ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್ಲಿಗೆ ಚಲನಚಿತ್ರ ಮಾಡುವಾಸೆ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಷಿಕಾಗೊ (ಪಿಟಿಐ): ಮುಂಬೈ ದಾಳಿ ಪ್ರಕರಣದಲ್ಲಿ ತಾನು ಭಾಗಿಯಾಗಿದ್ದನ್ನು ಒಪ್ಪಿಕೊಂಡಿರುವ ಉಗ್ರ ಡೇವಿಡ್ ಹೆಡ್ಲಿಗೆ ಈಗ ತನ್ನ ಜೀವನದ ಘಟನೆಗಳನ್ನು ಪುಸ್ತಕ ಮತ್ತು ಚಲನಚಿತ್ರದ ಮೂಲಕ ಹಂಚಿಕೊಳ್ಳುವ ಇರಾದೆ ವ್ಯಕ್ತವಾಗಿದೆ.

ಅಮೆರಿಕ, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿನ ತನ್ನ ಬದುಕು, ಮುಂಬೈ ಮತ್ತು ಇತರ ದಾಳಿಗಳ ಸಂಚು, ಐಎಸ್‌ಐ, ಲಷ್ಕರ್, ಅಲ್‌ಖೈದಾ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳೊಂದಿಗಿನ ತನ್ನ ಒಡನಾಟ ಮುಂತಾದ ಎಲ್ಲಾ ವಿವರಗಳನ್ನೂ ಪುಸ್ತಕದಲ್ಲಿ ಬರೆಯಲು ಮತ್ತು ತನ್ನ ಜೀವನ ಕುರಿತು ಚಲನಚಿತ್ರವನ್ನು ನಿರ್ಮಿಸಲು ಚಿಂತನೆ ನಡೆಸಿರುವುದಾಗಿ ಹೆಡ್ಲಿ ಷಿಕಾಗೊ ಕೋರ್ಟ್‌ನಲ್ಲಿ ಅಭಿಲಾಷೆ ವ್ಯಕ್ತಪಡಿಸಿದ್ದಾನೆ.

ಅಲ್ಲದೆ ತನ್ನ ಬಿಡುಗಡೆಯ ಬಳಿಕ ಜಗತ್ತಿಗೆ ಇಸ್ಲಾಂ ಧರ್ಮದ ಕುರಿತು ಬೋಧನೆ ಮಾಡುವುದಾಗಿ ಹೇಳಿರುವ ಹೆಡ್ಲಿ, ತನ್ನ ಮಕ್ಕಳೂ ಈ ಕಾರ್ಯವನ್ನು ಮಾಡಬೇಕೆನ್ನುವುದು ತನ್ನ ಇಚ್ಛೆ.

ಮಾಧ್ಯಮಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಆತ, ತನ್ನ ಪತ್ನಿ ಶಾಜಿಯಾಳಿಗೆ ಕುರಾನ್ ಮತ್ತು ಬೈಬಲ್‌ಗಳನ್ನು ಓದುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾನೆ.

ಸಹೋದರನ ಸಹಾಯ:ತಾನು ಪಾಕಿಸ್ತಾನದಲ್ಲಿದ್ದಾಗ ಸಹೋದರ ಹಮ್ಜಾ, ಸಂಬಂಧಿ ಸೌಲತ್ ಲಷ್ಕರ್ ಉಗ್ರರೊಂದಿಗೆ ಸೇರಿ ತನಗೆ ಸಹಾಯ ಮಾಡಿದ್ದರು. ಹಮ್ಜಾ ಸರ್ಕಾರಿ ನೌಕರನಾಗಿದ್ದರಿಂದ ಆತ ಕೆಲಸ ಕಳೆದುಕೊಳ್ಳುವುದು ತನಗೆ ಇಷ್ಟವಿರಲಿಲ್ಲ. ಹೀಗಾಗಿ 2009ರ ಅಕ್ಟೋಬರ್‌ನಲ್ಲಿ ತನ್ನ ಬಂಧನವಾದ ಬಳಿಕ ಹಮ್ಜಾನಿಗೆ ತನ್ನ ದೂರವಾಣಿ ಸಂಖ್ಯೆಯನ್ನು ಬದಲಿಸುವಂತೆ ಪತ್ನಿ ಶಾಜಿಯಾಳ ಮೂಲಕ ಸೂಚಿಸಿದ್ದಾಗಿ ಹೆಡ್ಲಿ ಸ್ಪಷ್ಟಪಡಿಸಿದ್ದಾನೆ.

`ಪ್ರತ್ಯೇಕ ವಿಚಾರಣೆಯಿಂದ ಸಹಾಯ~
ಮುಂಬೈ ದಾಳಿಯ ಸಹ ಆರೋಪಿಯಾಗಿ ವಿಚಾರಣೆ ಎದುರಿಸಿ ಆರೋಪ ಮುಕ್ತನಾಗಿರುವ ತಹಾವುರ್ ರಾಣಾ ವಿರುದ್ಧದ ಇತರೆ ವಿಚಾರಣೆಗಳನ್ನು ಪ್ರತ್ಯೇಕವಾಗಿ ನಡೆಸಿದರೆ ಅದನ್ನು ಗೆಲ್ಲಲು ಸಾಧ್ಯ ಎಂದು ಆತನ ಪರ ವಕೀಲ ಚಾರ್ಲಿ ಸ್ವಿಫ್ಟ್ ಹೇಳಿದ್ದಾರೆ.

ಮುಂಬೈ ದಾಳಿ ಪ್ರಕರಣದಲ್ಲಿ ಆರೋಪ ಮುಕ್ತನಾದರೂ, ಡೆನ್ಮಾರ್ಕ್ ದಾಳಿಯ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ರಾಣಾನ ಪ್ರಕರಣವನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರೆ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

`ಈ ಪ್ರಕರಣ ಕ್ಯಾನ್ಸರ್‌ನಂತೆ. ನೀವು ಕ್ಯಾನ್ಸರ್‌ನಿಂದ ಪಾರಾದರೂ ಕಾಲು ಕಳೆದುಕೊಂಡಂತೆ. ಶುಭ ಸುದ್ದಿಯೆಂದರೆ ಕ್ಯಾನ್ಸರ್‌ನಿಂದ ನೀವು ಪಾರಾಗಿರುವುದು~ ಎಂದು ಸ್ವಿಫ್ಟ್ ಅವರು ರಾಣಾ ಮುಂಬೈ ದಾಳಿ ಸಂಚಿನ ಆರೋಪದಿಂದ ಮುಕ್ತನಾಗಿದ್ದನ್ನು ವಿಶ್ಲೇಷಿಸಿದ್ದಾರೆ.

`ಮುಂಬೈ ದಾಳಿಯಲ್ಲಿ ಭಾಗಿಯಾದ ಆರೋಪಕ್ಕೆ ರಾಣಾ ಒಳಗಾಗಿದ್ದು ತೀರಾ ಅಚ್ಚರಿ ಉಂಟು ಮಾಡಿಲ್ಲ.ಆದರೆ ಮಿಲಿಟರಿ ವೈದ್ಯನಾಗಿ ಬಳಿಕ ವ್ಯಾಪಾರಿಯಾಗಿ ವೃತ್ತಿ ನಡೆಸುತ್ತಿದ್ದ ರಾಣಾ ಮೇಲೆ ಡೆನ್ಮಾರ್ಕ್ ದಾಳಿಯ ಸಂಚಿನ ಆರೋಪ ಹೊರಿಸುವುದು ದುರದೃಷ್ಟಕರ. ಒಂದು ವೇಳೆ ಮುಂಬೈ ದಾಳಿ ಮತ್ತು    ಡೆನ್ಮಾರ್ಕ್ ದಾಳಿ ಪ್ರಕರಣಗಳ ವಿಚಾರಣೆ ಬೇರೆ ಬೇರೆಯಾಗಿ ನಡೆದರೆ ಖಂಡಿತವಾಗಿಯೂ ಗೆಲ್ಲುತ್ತೇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT