ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವಂತ ಹಣಮಂತ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗದ ಆಳಂದ ರಸ್ತೆಯಲ್ಲಿರುವ ದೇವಿನಗರ ಬಡಾವಣೆಯಲ್ಲಿ `ಮಹಾತ್ಮಗಾಂಧಿ ಕುಷ್ಠರೋಗಿಗಳ ಕಾಲೋನಿ~ ಇದೆ. ಇಲ್ಲಿ 80 ಮನೆಗಳಿವೆ. ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ಬೀದಿದೀಪದಂಥ ಮೂಲಸೌಲಭ್ಯ ಕಲ್ಪಿಸಲಾಗಿದೆ. ಎಲ್ಲೋ ಬೀದಿ, ಬಸ್‌ನಿಲ್ದಾಣದಲ್ಲಿ ದಿನ-ರಾತ್ರಿ ಕಳೆಯುವ ಸ್ಥಿತಿಯಲ್ಲಿ ಇದ್ದವರಿಗೆ ಇಲ್ಲಿ ಆಶ್ರಯ ಸಿಕ್ಕಿದೆ. ಇವರ ಮಕ್ಕಳಿಗೆ ಕಂಪ್ಯೂಟರ್, ಹೊಲಿಗೆ ತರಬೇತಿ ದೊರಕಿದೆ. ಇದಕ್ಕೆಲ್ಲ ಕಾರಣ- ಹಣಮಂತ ದೇವನೂರ ಎಂಬ ಯುವ ರಿಕ್ಷಾ ಚಾಲಕ.

ತಾಯಿ ಸರೂಬಾಯಿಗೆ ಕುಷ್ಠರೋಗ ಇದೆ ಎಂಬುದು ಗೊತ್ತಾದಾಗ ಹಣಮಂತ ಕೇವಲ ಒಂದು ವರ್ಷ ಪ್ರಾಯದ ಹಸುಳೆ. ಅಪ್ಪ ಆಕೆಯನ್ನು ತೊರೆದು ಹೋದ. ಈಕೆ ಭಿಕ್ಷೆ ಬೇಡುತ್ತ, ಸಿಗುತ್ತಿದ್ದ ಅಲ್ಪ ಹಣದಲ್ಲೇ ಮಗನನ್ನು ಸಾಕತೊಡಗಿದಳು. ಕುಷ್ಠರೋಗಿಗಳು ಅನುಭವಿಸಬೇಕಾಗಿರುವುದು ಕೇವಲ ಕಾಯಿಲೆಯ ನೋವನ್ನಷ್ಟೇ ಅಲ್ಲ ಎಂಬುದನ್ನು ಹಣಮಂತ ದೇವನೂರರಿಗೆ ಕಲಿಸಿಕೊಟ್ಟದ್ದು ಅವರ ಬದುಕೇ. ತನ್ನ ತಾಯಿಯ ಬದುಕನ್ನು ಕಂಡು ಅರಿತ ಈತ ಕುಷ್ಠರೋಗಿಗಳಿಗೆ ಬದುಕು ಕಟ್ಟಿ ಕೊಡಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಅದೆಲ್ಲದರ ಪರಿಣಾಮ ಈಗ ನೂರಾರು ಕುಷ್ಠರೋಗಿಗಳಿಗೆ ಪಿಂಚಣಿ, ಆಶ್ರಯ ಮನೆ, ಚಿಕಿತ್ಸೆಗೆ ನೆರವು ಒಂದೊಂದೇ ಲಭ್ಯವಾಗಿವೆ.

ಬಾಲ್ಯದಲ್ಲಿ ಅನುಭವಿಸಿದ ಯಾತನೆ ಅವರಲ್ಲಿ `ಪರಿಹರಿಸಲಾಗದ ಗಾಯ~ಗಳನ್ನು ಮೂಡಿಸಿದೆ. “ಇದಕ್ಕೆಲ್ಲ ಇನ್ನೊಬ್ಬರನ್ನು ದೂಷಿಸಿ ಫಲವಿಲ್ಲ; ಈಗ ಕುಷ್ಠರೋಗಿಗಳಿಗೆ ನನ್ನಿಂದೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ” ಎಂದು ಹಣಮಂತ ವಿನಮ್ರವಾಗಿ ನುಡಿಯುತ್ತಾರೆ.

“

ಹಣಮಂತ ದೇವನೂರ ಅವರಿಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಂದ ಪ್ರಶಸ್ತಿ ಪ್ರದಾನ

ನಂಗ 20 ವರ್ಷ ಇದ್ದಾಗ ನಮ್ಮವ್ವ ತೀರಿಹೋದ್ಲು. ಆವಾಗ ಇದೇ ಮಂದಿ ನನ್ನ ತಮ್ಮ ಮನೀ ಮಗನ ಹಂಗ ನೋಡ್ಕೊಂಡ್ರು. ತಾವ ಸ್ವಲ್ಪ ಸ್ವಲ್ಪ ರೊಕ್ಕ ಹಾಕಿ, ಸಾಲ ಕೊಡಿಸಿ ಆಟೋ ಕೊಡಿಸಿದ್ರು. ಈಗ ಅವರ ಕಷ್ಟಕ್ಕ ಏನಾರ ಮಾಡಿದ್ರ ಅವರ ಉಪಕಾರ ತೀರಿಸ್ದಂಗ ಆಗ್ತೈತಿ. ಹಂಗಾಗಿ ನಾನು ನನ್ ಜೀವನದ ಜತಿ ಅವರ‌್ದೂ ಜೀವನಕ್ಕ ಒಳ್ಳೇದಾಗ್ಲಿ ಅಂತ ಇವೆಲ್ಲ ಮಾಡ್ತೀನ್ರಿ ಅಷ್ಟ...” ಎಂದು ಹಣಮಂತ ನಮ್ರವಾಗಿ ಹೇಳುತ್ತಾರೆ.

ಬೆಂಕಿ ಆಕಸ್ಮಿಕದಲ್ಲಿ ಇಲ್ಲಿನ ಎಲ್ಲ ಗುಡಿಸಲು ಸುಟ್ಟುಹೋದಾಗ, ಹಣಮಂತ ಪದೇ ಪದೇ ಜನಪ್ರತಿನಿಧಿಗಳಿಗೆ ಹತ್ತಾರು ಮನವಿ ಸಲ್ಲಿಸಿದ್ದರು. ಇದರಿಂದಾಗಿ ಅಂದಿನ ವಸತಿ ಸಚಿವ ಖಮರುಲ್ ಇಸ್ಲಾಂ ಆಶ್ರಯ ಯೋಜನೆಯಡಿ 1999ರಲ್ಲಿ ಮನೆ ಮಂಜೂರು ಮಾಡಿದ್ದರು.

ತಾಯಿಯ ಗಾಯಗಳಿಗೆ ಹಣಮಂತ ಉಪಚಾರ ಮಾಡುತ್ತಿದ್ದ. ಉಳಿದವರಿಗೆ ಈ `ಅದೃಷ್ಟ~ ಇರಲಿಲ್ಲ. ಆಗ ಹಣಮಂತ ನಿರ್ಧರಿಸಿದ್ದು, ಕಾಲೊನಿಯಲ್ಲೇ ಚಿಕಿತ್ಸಾ ಕೇಂದ್ರವೊಂದರ ಸ್ಥಾಪನೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕೇಂದ್ರದಲ್ಲಿ ತರಬೇತಿ ಪಡೆದು, ಕಾಲೋನಿಯಲ್ಲೊಂದು ಕೇಂದ್ರ ತೆರೆದು ಉಳಿದವರಿಗೂ ಚಿಕಿತ್ಸೆ ನೀಡಲು ಶುರು ಮಾಡಿದರು. ಮುಂಬೈನ ಸಮಾಜ ಸೇವಕ ಮೈಕೆಲ್ ಡಿಸೋಜಾ ಅವರು ಚಿಕಿತ್ಸೆಗೆ ಬೇಕಾದ ಔಷಧಿಗಳನ್ನು ಪೂರೈಸುತ್ತಿದ್ದರು.

ಕುಷ್ಠರೋಗಿಗಳಿಗೇನೋ ಚಿಕಿತ್ಸೆಯ ಆಸರೆ ಸಿಕ್ಕಿತು. ಆದರೆ ಅವರ ನಿರೋಗಿ ಮಕ್ಕಳ ಗತಿ? ಸಮಾಜ ಆ ಮಕ್ಕಳನ್ನೂ ಕೆಟ್ಟದಾಗಿ ನೋಡುತ್ತದೆ. ಇಂಥ ಮಕ್ಕಳಿಗೆ ವಸತಿಯುತ ಶಿಕ್ಷಣ ನೀಡಲು ವಿವೇಕಾನಂದ ಕುಷ್ಠಸೇವಾ ಸಮಿತಿಯ ಸಂಸ್ಥಾಪಕ ವೆಂಕಟೇಶ ಗುರುನಾಯಕ ಅವರು ಗಾಣಗಾಪುರದಲ್ಲಿ ದತ್ತಬಾಲ ಸೇವಾಶ್ರಮ ಸ್ಥಾಪಿಸಿದ್ದರು.

ಅವರಿಂದ ಪ್ರೇರಣೆ ಪಡೆದ ಹಣಮಂತ, ಕುಷ್ಠರೋಗಿಗಳ ನಿರೋಗಿ ಮಕ್ಕಳಿಗೆ ಆಶ್ರಯ ಕಲ್ಪಿಸಲು ನಿರ್ಧರಿಸಿದರು. ಆದರೆ ಅದಕ್ಕೆ ಹಣ ಎಲ್ಲಿದೆ!? ಧೃತಿಗೆಡಲಿಲ್ಲ. ಹೇಗಿದ್ದರೂ ತಾನು ನಡೆಸುವ ಆಟೋದಿಂದ ಒಂದಷ್ಟು ಹಣ ಬಂದೇ ಬರುತ್ತದಲ್ಲವೇ? ಅದರ ಒಂದಂಶ ಬಳಸಿದರಾಯಿತು ಎಂದು ನಿರ್ಧರಿಸಿದರು.

ಒಂದಂಶ ಉಳಿತಾಯ
ಆಟೋ ಓಡಿಸುತ್ತಿದ್ದುದರಿಂದ ಸಿಗುತ್ತಿದ್ದ ಆದಾಯದಲ್ಲಿ ದಿನಕ್ಕೆ 20ರಿಂದ 50 ರೂಪಾಯಿವರೆಗೆ ಹಣವನ್ನು ಕುಡಿಕೆಯಲ್ಲಿ ಹಾಕುತ್ತಿದ್ದರು. ಒಂದು ವರ್ಷದ ಬಳಿಕ ಹೀಗೆ ಸಂಗ್ರಹವಾದ ಹಣದಿಂದ ಎರಡು ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ಹಾಗೂ ಎರಡು ಹೊಲಿಗೆ ಯಂತ್ರ ಖರೀದಿಸಿದ ಅವರು, 2007ರಲ್ಲಿ ಕಾಲೋನಿಯಲ್ಲೇ ಒಂದೆಡೆ ತರಬೇತಿ ನೀಡಲು ಆರಂಭಿಸಿದರು.
 
ತಮಗೆ ಸಿಗುತ್ತಿದ್ದ ಆದಾಯದಿಂದಲೇ ತರಬೇತುದಾರರಿಗೆ ಒಂದು ವರ್ಷ ವೇತನ ಕೊಡುತ್ತಿದ್ದರು. ನಂತರ ಇವರ ಕೆಲಸ ಕಂಡು ಹಲವರು ದೇಣಿಗೆ ನೀಡಿದರು. ಮಹಾನಗರ ಪಾಲಿಕೆಗೆ ಮತ್ತೆ ಮತ್ತೆ ಎಡತಾಕಿದ ಹಣಮಂತ, ಇನ್ನೂ ಎಂಟು ಹೊಲಿಗೆ ಯಂತ್ರ ಪಡೆಯುವಲ್ಲಿ ಸಫಲರಾದರು. “ಪಾರ್‌ಗೋಳು ಸುಮ್ನೇ ತಿರ‌್ಗಾಡ್ತಿದ್ವು. ಈಗ ನೋಡ್ರಿ... ಕಂಪ್ಯೂಟರ್ ಕೆಲಸ ಮಾಡ್ತಾವ... ಹೆಣ್ಣುಮಕ್ಳೂ ಹೊಲಿಗಿ ಕಲ್ತದ್ದು ರೊಕ್ಕ ಗಳಿಸ್ಲಿಕ್ಕೆ ಹತ್ಯಾರ‌್ರಿ” ಎಂದು ಹಣಮಂತ ಖುಷಿಯಿಂದ ಕಣ್ಣರಳಿಸಿ ಹೇಳುತ್ತಾರೆ.

ಸರ್ಕಾರ ಪ್ರಕಟಿಸುವ ಹಲವು ಯೋಜನೆಗಳು ಈ ರೋಗಿಗಳ ಪಾಲಿಗೆ ಮರೀಚಿಕೆಯೇ. ಏಕೆಂದರೆ ಕಚೇರಿಗೆ ಹತ್ತು ಹಲವು ಸಲ ಹೋಗಿ ಬರುವ ಬಲ ಅವರಲ್ಲಿ ಇರುವುದೇ ಇಲ್ಲ. ಅಂಥವರ ಕೆಲಸವನ್ನೆಲ್ಲ ಹಣಮಂತ ಮಾಡಿ ಕೊಡುತ್ತಾರೆ. ಅರ್ಜಿ ಟೈಪ್ ಮಾಡಿಸಿ, ಸೂಕ್ತ ದಾಖಲಾತಿ ಲಗತ್ತಿಸಿ, ಅಗತ್ಯವಾದರೆ ಫೊಟೋ ಕೂಡ ತೆಗೆಸಿ ಮನವಿಗಳನ್ನು ಇಲಾಖೆಗೆ ಸಲ್ಲಿಸುತ್ತಾರೆ.
 
ಇವರ ಯತ್ನದಿಂದಾಗಿಯೇ ಇಲ್ಲಿನ 175 ರೋಗಿಗಳಿಗೆ ಅಂಗವಿಕಲರ ವೇತನ ಸಿಗುತ್ತಿದೆ. ರೋಗಮುಕ್ತರಾದವರು ಸ್ವಉದ್ಯೋಗ ಕೈಗೊಳ್ಳಲು ಪರಿಶಿಷ್ಟ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ಸಾಲಸೌಲಭ್ಯ ಹಾಗೂ 80ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಚೀಟಿ ಸಿಕ್ಕಿದ್ದೂ ಇದೇ ರೀತಿ. ಸಾಲದ ನೆರವಿನೊಂದಿಗೆ ಇಬ್ಬರು ಕಿರಾಣಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಮೂವರು ಯುವಕರು ಆಟೋ ಖರೀದಿಸಿದ್ದಾರೆ.

ಖುಷಿ- ಸಂಭ್ರಮ
ತಾನು ನಡೆಸುವ ಕೆಲಸಕ್ಕೆ ಪ್ರತಿಫಲ ಸಿಕ್ಕಾಗ ಹಣಮಂತ ಅದನ್ನು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಹೊಲಿಗೆ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ ಯುವಕ- ಯುವತಿಯರಿಗೆ ಕೆಲಸ ಒದಗಿಸಿಕೊಡಲು ಸಹ ಶ್ರಮಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳು, ಅಂಗಡಿಗಳಿಂದ ಸಗಟು ಪ್ರಮಾಣದಲ್ಲಿ ಸಮವಸ್ತ್ರ ತಯಾರಿಕೆ ಆದೇಶಗಳನ್ನು ಪಡೆಯುವಲ್ಲಿ ಸಫಲವಾದ ಹಣಮಂತ, ಆಟೋ ಚಾಲಕರ ಸಮವಸ್ತ್ರ ಹೊಲಿದುಕೊಡುವ ಕೆಲಸವನ್ನೂ ವಹಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕಾಲೋನಿಯಲ್ಲಿ ಸಂಭ್ರಮದ ದೃಶ್ಯ.

ಇನ್ನೊಂದೆಡೆ ನಗರದ ವಿವಿಧ ಕಂಪ್ಯೂಟರ್ ಕೇಂದ್ರಗಳಲ್ಲಿ ತಮ್ಮ ಕಾಲೋನಿ ಮಕ್ಕಳಿಗೆ ಉದ್ಯೋಗ ದೊರೆತಾಗಲೂ ಸಡಗರದ ವಾತಾವರಣ.

ಈಗ ಹಣಮಂತ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಗುಲ್ಬರ್ಗದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ `ಮಹಾತ್ಮ ಗಾಂಧಿ ಡಿಟಿಪಿ, ಝೆರಾಕ್ಸ್ ಸೆಂಟರ್~ ಆರಂಭಿಸಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವ ನಾಲ್ವರೂ ಕುಷ್ಠರೋಗಿಗಳ ನಿರೋಗಿ ಮಕ್ಕಳು ಎಂಬುದು ಗಮನಾರ್ಹ. ಇದಲ್ಲದೇ ಕಂಪ್ಯೂಟರ್ ಕೇಂದ್ರಗಳಲ್ಲಿ ಹಲವರನ್ನು ಕೆಲಸಕ್ಕೆ ಸೇರಿಸಿದ್ದಾರೆ.

ಹಣಮಂತ ಅವರದು ವ್ಯತ್ಯಾಸವಿಲ್ಲದ ದಿನಚರಿ. ನಿತ್ಯವೂ ಬೆಳಿಗ್ಗೆ 8ರಿಂದ 10ರವರೆಗೆ ರೋಗಿಗಳ ಗಾಯಗಳಿಗೆ ಉಪಚಾರ ಮಾಡುವುದು; ಅಲ್ಲಿಂದ ಡಿಟಿಪಿ ಸೆಂಟರ್‌ಗೆ ಹೋಗಿ ಮೇಲ್ವಿಚಾರಣೆ ನಡೆಸುವುದು.

ಸಂಜೆ 6ರಿಂದ 7ರವರೆಗೆ ಕಾಲೋನಿಯಲ್ಲಿರುವ ಕಂಪ್ಯೂಟರ್- ಹೊಲಿಗೆ ತರಬೇತಿ ಕೇಂದ್ರಗಳ ಉಸ್ತುವಾರಿ ಗಮನಿಸುವುದು. ಇವರ ಕೆಲಸಕ್ಕೆ ಪತ್ನಿ ಬಸಮ್ಮ ಸಹಕಾರವನ್ನೂ ಮರೆಯುವಂತಿಲ್ಲ. ಆಕೆಯ ತಂದೆ-ತಾಯಿ ಕೂಡ ಈ ರೋಗದಿಂದ ಬಾಧಿತರಾಗಿ ಇಲ್ಲಿಗೆ ಬಂದವರೇ.

“ಕಾಲೋನಿಯಲ್ಲಿರುವ ಗರ್ಭಿಣಿಯರು ಹೆರಿಗೆಗೆಂದು ಆಸ್ಪತ್ರೆಗೆ ಹೋದರೆ ಅವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ನಾನು ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡಿ, ಅನುಭವ ಪಡೆದಿದ್ದೆ.
 
ಹಾಗಾಗಿ ಕಾಲೋನಿಯ ಯಾವುದೇ ಗರ್ಭಿಣಿ ಎಷ್ಟೇ ಹೊತ್ತಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದರೆ, ತಕ್ಷಣ ಹೋಗಿ ಅವರ ಮನೆಯಲ್ಲೇ ಹೆರಿಗೆ ಮಾಡಿಸುತ್ತಿದ್ದೆ. ಈ ರೀತಿ 30ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದೇನೆ” ಎನ್ನುವ ಬಸಮ್ಮ, ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎಂದು ಸಮಾಧಾನಪಡುತ್ತಾರೆ.

ಕುಷ್ಠರೋಗ ಇದೆ ಎಂದು ಗೊತ್ತಾದ ಕೂಡಲೇ ಆ ವ್ಯಕ್ತಿಯನ್ನು ಕುಟುಂಬದಿಂದ ಹೊರ ಹಾಕಿದ ಘಟನೆಗಳು ಸಾಕಷ್ಟಿವೆ. ಇಂಥವರ ಸೇವೆಗೆ ಹಣಮಂತ ಸದಾ ಸಿದ್ಧ. ದೇಹ- ಮನಸ್ಸುಗಳೆರಡೂ ಘಾಸಿಗೊಂಡು, ಸಮಾಜದಿಂದ ದೂರ ತಳ್ಳಿಸಿಕೊಂಡವರಿಗೆ ಬದುಕೇ ಕತ್ತಲಾಗಿ ಪರಿಣಮಿಸುತ್ತದೆ. ಅವರನ್ನು ಕರೆದು, ಗಾಯಗಳನ್ನು ತೊಳೆದು ಔಷಧಿ ಹಾಕಿ ಬ್ಯಾಂಡೇಜ್ ಕಟ್ಟುತ್ತ ರೋಗಿಗಳಿಗೆ ಸಾಂತ್ವನ ಹೇಳುವ ಹಣಮಂತ, ನಿಸ್ವಾರ್ಥ ಸೇವೆಗೆ ಮಾದರಿ ಎಂಬಂತಿದ್ದಾರೆ.


ಪ್ರಶಸ್ತಿ
ಅಂಗವಿಕಲರ ಸಬಲೀಕರಣಕ್ಕೆ ಶ್ರಮಿಸುವ ವ್ಯಕ್ತಿಗಳಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಹಣಮಂತ ದೇವನೂರ 2008ರಲ್ಲಿ ಭಾಜನರಾಗಿದ್ದಾರೆ.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವು ನೀಡುವ ಈ ಪ್ರಶಸ್ತಿಯನ್ನು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, “ನೀನು ಮಾಡಿದ ಕೆಲಸ ಅದ್ಭುತವಾಗಿದೆ; ಅತ್ಯಂತ ಶ್ರೇಷ್ಠವೂ ಆಗಿದೆ. ಕುಷ್ಠರೋಗಿಗಳ ಸೇವೆಯನ್ನು ಮುಂದುವರಿಸು” ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT