ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಗೆ ಆಸ್ಪತ್ರೆ ಸ್ಥಿತಿಗತಿ ಪತ್ರಿಕೆ ನೋಡಿ ತಿಳಿಯಬೇಕಾ?!

ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಶಾಸಕ ಮಲ್ಲಿಕಾರ್ಜುನ್‌ ಗುಡುಗು
Last Updated 12 ಸೆಪ್ಟೆಂಬರ್ 2013, 4:13 IST
ಅಕ್ಷರ ಗಾತ್ರ

ದಾವಣಗೆರೆ: ‘ಅಲ್ರೀ... ನೀವು ಕಾರ್ಯಭಾರ ವಹಿಸಿಕೊಂಡು ಎರಡು ತಿಂಗಳಾಗಿದೆ... ಒಂದು ಬಾರಿನಾದ್ರೂ ನಮಗೆ ಆರೋಗ್ಯ ಇಲಾಖೆ ಸಮಸ್ಯೆ ತಿಳಿಸಿಲ್ಲ ಏಕೆ...? ನಾವ್‌ ಪೇಪರ್‌, ಟಿವಿ ನೋಡಿ ಹೆರಿಗೆ ವಾರ್ಡ್‌ (ಚಿಗಟೇರಿ) ಸ್ಥಿತಿಗಿತಿ ತಿಳ್ಕೋಬೇಕಾ...? ಅಲ್ಲಿ 50 ಗರ್ಭಿಣಿಯರು ಇದ್ದಾರೆ ಎಂದು ಕೇಳಿ ಅಚ್ಚರಿಯಾಯಿತು. ನೀವ್‌ ಏನ್‌ ಮಾಡ್ತಿದ್ದೀರಾ... ನನಗೆ ವರದಿ ಕೊಡಿ...?’

–ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

ಇದಕ್ಕೆ ದನಿಗೂಡಿಸಿದ ಹರಿಹರ ಶಾಸಕ ಎಚ್‌.ಎಸ್‌.ಶಿವಶಂಕರ್‌, ‘ಇದುವರೆಗೂ ನೀವು ಮುಖತೋರಿಸಿಲ್ಲ. ತಾಲ್ಲೂಕುಮಟ್ಟದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಹರಿಹರದ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳಗೆ ಹಾಲು ವಿತರಣೆ ಸ್ಥಗಿತಗೊಂಡು ಎರಡು ತಿಂಗಳಾಗಿವೆ. ಆ ಕುರಿತು ನಿಮಗೆ ಮಾಹಿತಿ ಇದೆಯಾ...? ಯಾಕೆ ಹಾಲು ವಿತರಣೆ ಸ್ಥಗಿತಗೊಂಡಿದೆ ಎಂಬುದರ ಬಗ್ಗೆನಾದ್ರೂ ಮಾಹಿತಿ ಕೊಡ್ತೀರಾ...? ಡೆಂಗೆ ನಿಯಂತ್ರಣದ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ...? ಹರಿಹರದಲ್ಲಿ ಮೊನ್ನೆ ಒಬ್ಬರು ಡೆಂಗೆಗೆ ಬಲಿಯಾಗಿದ್ದಾರೆ ಗೊತ್ತಾ? ಅಭಿವೃದ್ಧಿ ಸಲಹಾ ಸಮಿತಿ ರಚಿಸಿಲ್ಲ. ಸಭೆ ಕರೆದಿಲ್ಲ... ಎಂದು ಪ್ರಶ್ನೆಗಳ ಸುರಿಮಳೆಗರೆದರು.

ಸ್ಪಷ್ಟ ಮಾಹಿತಿಯ ಕೊರತೆಯಿದ್ದ ಕಾರಣ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಡಿ.ವಿಶ್ವನಾಥ್‌ ಸಣ್ಣದನಿಯಲ್ಲಿ ಮಾತನಾಡಿ,‘ಜಿಲ್ಲೆಯಲ್ಲಿ ಇದುವರೆಗೆ 5 ಮಂದಿ ಡೆಂಗೆಗೆ ಬಲಿಯಾಗಿದ್ದಾರೆ. ಶಂಕಿತರ ಪ್ರಮಾಣ ಹೆಚ್ಚಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹರಿಹರ ತಾಲ್ಲೂಕಿನ ಆಸ್ಪತ್ರೆಗೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದು ವರದಿ ಮಾಡುವುದಾಗಿ ಪ್ರತಿಕ್ರಿಯೆ ನೀಡಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷರು ಮಾತನಾಡಿ, ‘ಹೆರಿಗೆ ವಾರ್ಡ್‌ ಅನ್ನು ಮೂರು ವರ್ಷಗಳ ಹಿಂದೆ ದುರಸ್ತಿ ಮಾಡಲಾಗಿದೆ. ಆದರೂ, ಛಾವಣಿ ಸೋರುತ್ತಿದೆ. ಕೂಡಲೇ ಗರ್ಭಿಣಿಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಬೆಳೆಹಾನಿ ಆದ ವರದಿಯನ್ನು ಕೃಷಿ ಇಲಾಖೆ ಸರ್ಕಾರಕ್ಕೆ ಕಳುಹಿಸಿಲ್ಲ. ಇದರಿಂದಾಗಿ ಜಿಲ್ಲೆಯ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಕೃಷಿ ಇಲಾಖೆಗೆ ಜವಾಬ್ದಾರಿ ಇಲ್ಲವೇ ಎಂದು ಶಾಸಕ ವಡ್ನಾಳ್‌ ರಾಜಣ್ಣ, ಶಿವಶಂಕರ್‌, ಶಿವಮೂರ್ತಿನಾಯ್ಕ ಜಂಟಿ ಕೃಷಿ ನಿರ್ದೇಶಕರನ್ನು ಅವರು ಪ್ರಶ್ನಿಸಿದರು.

ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ.ಗೊಲ್ಲರ್‌ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 490 ಮೀಲಿ ಮೀಟರ್ ಮಳೆಯಾಗಿದೆ. ಅತಿವೃಷ್ಟಿಯಿಂದಾಗಿ ಜಿಲ್ಲೆಯ 5 ತಾಲ್ಲೂಕುಗಳಲ್ಲಿನ ಬೆಳೆಗೆ ಕೀಟಬಾಧೆ ಕಾಡಿದೆ. ಸವಳಂಗದಂತಹ ಕಡೆ ತಗ್ಗು ಪ್ರದೇಶ ರೈತರ ಭೂಮಿಗೆ ಮಳೆನೀರು ನುಗ್ಗಿ ಬೆಳೆಹಾನಿಯಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಹರಪನಹಳ್ಳಿ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ‘ಮೆಕ್ಕೆಜೋಳ ಉಳಿಸಿ ಆಂದೋಲನ’ ಯೋಜನೆಯಡಿ 24 ಸಾವಿರ ಎಕರೆಯಲ್ಲಿ ಉತ್ತಮ ಇಳುವರಿ ಬಂದಿದೆ. ಮುಂಗಾರು ಹಂಗಾಮಿನಲ್ಲಿ 1ಲಕ್ಷ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗಿದೆ. ಹಿಂಗಾರು ಹಂಗಾಮಿಗೆ ಬೇಕಾಗುವಷ್ಟು ಬೀಜ–ಗೊಬ್ಬರ ಸಂಗ್ರಹಣೆ ಮತ್ತು ವಿತರಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು.

ಟೆಂಡರ್‌ಗೆ ಹಿಂದಿನ ಆದೇಶ ಇರಲಿ...:  ಜಿಲ್ಲಾ ಪಂಚಾಯ್ತಿಯಲ್ಲಿ ಹಮ್ಮಿಕೊಳ್ಳುವ ` 1ಲಕ್ಷದ ಮೇಲ್ಪಟ್ಟ ಕಾಮಗಾರಿಗಳನ್ನು ಟೆಂಡರ್‌ ಕರೆಯುವಂತೆ ಸರ್ಕಾರ ಆದೇಶ ಮಾಡಿದೆ. ಇದರಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಹೀಗಾದರೆ, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ವಿಳಂಬವಾಗುತ್ತದೆ. ಹಿಂದಿನ ಆದೇಶದಂತೆ ಕನಿಷ್ಠ ` 5ಲಕ್ಷದ ಮೇಲ್ಪಟ್ಟ ಕಾಮಗಾರಿಗಳಿಗೆ ಟೆಂಡರ್‌ ಕರೆದರೆ ಸೂಕ್ತ. ಈ ಕುರಿತು ಸಚಿವರು ಸರ್ಕಾರದ ಮೇಲೆ ಒತ್ತಡ ತಂದು ಹಿಂದಿನ ಆದೇಶ ಪಾಲನೆಯಾಗುವಂತೆ ಮಾಡಬೇಕು ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌. ನಾಗರಾಜ್ ಮನವಿ ಮಾಡಿದರು.

ಅವರ ಮನವಿ ಆಲಿಸಿದ ಸಚಿವ ಶಾಮನೂರು ಶಿವಶಂಕರಪ್ಪ, ‘ ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದೇನೆ. ಸರ್ಕಾರದಮಟ್ಟದಲ್ಲಿ ನಾನೂ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರೂ ಒತ್ತಡ ಹೇರುವುದಾಗಿ’ ಹೇಳಿದರು.

22ಕೆರೆಗೆ ನೀರು ಯಾವಾಗ?: 22 ಕೆರೆ ನೀರಾವರಿ ಯೋಜನೆಗೆ ಹಣದ ಕೊರತೆ ಇದೆಯೇ? ಹಾಗಾದರೆ ಏಕೆ ತಡ? ಈ ಯೋಜನೆಗೆ ಮಾಯಕೊಂಡ ಕ್ಷೇತ್ರದ 10 ಕೆರೆಗಳನ್ನು ಒಳಪಡಿಸಬೇಕು ಎಂದು ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ ನೀರಾವರಿ ಅಧಿಕಾರಿಗೆ ವಿವರ ನೀಡುವಂತೆ ಕೇಳಿದರು.

ಹಣದ ಕೊರತೆ ಇಲ್ಲ. ಜಾಕ್‌ವೆಲ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ. ಅಕ್ಟೋಬರ್‌ ಅಂತ್ಯದಲ್ಲಿ 22 ಕೆರೆಗಳಿಗೆ ನೀರು ಹರಿಸಲಾಗುವುದು. ಈ ಯೋಜನೆ ಅಂತಿಮ ರೂಪುರೇಷೆ ಪಡೆದುಕೊಂಡಿರುವ ಕಾರಣ, ಯಾವುದೇ ಕೆರೆಗಳನ್ನು ಈ ಯೊಜನೆಗೆ ಒಳಪಡಿಸಲು ಬರುವುದಿಲ್ಲ ಎಂದು ನೀರಾವರಿ ಸಹಾಯಕ ಎಂಜಿನಿಯರ್‌ ಉತ್ತರಿಸಿದರು.

ಉತ್ತಮ ರಸ್ತೆಗಳ ಕೊರತೆ: ಜಿಲ್ಲೆಯಲ್ಲಿ ಉತ್ತಮ ರಸ್ತೆಗಳ ಕೊರತೆ ಕಾಡುತ್ತಿದೆ. ಹರಿಹರ ತಾಲ್ಲೂಕಿನ ಮಲೇಬೆನ್ನೂರು– ನಂದಿಗುಡಿ, ಎಕ್ಕೆಗೊಂದಿ– ಮಲೇಬೆನ್ನೂರು, ಎಕ್ಕೆಗೊಂದಿ– ಕಡರನಾಯಕನಹಳ್ಳಿ ಸಂಪರ್ಕ ರಸ್ತೆಗಳು ಜನ ಸಂಚರಿಸಲು ಆಗದಷ್ಟು ಹಾಳಾಗಿವೆ. ಇನ್ನು ದಾವಣಗೆರೆ–ಹರಿಹರ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಶಾಕಸ ಎಚ್.ಎಸ್‌. ಶಿವಶಂಕರ್ ಪ್ರಶ್ನಿಸಿದರು.

ವಿವರ ನೀಡಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್, ‘ ಒಟ್ಟು ನಾಲ್ಕು ಹಂತದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರ ಅನುಮೋದನೆ ನೀಡಬೇಕಿದೆ. ಕಾಂಕ್ರೀಟ್‌ ರಸ್ತೆಯಾದರೆ ಒಟ್ಟು ` 58 ಕೋಟಿ ಅಂದಾಜು ವೆಚ್ಚವಾಗಲಿದೆ’ ಎಂದು ವಿವರಿಸಿದರು.

ಶೀಘ್ರ ಪಡಿತರ ಅರ್ಜಿ ವಿಲೇವಾರಿ: ಜಿಲ್ಲೆಯಲ್ಲಿ 75 ಸಾವಿರ ಪಡಿತರ ಅರ್ಜಿಗಳು ಬಂದಿವೆ. 40 ಸಾವಿರ ಗ್ರಾಮಾಂತರ ಪ್ರದೇಶಗಳಿಂದ ಸಲ್ಲಿಕೆಯಾಗಿದ್ದರೆ; 35 ಸಾವಿರ ಅರ್ಜಿಗಳು ಪಟ್ಟಣ ಪ್ರದೇಶಲ್ಲಿ ಸಲ್ಲಿಕೆಯಾಗಿವೆ. ಕೂಡಲೇ ಅವುಗಳ ವಿಲೇವಾರಿಗೆ ಕ್ರಮವಹಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ 794 ನ್ಯಾಯಬೆಲೆ ಅಂಗಡಿಗಳಿವೆ. ಹೆಚ್ಚುವರಿ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಜಿಲ್ಲಾ ನಾಗರಿಕ ಮತ್ತು ಆಹಾರ ಪೂರೈಕೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಸಿದ್ರಾಮಣ್ಣ, ಜಿಲ್ಲಾ ಪಂಚಾಯ್ತಿ ನ್ಯಾಯ ಸಮಿತಿ ಅಧ್ಯಕ್ಷ ಸಿ.ಎನ್‌. ವೀರಭದ್ರಪ್ಪ, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಮ್ಮ ಉಮೇಶ್‌ನಾಯ್ಕ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಎಂ.ಟಿ. ಶಶಿಧರ್‌ ಸಭೆಯಲ್ಲಿ ಭಾಗವಹಿಸಿದ್ದರು.

ಜಿ.ಪಂ. ಸಭೆಯಲ್ಲಿ ಕೇಳಿದ್ದು...
*ಶಾಲಾ ಬಿಸಿಯೂಟವನ್ನು ಶಿಕ್ಷಕರ ತಲೆಮೇಲಿಂದ ಕೆಳಗಿಳಿಸಿ ಮುಕ್ತ ಮನಸ್ಸಿನಿಂದ ಪಾಠ ಮಾಡುವಂತಹ ವಾತಾವರಣ ನಿರ್ಮಿಸಬೇಕು. ಅಕ್ಷರ ದಾಸೋಹ ಯೋಜನೆಯನ್ನು ಖಾಸಗಿ ಏಜೆನ್ಸಿಯವರಿಗೆ ವಹಿಸಬೇಕಿದೆ. ಬೆಂಗಳೂರಿನಲ್ಲಿ ಇಸ್ಕಾನ್‌ ಈ ಜವಾಬ್ದಾರಿ ಹೊತ್ತಿದೆ. ಗ್ರಾಮೀಣಮಟ್ಟದಲ್ಲೂ ಈ ವ್ಯವಸ್ಥೆಯಾದರೆ ಗುಣಮಟ್ಟದ ಬೋಧನೆ ಮಕ್ಕಳಿಗೆ ನೀಡಲು ಸಾಧ್ಯ.
–ಎಚ್‌.ಎಸ್‌. ಶಿವಶಂಕರ್‌, ಶಾಸಕ.

*ಶಿಕ್ಷಣ ಕಡ್ಡಾಯ ಹಕ್ಕು (ಆರ್‌ಟಿಇ) ಯೋಜನೆ ಅಡಿ ಜಿಲ್ಲೆಯಲ್ಲಿ 2,383 ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಹಿಂದುಳಿದ ಮಕ್ಕಳಿಗೆ ಮೀಸಲಾತಿ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ.
–ಡಿ.ಕೆ.ಶಿವಕುಮಾರ್, ಡಿಡಿಪಿಐ, ಶಿಕ್ಷಣ ಇಲಾಖೆ.

*ಜಿಲ್ಲೆಯಲ್ಲಿ 197 ಹೆಕ್ಟೇರ್‌ ಪ್ರದೇಶಲ್ಲಿ ಒಟ್ಟು 2.33 ಲಕ್ಷ ಸಸಿ ನೆಡಲಾಗಿದೆ. 12 ಲಕ್ಷ ರೈತರಿಗೆ ಸಸಿ ವಿತರಿಸಲಾಗಿದೆ.
   – ಸಾಮಾಜಿಕ ಅರಣ್ಯಾಧಿಕಾರಿ, ದಾವಣಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT