ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇನ್‌ಕ್ರೆಡಿಬಲ್‌’ ಅಮಿತಾಭ್‌!

Last Updated 7 ಮೇ 2016, 11:28 IST
ಅಕ್ಷರ ಗಾತ್ರ

ಅಮಿತಾಭ್‌ ಬಚ್ಚನ್‌ಗೆ ಮುಖಭಂಗವಾಯಿತೆ? ‘ಹೌದು’ ಎನ್ನುತ್ತಾರೆ (ದುಃಖದಿಂದ) ಅವರ ಅಭಿಮಾನಿಗಳು ಮತ್ತು (ಖುಷಿಯಿಂದ) ವಿರೋಧಿಗಳೂ! ಅದಕ್ಕೆ ಕಾರಣ ‘ಇನ್‌ಕ್ರೆಡಿಬಲ್‌ ಇಂಡಿಯಾ’ ಪ್ರಚಾರಕ್ಕೆ ಮೊದಲು ಅವರನ್ನು ಆಯ್ಕೆ ಮಾಡಿ ಬಳಿಕ ಕೈಬಿಟ್ಟದ್ದು. ‘ಇನ್‌ಕ್ರೆಡಿಬಲ್‌ ಇಂಡಿಯಾ’ ಎನ್ನುವುದು ಭಾರತದ ಪ್ರವಾಸೋದ್ಯಮದ ಬ್ರ್ಯಾಂಡ್‌ ಪ್ರಚಾರಕ್ಕೆ ರೂಪಿಸಿರುವ ಗ್ಲೋಬಲ್‌ ಮಾರ್ಕೆಟಿಂಗ್‌ ಯೋಜನೆ. ಮೊದಲ ಆವೃತ್ತಿಯಲ್ಲಿ ‘ಇನ್‌ಕ್ರೆಡಿಬಲ್‌ ಇಂಡಿಯಾ’ದ ಪ್ರಚಾರ ರಾಯಭಾರಿ ಆಗಿದ್ದುದು ಬಾಲಿವುಡ್‌ನ ಪ್ರಖ್ಯಾತ ನಟ ಅಮೀರ್‌ ಖಾನ್‌. ದೇಶದಲ್ಲಿ ಅಸಹಿಷ್ಣುತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಾಗ, ‘ಅಸಹಿಷ್ಣುತೆ ಇದೆ’ ಎಂದು ಹೇಳಿದ ಅಮೀರ್‌, ಸರ್ಕಾರದ ಕೆಂಗಣ್ಣಿಗೆ ಗುರಿಯಾದದ್ದು ಸುಳ್ಳಲ್ಲ. ಹಾಗಾಗಿ ‘ಇನ್‌ಕ್ರೆಡಿಬಲ್‌ ಇಂಡಿಯಾ’ದ ರಾಯಭಾರತ್ವದ ಒಪ್ಪಂದ ಅವಧಿ ಮುಗಿದ ತಕ್ಷಣ ಆತನಿಗೆ ಸರ್ಕಾರ ‘ಟಾಟಾ’ ಹೇಳಿದೆ. ಇನ್ನೀಗ ಹೊಸ ರಾಯಭಾರಿ ಬೇಕು. ಅದಕ್ಕೆಂದೇ ಅಮಿತಾಭ್‌ ಬಚ್ಚನ್‌ ಹೆಸರು ತೇಲಿಬಂತು. ಮಾತುಕತೆಯೂ ಆಯಿತು.

ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಆಗಿದ್ದಾಗ, ಆ ರಾಜ್ಯದ ಪ್ರವಾಸೋದ್ಯಮ ರಾಯಭಾರಿ ಆಗಿ ಯಶಸ್ವಿಯಾದವರು ಅಮಿತಾಭ್‌. ಇನ್ನೇನು ಘೋಷಣೆ ಆಗಬೇಕು ಎನ್ನುವುದರೊಳಗೆ ‘ಪನಾಮಾ ಹೂಡಿಕೆ’ಯ ರಹಸ್ಯಪತ್ರಗಳು ಲೀಕ್‌ ಆದವು. ಪನಾಮಾ ದ್ವೀಪದಲ್ಲಿ ಹಲವು ಬೇನಾಮಿ ಕಂಪೆನಿಗಳಲ್ಲಿ ಹಣ ಹೂಡಿರುವವರ ಪಟ್ಟಿಯಲ್ಲಿ ಅಮಿತಾಭ್‌ ಮತ್ತು ಸೊಸೆ ಐಶ್ವರ್ಯ ಅವರ ಹೆಸರೂ  ಇದೆ ಎನ್ನುವ ಸುದ್ದಿ ಹೊರಬಿತ್ತು. ಈಗ ಅಮಿತಾಭ್‌ ಬದಲಿಗೆ ಪ್ರಿಯಾಂಕಾ ಚೋಪ್ರಾ ಹೆಸರು ಅಖೈರು ಆಗಿದೆಯಂತೆ!

  ‘ಇನ್‌ಕ್ರೆಡಿಬಲ್‌ ಇಂಡಿಯಾ ಪ್ರಚಾರಕ್ಕೆ ಅಮಿತಾಭ್ ಹೆಸರು ಪರಿಶೀಲನೆಯಲ್ಲಿ ಇರಲೇ ಇಲ್ಲ’ ಎಂದಿದ್ದಾರೆ ಸರ್ಕಾರದ ವಕ್ತಾರರು. ‘ನನ್ನ ಜತೆ ಈ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿಯೇ ಇಲ್ಲ’ ಎಂದಿದ್ದಾರೆ ಅಮಿತಾಭ್‌. ಆದರೆ ಈ ಸ್ಪಷ್ಟೀಕರಣವನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಪ್ರಿಯಾಂಕಾ ಚೋಪ್ರಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ನಟಿ. ‘ಟೀವಿ ಚಾನೆಲ್‌ನ ಅತ್ಯಂತ ಫೇವರೆಟ್‌ ನಟಿ!’ ಹಾಲಿವುಡ್‌ನಲ್ಲೂ ನಟನೆ. ಇತ್ತೀಚೆಗೆ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪ್ರಿಯಾಂಕಾ ಅವರನ್ನು ಬಿಂಬಿಸಿದರೆ, -ಭಾರತವು ವಿದೇಶಗಳಿಂದ ಪ್ರವಾಸ ಬರುವ ಹೆಣ್ಣುಮಕ್ಕಳಿಗೆ ಅಸುರಕ್ಷಿತ ತಾಣವಲ್ಲ- ಎಂಬ ಸೂಚನೆ ಕೊಟ್ಟಂತೆಯೂ ಆಗುತ್ತದೆ..- ಇದು ಸರ್ಕಾರದ ವಿವರಣೆ.

ಅಭಿಮಾನಿಗಳ ವಾದವೇ ಬೇರೆ. ಈಕೆ ಅಮಿತಾಭ್‌ಗೆ ಸರಿಸಾಟಿ ಆಗುವುದು ಸಾಧ್ಯವೇ ಇಲ್ಲ. ಎಳೆಯರಿಂದ ಹಿಡಿದು ಮುದುಕವರೆಗೂ ಎಲ್ಲರಿಗೂ ಬಿಗ್‌-ಬಿ ಗೊತ್ತು. ಟೀವಿ ಯಲ್ಲೂ ಜನಪ್ರಿಯತೆಯ ಶಿಖರ ತಲುಪಿದಾತ. ಮೊನ್ನೆ ತಾನೇ ‘ಪಿಕೂ’ ಚಿತ್ರದ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈಗಲೂ ಕೈಯಲ್ಲಿ ಆರು ಹೊಸ ಸಿನಿಮಾಗಳಿವೆ. ಸದ್ಯಕ್ಕೆ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಅತ್ಯಂತ ಹಿರಿಯ ನಟ ಎನ್ನಲೂ ಅಡ್ಡಿಯಿಲ್ಲ.

ಆದರೆ ಸರ್ಕಾರಕ್ಕೆ ಇಕ್ಕಟ್ಟು. ತೆರಿಗೆ ತಪ್ಪಿಸಿ, ಸಾಲ ಕಟ್ಟದೆ ದೇಶ ಬಿಟ್ಟು ಓಡುತ್ತಿರುವ ಉದ್ಯಮಿಗಳ ಪಟ್ಟಿ ಬೆಳೆಯುತ್ತಿದೆ. ಈ ಮಧ್ಯೆ ತೆರಿಗೆ ತಪ್ಪಿಸಿದ ಆರೋಪ ಹೊತ್ತಿರುವ ನಟನನ್ನು ರಾಯಭಾರಿ ಮಾಡಿದರೆ, ರಾಜಕೀಯ ವಿರೋಧಿಗಳ ಕೈಗೆ ಬಡಿಗೆ ಕೊಟ್ಟಂತೆ ಅಲ್ಲವೆ?

ಹಾಗೆ ನೋಡಿದರೆ, ಅಮಿತಾಭ್‌ ದೇಶದಲ್ಲೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸಿದ ಬಾಲಿವುಡ್‌ ನಟ. 2013ರಲ್ಲಿ ಅಮಿತಾಭ್‌ ಕುಟುಂಬ ಅತ್ಯಧಿಕ 53.81 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಕ್ಕೆ  ಆದಾಯತೆರಿಗೆ ಇಲಾಖೆಯ ಅಧಿಕಾರಿಗಳೇ ಮನೆಗೆ ಬಂದು ಕೈಕುಲುಕಿ ಹೂಗುಚ್ಛ ಕೊಟ್ಟು ಹೋಗಿದ್ದರು! ಈಗಲೂ ವಾರ್ಷಿಕ 100 ಕೋಟಿ ರೂಪಾಯಿ ಆದಾಯ ಇರುವ ಅಮಿತಾಭ್‌ರ ಒಟ್ಟು ನಿವ್ವಳ ಆಸ್ತಿಯ ಮೊತ್ತ 3600 ಕೋಟಿ ರೂಪಾಯಿ. ರಿಯಲ್‌ ಎಸ್ಟೇಟ್‌ನಲ್ಲೂ ಅವರ ಹೂಡಿಕೆ ಕಡಿಮೆಯೇನಲ್ಲ. ಮುಂಬೈಯ ಜುಹೂನಲ್ಲಿ 10125 ಚದರ ಅಡಿ ವಿಸ್ತೀರ್ಣದ ‘ಜಲ್ಸಾ’ ಬಂಗಲೆಯಿದೆ.

ಹೆತ್ತವರ ಜತೆಗೆ ವಾಸವಿದ್ದ, 160 ಕೋಟಿ ರೂಪಾಯಿಯ ಬಂಗಲೆ ‘ಪ್ರತೀಕ್ಷಾ’ಗೆ ಈಗಲೂ ಪ್ರತಿದಿನ ಭೇಟಿ ಕೊಡುತ್ತಾರೆ. ಜುಹೂನಲ್ಲೇ ಇನ್ನೆರಡು ಮನೆಗಳಿವೆ. ಇತ್ತೀಚೆಗೆ ‘ಜಲ್ಸಾ’ ಹಿಂದಿನ ಸೈಟ್‌ ಒಂದನ್ನು 50 ಕೋಟಿಗೆ ಖರೀದಿ ಮಾಡಿದ್ದಾರೆ. ಮುಂಬೈಯಲ್ಲೇ ಒಟ್ಟು 300 ಕೋಟಿ ರೂಪಾಯಿ ರಿಯಲ್‌ ಎಸ್ಟೇಟ್‌ ಹೂಡಿಕೆ. ಓಡಾಡಲು ಮರ್ಸಿಡಿಸ್‌, ಬಿಎಂಡಬ್ಲ್ಯು,  ಪೋರ್ಶ್‌ ಲೆಕ್ಸಸ್‌, ಫ್ಯಾಂಟಮ್‌ ಸೇರಿ ಒಟ್ಟು 11 ಕಾರುಗಳಿವೆ. ಇದರಲ್ಲಿ ಅವರ ಫೇವರೆಟ್‌ ಕಾರು ಫೋರ್ಶ್ ಲೆಕ್ಸಸ್‌. ಇದರ ಒಂದು ಟೈರಿಗೇ 2.5 ಲಕ್ಷ ರೂಪಾಯಿ ಇದೆ.

‘ಸಾಥ್‌ ಹಿಂದೂಸ್ತಾನಿ’ ಎಂಬ ತನ್ನ ಮೊದಲ ಚಿತ್ರಕ್ಕೆ ಇತರ ಆರು ನಾಯಕರ ಜತೆಗೆ ನಟಿಸಿದಾಗ 1000 ರೂಪಾಯಿ ಸಂಭಾವನೆ ಪಡೆದಿದ್ದ ಅಮಿತಾಭ್‌, ಈಗ ಒಂದು ಚಿತ್ರಕ್ಕೆ ಏಳು ಕೋಟಿ ರೂಪಾಯಿ ಪಡೆಯುತ್ತಾರೆ. ಟೀವಿ ಜಾಹೀರಾತಿಗೆ ಐದು ಕೋಟಿ! ‘ಕೌನ್‌ ಬನೇಗಾ ಕರೋಡ್‌ಪತಿ’ ಷೋಗೆ ಆಗ ಪಡೆದದ್ದು 7 ಕೋಟಿ! ಇಷ್ಟೊಂದು ಶ್ರೀಮಂತ ನಟ ತೆರಿಗೆ ತಪ್ಪಿಸಿದ ಬೇನಾಮಿ ಕಂಪೆನಿಗಳಲ್ಲಿ ಡೈರೆಕ್ಟರ್‌ ಆಗಿ ದುಡ್ಡು ಸಂಪಾದಿಸುವುದು.. ಎಲ್ಲಾದರೂ ಉಂಟಾ? ಗೊತ್ತಿಲ್ಲ, ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT