ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಆರೋಗ್ಯಕ್ಕೆ ಆಧುನಿಕ ತಂತ್ರಜ್ಞಾನ

Last Updated 15 ಜುಲೈ 2011, 19:30 IST
ಅಕ್ಷರ ಗಾತ್ರ

ಕಳೆದ ಎರಡು ದಶಕಗಳಲ್ಲಿ ಕಂಪ್ಯೂಟರ್ ಕ್ರಾಂತಿಯಿಂದ ಹಿಡಿದು ನ್ಯಾನೋ ತಂತ್ರಜ್ಞಾನದವರೆಗೆ ಅತ್ಯಂತ ಅದ್ಭುತವಾದ ವೈಜ್ಞಾನಿಕ ಮುನ್ನಡೆ ಕಂಡಿದ್ದೇವೆ. ಈ ಹಿಂದೆ ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧ್ಯ ಎಂದು ಪರಿಗಣಿಸಲಾದ ಚಿಕಿತ್ಸಾ ಯೋಜನೆಗಳು ಈಗ ಸಾಧ್ಯವಾಗಲು ಇವು ಕಾರಣವಾಗಿದೆ.

ಆದರೆ ವೈದ್ಯಕೀಯ ಶಾಸ್ತ್ರ ನಿಜವಾಗಿಯೂ ಉನ್ನತಮಟ್ಟಕ್ಕೇರಿದೆಯೇ ಎಂಬ ಪ್ರಶ್ನೆಗೆ ಹೃದಯ ರಕ್ತನಾಳಗಳ ರೋಗ ಮತ್ತು ಅವುಗಳ ವ್ಯಾಪಕತೆ ಕುರಿತಂತೆ ಕೆಲವು ವಾಸ್ತವಿಕ ಅಂಕಿ-ಅಂಶಗಳ ಮೂಲಕ ಮಾತ್ರ ಉತ್ತರಿಸಬಹುದಾಗಿದೆ. ಜಾಗತಿಕವಾಗಿ ಹೃದಯ ರಕ್ತನಾಳಗಳ ರೋಗ ಸಾವಿನ ನಂಬರ್ ಒನ್ ಕಾರಣ ಆಗಿದ್ದು, ಭವಿಷ್ಯದಲ್ಲಿಯೂ  ಹೀಗೆಯೇ ಉಳಿಯುವುದೆಂದು ಅಂದಾಜು ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ಸುಮಾರು 17.5 ದಶಲಕ್ಷ ಜನರು ಹೃದಯ ರಕ್ತನಾಳಗಳ ರೋಗದಿಂದಾಗಿ 2005ರಲ್ಲಿ ಮೃತಪಟ್ಟಿದ್ದಾರೆ. ಇದು ಆ ಸಮಯದಲ್ಲಿ ಜಾಗತಿಕ ಸಾವಿನ ಶೇ 30ರಷ್ಟಾಗಿತ್ತು.

ಈ ಸಾವುಗಳ ಪೈಕಿ 7.6 ದಶಲಕ್ಷ ಹೃದಯಾಘಾತದಿಂದ, 5.7 ದಶಲಕ್ಷ ಪಾರ್ಶ್ವವಾಯುವಿನಿಂದ ಉಂಟಾಗಿದ್ದವು. ಈ ಸಾವುಗಳಲ್ಲಿ ಶೇ 80ರಷ್ಟು ಕಡಿಮೆ -ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸಿವೆ. ಇದೇ ರೀತಿ ಮುಂದುವರಿಯಲು ಬಿಟ್ಟಲ್ಲಿ 2015ಕ್ಕೆ 20 ದಶಲಕ್ಷ ಜನರು ಹೃದಯ ರಕ್ತನಾಳಗಳ ರೋಗದಿಂದ ಸಾವನ್ನಪ್ಪಲಿದ್ದಾರೆ. (ಮುಖ್ಯವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ).

ಭಾರತ ಜಗತ್ತಿನ ಮಧುಮೇಹ ಮತ್ತು ಹೃದಯ ರಕ್ತನಾಳ ರೋಗಗಳ ರಾಜಧಾನಿ ಎಂಬ ಕುಖ್ಯಾತಿ ಗಳಿಸುವ ಹಾದಿಯಲ್ಲಿದೆ. ಕಳೆದ 5 ದಶಕಗಳಲ್ಲಿ ಪರಿಧಮನಿಯ ರೋಗ (ಕರೊನರಿ ಆರ್ಟರಿ ಡಿಸೀಸ್)  ಶೇ 4ರಿಂದ ಶೇ 11ಕ್ಕೆ ಹೆಚ್ಚಿದೆ. ಜಗತ್ತಿನಲ್ಲಿ ಶೇ 60ರಷ್ಟು ಹೃದಯ ರೋಗಿಗಳು ಭಾರತೀಯ ಮೂಲದವರಾಗಿರುತ್ತಾರೆ. ಮಧುಮೇಹ ಮತ್ತು ರಕ್ತದೊತ್ತಡಗಳು ಪರಿಧಮನಿಯ ರೋಗಕ್ಕೆ ಪ್ರಮುಖ ಅಪಾಯದ ಅಂಶಗಳೆಂದು ಸ್ಪಷ್ಟವಾಗಿ ಹೇಳಲಾಗಿದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಪ್ರಕಾರ ಪರಿಧಮನಿಯ ರೋಗವಿಲ್ಲದೆ ಮಧುಮೇಹ ಇರುವ ರೋಗಿಗಳು ಈ ಹಿಂದೆ ಹೃದಯಾಘಾತವಾಗಿರುವ ರೋಗಿಗಳಷ್ಟೆ ಹೃದಯಾಘಾತದ ಅಪಾಯ ಹೊಂದಿರುತ್ತಾರೆ. ಇವೆರಡರ ಸಮ್ಮಿಲನವನ್ನು ವಿಶ್ವ ಈಗ `ಕಾರ್ಡಿಯೋಬಿಟಿಸ್~ ಎಂದು ಗುರುತಿಸಲಾರಂಭಿಸಿದೆ.

ಮಧುಮೇಹ ಮತ್ತು ಹೃದಯ ರಕ್ತನಾಳಗಳ ರೋಗಗಳ ನಿರ್ವಹಣೆಗಾಗಿ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಬೃಹತ್ ಮೊತ್ತವನ್ನು ಮೀಸಲಿಟ್ಟಿದೆ. ಹೃದಯ ರೋಗ ಶಾಸ್ತ್ರದಷ್ಟು ತಂತ್ರಜ್ಞಾನ ಚಾಲಿತ ವಿಶೇಷತೆಯನ್ನು ಬೇರೆ ಯಾವ ವೈದ್ಯಕೀಯ ಕ್ಷೇತ್ರವೂ ಹೊಂದಿಲ್ಲ.

ಎಂಬೆಡೆಡ್ ಸಾಫ್ಟ್‌ವೇರ್ ತಂತ್ರಜ್ಞಾನದೊಂದಿಗೆ ಈ ಬೆಳವಣಿಗೆ ಸಂಪರ್ಕ ಹೊಂದಿದ್ದು ಇದರಿಂದ ರೋಗ ನಿದಾನದಲ್ಲಿ ಸುಧಾರಣೆಯಾಗಿದೆ. ತಂತ್ರಜ್ಞಾನ ಉನ್ನತಿಗಳು ವೈದ್ಯಕೀಯ ಮತ್ತು ಶಸ್ತ್ರ ಕ್ರಿಯಾ ಕ್ಷೇತ್ರಗಳಲ್ಲೂ ಅಪಾರ ಪರಿಣಾಮವುಂಟು ಮಾಡಿವೆ. 

 ತ್ರೀ ಡಿ ಇಮೇಜಿಂಗ್ ತಂತ್ರ ಮತ್ತು ಇಕೊಕಾರ್ಡಿಯಾಗ್ರಫಿ, ಏಂಜಿಯೋಗ್ರಫಿ, ಸಿಟಿ ಸ್ಕ್ಯಾನ್ ತಂತ್ರಗಳ ಮೂಲಕ ಸುಧಾರಿತ ಹೃದಯ ಮೌಲ್ಯೀಕರಣಗಳಿಂದ ರೋಗನಿದಾನ ಕ್ಷೇತ್ರ ಗಮನಾರ್ಹವಾಗಿ ಮುನ್ನಡೆದಿದೆ.
 
ಸಿಟಿ ಇಮೇಜಿಂಗ್ ಕ್ಷೇತ್ರದಲ್ಲಿ ಬಹುತೇಕ ಮುನ್ನಡೆ ಕ್ಷಿಪ್ರಗತಿಯ ಪ್ರೋಸೆಸರ್‌ಗಳಿಂದ ಸಾಧ್ಯವಾಗಿದ್ದು, ಇತ್ತೀಚಿನದೆಂದರೆ 128 ಸ್ಲೈಸ್ ಸಿಟಿ ಆಗಿದ್ದು, ವಿಕಿರಣ ಪ್ರಭಾವ ಕಡಿಮೆ ಇರುವುದರಿಂದ ಕ್ಯಾನ್ಸರ್ ಉಂಟಾಗುವ ಅಪಾಯ ಕಡಿಮೆ ಆಗುತ್ತದೆ. ಹೃದಯದಂತಹ ಚಲಿಸುವ ರಚನೆಗಳಿಗಾಗಿ ತಕ್ಷಣವೇ ಫಲಿತಾಂಶ ನೀಡುವ ರಿಯಲ್ ಟೈಮ್ 3ಡಿ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಪ್ರಯೋಗಾಲಯಗಳಲ್ಲಿ  ಹೆಚ್ಚು ಪರಿಪೂರ್ಣಗೊಳಿಸಲಾಗುತ್ತಿದೆ. ಹೃದಯ ಕಾರ್ಯದ ನಿಖರ ಮತ್ತು ಸಂಕೀರ್ಣವಾದ ಮೌಲ್ಯೀಕರಣಕ್ಕೆ  ಸಾಫ್ಟ್‌ವೇರ್ ಪ್ಯಾಕೇಜ್‌ಗಳಲ್ಲಿನ  ಅನೇಕ ಗಣಿತದ ಅಲ್ಗಾರಿದಮ್‌ಗಳು ದಾರಿ ಮಾಡಿವೆ. ಪಿಇಟಿ ಸ್ಕ್ಯಾನ್ ಜೊತೆಗೆ ಸಿಟಿ ಇಮೇಜಿಂಗ್‌ನಿಂದ ಮಯೋಕಾರ್ಡಿಯಲ್ ಇನ್‌ಫಾರ್ಕ್ಷನ್(ಹೃದಯದ ಊತ) ನಂತರ ಹೃದಯದ ಅಂಗಾಂಶಗಳಲ್ಲಿನ ಬದಲಾವಣೆಗಳನ್ನು ಅರಿತುಕೊಳ್ಳುವ ನೂತನ ಸಾಮರ್ಥ್ಯ ಲಭಿಸಿದೆ.  

ಔಷಧ ಪೂರೈಕೆ, ಕಾಂಡಕೋಶ ಚಿಕಿತ್ಸೆ ಮತ್ತು ವಂಶವಾಹಿಗಳಿಗೆ ತಕ್ಕಂತೆ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನೀಡುವ ಔಷಧಗಳಲ್ಲಿನ  ಸುಧಾರಣೆಯಿಂದ ಹೃದಯ ರೋಗಗಳ ಚಿಕಿತ್ಸಾ ಕ್ಷೇತ್ರ ಗಮನಾರ್ಹ ಬದಲಾಗಿದೆ. ಹೃದಯದಲ್ಲಿನ ಊತದ ಬಳಿಕ ಜೀವಕೋಶಗಳ ಪುನರ್ ಬೆಳವಣಿಗೆ (ಏಂಜಿಯೋಜೆನಿಸಿಸ್), ಹೃದಯದ ಜೀವಕೋಶಗಳ ಪುನರ್‌ಸೃಷ್ಟಿಯನ್ನು ಪ್ರೋತ್ಸಾಹಿಸುವ ಕಾಂಡಕೋಶಗಳ ಬಳಕೆ ವೈದ್ಯಕೀಯ ಪರೀಕ್ಷೆಯಲ್ಲಿರುವ ಅತ್ಯಂತ ಅದ್ಭುತ ಸಾಧನೆಗಳಲ್ಲಿ ಒಂದು. ಅಡ್ಡಿಗೊಳಗಾಗಿರುವ ಶುದ್ಧರಕ್ತನಾಳಗಳಲ್ಲಿ  ರಕ್ತಪರಿಚಲನೆ ದೀರ್ಘಕಾಲದ ವರೆಗೆ ಉತ್ತಮವಾಗಿರಲು ಅವುಗಳಲ್ಲಿ ಅಳವಡಿಸುವ ಲೋಹದ ಸ್ಟೆಂಟ್‌ಗಳಲ್ಲಿ ನೂತನ ಔಷಧಗಳನ್ನು ಬಳಸಲಾಗುತ್ತದೆ. ಉಪಕರಣಗಳ ಮೇಲೆ ಅಳವಡಿಸಲಾಗಿರುವ ಈ ಹೈಬ್ರಿಡ್ ಔಷಧ ವಸ್ತುಗಳ ಭವಿಷ್ಯ ಉತ್ಸಾಹಪೂರ್ಣವಾಗಿದೆ.

ಇತ್ತೀಚೆಗೆ ಶಸ್ತ್ರಕ್ರಿಯಾ ಕ್ರಮಗಳ ಬದಲಿಗೆ ಹಸ್ತಕ್ಷೇಪದ ಮಾರ್ಗಗಳನ್ನು ಅನುಸರಿಸಲಾಗುತ್ತಿದ್ದು, ಇವುಗಳಲ್ಲಿ  ಹೃದಯದ ರಂಧ್ರಗಳನ್ನು ಮುಚ್ಚಲು ನಿಟಿನಾಲ್ ಮತ್ತು ಪ್ಲಾಟಿನಂಗಳಿಂದ ತಯಾರಾದ ಉಪಕರಣಗಳನ್ನು ಬಳಸಲಾಗುವುದು ಸೇರಿದೆ. ಈ ಉಪಕರಣಗಳು ಹೃದಯ ಶ್ವಾಸಕೋಶ ಸಂಬಂಧಿ ಬೈಪಾಸ್ ಕ್ರಮ ಸೇರಿದಂತೆ ಶಸ್ತ್ರಕ್ರಿಯೆಯಿಂದ ರಂಧ್ರಗಳನ್ನು ಮುಚ್ಚುವಲ್ಲಿ ಉಂಟಾಗುವ ದುಷ್ಪರಿಣಾಮಗಳಿಂದ ಮುಕ್ತವಾಗಿದ್ದು ಶಸ್ತ್ರಕ್ರಿಯೆಯಂತೇ ಪರಿಣಾಮವನ್ನು ನೀಡುವುದರಿಂದ ಈ ಉಪಕರಣಗಳು  ಜನಪ್ರಿಯವಾಗಿವೆ. ಕ್ಯಾಥಟರ್ ತಂತ್ರಜ್ಞಾನದಲ್ಲಿ ಉನ್ನತೀಕರಣ ಮತ್ತು ಕ್ಯಾಥಟರ್‌ಗಳು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಒಂದು ಕಿಲೋ ಗ್ರಾಮ್‌ಗೂ ಕಡಿಮೆ ತೂಕದ ಶಿಶುಗಳಲ್ಲೂ ಸಹ ಹಸ್ತಕ್ಷೇಪದ ಕ್ರಮಗಳು ಸಾಧ್ಯವಾಗಬಹುದಾಗಿದೆ.

ಹೃದಯದ ವಿದ್ಯುತ್ ಚಟುವಟಿಕೆಯ ಕಂಪ್ಯೂಟರೀಕೃತ ಮ್ಯೋಪಿಂಗ್ ವ್ಯವಸ್ಥೆಯಿಂದ ನಿಖರವಾಗಿ ರೋಗಗ್ರಸ್ಥ ಪ್ರದೇಶಗಳನ್ನು ಗುರುತಿಸಬಹುದು. ಅಸಾಧಾರಣ ಹೃದಯದ ಮಿಡಿತದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸುಧಾರಿತ ಯಶಸ್ಸಿನ ದರ ಉಂಟಾಗಲು ನಿಖರವಾಗಿ ಹೃದಯದ ವಿದ್ಯುತ್ ಪ್ರದೇಶಗಳ ಮ್ಯೋಪಿಂಗ್ ಮಾಡುವ ಸಾಮರ್ಥ್ಯ ನೆರವಾಗಿದೆ. ಹೃದಯದ ಮಿಡಿತದಲ್ಲಿನ ವ್ಯತ್ಯಾಸಗಳ ನಿರೀಕ್ಷಣೆ ಮಾಡಿ ಉನ್ನತ ಅಪಾಯವಿರುವ ರೋಗಿಗಳಲ್ಲಿ ದಿಢೀರ್ ಹೃದಯ ಸಂಬಂಧಿ ಸಾವುಗಳ ಭವಿಷ್ಯ ಹೇಳುವ ಅಗತ್ಯದಿಂದಾಗಿ ದೂರ ಸಂಪರ್ಕದಲ್ಲಿ ಪರಿಣಾಮಕಾರಿ ರೀತಿಯಲ್ಲಿ ಬಳಸಲಾಗಿರುವ ಬ್ಲೂಟೂತ್ ಮತ್ತು ದೂರ ಸಂಪರ್ಕ ತಂತ್ರಗಳನ್ನು ಆಧರಿಸಲು ಎಂಜಿನಿಯರ್‌ಗಳನ್ನು ಪ್ರಚೋದಿಸಿದೆ.  ತೀವ್ರರೀತಿಯ ಹೃದಯದ ಊತದ ಸಂದರ್ಭದಲ್ಲಿ ಹಸ್ತಕ್ಷೇಪಕ್ಕೆ ಅಗತ್ಯವಾದ ಸಮಯವನ್ನು ಯಾವ ರೀತಿ ಕಡಿಮೆ ಮಾಡಿ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂಬುದನ್ನು ಇತ್ತೀಚಿನ ವರದಿಗಳು ತಿಳಿಸಿವೆ. 

ಇತ್ತೀಚೆಗೆ ನ್ಯಾನೋ ತಂತ್ರಜ್ಞಾನ ಮತ್ತು ವಂಶವಾಹಿ ಎಂಜಿನಿಯರಿಂಗ್‌ಗಳು ಹೃದಯರೋಗದ ಲಕ್ಷಣಗಳು ಕಾಣಸಿಕೊಳ್ಳುವ ಮೊದಲೇ ರೋಗಿಗಳನ್ನು ಗುರುತಿಸಲು ಮತ್ತು ರೋಗವನ್ನು ತಡೆಯಲು ಭರವಸೆ ಮೂಡಿಸಿವೆ. ಆಥೆರೊಸ್ಕ್ಲೆರಾಟಿಕ್ ಪ್ಲೇಕ್‌ಗಳನ್ನು ವಿಶ್ಲೇಷಿಸಲು ಕ್ವಾಂಟಮ್ ಡಾಟ್ ಪ್ರೊಬ್‌ಗಳಂತಹ ನ್ಯಾನೋಪ್ರೊಬ್‌ಗಳು ಮತ್ತು ಪ್ಲೇಕ್‌ಗಳ ವಿತರಣೆಯನ್ನು ಪತ್ತೆ ಹಚ್ಚಲು ಮ್ಯೋಗ್ನೆಟಿಕ್ ಪ್ಲೇಕ್‌ಗಳನ್ನು ಬಳಸಲಾಗುತ್ತಿದೆ.

ಶಸ್ತ್ರಕ್ರಿಯೆ ನಡೆಸಲು ರೋಗಿಯ ಬಳಿ ಶಸ್ತ್ರಚಿಕಿತ್ಸಾ ತಜ್ಞರು ಇರದೆ ದೂರದಿಂದಲೇ ನಡೆಸುವ `ರೊಬಾಟಿಕ್ ಶಸ್ತ್ರಕ್ರಿಯೆ~ ಈಗಾಗಲೇ ನಮ್ಮ ನಡುವೆ `ಫ್ಲ್ಯಾಶ್ ಗಾರ್ಡನ್ ಯುಗ~ವನ್ನು ತಂದಿಟ್ಟಿದೆ. ಇದನ್ನು ಹೃದಯ ವೈದ್ಯಕೀಯದಲ್ಲಿ `ಅಂತರಿಕ್ಷ ಯುಗ~ ಎಂದು ಪರಿಗಣಿಸಬಹುದಾಗಿದೆ. ಹೃದಯದ ಇಮೇಜಿಂಗ್‌ನಲ್ಲಿ ಶ್ರೇಷ್ಠತೆ ಸಾಧಿಸುವ ನಿಟ್ಟಿನಲ್ಲಿ ಅದ್ಭುತವಾದ ಉನ್ನತಿಗಳನ್ನು ಸಾಧಿಸಲಾಗಿದ್ದರೂ ನಿಜವಾದ ರೋಗ ಉಂಟಾಗುವ ಸಮಯವನ್ನು ಗುರುತಿಸುವಲ್ಲಿ ಅಥವಾ ಹೃದಯಾಘಾತಗಳನ್ನು ಹೆಚ್ಚು ನಿಖರವಾಗಿ ಮುಂಚಿತವಾಗಿ ಹೇಳುವಲ್ಲಿ ದೊಡ್ಡ ಕೊರತೆ ಕಾಡಿದೆ.

ಆದರೆ,  ರೋಗಿಯ ಆರೈಕೆಯ ಮೂಲಭೂತ ವಿಷಯಗಳೆಡೆಗೆ ಗಮನಹರಿಸಲು ಅಥವ ಗುಣಪಡಿಸುವಿಕೆಯ ಸಾಧ್ಯತೆಗಳನ್ನು ಸುಧಾರಿಸಲು ಸಾಧ್ಯವಾಗದಿದ್ದರೆ ಕೇವಲ ಅದೊಂದು  ಉಪಶಮನ ಮಾತ್ರ ಎಂದೆನಿಸುತ್ತದೆ. ಹೃದಯ ರಕ್ತನಾಳಗಳ ರೋಗಗಳ ಬಗ್ಗೆ ವಾಸ್ತವಾಂಶ ಎಷ್ಟೇ ಕಠಿಣವಾಗಿ ಕಂಡರೂ ಸುರಂಗದ ಅಂತ್ಯದಲ್ಲಿ ಬೆಳಕು ಇದ್ದೇ ಇರುತ್ತದೆ.  ಪ್ರಸ್ತುತ ಉನ್ನತೀಕರಣಗಳ ಪೈಕಿ ಕೆಲವು ಅಥವ ಎಲ್ಲವೂ ಹೃದಯ ರಕ್ತನಾಳಗಳ ರೋಗದ ಉತ್ತಮ ಆರೈಕೆ ಮತ್ತು ಗುಣಪಡಿಸುವಿಕೆಗೆ ಮಾರ್ಗವಾಗಲಿವೆ.
 (ಲೇಖಕರ ಮೊಬೈಲ್ : 9880111430)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT