೇಷ ಹುಲಿ ಸಂರಕ್ಷಣಾ ಪಡೆ ಮಂಜೂರಾಗಿದೆ. ಈ ಪಡೆಯಲ್ಲಿ 90 ಗಾರ್ಡ್‌ಗಳು, 18 ಫಾರೆಸ್ಟರ್, 3 ಆರ್‌ಎಫ್‌ಒ ಹಾಗೂ ಒಬ್ಬರು ಎಸಿಎಫ್ ಇರುತ್ತಾರೆ. ಸದ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ತರಬೇತಿಯಲ್ಲಿದ್ದಾರೆ. 6 ತಿಂಗಳ ಬಳಿಕ ಈ ಸಿಬ್ಬಂದಿಯ ಸೇವೆ ಲಭಿಸಲಿದ್ದು, ಹುಲಿಗಳ ಸಂರಕ್ಷಣೆಗೆ ಮತ್ತಷ್ಟು ಬಲ ಸಿಗಲಿದೆ. ಅಲ್ಲದೇ, 38 ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಲಾಗಿದೆ. ಒಂದೊಂದು ಶಿಬಿರದಲ್ಲಿ ಐವರು ಅರಣ್ಯ ಸಿಬ್ಬಂದಿಯಿದ್ದು, ಅರಣ್ಯದ ಮಧ್ಯದೊಳಗೆ ಕಳ್ಳಬೇಟೆ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ.

‘ಪ್ರಸ್ತುತ ಹುಲಿ ಸಂರಕ್ಷಣಾ ಕ್ರಮಗಳು ಬಿಗಿಯಾಗಿವೆ. ತರಬೇತಿಗೊಂಡ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೆ ಹೆಚ್ಚಿನ ರಕ್ಷಣೆ ಸಿಗಲಿದೆ. ಹಾಲಿ ಸಿಬ್ಬಂದಿ ಬಳಸಿಕೊಂಡು ಸಮರ್ಪಕ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಅಗತ್ಯವಿರುವೆಡೆ ಕಳ್ಳಬೇಟೆ ತಡೆ ಶಿಬಿರ ಕೂಡ ಸ್ಥಾಪಿಸಲಾಗುತ್ತಿದೆ’ ಎನ್ನುತ್ತಾರೆ ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ.

25ರಿಂದ 30 ಹುಲಿ?: ಬಿಆರ್‌ಟಿ ವ್ಯಾಪ್ತಿ 25ರಿಂದ 30 ಹುಲಿ ಗಳಿವೆ ಎಂದು ಅಂದಾಜಿಸಲಾಗಿದೆ. ಕಳೆದ ಸಾಲಿನಡಿ ಬಿಆರ್‌ಟಿ ಅಭಯಾರಣ್ಯಕ್ಕೆ ಹುಲಿ ರಕ್ಷಿತಾರಣ್ಯದ ಮಾನ್ಯತೆ ಸಿಕ್ಕಿದೆ. ಹೀಗಾಗಿ, ಹುಲಿ ಸಂರಕ್ಷಣಾ ಕ್ರಮಗಳ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅರಣ್ಯ ಇಲಾಖೆ ಸಜ್ಜಾಗಿದೆ. ಸದ್ಯಕ್ಕೆ ಬಿಆರ್‌ಟಿಯಲ್ಲಿ 17 ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ 3 ಶಿಬಿರ ಸ್ಥಾಪಿಸಲು ನಿರ್ಧರಿಸಲಾಗಿದೆ. ಜತೆಗೆ, ಹುಲಿ ಯೋಜನೆ ಅನುಷ್ಠಾನಗೊಂಡಿರುವುದರಿಂದ ಅರಣ್ಯ ಸಿಬ್ಬಂದಿಗೆ ಹೆಚ್ಚುವರಿಯಾಗಿ ಮಾಸಿಕ 700 ರೂ ಲಭಿಸಲಿದೆ. ವಿಶೇಷ ಸಂರಕ್ಷಣಾ ಪಡೆ ಮಂಜೂರಾಗಲಿದೆ.

ಯಳಂದೂರು ಭಾಗದಿಂದ ಅರಣ್ಯ ಪ್ರದೇಶದ ವ್ಯಾಪ್ತಿಯ 10 ಕಿ.ಮೀ.ವರೆಗೆ ಸೋಲಾರ್ ಬೇಲಿ ಅಳವಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅರಣ್ಯ ಇಲಾಖೆ ಮುಂದಾಗಿದೆ. ‘ಹೊಸದಾಗಿ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಘೋಷಣೆಯಾಗಿದೆ. ಹೀಗಾಗಿ, ಹುಲಿಗಳ ರಕ್ಷಣೆಗೆ ಅಗತ್ಯವಿರುವ ಸೌಲಭ್ಯಕ್ಕಾಗಿ ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಕೊಂಡು ಹುಲಿಗಳ ರಕ್ಷಣೆಗೆ ವಿಶೇಷ ಒತ್ತು ನೀಡಲಾಗುವುದು’ ಎನ್ನುತ್ತಾರೆ ಬಿಆರ್‌ಟಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT