ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾರರ ಭಾವರೇಖೆ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ನನ್ನ ಸಂಯೋಜನೆಯಲ್ಲಿ ಮಾನವಾಕಾರ, ಮಾನವೀಯತೆ, ಸಂತಸ ಮತ್ತು ದುಃಖವು ಪ್ರಮುಖ ಸ್ಥಾನವನ್ನು ಅಲಂಕರಿಸಿವೆ. ನಾನು ಬಹುವಾಗಿ ದೀನ-ದಲಿತರು, ಅವಕಾಶ ಹೀನರನ್ನು ನನ್ನ ಕೃತಿಗಳ ವಸ್ತುವಿಷಯ ಆಗಿಸಿದ್ದೇನೆ. ಮಾನವತೆಯ ಬಗ್ಗೆ ನನಗೆ ಸಹಜವಾಗಿ ಇರುವ ಪ್ರೀತಿ ಮತ್ತು ನಿರ್ದಿಷ್ಟವಾಗಿ ಶ್ರಮಿಕ ವರ್ಗದ ಬಗೆಗಿನ ಮಮಕಾರವೇ ಇದಕ್ಕೆ ಕಾರಣ~.
ಕೆ.ಕೆ.ಹೆಬ್ಬಾರ, (`ಲಾಸ್ಟ್ ಗ್ಲಿಂಪ್ಸ್~ ಎಂಬ ಟಿಪ್ಪಣಿಯಲ್ಲಿ)

ಇದು ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಕೆ.ಕೆ.ಹೆಬ್ಬಾರರ ಜನ್ಮಶತಮಾನೋತ್ಸವ ವರ್ಷ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವು ತಿಂಗಳ ಹಿಂದೆ ಈ ಜೀವನ್ಮುಖಿ ಕಲಾವಿದನ ಶತಮಾನೋತ್ಸವಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಅರಮನೆ ರಸ್ತೆಯ `ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್~ (ಎನ್‌ಜಿಎಂಎ) ಅವರ ಹಲವಾರು ಅಪರೂಪದ ಕಲಾಕೃತಿಗಳ ಪ್ರದರ್ಶನದ ಮೂಲಕ ಯೋಗ್ಯ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಆಗಸ್ಟ್ 21ರಂದು ಇದು ಆರಂಭವಾಗಿದ್ದು ಅಕ್ಟೋಬರ್ 20ರ ವರೆಗೆ ನಡೆಯಲಿದೆ.

ಹೆಬ್ಬಾರರ ಮಗಳು ರೇಖಾ ರಾವ್ ಮತ್ತು ಚಿತ್ರ ಕಲಾವಿದೆ ರಜನಿ ಪ್ರಸನ್ನ ಅವರು ಕ್ಯೂರೇಟರ್ ಆಗಿರುವ ಈ ಪ್ರದರ್ಶನವು ಎನ್‌ಜಿಎಂಎ ಆವರಣದ ಪೂರ್ತಿ ಹೆಬ್ಬಾರರ ಭಾವರೇಖೆಗಳನ್ನು ಸಾದ್ಯಂತವಾಗಿ ವಿವರಿಸುತ್ತದೆ. ಜೊತೆಗೆ ಸುದಿಪ್ತೊ ಬೋಸ್ ಅವರ ನಿರ್ದೇಶನದಲ್ಲಿ `ಪ್ಯಾಲೆಟ್ ಟು ದಿ ಹ್ಯೂಮನ್ ಹಾರ್ಟ್~ ಎಂಬ ಶೀರ್ಷಿಕೆಯ 40 ನಿಮಿಷಗಳ ಸಾಕ್ಷ್ಯಚಿತ್ರ ಹೆಬ್ಬಾರರ ಜೀವನ-ಕಲೆಯ ವಿವಿಧ ಮಗ್ಗಲುಗಳನ್ನು ಅನಾವರಣಗೊಳಿಸುತ್ತದೆ.

1938ರಲ್ಲಿ ಮುಂಬೈನ ಸರ್ ಜೆ.ಜೆ. ಕಲಾ ಶಾಲೆಯಿಂದ ಡಿಪ್ಲೊಮಾ ಪದವಿ ಪಡೆದ ಬಳಿಕ ಅವರು ನಿಧನರಾಗುವ ವರೆಗೆ, ಅಂದರೆ 1996ರ ವರೆಗೂ ಸುದೀರ್ಘ ಆರು ದಶಕಗಳ ವರೆಗಿನ ಅವರ 180ಕ್ಕೂ ಅಧಿಕ ಕಲಾಕೃತಿಗಳ ಪ್ರದರ್ಶನ ಇಲ್ಲಿದೆ.

ಹಲವಾರು ಮಾಧ್ಯಮಗಳಲ್ಲಿ ಕೈಯಾಡಿಸಿರುವ ಹೆಬ್ಬಾರರ ಕೈಗಳ ಕುಂಚದ ಮೋಡಿಯನ್ನೂ ನೋಡಿಯೇ ಅನುಭವಿಸಬೇಕು. ಈ ಅಪರೂಪದ ಚಿತ್ರಗಳನ್ನು ಕೆ.ಕೆ.ಹೆಬ್ಬಾರ ಕಲಾ ಪ್ರತಿಷ್ಠಾನ, ನವದೆಹಲಿಯ ಎನ್‌ಜಿಎಂಎ, ಜೆ.ಜೆ.ಕಲಾ ಶಾಲೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಲಾ ಗ್ಯಾಲರಿಗಳು ಮತ್ತು ಖಾಸಗಿ ಸಂಗ್ರಹಗಳಿಂದ ಎರವಲು ಪಡೆದು ಪ್ರದರ್ಶನಕ್ಕಿಡಲಾಗಿದೆ.

ರಷ್ಯ ಮೂಲಕ ಖ್ಯಾತ ಚಿತ್ರಕಾರ ರೋರಿಚ್ ಅವರಂತೆಯೇ ಹೆಬ್ಬಾರರೂ ನಿಸರ್ಗ ಚಿತ್ರಗಳು ಮತ್ತು ಭಾವಚಿತ್ರಗಳ ಬಗೆಗೆ ಅತೀವ ಹಂಬಲ ಬೆಳೆಸಿಕೊಂಡಿದ್ದರು. ಆದ್ದರಿಂದಲೇ ಯೂರೋಪ್ ಖಂಡದ ವಿವಿಧ ರುದ್ರರಮಣೀಯ ಕಾನನಗಳು, ಪಹಲ್‌ಗಾಂವ್, ಮಹಾಬಲೇಶ್ವರ, ಸಹ್ಯಾದ್ರಿ ಶ್ರೇಣಿಯಂಥ ಗಿರಿ ಶಿಖರಗಳನ್ನು ಕುಂಚಗಳಲ್ಲಿ, ರೇಖೆಗಳಲ್ಲಿ ಮೂಡಿಸಿದ್ದಾರೆ.

ತೈಲವರ್ಣ, ಜಲವರ್ಣ, ಆಯಿಲ್ ಆನ್ ಕ್ಯಾನ್ವಾಸ್, ಅಥೋಗ್ರಾಫ್, ಆಯಿಲ್ ಆನ್ ಹಾರ್ಡ್‌ಬೋರ್ಡ್, ಕಾಗದದ ಮೇಲೆ ಪೆನ್ಸಿಲ್ ಮಾಧ್ಯಮದಲ್ಲಿ ತಮ್ಮ ಚಿತ್ರಪ್ರಪಂಚವನ್ನು ಕಟ್ಟಿದ್ದಾರೆ.

ಭಾರತದ ಪ್ರಥಮ ಪ್ರಧಾನಿ ಪಂ.ಜವಹರಲಾಲ್ ನೆಹರು, ಇಂದಿರಾಗಾಂಧಿ, ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ, ಸಾಹಿತಿಗಳಾದ ಡಾ.ಶಿವರಾಮ ಕಾರಂತ, ಡಾ.ದ.ರಾ.ಬೇಂದ್ರೆ, ಸ್ವ ಭಾವಚಿತ್ರ, ಪತ್ನಿ ಸುಶೀಲ, ತಾಯಿಯ ಚಿತ್ರ ಮತ್ತು ಮಗಳಾದ ರೇಖಾ ರಾವ್ ಅವರ ಚಿತ್ರಗಳನ್ನು ರಚಿಸಿದ್ದಾರೆ.

ರೇಖೆಗಳಲ್ಲಿ ಶಿಲಪ್ಪದಿಗಾರಂ: ತಮಿಳು ಭಾಷೆಯ `ಶಿಲಪ್ಪದಿಗಾರಂ~ ಮೇರುಕೃತಿಯ ಭಾವಾನುವಾದವನ್ನು ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಲು ನಿರ್ಧರಿಸಿತು. ಅದಕ್ಕೆ ತಕ್ಕುದಾದ ರೇಖಾಚಿತ್ರಗಳನ್ನು ಬರೆದು ಕೊಡಲು ಹೆಬ್ಬಾರರನ್ನು ಪತ್ರಿಕೆ ಕೇಳಿಕೊಂಡಿತು. ಈ ಕೋರಿಕೆಯಂತೆ ಹೆಬ್ಬಾರರು ರಚಿಸಿದ 51 ಅಪರೂಪದ ರೇಖೆಗಳು ಶಿಲಪ್ಪದಿಗಾರಂ ಮಹಾಕಾವ್ಯದ ಸಾರವನ್ನು ಓದುಗರಿಗೆ ಕಟ್ಟಿಕೊಡುತ್ತವೆ.

ಜೊತೆಗೆ ಅವರು ಹಲವು ಗಣ್ಯರೊಂದಿಗೆ ಇರುವ ಛಾಯಾಚಿತ್ರಗಳು, ಚಿತ್ರಕಲೆಯ ಕುರಿತಾದ ಅವರ ನಿಲುವುಗಳನ್ನು, ಆಶಯಗಳನ್ನು ಚಿತ್ರಪಟಗಳ ಪಕ್ಕದಲ್ಲಿ ಅಳವಡಿಸಲಾದ ಕನ್ನಡ, ಇಂಗ್ಲಿಷ್ ಭಿತ್ತಿ ಫಲಕಗಳಲ್ಲಿ ಕಾಣಬಹುದು. ಅವರಿಗೆ ಪ್ರದಾನ ಮಾಡಲಾದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಇಲ್ಲಿ ಪ್ರದರ್ಶನಕ್ಕಿವೆ. ಸ್ಥಳ: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಮಾಣಿಕ್ಯವೇಲು ಮ್ಯಾನ್ಶನ್, ಅರಮನೆ ರಸ್ತೆ. ಬೆಳಿಗ್ಗೆ 10ರಿಂದ ಸಂಜೆ 5.15. ಪ್ರವೇಶ ಶುಲ್ಕ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT