ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದರಿಸಿ ಓಡುವ ಕಳ್ಳ..!

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ರಾತ್ರಿ ಹೊತ್ತಿನಲ್ಲಿ ಕತ್ತಲಿನಲ್ಲಿ ಓಡಾಡುವಾಗ ಸ್ವಲ್ಪ ಚರಪರ ಸದ್ದಾದರೂ ಭಯವಾಗುವುದು ಸಹಜ. ಆಗ ಆ ಶಬ್ದದ ಮೂಲ ಬೆಕ್ಕೋ ನಾಯಿಯೋ ಆಗಿದ್ದಲ್ಲಿ ಅದು ನಮ್ಮನ್ನು ಕಂಡು ಓಡಿಹೋಗಬಹುದಲ್ಲವೇ? ಹೀಗೆ ನಮ್ಮನ್ನು ಹೆದರಿಸಿ ತಾನೇ ಓಡಿ ಹೋಗುವ ಕಳ್ಳರು ನಮ್ಮ ಸುತ್ತಮುತ್ತಲಿನಲ್ಲಿ ಕಡಿಮೆಯೇ?

ಆದರೆ ಕೆಲವು ವರ್ಷಗಳಿಂದ ಆಗಸದಲ್ಲಿ ಈ ಕಳ್ಳರ ಕಾಟ ಹೆಚ್ಚಾಗಿದೆ. ಹಾಗನ್ನುವುದಕ್ಕಿಂತ ಅಂಥ ಕಳ್ಳರಿದ್ದಾರೆ ಎಂಬುದು ನಮಗೆ ಈಗೀಗಷ್ಟೇ ತಿಳಿಯುತ್ತಿದೆ ಎನ್ನಬಹುದು.

ಇವು ಭೂಮಿಯ ಮೇಲೆ ಅಪ್ಪಳಿಸಿಯೇ ಬಿಡುತ್ತೇನೆ ಎನ್ನುವ ಪುಟ್ಟ ಬಂಡೆಗಳು (ಪುಟ್ಟ ಎಂಬ ಗುಣವಾಚಕ ಖಗೋಳದ ಲೆಕ್ಕದಲ್ಲಿ ನೂರಾರು ಮೀಟರ್- ಕಿಲೋ ಮೀಟರ್ ಆಗಬಹುದು!). ಇವಕ್ಕೆ ಒಂದು ವಿಶೇಷ ಹೆಸರಿದೆ, `ನಿಯರ್ ಅರ್ತ್ ಆಸ್ಟೆರ‌್ಯಾಡ್ಸ್' ಎಂದು. ಅಂದರೆ ಭೂಮಿಯನ್ನು ಸಮೀಪಿಸುವ `ಕ್ಷುದ್ರಗ್ರಹ'ಗಳು ಎಂದು ಅರ್ಥ.

ಸಾಧಾರಣವಾಗಿ ಕ್ಷುದ್ರಗ್ರಹ ಎಂದರೆ ಮಂಗಳ ಮತ್ತು ಗುರು ಗ್ರಹದ ಕಕ್ಷೆ ನಡುವೆ ಹರಡಿಕೊಂಡಿರುವ ಸಣ್ಣ ಗ್ರಹಗಳು ಎನ್ನಬಹುದು. ಇವುಗಳ ಸಂಖ್ಯೆ ಇದೀಗ ಐದು ಅಂಕಿಗಳನ್ನು ದಾಟಿದೆ. ಸಾಧಾರಣವಾಗಿ ಇವುಗಳ ಪ್ರದಕ್ಷಿಣಾವಧಿ ಮೂರರಿಂದ ಹತ್ತು ವರ್ಷಗಳು. ಇವುಗಳಲ್ಲಿ ಕೆಲವು ಮಂಗಳದ ಕಕ್ಷೆಯನ್ನು ದಾಟಿಬಂದು ಭೂಮಿಯ ಕಕ್ಷೆಯನ್ನು ಸಮೀಪಿಸುವುದೂ ಉಂಟು.

ಹೊಸ ಹೊಸ ದೂರದರ್ಶಕಗಳು ನಮ್ಮ ದೃಷ್ಟಿ ಶಕ್ತಿಯನ್ನು ವರ್ಧಿಸಿದ ಕಾರಣ ಇವುಗಳನ್ನು ಕಂಡುಹಿಡಿಯುವುದು ಸಾಧ್ಯವಾಗಿದೆ. ಕಳೆದ ಎರಡು ದಶಕಗಳಿಂದ ಭೂಮಿಯನ್ನು ಸಮೀಪಿಸುವ ಇಂತಹ ಕ್ಷುದ್ರಗ್ರಹಗಳನ್ನು ಕಂಡುಹಿಡಿಯುವುದಕ್ಕಾಗಿಯೇ ಕೆಲವು ಜೋಡಿ ದೂರದರ್ಶಕಗಳು ಸುಸಜ್ಜಿತವಾಗಿವೆ. ಅಲ್ಲದೆ ಕೆಲವು ವೀಕ್ಷಣಾಲಯಗಳು ಆಕಾಶವನ್ನೆಲ್ಲಾ ಹುಡುಕಲು ಸರ್ವೇಕ್ಷಣೆ ಕೆಲಸ ಕೈಗೊಂಡಿವೆ. ಪರಿಣಾಮ ಹೊಸ ಹೊಸ ಕಾಯಗಳು ಪತ್ತೆಯಾಗುತ್ತಲೇ ಇವೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ಹೀಗೊಂದು ಕಾಯ ಪತ್ತೆಯಾಯಿತು. ಅದು ಬಹಳ ಕ್ಷೀಣವಾಗಿತ್ತಾದರೂ ಅದನ್ನೇ ಹಿಂಬಾಲಿಸಿದ ದೂರದರ್ಶಕಗಳು ಕಕ್ಷೆಯ ವಿವರಗಳನ್ನು ಪತ್ತೆ ಮಾಡಿದವು. ಅದರ ಕಕ್ಷೆಯು ಭೂಮಿಯದರಂತೆಯೇ ಇದ್ದಿತು. ಅದರ ಕಕ್ಷಾವಧಿ 366 ದಿನಗಳು; ವರ್ಷಕ್ಕಿಂತ ಒಂದು ದಿನ ಜಾಸ್ತಿ ಅಷ್ಟೇ! ಇದಕ್ಕೆ `2012ಡಿಎ' ಎಂದು ಹೆಸರು. ಇಲ್ಲಿರುವ ಅಕ್ಷರಗಳು ಅದನ್ನು ಕಂಡುಹಿಡಿದ ದಿನಾಂಕವನ್ನು ಸೂಚಿಸುತ್ತವೆ.   ಎಂದರೆ ಫೆಬ್ರುವರಿಯ ಉತ್ತರಾರ್ಧ.

`2012ಡಿಎ' ಎಂಬ ಕ್ಷುದ್ರಗ್ರಹ ಕೇವಲ 40 ಮೀಟರ್ ಗಾತ್ರವಿದೆ ಎಂದು ಕಳೆದ ವರ್ಷವೇ ಪತ್ತೆಯಾಗಿತ್ತು. ಅದರ ಕಕ್ಷೆಯ ಅವಧಿ 366.12 ದಿನಗಳಾದ್ದರಿಂದ ಬರುವ ವರ್ಷಗಳಲ್ಲಿ ಪುನಃ ಭೂಮಿಯನ್ನು ಸಮೀಪಿಸುವ ಸಾಧ್ಯತೆ ಇದೆ.  ಇದನ್ನು ಲೆಕ್ಕ ಹಾಕಿದಾಗ ಅಪ್ಪಳಿಸುವ ಸಾಧ್ಯತೆಯೂ ತಿಳಿಯುತ್ತದೆ.  2013ರ ಫೆಬ್ರುವರಿ 15ರಂದು ಅದು ಒಂದು ಸುತ್ತನ್ನು ಮುಗಿಸಿ ಬರುವ ಹೊತ್ತಿಗೆ ಭೂಮಿಯೂ ಅದೇ ಸ್ಥಳಕ್ಕೆ ಹಿಂದಿರುಗಿರುತ್ತದೆ.  ಆ ದಿನ ಭೂಮಿಯ ಕೇಂದ್ರದಿಂದ 27000 ಕಿ.ಮೀ. ಅಂತರದಿಂದ ಅದು ಹಾದು ಹೋಗಲಿಎ ಎಂಬುದು ಒಂದು ಲೆಕ್ಕಾಚಾರ. ಖಗೋಳದ ಅಳತೆಯಲ್ಲಿ ಇದನ್ನೇ `ಸಮೀಪ' ಎಂದು ಕರೆಯಬಹುದಾದರೂ ಭೂಗೋಳದ ಲೆಕ್ಕದಲ್ಲಿ ಸಾಕಷ್ಟು `ದೂರ'ವೇ ಇದೆ.

ಇನ್ಸಾಟ್ ಮುಂತಾದ ಭೂ ಸ್ಥಾಯಿ ಉಪಗ್ರಹಗಳು 36000 ಕಿ.ಮೀ. ದೂರದಲ್ಲಿರುತ್ತವೆ.  ಇಂತಹ ನೂರಾರು ಉಪಗ್ರಹಗಳು ಭೂಮಿ ಸುತ್ತ ಉಂಗುರದಂತೆ ಹರಡಿಕೊಂಡಿವೆ. ಭಾರತದ ಇನ್ಸಾಟ್‌ಗಳು ಭಾರತದ ಮೇಲೆಯೇ ಯಾವಾಗಲೂ ಇರುತ್ತವೆ. ಹಾಗೆಯೇ ಇತರೆ ದೇಶಗಳೂ ತಂತಮ್ಮ ಭೌಗೋಳಿಕ ಕ್ಷೇತ್ರವನ್ನು ವ್ಯಾಪಿಸುವಂತೆ ಉಪಗ್ರಹಗಳನ್ನು ಇರಿಸಿವೆ.

`2012 ಡಿಎ14' ಎಂಬ ಪುಟ್ಟ ಕಾಯ ಈ ಭೂ ಸ್ಥಾಯೀ ಉಪಗ್ರಹಗಳ ಉಂಗುರವನ್ನು ಭೇದಿಸಿ ಒಳಗೆ ನುಗ್ಗುವ ಸಾಧ್ಯತೆ ಇದೆ. ಆದರೆ ಅವುಗಳಲ್ಲಿ ಒಂದಕ್ಕೆ ಡಿಕ್ಕಿ ಹೊಡೆಯುವ ಸಂಭವ ಬಹಳ ಕಡಿಮೆ. ಈಗಿನ ಲೆಕ್ಕದ ಪ್ರಕಾರ ಗ್ರೀನ್‌ವಿಚ್ ಸಮಯ ಸಂಜೆ 19.25ಕ್ಕೆ ಅದು ಭೂಮಿಗೆ ಅತ್ಯಂತ ಸಮೀಪವಾಗಲಿದೆ.

ಆಗ ನಮಗೆ ಭಾರತದಲ್ಲಿ ಮಧ್ಯರಾತ್ರಿ 1 ಗಂಟೆ (ಫೆ. 16ರ ಬೆಳಗಿನ ಜಾವ). ಅದು ಭೂಮಿಯ ವಾತಾವರಣವನ್ನು ಸ್ಪರ್ಶಿಸುವ ಸಾಧ್ಯತೆಯೂ ಇಲ್ಲ. ಸಾಧಾರಣವಾಗಿ ಬಂಡೆಗಳು ಹೀಗೆ ಭೂಮಿಯನ್ನು ಸಮೀಪಿಸಿದಾಗ ಅವುಗಳ ಅತಿ ಹೆಚ್ಚು ವೇಗದ ಕಾರಣ ವಾತಾವರಣದೊಡನೆ ಘರ್ಷಣೆ ಉಂಟಾಗುತ್ತದೆ. 

ತಾಪ ಹೆಚ್ಚಿ, ಬಂಡೆಯ ಹೊರಭಾಗ ಉರಿಯುತ್ತದೆ. ಆಗ ಅದರಿಂದ ಉತ್ಪತ್ತಿಯಾಗುವ ಬೆಳಕಿನ ಕಾರಣ ನಾವು ಅದನ್ನು ನೋಡಬಹುದು.  ಆದರೆ `2012 ಡಿಎ14' ವಾತಾವರಣವನ್ನು ಸ್ಪರ್ಶಿಸದೇ ಇರುವುದರಿಂದ ಅದರ ಹೊರ ಮೇಲ್ಮೈ ಉರಿಯುವುದಿಲ್ಲ, ಬೆಳಕೂ ಮೂಡುವುದಿಲ್ಲ. ಆದ್ದರಿಂದ ಕೇವಲ (!) 27000 ಕಿ.ಮೀ. ದೂರದಲ್ಲಿದ್ದರೂ ಈ ಪುಟ್ಟ ಕಾಯವು ನಮಗೆ ಕಾಣುವುದಿಲ್ಲ. ಅದು ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಕಾಣುತ್ತದೆ.  ಆದರೆ ಬಹಳ ಕ್ಷೀಣವಾಗಿರುತ್ತದೆ. 

ಇದರ ಕಕ್ಷೆಯೂ ಭೂಮಿಯ ಕಕ್ಷೆಯನ್ನೇ ಹೋಲುತ್ತಿದ್ದರೂ ಮುಖ್ಯ ವ್ಯತ್ಯಾಸವೊಂದಿದೆ. ಇದು ಭೂ ಕಕ್ಷಾ ತಲಕ್ಕೆ 10 ಡಿಗ್ರಿಗಳಷ್ಟು ಓರೆಯಾಗಿದೆ.  ಆದ ಕಾರಣ ಅದು ಆಕಾಶದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಸಾಗಿದಂತೆ ಕಾಣುತ್ತದೆ.  ಇದರ ವೇಗ ಸೆಕೆಂಡಿಗೆ 6 ಕಿ.ಮೀ.ಗಳಷ್ಟಿರುತ್ತದೆ ಎಂದು ಲೆಕ್ಕ ಹಾಕಲಾಗಿದೆ. 

ಇದು ದಕ್ಷಿಣದಲ್ಲಿರುವ ಕಿನ್ನರ (ಸೆಂಟಾರಸ್) ಎಂಬ ನಕ್ಷತ್ರ ಪುಂಜದ ಪಕ್ಕದಲ್ಲಿ ಹಾದು ನೆತ್ತಿಯ ಮೇಲೆ ಹಸ್ತ (ಕಾರ್ವಸ್) ಪುಂಜದಲ್ಲಿರುತ್ತದೆ. ಬೆಳಗಿನ 1.30ರ ಹೊತ್ತಿಗೆ ಸಿಂಹರಾಶಿಯಲ್ಲಿ. ಉತ್ತರಕ್ಕೆ ಹೊರಟು ಸೂರ್ಯೋದಯವಾಗುವಾಗ ಸಪ್ತರ್ಷಿ ಮಂಡಲ ಪುಂಜದಲ್ಲಿರುತ್ತದೆ.  ಅದರ ಪ್ರಕಾಶವೂ ಈ ಅವಧಿಯಲ್ಲಿ ಬಹಳ ವ್ಯತ್ಯಾಸವಾಗುತ್ತದೆ.  ರಾತ್ರಿ ಸುಮಾರು 1 ಗಂಟೆಗೆ ಕನ್ಯಾರಾಶಿಯಲ್ಲಿ ಹಾದು ಹೋಗುವಾಗ ದುರ್ಬೀನಿನಲ್ಲಿ ಕಾಣುವ ಸಾಧ್ಯತೆ ಇದೆ, ಬರಿಗಣ್ಣಿಗೆ ಕಾಣುವುದಿಲ್ಲ.

1974ರಲ್ಲಿ ಆಸ್ಟ್ರೇಲಿಯಾದ ಸಮುದ್ರತಟದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನಿಗೆ ದಿಗಂತದ ಅಂಚಿನಲ್ಲಿ ಬೆಳಕಿನ ಚುಕ್ಕೆಯೊಂದು ಧಾವಿಸಿದ್ದು ಕಂಡು ಬಂದಿತು. ಅದು ಹೀಗೆ ಒಂದು ಪುಟ್ಟ ಕಾಯ ಭೂಮಿಯ ವಾತಾವರಣವನ್ನು ಸ್ಪರ್ಶಿಸಿದ ಅಪೂರ್ವ ಘಟನೆಯಾಗಿತ್ತು. ಆತ ತೆಗೆದ ಒಂದು ಫೋಟೋ ಹೊರತಾಗಿ ಇನ್ನು ಯಾವ ದಾಖಲೆಯೂ ಉಳಿಯಲಿಲ್ಲ. ಆ ಪುಟ್ಟ ಕಾಯದ ವಿವರಗಳು ಅದರೊಂದಿಗೆ ಮಾಯವಾದವು.

ನಮ್ಮ ಸೌರವ್ಯೆಹದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಇರುವ ಇಂತಹ ಪುಟ್ಟಪುಟ್ಟ ಕಾಯಗಳ ಅಧ್ಯಯನ ಬಹಳ ಕಷ್ಟ. ಅವುಗಳ ಗಾತ್ರ, ಚಲನೆ ಇವು ನಿಗೂಢವಾಗಿಯೇ ಉಳಿದಿವೆ. ಅಪರೂಪಕ್ಕೊಮ್ಮೆ ಹೀಗೊಂದು ಕಾಯ ಸಮೀಪ ಬಂದಾಗ ಅಧ್ಯಯನ ಸಾಧ್ಯ. ಆದ್ದರಿಂದ `2012 ಡಿಎ14' ಅನ್ನು ಹಿಂಬಾಲಿಸಿ ಆ ಮೂಲಕ ಅದರ ವೇಗ, ಆಕಾರ ಮತ್ತು ಆವರ್ತನಾ ಅವಧಿಗಳನ್ನು ತಿಳಿಯಲು ದೂರದರ್ಶಕಗಳು ಮತ್ತು ರೇಡಿಯೋ ತರಂಗಗಳನ್ನು ಕಳುಹಿಸಿ ಪ್ರತಿಫಲನವನ್ನು ಅಭ್ಯಸಿಸುವ ರಡಾರ್‌ಗಳೂ ಈಗ ಸಜ್ಜಾಗಿವೆ. 

ಹೀಗೆ `2012 ಡಿಎ14' ಭೂಮಿಯನ್ನು ಸಮೀಪಿಸುವ ಕಾರಣ ನಮಗೆ ಏನೇನೂ ತೊಂದರೆ ಇಲ್ಲ. ಆದರೆ ಅದರ ಕಕ್ಷೆಯಲ್ಲಿಯಷ್ಟೇ ಬದಲಾವಣೆ ಉಂಟಾಗುತ್ತದೆ. ಕೃತಕ ಉಪಗ್ರಹಗಳ ದಿಕ್ಕು ಮತ್ತು ವೇಗ ಬದಲಿಸಲು ಬಳಸುವ `ಫ್ಲೈ ಬೈ'ನಂತಹ ತಂತ್ರದ ತತ್ವವೇ ಇದು. ಅದರ ಕಕ್ಷಾವಧಿ 366ರಿಂದ 317 ದಿನಗಳಿಗೆ ಇಳಿಯಬಹುದು ಎಂದು ಲೆಕ್ಕಾಚಾರ ತಿಳಿಸುತ್ತದೆ. ಅಂದರೆ ಮುಂದಿನ ವರ್ಷವೂ ಫೆಬ್ರುವರಿಯಲ್ಲಿ ಅದು ಭೂಮಿಯ ಸಮೀಪ ಬರುವುದಿಲ್ಲ. 100 ವರ್ಷಗಳ ನಂತರ ಬರಬಹುದು. ಆದರೆ ಅಷ್ಟರಲ್ಲಿ ಇನ್ನು ಯಾವುದೋ ಗ್ರಹದ ಸಮೀಪ ಹೋಗಿ ಪುನಃ ಅದರ ಕಕ್ಷೆ ಬದಲಾದರೂ ಆಗಬಹುದು. ಸಧ್ಯಕ್ಕೆ ನಾಳಿದ್ದಿನ (ಫೆ. 15ರ) ನಂತರ ಏನಾಗುತ್ತದೆ ಎಂದು ಕಾದು ನೋಡೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT