ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಮಾತ್ರ ಹೊಸೂರು... ಆದರೆ...!

Last Updated 11 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಕಂಪ್ಲಿ: ಕಳೆದ ಎರಡು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಕುಗ್ರಾಮದಲ್ಲಿ ಬಹುತೇಕ ಗುಡಿಸಲುಗಳೇ ಕಂಡುಬರುತ್ತವೆ. ಇದರ ಜೊತೆಗೆ ಏಳೆಂಟು ವರ್ಷಗಳ ಹಿಂದೆ ಮಂಜೂರಾದ ಅಲ್ಲೊಂದು ಇಲ್ಲೊಂದು ಆಶ್ರಯ ಮನೆಗಳು ಇವೆಯಾದರೂ ದುಃಸ್ಥಿತಿ ತಲುಪಿವೆ. ರಸ್ತೆ, ಚರಂಡಿ, ಮಹಿಳಾ ಶೌಚಾಲಯ ಇಲ್ಲಿ ಕನಸಿನ ಮಾತು.
ಕಳೆದ ನಾಲ್ಕು ವರ್ಷದಿಂದ ಸರ್ಕಾರದ ಒಂದು ಮನೆಯೂ ಮಂಜೂರು ಆಗಿಲ್ಲದ ಕಾರಣ ಅನೇಕ ಬಡ ಕುಟುಂಬಗಳು ಮುರುಕು ಗುಡಿಸಲುಗಳಲ್ಲಿಯೇ ಕಾಲ ತಳ್ಳುತ್ತಿವೆ. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಇಲ್ಲಿ ಇನ್ನೂ ಅಕ್ಷರಶಃ ಕನಸು ಎನ್ನಬಹುದು.  

 ಇಷ್ಟೆಲ್ಲ ಪೀಠಿಕೆ ಹಾಕಿರುವ ಕುಗ್ರಾಮ ಇರುವುದು ಕಂಪ್ಲಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ. ಇದರ ಹೆಸರು ಹೊನ್ನಳ್ಳಿ ಹೊಸೂರು. ಇದು ಹೊಸಪೇಟೆ ತಾಲ್ಲೂಕು ಕೇಂದ್ರದಿಂದ ಸುಮಾರು 50ಕಿ.ಮೀ ದೂರದಲ್ಲಿದ್ದು, ಕಟ್ಟ ಕಡೆಯ ಕುಗ್ರಾಮವೂ ಆಗಿರುತ್ತದೆ.

 ನಾಲ್ಕು ವರ್ಷದಿಂದ ಕುಡಿಯುವ ನೀರಿನ ಮೇಲ್ತೊಟ್ಟಿ ದುರಸ್ತಿ ಇಲ್ಲದೆ ಹಾಳಾಗಿದೆ. ಈ ಕಾರಣದಿಂದ ವಿದ್ಯುತ್ ಇದ್ದಾಗ ಗ್ರಾಮಕ್ಕೆ ನೇರವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಸಾರ್ವಜನಿಕರು ಅಗತ್ಯ ಇರುವಷ್ಟು ನೀರು ಶೇಖರಿಸಿದ ನಂತರ ಬೇಕಾಬಿಟ್ಟಿಯಾಗಿ ಜೀವಜಲ ಹರಿಯುತ್ತಿದ್ದರೂ ಮುಂದಿನ ಪೀಳಿಗೆಗೆ ಉಳಿಸಬೇಕೆನ್ನುವ ಕಳಕಳಿ ಇಲ್ಲಿ ಕಂಡು ಬರುವುದಿಲ್ಲ.

 ಕಳೆದ 20ವರ್ಷದಿಂದ ಮಹಿಳೆಯರ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ತುಂಬಾ ಎಸನ(ವ್ಯಸನ) ಆಗಿಬಿಟ್ಟೈತ್ರಿ ಎಂದು ಫಾತಿಮಾ ಹೇಳಿದರೆ, 78ವರ್ಷದ ವಯೋವೃದ್ದೆ ಹಂಪಮ್ಮ ದಡ್ಡಿಗೆ ಹೋಗೊದು ಬಹಳ ಫಜೀತಿ ಆಗಿದೆ ಎಂದು ಮನನೊಂದು ತಿಳಿಸುತ್ತಾರೆ.

ಈ ಕುಗ್ರಾಮದ ಬಹುತೇಕ ಮಹಿಳೆಯರು ಹೊರವಲಯದ ದರೋಜಿ-ಮಾವಿನಹಳ್ಳಿ ರಸ್ತೆ ಶೌಚಕ್ಕೆ ಆಶ್ರಯಿಸಿದ್ದು, ಅದು ರಾತ್ರಿ ಇಲ್ಲವೇ ಬೆಳಕು ಹರಿಯುವುದರ ಒಳಗೆ ಈ ನಿತ್ಯ ಕರ್ಮವನ್ನು ಮುಗಿಸಬೇಕಂತೆ. ಹಗಲು ವೇಳೆ ಶೌಚಕ್ಕೆ ಹೋಗಬೇಕಾದರೆ ಅಕ್ಕಪಕ್ಕದ ಹೊಲಗದ್ದೆಗಳನ್ನು ಆಶ್ರಯಿಸಬೇಕಂತೆ. ಈ ಸಂದರ್ಭದಲ್ಲಿ ಹೊಲದ ಮಾಲಿಕರು ಗದರಿಸುತ್ತಾರೆ. ಇದರಿಂದ ನಮ್ಮ ಮರ್ಯಾದೆ ಮೂರಾಬಟ್ಟೆ ಆಗಿದೆ ಎಂದು ಮಹಿಳೆಯರು ತಿಳಿಸುತ್ತಾರೆ.

 ಹೊನ್ನಳ್ಳಿ ಗ್ರಾಮ ಪ್ರವೇಶ ಮಾಡುವ ಮುನ್ನ ಒಂದು ಮಹಿಳಾ ಶೌಚಾಲಯ ಇದೇ ಆದರೂ ದುರಸ್ತಿ ಇಲ್ಲದೆ ಹಾಳಾಗಿದೆ. ಇದನ್ನಾದರೂ ದುರಸ್ತಿ ಮಾಡಿ ಎನ್ನುವುದು ಮಹಿಳೆಯರ ಮನವಿ.

 ಈ ಭಾಗದ ಸಂಸದರು ಇತ್ತ ಮುಖವನ್ನೂ ಮಾಡಿಲ್ಲ. ಇನ್ನು ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಗೆಲುವಿನ ನಂತರ ಮೂರು ವರ್ಷದಲ್ಲಿ ಎರಡು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರೂ ಜನತೆಯ ಸಮಸ್ಯೆ ಆಲಿಸಿಲ್ಲ ಎನ್ನುವ ಆರೋಪ ಕೇಳಿಬರುತ್ತದೆ.

  ಆರೋಗ್ಯ ಸೇವೆ ಸಮರ್ಪಕವಾಗಿಲ್ಲ. ಇನ್ನು ಒಂದೇ ಒಂದು ಸರ್ಕಾರಿ ಬಸ್ ಬೆಳಿಗ್ಗೆ, ಸಂಜೆ ಬಂದು ಹೋಗುತ್ತದೆ. ನಂತರ ಆಟೋಗಳೇ ಆವಲಂಬಿಸಬೇಕಾಗಿದೆ. ಶಾಲಾ ಕಾಲೇಜ್ ವಿದ್ಯಾರ್ಥಿಗಳು ಕೆಲವೊಮ್ಮೆ ಆಟೋಗಳನ್ನು ಹಿಡಿದು ಗ್ರಾಮ ಸೇರಬೇಕು ಇಲ್ಲವೆ ನಡೆದು ಹೋಗಬೇಕಾದ ಅನಿವಾರ್ಯತೆ.

 ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಸರ್ಕಾರದ `ನಮ್ಮ ಹೊಲ ನಮ್ಮ ರಸ್ತೆ~ ಯೋಜನೆ ಜಾರಿಗೆ ಬರಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ ಎಂದು ರೈತರು ತಿಳಿಸುತ್ತಾರೆ.

 ಹೊನ್ನಳ್ಳಿ ಮತ್ತು ಹೊಸೂರು ಸೇರಿದಂತೆ ಅನೇಕರು ಹೆಸರು ಮತದಾರಪಟ್ಟಿಯಲ್ಲಿ ಸೇರಿಸಲು ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 30ಕ್ಕೂ ಹೆಚ್ಚು ದೇವದಾಸಿಯರಿದ್ದು, ಇಲ್ಲಿಯವರೆಗೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಚಲುವಾದಿ ಭೀಮಪ್ಪ ತಿಳಿಸುತ್ತಾರೆ.

  ಇಡೀ ಹೊನ್ನಳ್ಳಿ ಹೊಸೂರು ಸುತ್ತಲೂ ಇರುವ ಸರ್ಕಾರಿ ಸ್ಥಳ(ಗ್ರಾಮ ನತ್ತು ಜಾಗೆ) ಒತ್ತುವರಿಯಾಗಿದ್ದು, ಈ ಕೂಡಲೇ ಸರ್ವೆ ನಡೆಸುವಂತೆ ಗ್ರಾ.ಪಂ ಸದಸ್ಯ ಕೆ. ಸಿದ್ರಾಮಪ್ಪ ಆಗ್ರಹಿಸುತ್ತಾರೆ. ಬಿಜೆಪಿ ಸರ್ಕಾರದ ಗುಡಿಸಲು ರಹಿತ ಯೋಜನೆ ಇಲ್ಲಿ ನನಸಾಗಲು ಇನ್ನೆಷ್ಟು ವರ್ಷ ಕಾಯಬೇಕು ಎಂದು ಅವರು ಪ್ರಶ್ನಿಸುತ್ತಾರೆ.

ಈ ಎಲ್ಲಾ ಕುಂದುಕೊರತೆಗಳನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಉತ್ತರ ಸಿಗದೇ ಅಸಹಾಯಕನಾಗಿದ್ದೀನಿ ಎಂದು ಸದಸ್ಯರೇ ಒಪ್ಪಿಕೊಳ್ಳುತ್ತಾರೆ.

 ಚುನಾಯಿತ ಪ್ರತಿನಿಧಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಹೊನ್ನಳ್ಳಿ ಮತ್ತು ಹೊಸೂರು ಗ್ರಾಮಸ್ಥರು ಸೇರಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಶೀಘ್ರದಲ್ಲಿ ತೆರಳುವುದಾಗಿ ಸುಗ್ಗೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಲುವಾದಿ ಮಹಾಸಭಾ ಅಧ್ಯಕ್ಷ ಚಲುವಾದಿ ಭೀಮಪ್ಪ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT