ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಮಾರುಕಟ್ಟೆ ಸ್ಥಳಾಂತರಿಸಲು ಆಗ್ರಹ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೂವಿನ ಮಾರುಕಟ್ಟೆಯನ್ನು ಎಪಿಎಂಸಿ ಆವರಣದ ಬದಲು ಜೆಡಿಎಸ್ ಕಚೇರಿ ಆವರಣದಲ್ಲಿ ಆರಂಭಿಸಿರುವುದನ್ನು ಖಂಡಿಸಿ ಹೂವು ಬೆಳೆಗಾರರು ಶನಿವಾರ ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಈ ಘಟನೆಗೆ ಶಾಸಕ ಎಸ್.ಕೆ. ಬಸವರಾಜನ್ ಮತ್ತು ಅವರ ಅನುಯಾಯಿ, ಜೆಡಿಎಸ್ ಮುಖಂಡ ಪ್ರಸನ್ನಕುಮಾರ್ ಅವರೇ ಹೊಣೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಇಬ್ಬರ ವಿರುದ್ಧವೂ ಧಿಕ್ಕಾರ ಹಾಕಿದರು.

ಕಳೆದ ಎರಡು ತಿಂಗಳಿಂದ ಜೆಡಿಎಸ್ ಕಚೇರಿ ಆವರಣದಲ್ಲಿ ಹೂವಿನ ವಹಿವಾಟು ಆರಂಭಿಸಲಾಗಿದ್ದು, ಪ್ರತಿ ವರ್ಷ ಸೀಸನ್‌ನಲ್ಲಿ ಇದೇ ರೀತಿ ಮಾಡಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಹಲವಾರು ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ದೂರಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಮ್ಮ ಪಕ್ಷದ ಶಾಸಕರಿಗೆ ನಿರ್ದೇಶನ ನೀಡಲಿ. ಜೆಡಿಎಸ್ ಕಚೇರಿ ಒಡೆದು ಇಲ್ಲಿಯೇ ಶಾಶ್ವತ ಹೂವಿನ ಮಾರುಕಟ್ಟೆ ಆರಂಭಿಸಲಿ. ಇಲ್ಲವಾದರೆ ರೈತರಿಗೆ ವಿಷ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಸ್.ಕೆ. ಬಸವರಾಜನ್ ಅವರು 4-5 ಸಾವಿರ ಹೂವು ಬೆಳೆಗಾರರ ಹಿತಾಸಕ್ತಿ ಕಾಪಾಡುವುದನ್ನು ಕೈಬಿಟ್ಟು ಕೇವಲ 13 ಹೂವಿನ ವ್ಯಾಪಾರಿಗಳನ್ನು ರಕ್ಷಿಸುತ್ತಿದ್ದಾರೆ. ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಹೂವಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಾರುಕಟ್ಟೆಯಲ್ಲಿ ಕಮಿಷನ್ ಹಾಗೂ ಅಳತೆಯಲ್ಲಿ ಮೋಸ ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದರು.

ಹೂವು ಬೆಳೆಗಾರರಾದ ರಾಜು, ತಿಪ್ಪೇಸ್ವಾಮಿ, ಶೇಖರ್, ಚಂದ್ರಣ್ಣ, ಹನುಮಂತಪ್ಪ, ಕಲ್ಲೇಶ್, ರಂಗಸ್ವಾಮಿ, ಸಿದ್ದಪ್ಪ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT