ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನಭಾಗ್ಯ’ ತಂದವರಿಗೆ ‘ಮತಭಾಗ್ಯ’ ಕರುಣಿಸುವರೇ?

Last Updated 20 ಮಾರ್ಚ್ 2014, 9:54 IST
ಅಕ್ಷರ ಗಾತ್ರ

ಗಂಗಾವತಿ: ‘ನಮ್ಮ ಭಾಗದಲ್ಲಿ ಶೇಕಡಾ 90 ರಷ್ಟು ಜನರ ಬದುಕು ಅಕ್ಕಿ ಗಿರಣಿ ಉದ್ಯಮದ ಮೇಲೆ ನಿಂತಿದೆ’–ಹೀಗೆಂದು ಗಂಗಾವತಿ ತಾಲ್ಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್‌.­ಸೂರಿಬಾಬು ಖಚಿತವಾಗಿ ಹೇಳಿದರು. ‘ಒಂದೇ ಉದ್ಯಮದ ಮೇಲೆ ಇಷ್ಟೊಂದು ಜನರ ಬದುಕು...’ ಎನ್ನು­ವಂತೆ ಅವರನ್ನೇ ನೋಡಿದೆ.

ಜಮೀನು ಉಳುಮೆ ಮಾಡುವವರು, ನಾಟಿಗೆ ಸಸಿ ಸಿದ್ಧಪಡಿಸುವವರು, ನಾಟಿ ಮಾಡಿ ಕಳೆ ಕೀಳುವರು, ಕ್ರಿಮಿನಾಶಕ ಮಾರಾಟ ಮಾಡುವವರು, ಕಟಾವು ಮಾಡಿದ ಭತ್ತವನ್ನು ಅಕ್ಕಿ ಗಿರಣಿಗಳಿಗೆ ಸಾಗಿಸುವ ಟ್ರಕ್‌ ಮಾಲೀಕರು, ಚಾಲಕರು, ಕ್ಲೀನರ್‌ಗಳು, ಹಮಾಲಿ­ಗಳು,  ಭತ್ತದ ಹೊಟ್ಟು ಕೊಳ್ಳುವವರು, ಹೊಟ್ಟು ಬಳಸಿ ಇಟ್ಟಿಗೆ ಸುಡುವವರು, ವಿದ್ಯುತ್‌ ಉತ್ಪಾದಿಸುವ ಘಟಕಗಳು... ಹೀಗೆ ಪಟ್ಟಿ ಮಾಡುತ್ತಲೇ ಹೋದರು.

ಸೂರಿಬಾಬು ತಮ್ಮ ಸರದಿ ಮುಗಿ­ಯಿತು, ಇನ್ನು ನಿನ್ನದು ಎನ್ನುವಂತೆ ತಮ್ಮ ಸಂಬಂಧಿ ಎನ್‌.ಆರ್‌.­ಶ್ರೀನಿವಾಸ ಅವರಿಗೆ ಬ್ಯಾಟಿಂಗ್‌ ಮಾಡಲು ಅವಕಾಶ ಮಾಡಿ­ಕೊಟ್ಟರು. ಶ್ರೀನಿವಾಸ್‌, ಕರ್ನಾಟಕ ರಾಜ್ಯ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಕಾರ್ಯದರ್ಶಿ.
‘ಸಿದ್ದರಾಮಯ್ಯನವರು ಮುಖ್ಯ­ಮಂತ್ರಿ­ಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲು ಘೋಷಿಸಿದ್ದು, ಬಡವರಿಗೆ ₨ 1ಕ್ಕೆ  1 ಕೆ.ಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು. ಆದರೆ, ಈ ಯೋಜನೆ ಅಕ್ಕಿ ಗಿರಣಿ ಉದ್ಯಮದ ಮೇಲೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಅವಲಂಬಿತರ ಅನ್ನವನ್ನು ನಿಧಾನಕ್ಕೆ ಕಿತ್ತುಕೊಳ್ಳುತ್ತಿದೆ’ ಎಂದು ಶ್ರೀನಿವಾಸ್‌ ಅಸಮಾಧಾನ ವ್ಯಕ್ತಪಡಿಸಿದರು.

ಅಣ್ಣನ ಈ ಮಾತು ತಪ್ಪು ಸಂದೇಶ ಕೊಡಬಹುದು ಎನ್ನುವುದನ್ನು ಅರಿತ ಸೂರಿ ಬಾಬು, ‘ಅನ್ನಭಾಗ್ಯ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ ಯಾವುದೇ ಯೋಜನೆ ಮತ್ತೊಬ್ಬರಿಗೆ ತೊಂದರೆ ಮಾಡಬಾರದು’ ಎಂದು ತಿದ್ದುಪಡಿ ಮಾಡಿದರು. 

ಭತ್ತದ ಕಣಜ: ರಾಜ್ಯದಲ್ಲಿ ಗಂಗಾವತಿ ತಾಲ್ಲೂಕು ‘ಭತ್ತದ ಕಣಜ’, ‘ಅನ್ನದ ಬಟ್ಟಲು’ ಎನ್ನುವ ವಿಶೇಷಣದಿಂದ ಗುರುತಿಸಿ­ಕೊಂಡಿದೆ. ಇದಕ್ಕೆ ಪುರಾವೆ ಎನ್ನುವಂತೆ ಕೊಪ್ಪಳ ಜಿಲ್ಲೆಯಲ್ಲಿ 100 ಅತ್ಯಾಧುನಿಕ ಅಕ್ಕಿ ಗಿರಣಿಗಳಿದ್ದರೆ, 96 ಗಂಗಾವತಿ ತಾಲ್ಲೂಕಿನಲ್ಲೇ ಇವೆ. ಒಂದು ಅಕ್ಕಿ ಗಿರಣಿಯಲ್ಲಿ ಕನಿಷ್ಠ 100 ಮಂದಿ ನೇರವಾಗಿ, 200 ಮಂದಿ ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ. ಹೀಗೆ 100 ಅಕ್ಕಿ ಗಿರಣಿಗೆ ಲೆಕ್ಕ ತೆಗೆದರೆ 50 ರಿಂದ 60 ಸಾವಿರ ಮಂದಿ ಈ ಉದ್ಯಮವನ್ನೇ ನಂಬಿ ಬದುಕುತ್ತಿದ್ದಾರೆ.

ನಮಗೆ ಅನ್ನಭಾಗ್ಯದ ಪರಿಣಾಮ ಜೋರಾ­ಗಿದೆ. ಶೇಕಡಾ 60 ಕ್ಕಿಂತ ಹೆಚ್ಚು ಹೊಡೆತ ಬಿದ್ದಿದೆ. ಹೊರರಾಜ್ಯದಿಂದ ಅಕ್ಕಿ ತರಿಸುತ್ತಿರುವುದರಿಂದ ರಾಜ್ಯದಲ್ಲಿ ಭತ್ತದ ಬೆಲೆ ಕಡಿಮೆಯಾಗುತ್ತದೆ. ಇದರಿಂದ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಹಲವರ ಬಾಯಿಗೆ ಮಣ್ಣು ಬೀಳಲಿದೆ ಎನ್ನು­ವುದು ಅಕ್ಕಿ ಗಿರಣಿಗಳ ಮಾಲೀಕರ ಅಳಲು.

‘ರಾಜ್ಯ ಸರ್ಕಾರ ಈ ಯೋಜನೆಗಾಗಿ 2.50 ಲಕ್ಷ ಟನ್‌ ಅಕ್ಕಿ­ಯನ್ನು ಹೊರಗಿ­ನಿಂದ ಖರೀದಿಸುತ್ತಿದೆ. ಅಕ್ಕಿಯ ಗುಣ­ಮಟ್ಟ ಚೆನ್ನಾಗಿಲ್ಲ. ಆದ್ದರಿಂದ ಫಲಾನು­ಭವಿ­ಗಳು ಇದೇ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಸಣ್ಣ ಅಕ್ಕಿಯನ್ನು ಖರೀದಿ­ಸುತ್ತಾರೆ. ಇದರ ಬದಲು ಸರ್ಕಾರ ₨1 ಕ್ಕೆ ಬದಲು ₨10 ಕ್ಕೆ 20 ಕೆ.ಜಿ ಸೋನಾ ಮಸೂರಿಯನ್ನೇ ಕೊಡಲಿ. ಇದರಿಂದ ಫಲಾನುಭವಿಗಳಿಗೆ ಒಳ್ಳೆಯ ಅಕ್ಕಿ ಸಿಕ್ಕಂತಾಗುತ್ತದೆ. ನಮ್ಮ ಉದ್ಯಮವೂ ಉಳಿಯುತ್ತದೆ. ಅವ್ಯವ­ಹಾರವೂ ತಪ್ಪುತ್ತದೆ’ ಎನ್ನುವ ಸಲಹೆಯನ್ನು ಮುಂದಿಡುತ್ತಾರೆ.

‘ಅನ್ನಭಾಗ್ಯ ಯೋಜನೆ ಸಿದ್ದರಾಮ­ಯ್ಯನವರ ಪಕ್ಷಕ್ಕೆ ಮತಭಾಗ್ಯವನ್ನು ತರುವುದಿಲ್ಲವೇ?’ ಎನ್ನುವ ಪ್ರಶ್ನೆಗೆ ಇವರು ನೇರವಾಗಿ ಉತ್ತರಿಸಲಿಲ್ಲ. ಆದರೆ, ಇದೇ ಉದ್ಯಮವನ್ನು ಅವ ಲಂಬಿಸಿರುವ ಸಾವಿರಾರು ಮಂದಿ ಇದ್ದಾರೆ. ಇವರು ತಮ್ಮ ಬದುಕಿಗೇ ತೊಂದರೆಯಾಗುತ್ತದೆ ಎಂದರೆ ಎಂಥ ನಿರ್ಧಾರಕ್ಕೆ ಬರಬಹುದು ನೋಡಿ ಎಂದು ಸುತ್ತಿಬಳಸಿ ಹೇಳಿದರು.

ಶ್ರೀನಿವಾಸ್‌ ಅವರ ಮನೆ ಕಾಂಪೌಂಡ್‌ ದಾಟಿ ಅಂದಾಜು 30 ಹೆಜ್ಜೆ ಹಾಕುವ­ಷ್ಟರಲ್ಲೇ ಜೋಪಡಿ­ಯೊಂದು ಕಾಣಿಸಿತು. ‘ಅನ್ನ­ಭಾಗ್ಯ ಇವರ ಪಾಲಿಗೆ ಏನಾಗಿದೆ’ ವಿಚಾರಿಸಲು ಕುಳಿತೆ. ಇವರು ನಾಗಪ್ಪ ವಡ್ಡರ. ದಲಾಲರ ಅಂಗಡಿ­ಯಲ್ಲಿ ಗುಮಾಸ್ತ. ಇವರಿಗೆ ಅನ್ನಭಾಗ್ಯ ಖುಷಿ ನೀಡಿದೆ. ‘ಇದಕ್ಕೂ ಮೊದಲು ನುಚ್ಚು ತಂದು ಊಟ ಮಾಡುತ್ತಿದ್ದೆವು. ಬೀಗರು ಬಂದಾಗ ಮಾತ್ರ ಅಕ್ಕಿ ತರುತ್ತಿದ್ದೆವು. ಈಗ ಇಡೀ ತಿಂಗಳು ಅನ್ನ ತಿನ್ನುತ್ತಿದ್ದೇವೆ’ ಎಂದು ಸಂಭ್ರಮಿಸಿದರು.

ತಾವೇ ಎದ್ದು ಹೋಗಿ ಬೊಗಸೆ ತುಂಬ ಅಕ್ಕಿ ತಂದು ನನ್ನ ಮುಂದೆ ಹಿಡಿದು, ‘ನೀವೇ ನೋಡಿ’ ಎಂದು ಮತ್ತೆ ನಕ್ಕರು.  ಅದು ಅನ್ನಭಾಗ್ಯ ಯೋಜನೆಗೆ ಜಾಹೀರಾತಿನಂತೆ ಕಾಣಿಸು­ತ್ತಿತ್ತು. ಇವರಿಗೆ ಈ ಯೋಜನೆ ಜಾರಿಗೆ ತಂದಿದ್ದು ಸಿದ್ದರಾಮಯ್ಯ ಎನ್ನುವುದು ಗೊತ್ತಿದೆ.
ಕನಕಗಿರಿ ರಸ್ತೆಯ ಶರಣ ಬಸವೇಶ್ವರ ಕ್ಯಾಂಪ್‌ನ ಮಹಿಳೆಯರು ಭತ್ತದ ಗದ್ದೆಯಲ್ಲಿ ಕಳೆ ಆರಿಸುತ್ತಿದ್ದರು. ಅವರ ಬಳಿಗೆ ಹೋದಾಗ ಶಾಂತಮ್ಮ ಹೇಳಿದರು–‘ಭತ್ತ ಬೆಳೆಯಲು ನಾವು ದುಡಿಯುತ್ತೇವೆ. ಆದರೆ ಅದೇ ಭತ್ತದ ಅಕ್ಕಿಯ ಅನ್ನವನ್ನು ತಿನ್ನುವ ಭಾಗ್ಯವೇ ಇರಲಿಲ್ಲ.

ಈಗ ಆ ಭಾಗ್ಯ ದೊರೆತಿದೆ’ ಎಂದರು. ಇವರ ಹಿಂದೆ ನಿಂತಿದ್ದ ವರಲಕ್ಷ್ಮಿ, ‘ಕೊಡುವ ಅಕ್ಕಿ ಸಾಕಾಗು­ವುದಿಲ್ಲ. ನಮ್ಮ ಮನೆಯವರು ಅಂಗಡಿಯಿಂದ ₨10 ಕೊಟ್ಟು ಅಕ್ಕಿ ತರುತ್ತಾರೆ’ ಎಂದು ಯೋಜನೆಯ ಅವ್ಯವಹಾರವನ್ನು ಮುಗ್ಧವಾಗಿಯೇ ಬಹಿರಂಗಪಡಿಸಿದರು.
ಕೊಪ್ಪಳ–ಗಂಗಾವತಿ ಮಾರ್ಗದಿಂದ ಇಂದರಗಿ ಗ್ರಾಮದ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಸಂಗಪ್ಪ ಶಿರೂರ ಸಿಕ್ಕಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. ಸಿದ್ದರಾಮ­ಯ್ಯನವರ ಹೆಸರು ಪ್ರಸ್ತಾಪ­ವಾಗು­ತ್ತಿದ್ದಂತೆಯೇ ಪುಳಕಗೊಂಡರು.

‘ಕಳೆದ ಎಲೆಕ್ಷನ್‌ನಲ್ಲಿಯೇ ಸಂಗಣ್ಣ ಕರಡಿ ಅವರು ಫೇಲ್‌ ಆಗಿದ್ದಾರೆ. ಈಗಲೂ ಅಷ್ಟೆ’ ಎಂದವರು ಏನೋ ನೆನಪು ಮಾಡಿಕೊಂಡವರಂತೆ, ‘ಸಿದ್ದರಾ­ಮಯ್ಯ­ನ­ವರನ್ನು ಅಧಿಕಾರ­ದಿಂದ ಕೆಳಗಿಸಲು ಏನೇನೋ ರಾಮ– ರಬಾಟೆ (ರಂಪ ರಾಮಾಯಣ) ನಡೆಯುತ್ತಿದೆ. ಅವರಿಗೆ ಐದು ವರ್ಷ ಅಂಥ ಅಧಿಕಾರ ಕೊಟ್ಟಿರುವುದು’ ಎಂದು  ಹೇಳಿದರು. ಪ್ರವಾಸಿ ತಾಣ ಆನೆಗುಂದಿಯ ಮುಸ್ಲಿಂ ಓಣಿಯಲ್ಲಿದ್ದ ಮಸೀದಿ ಮುಂದೆ ರಶೀದ್ ಸೇರಿದಂತೆ ಏಳೆಂಟು ಮಂದಿ ಕುಳಿತಿದ್ದರು. ರಾಹುಲ್‌ಗಾಂಧಿ ಎಂದಾಗ ಕಣ್ಣು, ಕಿವಿ ಅರಳಿಸಿದರು. ಇವರು ಹಿಂದಿ­ನಿಂದಲೂ ಕಾಂಗ್ರೆಸ್ ಅಭಿಮಾನಿಗಳು. 

‘ಈ ಬಾರಿಯ ಚುನಾವಣೆ ವರ್ಗ ಮತ್ತು ಅಸಮಾನತೆ ನಡುವಣ ಹೋರಾಟವಾಗಿದೆ. ನಾವು ಒಟ್ಟಾಗಿ­ದ್ದೇವೆ’ ಎಂದು ಕೊಪ್ಪಳದ ಕುರುಬರ ಮುಖಂಡ ಶಿವಾನಂದ ಹೊದಲೂರು ಹೇಳಿದರೆ, ಕುಷ್ಟಗಿಯ ಮಾನಪ್ಪ ಬಡಿಗೇರ, ‘ನಮ್ಮ ಕ್ಷೇತ್ರದಲ್ಲಿ ಯಾವ ಅಲೆಯೂ ಇಲ್ಲ, ಬರೀ ಜಾತಿ ಅಲೆ’ ಎಂದು ಚುನಾವಣೆ ನಡೆಯುವ ದಿಕ್ಕನ್ನು ಪರೋಕ್ಷವಾಗಿ ಸೂಚಿಸಿದರು. ಕೊಪ್ಪಳದ ಪಂಚಮಸಾಲಿ ಸಮಾಜದ ಮುಖಂಡ­ರಾದ ಎಂ.ವಿ.­ಪಾಟೀಲರು ಇಂತಹ ಹೇಳಿಕೆಗಳನ್ನು ಒಪ್ಪಿಕೊಳ್ಳಲಿಲ್ಲ. ಸುತ್ತಾಟ ಮುಗಿಸಿದ ಮೇಲೆ ಅನಿಸಿತು, ಇಲ್ಲಿ ಕುರುಬರು ಬಂಡೆಗಳಂತೆ ಗಟ್ಟಿಯಾ­ಗಿದ್ದಾರೆ. ವೀರಶೈವರು?

1ರೂ. ಗೆ ಅಕ್ಕಿ ಕೊಟ್ಟಿದ್ದು ಯಾರು?
‘ನಿಮಗೆ ₨1 ಗೆ ಅಕ್ಕಿ ಕೊಟ್ಟಿದ್ದು ಯಾರು?’– ಈ ಪ್ರಶ್ನೆಯನ್ನು ಸುಮಾರು ಏಳು ಮಂದಿಗೆ ಕೇಳಿದೆ. ಇವರಲ್ಲಿ ಮೂವರು ಮಹಿಳೆ­ಯರು, ಮೂವರು ಪುರುಷರು ಹೇಳಿದ್ದು, ತಮ್ಮ ನ್ಯಾಯ­ಬೆಲೆ ಅಂಗಡಿ ಮಾಲೀಕರ ಹೆಸರನ್ನು! ಗಂಗಾವತಿಯ ವಡ್ಡರಹಳ್ಳಿ ನಾಗಪ್ಪ ವಡ್ಡರ್‌ಗೆ ಮಾತ್ರ ಅನ್ನ­ಭಾಗ್ಯ ಯೋಜನೆಯ  ರೂವಾರಿ ಸಿದ್ದರಾಮಯ್ಯ ಎನ್ನುವುದು ಗೊತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT