ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವಂತರು

ಒಂದು ಇ-ಕಾರ್ಡ್ ಕಥನ
Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಊರಿನಲ್ಲಿಯೇ ಮಿಗಿಲಾದದ್ದು ನನ್ನ ಹೃದಯ. ಎಲ್ಲಿಯಾದರೂ ಕಂಡಿರಾ, ಇಷ್ಟು ಚೆಲುವಾದ, ನಗಾರಿ ದನಿಯ, ದೃಢವಾದ ಎದೆಯ'.

ನಾಲ್ಕೂ ಬೀದಿಗಳು ಕೂಡುವ ಚೌಕದಲ್ಲಿ ಚಿಗುರು ಮೀಸೆಯ ಹುಡುಗ ತನ್ನ ಹೃದಯವ ಮುಟ್ಟಿ ನೋಡುತ್ತ ಎತ್ತಿ ತೋರಿಸುತ್ತ ಜಂಬ ಕೊಚ್ಚುತ್ತಿದ್ದ. ಜನ ಗುಂಪಾದರು.

`ಹೌದು, ಇದು ಬಹಳ ಸೊಗಸಾದ ಹೃದಯ. ಎಳ್ಳಷ್ಟೂ ಕೊರೆಯಿಲ್ಲ. ಹುಡುಕಿದರೂ ಗಾಯದ ಕಲುಮೆಯಿಲ್ಲ. ಹೃದಯವೆಂದರೆ ಇದುವೇನೆ!'- ಊರಿನ ಜನ ಹೊಗಳುತ್ತಿದ್ದರೆ ಉಕ್ಕು ಹರಯದ ಹುಡುಗ ಉಬ್ಬಿಹೋದ.

ಇದ್ದಕ್ಕಿದ್ದಂತೆ, ಗುಂಪನ್ನು ಸೀಳುತ್ತ ರಾಧೇಯನಂತೆ ನುಗ್ಗಿ ಬಂದ ಬಿರುಗಾಳಿಯ ಮುದುಕ. `ಅದೆಂಥಾ ಹೆಚ್ಚುಗಾರಿಕೆ ನಿನ್ನ ಹೃದಯದ್ದು? ನನ್ನ ಹೃದಯಕ್ಕಿಂಥ ನಿನ್ನ ಹೃದಯ ಯಾವುದರಲ್ಲಿ ಮಿಗಿಲು?' ಎಂದು ಮುದುಕ ಹುಡುಗನ ಎದೆಗೆ ಎದೆಯೊಡ್ಡಿದ.
ಹುಡುಗನೊಂದಿಗೆ ಗುಂಪೂ ಅಳೆದೂ ತೂಗಿ ಮುದುಕನ ಹೃದಯದಲ್ಲಿ ಇಂಚಿಂಚೂ ಇಣುಕಿದರು. ಅದು ಗಟ್ಟಿಯಾಗೇನೊ ಹೊಡೆದುಕೊಳ್ಳುತ್ತಿತ್ತು. ಆದರೆ, ಹೃದಯದ ತುಂಬಾ ಗಾಯದ ಕಲೆಗಳು. ಕೆಲವು ಭಾಗಗಳು ಕಳೆದುಹೋಗಿದ್ದವು. ಆ ಜಾಗದಲ್ಲಿ ಜೋಡಿಸಿದ್ದ ಬೇರೆ ಹೃದಯದ ಭಾಗಗಳು ಹೊಂದಾಣಿಕೆಯಾಗದೆ ಅಲ್ಲೆಲ್ಲ ಏರು ತಗ್ಗುಗಳಿದ್ದವು. ಗುಂಪು ಗೊಂದಲಕ್ಕೆ ಬಿತ್ತು. ಮುದುಕನ ಹೃದಯದ ಅಗ್ಗಳಿಕೆಯಾದರೂ ಎಂಥಾದ್ದು?

ಯುವಕ ಕೇಳಿಯೇ ಬಿಟ್ಟ. `ಎಲೆ ಮುದುಕ, ನೀನೇನು ತಮಾಷೆ ಮಾಡುತ್ತಿದ್ದೀಯ? ನಮ್ಮಿಬ್ಬರ ಹೃದಯಗಳನ್ನು ಹೋಲಿಸಿ ನೋಡು. ನನ್ನದು ಎಲ್ಲಾ ಬಗೆಯಲ್ಲೂ ಸಮರ್ಥ. ನಿನ್ನದೋ ಗುಳಿ ಗಾಯಗಳ ದುರ್ಬಲ ಹೃದಯ' ಹುಡುಗ ನಗೆಯಾಡಿದ.

ಮುದುಕ ಒಪ್ಪಿಕೊಂಡ. `ಹೌದಪ್ಪ, ನನ್ನ ಹೃದಯದೊಂದಿಗೆ ಹೋಲಿಸಿದರೆ ನಿನ್ನದು ಚೆಲುವೇ. ಆದರೆ, ನನ್ನ ಹೃದಯವನ್ನು ಸ್ವಲ್ಪ ಗಮನವಿಟ್ಟು ನೋಡು. ಇಲ್ಲಿನ ಪ್ರತಿಯೊಂದು ಗಾಯದ ಕಲೆಯೂ ನಾನು ಪ್ರೀತಿ ಹಂಚಿಕೊಂಡ ಮನುಷ್ಯನ ಸಂಕೇತ. ಎಷ್ಟೊಂದು ಜನರೊಂದಿಗೆ ನನ್ನ ಹೃದಯದ ಭಾಗಗಳ ಹಂಚಿಕೊಂಡಿದ್ದೇನೆ. ಬದಲಿಗೆ ಅವರ ಹೃದಯದ ಭಾಗಗಳಿಂದ ಖಾಲಿಯನ್ನು ತುಂಬಿಕೊಂಡಿದ್ದೇನೆ. ಬದಲಿಸಿಕೊಂಡ ತುಣುಕುಗಳು ಹೊಂದಾಣಿಕೆಯಾಗುತ್ತಿಲ್ಲ, ನಿಜ. ಕೆಲವು ತುದಿ ಒರಟಾಗಿಯೂ ಇವೆ. ಆದರೂ, ನಾನು ಹಿತ ಅನುಭವಿಸುತ್ತಿದ್ದೇನೆ. ಯಾಕೆಂದರೆ, ನನ್ನದು ಪ್ರೀತಿಯ ಹೃದಯ, ಪ್ರೀತಿ ಹಂಚಿಕೊಂಡ ಹೃದಯ.

ಕೆಲವೊಮ್ಮೆ ನನ್ನ ಹೃದಯದ ಭಾಗವನ್ನು ಪಡೆದ ಮನುಷ್ಯ, ಅವನ ಹೃದಯದ ಭಾಗವನ್ನು ಕೊಡದಿರುವುದೂ ಉಂಟು. ಅಲ್ಲೆಲ್ಲ ಆಳ ಗಾಯಗಳಿವೆ. ಈ ಗಾಯಗಳು ತುಂಬಾ ನೋವಿನವು. ಅವು ನಾನು ಕಳಕೊಂಡದ್ದನ್ನು ನೆನಪಿಸುತ್ತಲೇ ಇರುತ್ತವೆ. ಆದರೂ, ಆ ಕೆಲವು ಮಂದಿ, ಯಾವತ್ತಾದರೂ ಪಡೆದದ್ದನ್ನ ಹಿಂತಿರುಗಿಸಿಯೇ ತೀರುತ್ತಾರೆ. ಅದಕ್ಕಾಗಿ ನಾನು ಕಾಯುತ್ತೇನೆ. ಈಗ ಹೇಳು ನಿಜವಾದ ಸೌಂದರ್ಯ ಯಾವುದು'.

ಹುಡುಗ ದಂಗು ಹೊಡೆದುಬಿಟ್ಟ. ಗಲ್ಲಗಳಿಂದ ಇಳಿದ ಹನಿ ನೆಲ ಸೇರುತ್ತಿತ್ತು. ಆತ, ತನ್ನ ಮಟ್ಟಸವಾದ ಹೃದಯದಿಂದ ಥಟ್ಟನೆ ಒಂದು ಭಾಗವನ್ನು ಕಿತ್ತುಬಿಟ್ಟ. ತುಂಡರಿಸಿದ ಹೃದಯದ ಭಾಗವನ್ನು ತುಂಬಿಕೊಂಡ ನಡುಗುವ ಬೊಗಸೆಯನ್ನು ಮುದುಕನ ಮುಂದೊಡ್ಡಿದ. ಮುದುಕ ಒಪ್ಪಿಸಿಕೊಂಡ. ತನ್ನ ಹೃದಯಕ್ಕೆ ಬೆಸೆದುಕೊಂಡ. ಬದಲಿಗೆ ತನ್ನ ಹೃದಯದ ಒಂದು ಭಾಗವನ್ನು ಕಿತ್ತು ಹುಡುಗನ ಹೃದಯದ ಭಾಗಕ್ಕೆ ಜೋಡಿಸಿದ. ಸರಿಯಾಗಿ ಹೊಂದಿಕೊಳ್ಳಲಿಲ್ಲ. ಕೆಲವು ಏರುತಗ್ಗು ಉಳಿದವು.

ಹುಡುಗ ತನ್ನ ಹೃದಯವನ್ನು ನೋಡಿಕೊಂಡ. ಎಂದಿನ ಮಟ್ಟಸವನ್ನು ಕಳಕೊಂಡಿದ್ದರೂ, ಹಿಂದೆಂದಿಗಿಂತಲೂ ಕಡು ಚೆಲುವಾಗಿದೆ ಅನ್ನಿಸಿತು. ಯಾಕೆಂದರೆ, ಹುಡುಗನ ಹೃದಯದೊಳಕ್ಕೆ ಮುದುಕನ ಎದೆಯ ಭಾಗದಿಂದ ಪ್ರೀತಿ ಇಳಿಯುತ್ತಿತ್ತು.

ಅವರಿಬ್ಬರೂ ಪರಸ್ಪರ ಆಲಂಗಿಸಿಕೊಂಡರು. ಆಮೇಲೆ, ಆ ಇಬ್ಬರು ಸುಂದರ ಹೃದಯಗಳ ಮನುಷ್ಯರು ಪಕ್ಕ ಪಕ್ಕದಲ್ಲಿಯೇ ನಡೆದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT