ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ವಿವಾದ- ಖುರ್ಷಿದ್ ಸ್ಪಷ್ಟನೆ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕುರಿತಂತೆ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ನೀಡಿದ ಹೇಳಿಕೆಯು ಇದೀಗ ವಿವಾದದ ಅಖಾಡವಾಗಿದೆ.
`ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಸಣ್ಣ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರಿಂದ ಪಕ್ಷಕ್ಕೆ ಸೈದ್ಧಾಂತಿಕ ನಿರ್ದೇಶನ ಸಿಗುತ್ತಿಲ್ಲ~ ಎಂದು ಖುರ್ಷಿದ್ ಅವರು ಸೋಮವಾರ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಖುರ್ಷಿದ್ ಹೇಳಿಕೆಯ ಲಾಭ ಪಡೆದುಕೊಂಡಿರುವ ವಿರೋಧ ಪಕ್ಷಗಳು, `ಆಡಳಿತ ಪಕ್ಷ ಹಾಗೂ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಇಲ್ಲ ಎನ್ನುವುದನ್ನು ಸಚಿವರ ಹೇಳಿಕೆಯು ಸ್ಪಷ್ಟಪಡಿಸುತ್ತದೆ~ ಎಂದು  ಕಾಂಗ್ರೆಸ್‌ನತ್ತ ವಾಗ್ಬಾಣ ಬಿಟ್ಟಿವೆ.

ಇನ್ನೊಂದೆಡೆ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಸಚಿವರು, ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದಿದ್ದಾರಲ್ಲದೇ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿರುವುದಕ್ಕೆ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

`ಸಂದರ್ಶನದಲ್ಲಿ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ನಾನು ಕೊಟ್ಟ ಉತ್ತರವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಮಾಧ್ಯಮದವರು ಹೇಳಿಕೆಗಳನ್ನು ಸರಿಯಾಗಿ ಅರ್ಥೈಸಲು ಸಾಧ್ಯವಾಗದಿದ್ದರೆ ಇನ್ನೂ ಅನೇಕ ವಿಷಯಗಳನ್ನು ಪಕ್ಷದ ಒಳಗೇ ಚರ್ಚಿಸಲಾಗುತ್ತದೆ~ ಎಂದು ಅವರು ಹೇಳಿದರು.

`ರಾಹುಲ್ ಗಾಂಧಿ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ನಾನು ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಹುಲ್ ನಮ್ಮ ನಾಯಕ. ಅವರಿಗೆ ಪಕ್ಷವು ಅಧಿಕಾರ ನೀಡಬೇಕು. ಹೊಸ ತಲೆಮಾರಿನ ನಾಯಕರು ಪಕ್ಷದ ಮುಂದಿರುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು  ಹೇಳಿದ್ದೆ. ಆದರೆ ಇದಕ್ಕೆ ಬೇರೆಯದೇ ಅರ್ಥ ಕಲ್ಪಿಸಲಾಗಿದೆ~ ಎಂದು ವಿಷಾದಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮೂರು ವರ್ಷಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ ಎಂದು `ಟೈಮ್~ ಪತ್ರಿಕೆ ಮಾಡಿರುವ ಟೀಕೆ ಕುರಿತ ಪ್ರಶ್ನೆಗೆ, ` ಇಂಥ ಮೌಲ್ಯಮಾಪನವನ್ನು ನಾವು ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೇವೆ~ ಎಂದರು.

`ಮನಃಪೂರ್ವಕವಾಗಿ ಹೇಳಬೇಕೆಂದರೆ, ನನಗೆ ಪ್ರಧಾನಿ ಅವರಲ್ಲಿ ನಂಬಿಕೆ ಇದೆ. ಅವರನ್ನು ಪ್ರಧಾನಿಯನ್ನಾಗಿ ಪಡೆಯುವುದಕ್ಕೆ ನಾವು ಅದೃಷ್ಟ ಮಾಡಿದ್ದೆವು. ಡಾ. ಮನಮೋಹನ್ ಸಿಂಗ್ ಅವರಂಥ ಪ್ರಧಾನಿಯ ಜತೆ ಕೆಲಸ ಮಾಡಲಿಕ್ಕೆ ಸಾಧ್ಯವಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ~ ಎಂದರು.

ಪ್ರತಿಕ್ಷಗಳ ವಾಗ್ದಾಳಿ
ಭವಿಷ್ಯದ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪಷ್ಟ ಚಿಂತನೆ ಇಲ್ಲ ಎನ್ನುವುದನ್ನು ಕಾಂಗ್ರೆಸ್‌ನ ಹಿರಿಯ ಸಚಿವರೇ ಸ್ಪಷ್ಟಪಡಿಸಿದಂತಾಗಿದೆ. ಕಾಂಗ್ರೆಸ್‌ಗೆ ಒಳ್ಳೆಯದಾಗಲಿ ಎಂದಷ್ಟೇ ನಾನು ಹೇಳಬಲ್ಲೆ~ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

`ರಾಹುಲ್ ಗಾಂಧಿ ಅವರು ಪ್ರಧಾನಿ ಪಟ್ಟದತ್ತ ಕಣ್ಣು ನೆಟ್ಟಿರುವಂತಿದೆ. ಅವರಿಗೆ ನಾಯಕತ್ವ ಗುಣವಿಲ್ಲ ಎನ್ನುವುದು ಮೊದಲಿನಿಂದಲೂ ಸ್ಪಷ್ಟವಾಗಿದೆ. ಇಂದಿರಾ ಹಾಗೂ ರಾಜೀವ್ ಅವರಂತೆ ರಾಹುಲ್ ಸೈದ್ಧಾಂತಿಕ ನಾಯಕರಲ್ಲ~ ಎಂದು ಸಮಾಜವಾದಿ ಪಕ್ಷದ ಮುಖಂಡ ಶಾಹಿದ್ ಸಿದ್ದಿಕಿಹೇಳಿದ್ದಾರೆ.

ಖುರ್ಷಿದ್ ವಜಾಕ್ಕೆ ಸಂಗ್ಮಾ ಆಗ್ರಹ
ಮುಂಬೈ (ಐಎಎನ್‌ಎಸ್): ಸರ್ಕಾರದ ಬಗ್ಗೆ ಹೇಳಿಕೆ ನೀಡಿದ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ವಜಾ ಮಾಡಬೇಕೆಂದು `ಎನ್‌ಡಿಎ~ದ ರಾಷ್ಟ್ರಪತಿ ಅಭ್ಯರ್ಥಿ ಪಿ.ಎ.ಸಂಗ್ಮಾ ಆಗ್ರಹಿಸಿದ್ದಾರೆ.
`ಖುರ್ಷಿದ್ ಈ ರೀತಿ ಹೇಳಬಹುದೇ? ನಾನು ಪ್ರಧಾನಿಯಾಗಿದ್ದರೆ ಅವರನ್ನು ವಜಾ ಮಾಡುತ್ತಿದ್ದೆ~ ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT