ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಅವ್ಯವಸ್ಥೆ: ವಾರಕ್ಕೊಬ್ಬ ಸಾವು

ಹಾಸನ: ಟೋಲ್‌ಗೇಟ್‌ಗಳಲ್ಲಿ ಶುಲ್ಕ ಸಂಗ್ರಹಕ್ಕೆ ವಿರೋಧ
Last Updated 10 ಡಿಸೆಂಬರ್ 2013, 8:05 IST
ಅಕ್ಷರ ಗಾತ್ರ

ಹಾಸನ: ಹಾಸನ – ಬೆಂಗಳೂರು ಹೆದ್ದಾರಿ ಚತುಷ್ಪಥ ಆದ ಬಳಿಕ ಹಾಸನದಿಂದ ಕಾರಿನಲ್ಲಿ ಹೊರಟರೆ ಮೂರೂವರೆ ಗಂಟೆಯೊಳಗೆ ಬೆಂಗಳೂರು ಸೇರಲು ಸಾಧ್ಯವಾಗುತ್ತಿದೆ. ಆದರೆ, ಈ ಅಭಿವೃದ್ಧಿಗೆ ಜಿಲ್ಲೆಯ ಜನರು ತೆರುತ್ತಿರುವ ಬೆಲೆ ಮಾತ್ರ ಅತ್ಯಂತ ದುಬಾರಿಯಾದುದು.

ರಸ್ತೆ ಚೆನ್ನಾಗಿರುವುದರಿಂದ ಗಂಟೆಗೆ 120ರಿಂದ 140 ಕಿ.ಮೀ. ವೇಗದಲ್ಲಿ ವಾಹನಗಳು ಓಡುತ್ತವೆ. ಅನೇಕ ಹಳ್ಳಿಗಳಲ್ಲಿ ಅಂಡರ್‌ಪಾಸ್‌, ಸೇವಾ ರಸ್ತೆ (ಸರ್ವಿಸ್‌ ರಸ್ತೆ) ಇಲ್ಲದೆ ಈ ಹೆದ್ದಾರಿಯಲ್ಲಿ ವಾರಕ್ಕೆ ಸರಾಸರಿ ಒಬ್ಬರಂತೆ ಸಾಯುತ್ತಿದ್ದಾರೆ. ಶಾಂತಿಗ್ರಾಮ ಠಾಣೆ ಹಾಗೂ ಚನ್ನರಾಯಪಟ್ಟಣ ವೃತ್ತ ವ್ಯಾಪ್ತಿಯಲ್ಲಿ 2013ನೇ ಸಾಲಿನಲ್ಲಿ ಹಲವು ಅಪಘಾತ ಸಂಭವಿಸಿ, 43ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ.

ಇದರೊಂದಿಗೆ ಹಾಸನದಿಂದ ಹಿರೀಸಾವೆವರೆಗಿನ 60 ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಟೋಲ್‌ಗೇಟ್‌­ಗಳು ಬರುತ್ತವೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿದ್ದರೂ, ಎರಡೂ ಕಡೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ತೀವ್ರ ವಿರೋಧ ಬಂದಿದ್ದು, ಈಗಾಗಲೇ ಒಂದೆರಡು ಪ್ರತಿಭಟನೆಗಳು ನಡೆದಿವೆ. ಶಾಂತಿಗ್ರಾಮ ಸುತ್ತಮುತ್ತಲಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಇನ್ನೊಂದು ಸುತ್ತಿನ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಶಾಂತಿಗ್ರಾಮ ಸಮೀಪದ ದೇವಿ ಹಳ್ಳಿಯಲ್ಲಿ ಟೋಲ್‌ ಸಂಗ್ರಹಕ್ಕೆ ಭಾರಿ ವಿರೋಧ ಬರುತ್ತಿದೆ. ಇಲ್ಲಿ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ಕೆಲವು ಮಾಲೀಕರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಹೋಬಳಿ ಕೇಂದ್ರ ಶಾಂತಿಗ್ರಾಮದಲ್ಲಿ ಒಂದು ಅಂಡರ್‌ಪಾಸ್‌ ಆಗಲಿ, ಸರ್ವಿಸ್‌ ರಸ್ತೆಯಾಗಲಿ ನಿರ್ಮಿಸದೆ ಶುಲ್ಕ ಸಂಗ್ರಹ ಆರಂಭವಾಗಿದೆ. ‘ನಮ್ಮ ಭೂಮಿಗೆ ಇನ್ನೂ ಹಣ ಕೊಟ್ಟಿಲ್ಲ. ಆದರೆ, ಅವರು ಹಣ ಸಂಪಾದನೆ ಆರಂಭಿಸಿದ್ದಾರೆ’ ಎಂದು ರೈತರು ನೊಂದು ನುಡಿಯುತ್ತಿದ್ದಾರೆ.

11 ತಿಂಗಳಲ್ಲಿ 27 ಸಾವು!
ಶಾಂತಿಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಹೆದ್ದಾರಿಯಲ್ಲಿ 2013ರ ಜನವರಿಯಿಂದ ಈಚೆಗೆ ಇಲ್ಲಿ 37 ಅಪಘಾತಗಳು ಸಂಭವಿಸಿ 27 ಮಂದಿ ಸತ್ತಿದ್ದಾರೆ. ಅಪಘಾತಗಳು ಇಲ್ಲಿ ಸಾಮಾನ್ಯ, ಹೆದ್ದಾರಿ ಆದ ಬಳಿಕ ಅಪಘಾತದಲ್ಲಿ ಗಾಯಗೊಳ್ಳುವವರ ಸಂಖ್ಯೆ ಕಡಿಮೆಯಾಗಿ, ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಾಂತಿಗ್ರಾಮ ಠಾಣೆಯ ಪೊಲೀಸರು ಹೇಳುತ್ತಾರೆ.

ಚನ್ನರಾಯಪಟ್ಟಣ ವೃತ್ತ ವ್ಯಾಪ್ತಿಯಿಡೀ ಅಪಘಾತ ವಲಯವಾಗಿದ್ದು, ಕಳೆದ ಆರು ತಿಂಗಳಲ್ಲಿ ಇಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಿಗ್ರಾಮ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪಘಾತಗಳು ಹಾಗೂ ಕಾನೂನು ಸುವ್ಯವಸ್ಥೆಗೆ ಆಗುತ್ತಿರುವ ಸಮಸ್ಯೆಗಳನ್ನು ಮನಗಂಡ ಪೊಲೀಸರು ಈಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ರವಾನಿಸಿ, ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು  ಟೋಲ್‌ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಚನ್ನರಾಯಪಟ್ಟಣ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಹ ಇಂಥ ಪತ್ರ ರವಾನಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದಲೂ ಒಂದೆರಡು ಪತ್ರಗಳು ಹೋಗಿವೆ.

ಶಾಂತಿಗ್ರಾಮದಲ್ಲಿ ಟೋಲ್‌ ಸಂಗ್ರಹ ಆರಂಭಿಸಿದಾಗ ಅಲ್ಲಿನ ಗ್ರಾಮ ಪಂಚಾಯಿತಿಯವರು ಇದರ ವಿರುದ್ಧ ಠರಾವು ಅಂಗೀಕರಿಸಿ, ಟೋಲ್‌ ನೀಡದಂತೆ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿದ್ದರು. ಕರಪತ್ರ ಮುದ್ರಿಸಿ ಸ್ಥಳೀಯರಿಗೆ ವಿತರಿಸಿದ್ದರು. ಆದರೆ, ಟೋಲ್‌ ಸಂಗ್ರಹಣೆ ನಿಂತಿಲ್ಲ. ಈಗ ನಾಲ್ಕಾರು ಗ್ರಾಮದವರು ಸೇರಿ ಇನ್ನೊಂದು ಪ್ರತಿಭಟನೆಯ ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT