ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಿಲು ದಾಟಲಿ ಒಳಗೂ ಬರಲಿ

Last Updated 19 ಜೂನ್ 2015, 15:36 IST
ಅಕ್ಷರ ಗಾತ್ರ

ಪ್ರೀ ತಿ ರಿವ್ಯೆ ಆಗಬೇಕು. ಡಿಪಾಸಿಟ್ ಆಗಬಾರದು.. ಲೋಹಿಯಾ ಒಂದು ಕಡೆ ಹೇಳಿದ್ದು ಅದ್ಯಾಕೋ ಮನಸಿಗೆ ತಾಕಿದೆ. ‘ಪ್ರಪಂಚದಲ್ಲಿ ಗಾಢವಾದ ಕಥೆಗಳಿರೋದು ಗಂಡು ಹೆಣ್ಣಿನ ಪ್ರೀತಿ ಮತ್ತು ದೇವರ ಮೇಲಿನ ಪ್ರೀತಿ’ ಬಗ್ಗೆ. ಈ ದೇವರ ಮೇಲಿನ ಪ್ರೀತಿ ಮತ್ತು ಗಂಡು ಹೆಣ್ಣಿನ ಸಂಬಂಧ ಅಷ್ಟು ಸುಲಭದ್ದಲ್ಲ. ಆದರೂ ಮನಸ್ಸನ್ನು ಮರೆಸುವಂಥವು ಹೆಣ್ಣು ಮತ್ತು ದೇವರು ಎರಡೇ. ಆ ಪ್ರೀತಿಯಲ್ಲಿ ದುಃಖ, ವಿಕೋಪ, ವಿರಸ ಎಲ್ಲವೂ ಇರತ್ತೆ ನಿಜ. ಆದರೂ ಪರಮ ನೆಮ್ಮದಿ ದಕ್ಕೋದೂ ಹೆಣ್ಣಿನಿಂದಲೇ.

ನಿಜವಾದ ಸ್ವಾತಂತ್ರ್ಯ ಹೆಣ್ಣಿಗೆ ದಕ್ಕಿಲ್ಲ...
ಪ್ರೀತಿ-ಸಂಬಂಧಗಳ ಬಗ್ಗೆ ಇರುವ ತಕರಾರನ್ನು ಮನಶಾಸ್ತ್ರ ಪುಸ್ತಕಗಳಿಂದ ಬಗೆಹರಿಸಿಕೊಳ್ಳೋದು ಅಸಾಧ್ಯ. ಹಾಗಾದರೆ ಸಮಸ್ಯೆ ಏನಿಲ್ಲಿ? ಸ್ತ್ರೀ ಸ್ವಾತಂತ್ರ್ಯದ ಕುರಿತು ಪ್ರತಿಯೊಬ್ಬ ಗಂಡಿಗೂ ವಿನಾಯಿತಿ ಎನ್ನುವುದಿಲ್ಲ. ನಿಜವಾದ ಸ್ವಾತಂತ್ರ್ಯ ಹೆಣ್ಣಿಗೆ ದಕ್ಕುತ್ತಿಲ್ಲ. ಹೆಣ್ಣು ಸುಂದರಿ, ಬುದ್ಧಿವಂತೆ, ಸೂಕ್ಷ್ಮಮತಿಯೂ ಆಗಿರಬೇಕು ಜೊತೆಜೊತೆಗೆ ಸಂಪೂರ್ಣ ತನ್ನವಳಾಗಬೇಕು ಎನ್ನುವುದು ಗಂಡಿನ ಆಸೆ, ಭಾವನೆ ಏನೆಲ್ಲ. ಆದರೆ ಇದು ಒಂದಕ್ಕೊಂದು ತದ್ವಿರುದ್ಧ. ಒಂದು ಅಪೇಕ್ಷೆ ಫಲಿಸಿದರೆ ಇನ್ನೊಂದು ಫಲಿಸುವುದಿಲ್ಲ. ಇದು ಮನುಷ್ಯ ಸ್ವಭಾವದಲ್ಲೇ ಇರುವ ತೊಡಕು. ಇದನ್ನು ಗೆಲ್ಲುವುದು ಬಹಳ ದೊಡ್ಡ ಕೆಲಸ. ಆದರೆ ಇದನ್ನು ಒಂದು ಉದಾತ್ತತೆಯಲ್ಲಿ ಅರ್ಥ ಮಾಡಿಕೊಳ್ಳುವ ಮೂಲಕ ಗೆಲ್ಲಬಹುದು. ಇಲ್ಲವೆ ಪ್ರೀತಿಯನ್ನು ಕಡಿಮೆ ಮಾಡುವುದರಿಂದಲೂ ಯಶಸ್ಸು ಕಾಣಬಹುದು. ಆದರೆ ಅದು ಕೇವಲ ಸಾಂಸಾರಿಕ ಗೆಲುವಾಗುತ್ತದೆ. ಎಣಿಸಿದಂತೆ ಎಲ್ಲ ಗುಣಗಳೂ ಅವಳಲ್ಲಿದ್ದು, ಅವಳು ತನ್ನ ಸ್ವತ್ತಾಗಬೇಕು ಎಂದು ಅವ ಇಚ್ಛೆಪಡುತ್ತ ಹೋದರೆ ಅವಳ ಬಗೆಗಿನ ಬಯಕೆ ಕರಗುತ್ತಾ ಹೋಗುತ್ತದೆ. ಅವಳ ಬಗ್ಗೆ ಪೂರ್ತಿ ಇಂಟ್ರೆಸ್ಟ್ ಕಳೆದುಕೊಂಡುಬಿಡುತ್ತಾನೆ. ಮೇಲ್ನೋಟಕ್ಕೆ ಅನ್ಯೋನ್ಯವಾಗಿದ್ದವರಂತೆ ಅವರು ಕಾಣುತ್ತಾರಾದರೂ ಪ್ರೀತಿಯ ವಿಷಯವಾಗಿ ದೂರದೂರವೇ. ಸ್ವತ್ತಾದ ನಂತರ ಜಾಣೆ ಸುಂದರಿಯಾಗಿರುವುದಿಲ್ಲ. ಸುಂದರಿ ಜಾಣೆಯಾಗಿರುವುದಿಲ್ಲ. ಇದೊಂದು ಸುಲಭವಾಗಿ ವಿವರಿಸಲಾಗದ ತಳ್ಳಿಹಾಕಲಾಗದ ವಿಷಯ.

ತುಂಬಾ ಸ್ವಾತಂತ್ರ್ಯ ಬಯಸುವ ಸ್ತ್ರೀ ನಿಜಕ್ಕೂ ಅದಕ್ಕಾಗಿ ಹಾತೊರೆಯುತ್ತಿರುತ್ತಾಳೆ. ಒಬ್ಬ ಗಂಡಸು ಗಂಡಸಾಗಿಲ್ಲದಿದ್ದರೆ ಅಥವಾ ಯಾವ ಯಜಮಾನಿಕೆ ಶಕ್ತಿಯೂ ಇಲ್ಲದಿದ್ದರೆ ಅವಳಿಗೆ ಆಸಕ್ತಿ ಹೊರಟು ಹೋಗುತ್ತದೆ. ಇದು ಸರಿಯೂ ಅಲ್ಲ. ತಪ್ಪೂ ಅಲ್ಲ. ನಾನು ಹುಡುಗನಾಗಿದ್ದಾಗಿನ ಸಂದರ್ಭ ನೆನಪಿಗೆ ಬರ್ತಿದೆ. ಆಗ ವರದಕ್ಷಿಣೆ ಪರಿಕಲ್ಪನೆ ಇನ್ನೂ ಹುಟ್ಟಿಕೊಂಡಿರಲಿಲ್ಲ. ತೆರ (ವಧುದಕ್ಷಿಣೆ) ಕೊಡುವ ಪದ್ಧತಿ ಇತ್ತು. ಹುಡುಗನ ಕಡೆಯವರು ಕೊಟ್ಟ ದುಡ್ಡನ್ನು ಆ ಹುಡುಗಿ ತನ್ನ ಅಪ್ಪನಿಗೆ ಕೊಡುತ್ತಿದ್ದಳು. ಕೃಷಿಪ್ರಧಾನ ಕುಟುಂಬದಲ್ಲಿ ಗಂಡು ಹೆಣ್ಣು ಸಮಾನವಾಗಿ ದುಡೀತಿದ್ರು. ಆದ್ದರಿಂದ ವಧುದಕ್ಷಿಣೆ ಕೊಟ್ರೆ ಮಾತ್ರ ಮದುವೆ ಎಂಬ ಕರಾರು ಇರುತ್ತಿತ್ತು.

ಹೆಚ್ಚು ಸಮಸ್ಯೆಗಳೇ ದುಡಿಯುವ ಹೆಣ್ಣಿಗೆ...
ಆರ್ಥಿಕ ಸ್ವಾತಂತ್ರ್ಯದಿಂದ ಹೆಣ್ಣು ಇನ್ನಷ್ಟು ಸ್ವತ್ತಾಗುತ್ತಾ ಹೋಗೋದು ಯಾವಾಗ ಅಂದ್ರೆ ಅವಳು ಆರ್ಥಿಕವಾಗಿ ಮತ್ತಷ್ಟು ಸಬಲಳಾಗ್ತಾ ಹೋದಂತೆ. ಮಕ್ಕಳ ವಿಷಯಕ್ಕೆ ಬಂದಾಗ ಈಗಿನ ದಂಪತಿ ನಿಜಕ್ಕೂ ನಲುಗುತ್ತಿದ್ದಾರೆ. ಗಂಡನಾದವನು ಸಾಮಾನ್ಯವಾಗಿ ಮನೆಗೆಲಸಕ್ಕೆ ಸಹಾಯ ಮಾಡುತ್ತಿದ್ದಾನೆ ಹಾಗೇ ಮಕ್ಕಳ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾನೆ. ಆದರೂ ಹೆರುವುದು, ಮೊಲೆಯೂಡಿಸುವುದು ಮಾತ್ರ ಹೆಂಡತಿಯೇ ಅಲ್ಲವೆ? ಹೀಗೆ ಅವಳು ಹೆರಿಗೆ, ಬಾಣಂತನ ಎಂದು ಕುಳಿತರೆ ದುಡಿಯಲು ಸಾಧ್ಯವೇ? ಆದ್ದರಿಂದ ಹೆಣ್ಣೊಬ್ಬಳು ಹೆರುತ್ತಾಳೆಂದರೆ ಅದು ಅವಳ ದೊಡ್ಡ ಕರ್ತವ್ಯ. ಅವಳಿಗೆ ಹುಟ್ಟುವ ಮಗು ದೇಶದ ಸ್ವತ್ತು. ಆ ಕರ್ತವ್ಯವನ್ನು ಸರ್ಕಾರ ಗೌರವಿಸಬೇಕು. ರಜಾ ಅವಧಿಯನ್ನು ಹೆಚ್ಚಿಸಬೇಕು. ಸತತ ನವೀಕರಣ ಹೆರಿಗೆಯಲ್ಲಿ. ಈ ಮೂಲಕ ಸಮಾಜ, ಸಂಸ್ಕೃತಿಯ ನವೀಕರಣ. ಇದನ್ನು ಸಮಾಜ ಒಪ್ಪಿಕೊಳ್ಳಬೇಕು.

ಗಂಡಿನ ಮಟ್ಟಿಗೆ ಕಾಮ ಎನ್ನುವುದಿದೆ ಆದರೆ ಹೆಣ್ಣಿಗಿಲ್ಲ ಅಂತ ಅಂದ್ಕೊಂಡಿದೀವಿ. ಕಾಮ ಅನ್ನೋದು ಹೆಣ್ಣಿನ ಮೇಲೆ ಪ್ರಯೋಗಿಸುವ ವಿಷಯ ಅಂತಾನೂ ತಪ್ಪು ತಿಳ್ಕೊಂಡಿದೀವಿ. ಗಂಡಿನಂತೆ ಹೆಣ್ಣಿಗೂ ಕಾಮದ ಬಯಕೆ ಇರತ್ತೆ. ಆದರೆ ಅದು ಬೇರೆ ರೀತಿಯಲ್ಲಿ ಅಂದರೆ ಸೆನ್ಸಿಟಿವಿಟಿಯಲ್ಲಿ ವ್ಯಕ್ತವಾಗತ್ತೆ. ಆದರೆ ನಾವುಗಳು ಹೆಣ್ಣಿಗೆ ಕಾಮಬಯಕೆಯೇ ಇಲ್ಲ ಅನ್ನೋಹಾಗೆ ವರ್ತಿಸ್ತಿದಿವಿ.

ಮದುವೆ ಆದಮೇಲೆ ಗಂಡ ಅಥವಾ ಹೆಂಡತಿ ಬೇರೊಬ್ಬರನ್ನು ಇಷ್ಟಪಟ್ಟಾಗ ಮಾರಲ್ ಟರ್ಮ್‌ನಲ್ಲಿ ಇರೋದಕ್ಕೆ ಸಾಧ್ಯವಿಲ್ಲ. ಇಬ್ಬರಲ್ಲಿ ಯಾರೇ ಆಗಲಿ ಬೇರೊಬ್ಬರನ್ನು ಇಷ್ಟಪಟ್ಟು ಮತ್ತೆ ತಮ್ಮ ಹಿಂದಿನ ಪ್ರೀತಿಯನ್ನು ನವೀಕರಿಸಿಕೊಂಡು ಒಪ್ಪಿಕೊಳ್ಳುವುದಾದಲ್ಲಿ ತಪ್ಪಿಲ್ಲ. ಅಂದರೆ ಇಲ್ಲಿ ಹೊಸಿಲು ದಾಟಿದ ಹೆಣ್ಣು ಮತ್ತೆ ಒಳಗೂ ಬರಬಹುದು. ಇದು ಹೊಸ ಕಾಲದಲ್ಲಿ ನಮ್ಮ ತಿಳಿವಿಗೆ ಬರಬೇಕು. ಈ ತಿಳಿವಿನ ಹಿಂದೆ ತುಂಬಾ ನೋವು ಇರತ್ತೆ, ಈ ವಿಷಯವಾಗಿ ಹೆಣ್ಣು, ಗಂಡು ಇಬ್ಬರೂ ಕಷ್ಟ ಪಡುತ್ತಿದ್ದಾರೆ. ಯಾತನೆ ಅನುಭವಿಸುತ್ತಿದ್ದಾರೆ ಇದು ನೋವಿನಿಂದಲೇ ತಿಳಿದುಕೊಳ್ಳುವ ವಿಷಯ.

ನೋವು, ಹಿಂಸೆ ನಡುವೆಯೇ ಸಂಬಂಧ ಪಕ್ವ...
ನೋವು, ಹಿಂಸೆ, ಇವೆಲ್ಲದರ ನಡುವೆ ಗಂಡು ಹೆಣ್ಣಿನ ಸಂಬಂಧಗಳು ಪಕ್ವವಾಗುತ್ತಾ ಹೋಗುತ್ತವೆ. ಹಿಂಸೆ ಅನ್ನೋದು ಮನಸಿನ ಹಿಂಸೆ ಅಲ್ಲದೆ ದೇಹದ ಹಿಂಸೆ ಆದಾಗ ಅದು ಅರ್ಥ ಕಳೆದುಕೊಳ್ಳತ್ತೆ. ಹೊಡೆತ, ಬಡೆತದಿಂದ ಪ್ರೀತಿ ಅರ್ಥ ಕಳೆದುಕೊಳ್ಳತ್ತೆ. ಆದ್ದರಿಂದ ವಿವೇಕ ಅಗತ್ಯ. ಗಂಡು ಅಂದ್ರೆ ಹೀಗೆ. ಹೆಣ್ಣು ಅಂದರೆ ಹೀಗೆ ಅಂತ ತೀರ್ಮಾನ ಮಾಡುವುದು ಶುದ್ಧ ತಪ್ಪು. ಈ ಸಂದರ್ಭದಲ್ಲಿ ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ ಕಥೆ ನೆನಪಾಗ್ತಿದೆ. ಗಂಡನಲ್ಲಿ ಪುರುಷತ್ವವೇ ಸಾಲದು ಅಂತ ಹೆಂಡತಿ ಹೊರಟುಬಿಡುತ್ತಾಳೆ. ಆದರೆ ಅವನು ಸೌಮ್ಯ ವ್ಯಕ್ತಿ. ಅದನ್ನು ಮನಸಿಗೆ ಹಾಕಿಕೊಳ್ಳದೆ ನಾರ್ಮಲ್ ಆಗಿದ್ದುಬಿಡುತ್ತಾನೆ. ನಂತರ ಅವಳೇ ವಾಪಸಾಗುತ್ತಾಳೆ. ಈ ಕಥೆಯ ಎಳೆ ಎಲ್ಲ ಕಾಲಕ್ಕೂ ಸಲ್ಲುವಂಥದ್ದು.

ಗಂಡ-ಹೆಂಡತಿ ಸಂಬಂಧ ಪಾಸಿಟಿವ್ ಆಗಿ ಹೊರಳುತ್ತಿರುವಾಗಲೇ ಆಸೆಬುರುಕ ಸಂಸ್ಕೃತಿ ಸಂಸಾರ ಘಟಕವನ್ನು ನಾಶ ಮಾಡುತ್ತ ಹೊರಟಿದೆ. ಸಮಸ್ಥಿತಿಗೆ ಬರುವಂಥದ್ದನ್ನು ಅತಿರೇಕಕ್ಕೆ ಎಳೆದುಕೊಂಡು ಹೋಗುತ್ತಿದೆ. ಸೌಂದರ್ಯದ ಕಲ್ಪನೆಯಲ್ಲೇ ಬದಲಾವಣೆಯಾಗಿದೆ. ಎಲ್ಲೆಡೆ ಹಣದ ಗರ್ವ ಹಾಸುಹೊಕ್ಕಾಗಿದೆ. ಜಾಹೀರಾತುಗಳಲ್ಲಿ ಬರುವ ಮುಖಗಳೇ ಚೆಂದದ ಮುಖಗಳು ಅನ್ನೋದು ಸರ್ವಸಮ್ಮತ ಎಂಬಂತಾಗಿದೆ. ಆದರೆ ನಿಜವಾದ ಸೌಂದರ್ಯ ಕಣ್ಣಿಗೆ ಕಾಣೋದಿಲ್ಲ. ಈ ಸರಕು ಸಂಸ್ಕೃತಿ ಮತ್ತು ಸಿನಿಮಾ ಸಂಸ್ಕೃತಿಯ ಪರಿಭಾಷೆಗೆ ಅರ್ಥವಿಲ್ಲ. ಸಾಮಾನ್ಯವಾಗಿ ಎಲ್ಲರೂ ಚೆಂದ ಅಂತ ತಿಳ್ಕೊಂಡಿರೋದನ್ನೂ ಮೀರಿದ ಸೌಂದರ್ಯ ಇರುತ್ತದಲ್ಲ... ಅದನ್ನು ತೋರಿಸೋದು ಸಾಧ್ಯವಾಗಬೇಕು. ಅದು ನಿಜ ಸೌಂದರ್ಯ.

ಸಿನಿಮಾ-ಸರಕು ಸಂಸ್ಕೃತಿಗೆ ಆಕರ್ಷಿತರಾಗಿ, ಕಾಣಬಹುದಾದ ಸೌಂದರ್ಯವನ್ನು ಕಾಣದೇ ಹೋಗ್ತಿದ್ದೇವೆ. ಎಷ್ಟು ರೀತಿಯ ಚೆಲುವರಿರೋದಕ್ಕೆ. ಚೆಲುವೆಯರಿರೋದಕ್ಕೆ ಸಾಧ್ಯ? ಚೆಲುವನ್ನೂ ಎಲ್ಲರೂ ಒಂದೇ ರೀತಿ ಕಂಡ್ಕೊಳ್ಳೋದಕ್ಕೆ ಸಾಧ್ಯವಾ? ಸೌಂದರ್ಯ ಹಲವು ರೀತಿಯಲ್ಲಿ ಕಾಣುವಂಥದ್ದು. ಒಳಮನಸ್ಸಿನ ಸೌಂದರ್ಯ ಮುಖ್ಯ. ಒಳ್ಳೆಯ ಸಂಬಂಧದಲ್ಲಿ ಪರಸ್ಪರ ಇಬ್ಬರೂ ಅಂಥ ಸೌಂದರ್ಯ ಕಂಡುಕೊಂಡಿರುತ್ತಾರೆ. ಇದೊಂದು ಅಂತರ್ಗತ ಸೌಂದರ್ಯ.

ಇಬ್ಬರೂ ಬದಲಾಗಿಲ್ಲ...
ಒಂದರ್ಥದಲ್ಲಿ ಮಹಿಳೆಯೂ ಬದಲಾಗಿಲ್ಲ. ಪುರುಷನೂ. ಆದರೆ ನಾವು ಇರಬೇಕಾದ ಸ್ಥಿತಿಗಳು ಒತ್ತಾಯ ತರ್ತಾ ಇವೆ. ಮನುಷ್ಯ ಸಂಬಂಧಗಳನ್ನು ಅಳತೆಗೋಲಿಟ್ಟು ನಿರೂಪಿಸೋದಕ್ಕೆ ಆಗಲ್ಲ. ಎಲ್ಲವೂ ಮರ್ಯಾದೆಗಾಗಿ, ಗಂಡು ಹೆಣ್ಣಿನ ಸೂಕ್ಷ್ಮತೆಗಳನ್ನು ತಿಳಿಯದೇ ಮೊದಲಿನಿಂದಲೂ ಮಾಡಿದ ಕಟ್ಟುಪಾಡುಗಳಿವು. ಈಗಲೂ ಗಂಡಿಗೇ ಅಧಿಕಾರ ಇರೋದ್ರಿಂದ ಪ್ರೀತಿ ಈ ರೀತಿ ಕುರೂಪ ಪಡೆದುಕೊಳ್ತಿದೆ. ಮಹಿಳೆಯರಿಗೆ ಇಂತಿಷ್ಟು ಮೀಸಲಾತಿ ಇರಬೇಕು ಅಂತ ಹೇಳ್ತಿದೀವಲ್ಲ ಅದು ಸರಿ. ಮಹಿಳೆ ರಾಜಕೀಯಕ್ಕೆ ಎಂಟ್ರಿ ಕೊಡಲೇಬೇಕು.

‘ಗಂಡು ಬೇರೆ. ಹೆಣ್ಣು ಬೇರೆ. ಆದರೆ ಇಬ್ಬರೂ ಸಮಾನ’ ಅಂತ ಗಾಂಧಿ ಹೇಳಿದ್ರು. ಸಮಾನ ಅಂತ ಹೇಳೋವ್ರ ವಿಭಿನ್ನತೆ ಮರೀತಾರೆ. ವಿಭಿನ್ನತೆ ಅನ್ನೋವ್ರ ಸಮಾನತೆ ಮರೀತಾರೆ. ಇವೆರಡರಿಂದ ಅಪಚಾರ ಉಂಟಾಗತ್ತೆ. ವಿಭಿನ್ನತೆ, ಸಮಾನತೆ ವಿಷಯವಾಗಿ ಇಬ್ಬರೂ ತಪ್ಪು ಮಾಡ್ತಾರೆ. ಗಂಡು ಇಲ್ಲದೇ ಇದ್ರೆ ಅಥವಾ ಹೆಣ್ಣು ಇಲ್ಲದಿದ್ದರೆ ತಾನು ಅಪೂರ್ಣ ಎನ್ನುವುದು ಇಬ್ಬರಿಗೂ ಗೊತ್ತಿರಬೇಕು. ಆದರೆ ಗಂಡಸು ಹೆಣ್ಣಿನ ಸಂಪರ್ಕವೇ ಬೇಡ ಅನ್ನೋದು, ಹೆಣ್ಣು ಗಂಡಿನ ಸಂಪರ್ಕವೇ ಬೇಡ ಎನ್ನುವ ತೀರ್ಮಾನಕ್ಕೆ ಬರೋದು ಕಾಲದ ಅತಿರೇಕ.

ಆದರ್ಶದ ಹೆಸರಿನಲ್ಲಿ ಎಲ್ಲವನ್ನೂ ಸರಳಗೊಳಿಸಿ ತಪ್ಪು ಮಾಡ್ತಿದೀವಿ. ಅರ್ಥ ಮಾಡಿಕೊಳ್ಳುವುದರಲ್ಲಿ ನೋವಿರತ್ತೆ. ಮನಸು ಒಪ್ಪಲ್ಲ. ಹಾಗೇ ಒಳ್ಳೇತನ ಸಹಜವೇನಲ್ಲ. ಅಸಹಜವೂ ಅಲ್ಲ. ಅದು ಇಬ್ಬರಿಗೂ ಅನ್ವಯವಾಗುವ ಮಾತು. ಅರಿವು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನೋವಿರತ್ತೆ. ಒಟ್ಟು ಮನಸು ತಿಳಿಯಾಗಿರಬೇಕು. ಆದರೆ ಸುಳ್ಳುಗಳಿಗೆ ಅವಕಾಶವಿರಲೇಬಾರದು.

ಒಬ್ಬರಿಗೊಬ್ಬರು ಇಂಟ್ರೆಸ್ಟ್ ಕಳೆದುಕೊಂಡ ಅನ್ಯೋನ್ಯತೆ ಸಾಮಾಜಿಕ ಒಪ್ಪಂದ ಅಷ್ಟೆ. ಯಾರು ಜಗಳಾಡ್ತಾ ಇರ್ತಾರೆ ಅವರು ಹೆಚ್ಚು ಪ್ರೀತಿಸ್ತಿರ್ತಾರೆ. ಬಹಳ ಇಷ್ಟ ಇರೋವ್ರ ಜೊತೆನೇ ಜಗಳ ಅಲ್ವೆ? ದ್ವೇಷ ಬೇರೆ. ಜಗಳ ಬೇರೆ. ಯಾರನ್ನೇ ಆಗಲಿ ಕಟುವಾಗಿ ಟೀಕಿಸ್ತಿದೀವಿ ಅಂದ್ರೆ ಆ ಟೀಕೆ ಪ್ರೀತಿಯಿಂದ ಹುಟ್ಟಿರುವಂಥದ್ದು. ಇವರಿರೋದೇ ಹೀಗೆ ಅಂತ ಸುಮ್ಮನಾಗಿಬಿಟ್ಟರೆ ಸಿನಿಕರಾಗಿಬಿಡ್ತೇವೆ. ಹಾಗೇ ಟೀಕೆಗೊಳಗಾದವರಿಗೆ ಆ ಟೀಕೆಯ ಸತ್ಯಾಂಶವನ್ನು ಅರ್ಥ ಮಾಡಿಕೊಳ್ಳುವಂಥ ವಿನಯ ಇರಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT