ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಸ್ಪೀಡ್ ರೈಲಿಗೆ ಕೇಂದ್ರ ಸಮ್ಮತಿ

Last Updated 11 ಜನವರಿ 2011, 5:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಸಂಪರ್ಕ ಕಲ್ಪಿಸುವ ಉದ್ದೇಶಿತ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 6,689 ಕೋಟಿ ರೂ ಅಂದಾಜು ವೆಚ್ಚದ ಖಾಸಗಿ ಸಹಭಾಗಿತ್ವದ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಬಂಡವಾಳ ಹೂಡಲು ನಿರ್ಧರಿಸಿದೆ. ಹೈಸ್ಪೀಡ್ ರೈಲು ಎಂ.ಜಿ.ರಸ್ತೆಯ ಬಿ.ಆರ್.ವಿ ಪೊಲೀಸ್ ಮೈದಾನದಿಂದ ಬಿಐಎಎಲ್ ನಡುವೆ ಸಂಚರಿಸಲಿದೆ.

‘ ಹೈಸ್ಪೀಡ್ ರೈಲು ಯೋಜನೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆಗೆ (ಎಂಆರ್‌ಟಿಎಸ್) ದಾರಿ ಮಾಡಿಕೊಡಲಿದೆ. ಯೋಜನೆಯ ಜಾರಿಗೆ ಎದುರಾಗಿದ್ದ ಕಾನೂನಾತ್ಮಕ ತೊಡಕುಗಳು ನಿವಾರಣೆಯಾಗಿವೆ. ಸದ್ಯದಲ್ಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಧು ತಿಳಿಸಿದರು.

‘ನಮ್ಮ ಮೆಟ್ರೊ ರೈಲು ಯೋಜನೆ ಮಾದರಿಯಲ್ಲೇ ಹೈಸ್ಪೀಡ್ ರೈಲು ಯೋಜನೆಯನ್ನು ಮೈಸೂರು ಟ್ರಾಮ್‌ವೇ ಆ್ಯಕ್ಟ್ ಅನ್ವಯ ಕಾರ್ಯಗತಗೊಳಿಸಲಾಗುತ್ತದೆ. ಹೈಸ್ಪೀಡ್ ರೈಲು ಮಾರ್ಗ ಕೆಲವೆಡೆ ಗ್ರಾಮೀಣ ಭಾಗದಲ್ಲೂ ಹಾದು ಹೋಗುವುದರಿಂದ ಮೈಸೂರು ಟ್ರಾಮ್‌ವೇ ಆ್ಯಕ್ಟ್‌ಗೆ ಕೆಲ ತಿದ್ದುಪಡಿಗಳನ್ನು ಮಾಡಲಾಗುವುದು. ಇದಕ್ಕೆ ರಾಷ್ಟ್ರಪತಿಯವರ ಒಪ್ಪಿಗೆ ಪಡೆಯಬೇಕಿರುವುದರಿಂದ ಸ್ವಲ್ಪ ಕಾಲಾವಕಾಶದ ಅಗತ್ಯವಿದೆ’ ಎಂದು ಅವರು ಹೇಳಿದರು.

‘ಮೈಸೂರು ಟ್ರಾಮ್‌ವೇ ಆ್ಯಕ್ಟ್ ಪ್ರಕಾರ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆಯು ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇರಬೇಕು. ಆದರೆ ಹೈಸ್ಪೀಡ್ ರೈಲು ಮಾರ್ಗ ಪಾಲಿಕೆ ವ್ಯಾಪ್ತಿಯಿಂದ ಹೊರಗಿರುವ ದೇವನಹಳ್ಳಿ ಮೂಲಕವೂ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿತ್ತು’ ಎಂದು ಅವರು ಮಾಹಿತಿ ನೀಡಿದರು.

ಈ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಅಂತಿಮ ಆಯ್ಕೆಗಾಗಿ ಐದು ಸಂಸ್ಥೆಗಳ ಪಟ್ಟಿ ತಯಾರಿಸಲಾಗಿತ್ತು. ಅವುಗಳೆಂದರೆ, ಎಲ್ ಆಂಡ್ ಟಿ; ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಚೀನಾದ ಸಿ.ಎಸ್.ಆರ್. ನಂಜುಮ್; ಲ್ಯಾಂಕೊ ಮತ್ತು ಓ.ಎಚ್.ಎಲ್; ಸೀಮನ್ಸ್ ಮತ್ತು ಪಯೊನಿರ್; ಐ.ಟಿ.ಡಿ ಮತ್ತು ಸೋಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT