ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್ ಪ್ರಶಸ್ತಿಯ ಕನಸಲ್ಲಿ ಸೂಪರ್ ಕಿಂಗ್ಸ್

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಸತತ ಮೂರನೇ ಸಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಚೊಚ್ಚಲ ಕಿರೀಟದ ಕನಸಿನಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಐಪಿಎಲ್ ಟ್ವೆಂಟಿ-20 ಕ್ರಿಕೆಟ್‌ನ ಐದನೇ ಅವತರಣಿಕೆಯ ಟೂರ್ನಿಯ ಫೈನಲ್‌ನಲ್ಲಿ ಇಂದು ಪರಸ್ಪರ ಪೈಪೋಟಿ ನಡೆಸಲಿವೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್ ಎರಡು ಘಟಾನುಘಟಿ ತಂಡಗಳ ನಡುವಿನ ಹೋರಾಟವಾಗಿ ಪರಿಣಮಿಸಲಿದೆ. ಮಹೇಂದ್ರ ಸಿಂಗ್ ದೋನಿ ಬಳಗ ಗೆಲುವಿನ `ಫೇವರಿಟ್~ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆಯಾದರೂ, ಗೌತಮ್ ಗಂಭೀರ್ ನೇತೃತ್ವದ ರೈಡರ್ಸ್ ತಂಡವನ್ನು ಸುಲಭವಾಗಿ ಕಡೆಗಣಿಸಲು ಸಾಧ್ಯವಿಲ್ಲ.

ಸೂಪರ್ ಕಿಂಗ್ಸ್ ಅದೃಷ್ಟದ ಬಲದಿಂದ `ಪ್ಲೇ ಆಫ್~ ಹಂತ ಪ್ರವೇಶಿಸಿತ್ತು. ಆದರೆ ಎರಡು `ಪ್ಲೇ ಆಫ್~ ಪಂದ್ಯಗಳಲ್ಲಿ ದೋನಿ ಬಳಗ ನೀಡಿದ್ದು ಅದ್ಭುತ ಪ್ರದರ್ಶನ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳನ್ನು ಸೋಲಿಸಿ ಫೈನಲ್ ಪ್ರವೇಶಿಸಲು ಯಶಸ್ವಿಯಾಗಿದೆ.

ಈ ಹಿಂದೆ ಫೈನಲ್‌ನಲ್ಲಿ ಆಡಿದ ಅನುಭವ ಹೊಂದಿರುವುದು ಸೂಪರ್ ಕಿಂಗ್ಸ್ ತಂಡಕ್ಕೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಲಿದೆ. ತವರು ನೆಲದಲ್ಲಿ ಆಡುತ್ತಿರುವುದು ಕೂಡಾ ತಂಡಕ್ಕೆ ನೆರವು ನೀಡಲಿದೆ. ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ `ರನ್ನರ್ ಅಪ್~ ಆಗಿದ್ದ ಈ ತಂಡ 2010 ಹಾಗೂ 2011 ರಲ್ಲಿ ಚಾಂಪಿಯನ್ ಆಗಿತ್ತು. ಮತ್ತೊಂದೆಡೆ ನೈಟ್‌ರೈಡರ್ಸ್ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಆಡುತ್ತಿದೆ. ಆದ್ದರಿಂದ ಗಂಭೀರ್ ಬಳಗದ ಮೇಲೆ ಹೆಚ್ಚಿನ ಒತ್ತಡ ಇರುವುದು ಸಹಜ. 

ಲೀಗ್ ಹಂತದಲ್ಲಿ ಪರದಾಟ ನಡೆಸಿದ್ದ ಚೆನ್ನೈ ಇದೀಗ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಅದರಲ್ಲೂ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದ್ದಾರೆ.

ಸೂಪರ್ ಕಿಂಗ್ಸ್‌ನ ಬ್ಯಾಟಿಂಗ್ ಶಕ್ತಿ ಏನೆಂಬುದು ಕಳೆದ ಎರಡು ಪಂದ್ಯಗಳಲ್ಲಿ ಸಾಬೀತಾಗಿತ್ತು. ಮುರಳಿ ವಿಜಯ್, ದೋನಿ ಮತ್ತು ಡ್ವೇನ್ ಬ್ರಾವೊ ಒಳಗೊಂಡಂತೆ ಎಲ್ಲರೂ ಅಸಾಮಾನ್ಯ ಪ್ರದರ್ಶನ ನೀಡುತ್ತಿದ್ದಾರೆ.
ಇದುವರೆಗೆ ತಣ್ಣಗಿದ್ದ ವಿಜಯ್ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಶತಕ ಗಳಿಸಿದ್ದರು.
 
ಆರಂಭದಲ್ಲಿ ವಿಕೆಟ್ ಕಾಯ್ದುಕೊಂಡು ಕೊನೆಯಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋಗುವುದು ಚೆನ್ನೈ ತಂಡದ ಯೋಜನೆ. ಕಳೆದ ಎರಡೂ ಪಂದ್ಯಗಳಲ್ಲಿ ಈ ಯೋಜನೆ `ಕ್ಲಿಕ್~ ಆಗಿತ್ತು. ಬ್ಯಾಟಿಂಗ್ ವಿಭಾಗದಲ್ಲಿ ನೈಟ್ ರೈಡರ್ಸ್‌ಗಿಂತ ಚೆನ್ನೈ ತಂಡವೇ ಬಲಿಷ್ಠವಾಗಿ ಕಾಣುತ್ತಿದೆ.

ನೈಟ್ ರೈಡರ್ಸ್ ತಂಡದ ಯಶಸ್ಸು ಸುನಿಲ್ ನರೇನ್ ಎಂಬ ಬೌಲರ್‌ನ ಮೇಲೆ ನಿಂತಿದೆ. ಇಂದಿನ ಪಂದ್ಯ ನರೇನ್ ಹಾಗೂ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ನಡುವಿನ ಪೈಪೋಟಿ ಎನಿಸಿದೆ. ಕೋಲ್ಕತ್ತದ ತಂಡ ಫೈನಲ್ ತಲುಪುವಲ್ಲಿ ವೆಸ್ಟ್ ಇಂಡೀಸ್‌ನ ಈ ಬೌಲರ್‌ನ ಕೊಡುಗೆ ಮಹತ್ವದ್ದಾಗಿತ್ತು.

ಬ್ಯಾಟಿಂಗ್‌ನಲ್ಲಿ ತಂಡವು ನಾಯಕ ಗಂಭೀರ್ ಅವರನ್ನೇ ಅವಲಂಬಿಸಿದೆ. ಅದೇ ರೀತಿ ಬ್ರೆಂಡನ್ ಮೆಕ್ಲಮ್, ಯೂಸುಫ್ ಪಠಾಣ್ ಮತ್ತು ಜಾಕ್ ಕಾಲಿಸ್ ಇದ್ದಾರೆ. ಲೀಗ್ ಹಂತದಲ್ಲಿ ತಡಬಡಾಯಿಸಿದ್ದ ಯೂಸುಫ್ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ 40 ರನ್ ಪೇರಿಸಿ ಗೆಲುವಿಗೆ ಕಾರಣರಾಗಿದ್ದರು. ಇದರಿಂದ ಅವರ ಮೇಲೂ ಭರವಸೆ ಇಡಬಹುದು.

ಚೆನ್ನೈ ತಂಡ ಬೆನ್ ಹಿಲ್ಫೆನಾಸ್, ಅಲ್ಬಿ ಮಾರ್ಕೆಲ್ ಮತ್ತು ಆರ್. ಅಶ್ವಿನ್ ನೆರವಿನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ತೊಡಿಸಲು ಪ್ರಯತ್ನಿಸಲಿದೆ. ಶಾದಾಬ್ ಜಕಾತಿ ಮತ್ತು ರವೀಂದ್ರ ಜಡೇಜ ಕೂಡಾ ಪ್ರಭಾವಿ ಎನಿಸಬಲ್ಲರು.

`ಟೂರ್ನಿಯ ಅಂತಿಮ ಹಂತದಲ್ಲಿ ನೈಜ ಫಾರ್ಮ್ ಕಂಡುಕೊಳ್ಳುವುದು ಚಾಂಪಿಯನ್ ತಂಡಗಳ ಲಕ್ಷಣ~ ಎಂದು ಚೆನ್ನೈ ಎದುರು ಸೋಲು ಅನುಭವಿಸಿದ ಬಳಿಕ ಡೇರ್‌ಡೆವಿಲ್ಸ್ ತಂಡದ ಕೋಚ್ ಎರಿಕ್ ಸಿಮನ್ಸ್ ನುಡಿದಿದ್ದರು. ಅವರ ಮಾತಿನಂತೆ ಸೂಪರ್ ಕಿಂಗ್ಸ್‌ಗೆ `ಹ್ಯಾಟ್ರಿಕ್~ ಪ್ರಶಸ್ತಿ ಒಲಿಯುವುದೇ? ನೈಟ್ ರೈಡರ್ಸ್ ಮೊದಲ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಳ್ಳುವುದೇ? ಅಭಿಮಾನಿಗಳನ್ನು ಕಾಡುತ್ತಿರುವ ಈ ಪ್ರಶ್ನೆಗೆ ಭಾನುವಾರ ರಾತ್ರಿ ಉತ್ತರ ಲಭಿಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT