ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಕಬ್ಬು ಬೆಳೆಗಾರರ ದಿಢೀರ್ ಪ್ರತಿಭಟನೆ

Last Updated 15 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಜಿಲ್ಲಾಧಿಕಾರಿಗಳ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಇಲ್ಲಿಗೆ ಸಮೀಪದ ವರದಾಪುರ ಗ್ರಾಮದ ರೈತರು ಭಾನುವಾರ ದಿಢೀರ್ ರಸ್ತೆ ತಡೆ ನಡೆಸಿದರು. ಈ ಭಾಗದಲ್ಲಿ ಬೆಳೆದ ಕಬ್ಬನ್ನು ಹೊರ ಜಿಲ್ಲೆಗೆ ಹೋಗಲು ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಇಟ್ಟುಕೊಂಡು ಪಟ್ಟು ಹಿಡಿದಿದ್ದನ್ನು ರೈತರು ವಿರೋಧಿಸಿದರು.

ಹೊಸಪೇಟೆಯ ಐಎಸ್‌ಆರ್ ಸಕ್ಕರೆ ಕಾರ್ಖಾನೆಯವರು ಸುಪ್ರೀಂ ಕೋರ್ಟ್ ಆದೇಶ ತಂದು ಶನಿವಾರ ಜಿಲ್ಲಾಡಳಿತದ ಮೂಲಕ ಕಬ್ಬು ಬೆಳೆಗಾರರಿಗೆ ಈ ಭಾಗದಲ್ಲಿ ಬೆಳೆದ ಕಬ್ಬನ್ನು ಹೊರ ಜಿಲ್ಲೆಗೆ ಹೋಗಲು ಬಿಡುವದಿಲ್ಲ ಎಂದು ಕಬ್ಬು ಸಾಗಿಸುವ ಲಾರಿಗಳನ್ನು ತಡೆ ಹಿಡಿದು ವಿನಾಕಾರಣ ರೈತರಿಗೆ ಕಿರುಕುಳ ನೀಡುತ್ತಿದ್ದಾರೆಂದು ವರದಾಪುರ ರೈತರು ಆರೋಪಿಸಿದರು.

ಜಿಲ್ಲಾಧಿಕಾರಿ ವಿರುದ್ಧ, ತಾಲ್ಲೂಕು ಆಡಳಿತ ಹಾಗೂ ಐಎಸ್‌ಆರ್ ಕಾರ್ಖಾನೆ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು ಸುಮಾರು ಎರಡು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ಜಿಲ್ಲಾಧಿಕಾರಿಗಳು ಇಲ್ಲಿನ ರೈತರ ಬಗ್ಗೆ ಕಾಳಜಿ ವಹಿಸದೆ ಹಾಗೂ ಇಲ್ಲಿನ ವಾಸ್ತವಾಂಶ ತಿಳಿಯದೆ ಐಎಸ್‌ಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವಂತೆ ತಾಲ್ಲೂಕು ಆಡಳಿತದ ಮೂಲಕ ಕಬ್ಬಿನ ಲಾರಿಗಳನ್ನು ತಡೆಯುತ್ತಿದ್ದಾರೆಂದು ದೂರಿದರು.

`ಕಬ್ಬನ್ನು ಹೊರ ಜಿಲ್ಲೆಗೆ ಹೋಗಲು ಬಿಡುವದಿಲ್ಲ ಎನ್ನುತ್ತಿದ್ದಾರೆ. ಆದರೆ ಐಎಸ್‌ಆರ್ ಕಾರ್ಖಾನೆ ಇನ್ನೂ ಪ್ರಾರಂಭವಾಗಿಲ್ಲ. ಅವರು ಕಬ್ಬು ಬೆಳೆದ ರೈತರಿಗೆ ಸರಿಯಾಗಿ ಹಣ ಸಂದಾಯ ಮಾಡದೆ ವರ್ಷಗಟ್ಟಲೆ ದೂಡುತ್ತಾರೆ~ ಎಂದು ರೈತರು ದೂರಿದರು.ಈ ಭಾಗದ ಕಬ್ಬು ಬೆಳೆಗಾರರು ಸುಮಾರು 9 ಕೋಟಿ ರೂಪಾಯಿ ಇನ್ನು ಬಾಕಿ ಹಾಗಿಯೇ ಇದೆ. ರೈತರಿಗೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

`ನಮಗೆ ಹೊರ ಜಿಲ್ಲೆಗೆ ಸಾಗಿಸಿದರೆ ಸಮಯಕ್ಕೆ ಸರಿಯಾಗಿ ಹಣ ಸಂದಾಯ ವಾಗುತ್ತದೆ. ಈ ಬಾರಿ ಬರಗಾಲ ದಿಂದಾಗಿ ಕಬ್ಬು ಒಣಗುತ್ತಿದ್ದು, ಜತೆಗೆ ಸರಿಯಾಗಿ ವಿದ್ಯುತ್ ಇಲ್ಲದೆ, ಪಂಪ್‌ಸೆಟ್‌ಗಳ ಅಂತರ್ಜಲ ನೀರು ಸಹ ಬರಿದಾಗುತ್ತಿದೆ~ ಎಂದರು. ಕೂಡಲೆ ಕಬ್ಬು ಬೆಳೆಗಾರರು ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಕೆ. ಜಯಪ್ರಕಾಶ್ ಪ್ರತಿಭಟನಾ ನಿರತ ರೈತರ ಮನವೊಲಿಸಿದ ನಂತರ ಹೆದ್ದಾರಿ ತಡೆಯನ್ನು ನಿಲ್ಲಿಸಿ ಪ್ರತಿಭಟನೆಯನ್ನು ಕೈಬಿಟ್ಟರು. ರಾಜ್ಯ ಹೆದ್ದಾರಿ ತಡೆ ಯಿಂದಾಗಿ ಎರಡು ಕಡೆಗಳಲ್ಲಿ ಸುಮಾರು ಐದಾರು ಕಿ.ಮೀ.ಗಳ ತನಕ ನೂರಾರು ಬಸ್, ಲಾರಿಗಳು ಹಾಗೂ ಇತರೆ ವಾಹನಗಳು ಸಾಲುಗಟ್ಟಿದ್ದವು.

ರೈತ ಮುಖಂಡರಾದ ಕೆ.ಮರಿಬಸಪ್ಪ, ಕೆ.ಬಸವರಾಜ, ಜಿ.ಮಾದೇಗೌಡ, ಟಿ.ರಾಮಪ್ಪ, ಎಸ್.ಎಸ್.ಹುಲುಗಪ್ಪ, ಕೆ.ನಾಗಪ್ಪ, ಎ. ನಾಗರಾಜ, ಎಂ.ಜೆ. ಯಮುನಪ್ಪ, ಸೂರ್ಯಬಾಬು, ರೋಗಾಣಿ ಹುಲುಗಪ್ಪ ಹಾಗೂ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT