ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಿಯಾ’ಶೀಲ ಯುವಕರ ‘ವೆಬ್‌’ಉದ್ಯಮ

ಉತ್ತರ ಕರ್ನಾಟಕದ ಉದ್ಯಮಿಗಳು ಒಂದೇ ಸೂರಿನಡಿ
Last Updated 14 ಸೆಪ್ಟೆಂಬರ್ 2013, 9:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಉದ್ಯಮಿ­ಗಳನ್ನು ಒಂದೇ ಸೂರಿನಡಿ ಸೇರಿಸುವ ನಿಟ್ಟಿನಲ್ಲಿ ಕಳೆದೊಂದು ವರ್ಷ­ದಿಂದ ಧಾರವಾಡದ ಹಲವು ಯುವ­ಕರು ಸೇರಿ ‘ಕ್ರಿಯಾ’ ಎಂಬ ಸಂಸ್ಥೆ­ಯೊಂದನ್ನು ಹುಟ್ಟುಹಾಕಿದ್ದು ಕೆಲ ತಿಂಗಳ ಹಿಂದೆ ಇದಕ್ಕೆ ಪೂರಕ ‘ವೆಬ್‌ಸೈಟ್’ ಕೂಡ ಅಭಿವೃದ್ಧಿ ಪಡಿಸಿದ್ದಾರೆ.

ವಾಣಿಜ್ಯ, ಎಂಜನಿಯರಿಂಗ್‌, ಎಂಬಿಎ, ಎಂಎಸ್‌ ಮತ್ತಿತರ ಪದವಿ­ಗಳನ್ನು ಪಡೆದು ವಿವಿಧೆಡೆ ಉದ್ಯೋಗ­ದಲ್ಲಿದ್ದ ಒಂಬತ್ತು ಮಂದಿ ಸ್ನೇಹಿತರು ಅದನ್ನು ತೊರೆದು  ‘ಕ್ರಿಯಾ’ ಸಂಸ್ಥೆ ಹುಟ್ಟುಹಾಕಿದ್ದಾರೆ. ಅಮರಗೋಳದ ಎಪಿಎಂಸಿಯಲ್ಲಿ ಶುಕ್ರವಾರದಿಂದ ಆರಂಭ­ವಾದ  ಕೈಗಾರಿಕಾ ವಸ್ತುಪ್ರದ­ರ್ಶನ ‘ಇನ್‌ಕಾಮೆಕ್ಸ್‌–2013’ದಲ್ಲಿ ಮಳಿಗೆಯೊಂದನ್ನು ಕೂಡ ತೆರೆದಿದ್ದಾರೆ.

‘ಬೀದರ್‌, ಗುಲ್ಬರ್ಗ, ವಿಜಾಪುರ, ರಾಯಚೂರು, ಬೆಳಗಾವಿ, ಬಾಗಲ­ಕೋಟೆ, ಕೊಪ್ಪಳ, ಬಳಾ್ಳರಿ, ಧಾರ­ವಾಡ, ಗದಗ, ಹಾವೇರಿ ಒಳಗೊಂಡ ಉತ್ತರ ಕರ್ನಾಟಕದ ಉದ್ಯಮಗಳ ಮಾಹಿತಿಗಳನ್ನು ವೆಬ್‌ಸೈಟ್‌­(www.nkii.in)ಗೆ ಹಾಕಲಾಗಿದೆ. ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ’ ಎಂದು ಕ್ರಿಯಾ ಸಂಸ್ಥೆಯ ಶಿವಕುಮಾರ ಹನ್ಸಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದಕ್ಕಾಗಿ ಸುಮಾರು 2 ವರ್ಷ ಕಷ್ಟಪಟ್ಟಿದ್ದೇವೆ. ಆದರೆ ಈ ಭಾಗದಲ್ಲಿ ಶೇ 15–20ರಷ್ಟು ಉದ್ಯಮಿಗಳು ಮಾತ್ರವೇ ಅಂತರ್ಜಾಲವನ್ನು ಬಳಕೆ ಮಾಡುತ್ತಾರೆ. ಉಳಿದವರು ಅಂತ­ರ್ಜಾಲ ಬಳಕೆ ಮಾಡುವುದಿಲ್ಲ. ಇದು ಸ್ವಲ್ಪ ಮಟ್ಟಿಗೆ ಸಮಸ್ಯೆ’ ಎನ್ನುತ್ತಾರೆ ಸಂಸ್ಥೆಯ ರಾಘವೇಂದ್ರ ಎ.ಮುದಗಲ್‌.

‘ಕೇವಲ ಉದ್ಯಮಿಗಳ ಕುರಿತಾದ ವೆಬ್‌ಸೈಟ್‌ ಮಾತ್ರವಲ್ಲ. ಮಾರುಕಟ್ಟೆ ಕುರಿತಾದ ಸಮಗ್ರ ಮಾಹಿತಿಗಳನ್ನು ಕೂಡ ನಾವು ಈ ಸಂಸ್ಥೆ ಮೂಲಕ ನೀಡುತ್ತೇವೆ. ಕಾರ್ಯಕ್ರಮ ನಿರ್ವಹಣೆ, ತರಬೇತಿ, ವಿವಿಧ ಸೇವೆ, ಸಾಮಗ್ರಿಗಳ ಪೂರೈಕೆ, ಕಟ್ಟಡ ನಿರ್ಮಾಣ, ನಿವೇಶನ ಮಾಹಿತಿ ಮತ್ತಿತರ ಸೌಲಭ್ಯಗಳನ್ನು ಕೂಡ ನಮ್ಮದೇ ಸಂಸ್ಥೆಯಿಂದ ಒದಗಿಸಿಕೊಡುತ್ತೇವೆ’ ಎಂದು ಅವರು ತಿಳಿಸಿದರು.

ಉದ್ಯಮಿಗಳ ಡೈರೆಕ್ಟರಿ
‘ನಾವೆಲ್ಲರೂ ಉತ್ತರ ಕರ್ನಾಟಕದವರೇ ಆಗಿರುವ ಕಾರಣ ಈ ಭಾಗವನ್ನೇ ಕೇಂದ್ರೀಕರಿಸಿದ್ದೇವೆ. ಮುಂದಿನ ಕೆಲವೇ ದಿನಗಳಲ್ಲಿ ಈ 12 ಜಿಲ್ಲೆಗಳ ಉದ್ಯಮಿಗಳ ಡೈರೆಕ್ಟರಿ ಹೊರತರಲಿದ್ದೇವೆ. ಸದ್ಯಕ್ಕೆ ಅದರ ಕೆಲಸ ಕಾರ್ಯ ನಡೆದಿದೆ. ಆಯಾ ಜಿಲ್ಲೆ, ಅಲ್ಲಿನ ಉದ್ಯಮಗಳು, ಉತ್ಪಾದನಾ ಮಾಹಿತಿ, ಆರ್ಥಿಕತೆ, ಔದ್ಯೋಗಿಕ ಪ್ರಗತಿ, ಔದ್ಯೋಗಿಕ ಸಾಧ್ಯತೆಗಳು, ಹಣಕಾಸಿನ ಅನುಕೂಲತೆ, ಮೂಲಸೌಕರ್ಯ ಲಭ್ಯತೆ ಸೇರದಂತೆ ಸಮಗ್ರ ಮಾಹಿತಿ  ಒಳಗೊಳ್ಳಲಿದೆ’

‘ಜತೆಗೆ ಜಿಲ್ಲೆಯಲ್ಲಿನ ಔದ್ಯೋಗಿಕ ಕ್ಷೇತ್ರಗಳಿಗೆ ವಾಹನ ಸೌಲಭ್ಯ, ಅಲ್ಲಿ ವಿಚಾರ ಸಂಕಿರಣ ಆಯೋಜಿಸಲು ಸ್ಥಳಾವಕಾಶ, ಸಮ್ಮೇಳನ ಆಯೋಜನೆ ಮಾಡುವುದಿದ್ದರೆ ಅಗತ್ಯದ ನೆರವು ಸೇರಿದಂತೆ ನಾವು ಸಮಗ್ರವಾದ ಔದ್ಯೋ­­ಗಿಕ ಅವಕಾಶಗಳ ಮಾಹಿತಿಗಳನ್ನು ಅದರಲ್ಲಿ ಸೇರ್ಪಡೆ ಮಾಡುತ್ತಿದ್ದೇವೆ’ ಎಂದರು.

ಕ್ಲಾಸ್‌ಮೇಟ್‌ಗಳೆಲ್ಲ ಒಂದೆಡೆ...
ಏನಾದರೂ ಹೊಸ  ಕೆಲಸ ಮಾಡಬೇಕು ಎನ್ನುವುದು ಒಂದೆಡೆಯಾದರೆ ಕ್ರಿಯಾತ್ಮಕವಾಗಿ ತಮ್ಮ ಸೃಜನಶೀಲತೆ ಬಳಕೆ ಮಾಡಬೇಕು ಎನ್ನುವ ತುಡಿತದಲ್ಲಿ ಹುಟ್ಟಿಕೊಂಡಿದ್ದೇ ‘ಕ್ರಿಯಾ’ ಸಂಸ್ಥೆ. ಕಳೆದ ವರ್ಷ ಸೆಪ್ಟೆಂಬರ್‌ 27ರಂದು ಧಾರವಾಡದ ಲಕ್ಷ್ಮಿನಗರದಲ್ಲಿ ಹಾಗೂ ಬೆಂಗಳೂರಿನ ರಾಜಾಜಿನಗರದಲ್ಲಿ ಕಚೇರಿಯನ್ನು ಆರಂಭಿಸಿದ ‘ಕ್ರಿಯಾ’ ಸಂಸ್ಥೆ ಇನ್ನೇನು ಒಂದು ವರ್ಷ ಪೂರೈಸುತ್ತಿದೆ.

ಈ ಸಂಸ್ಥೆಯಲ್ಲಿ ಎಂ.ಎಸ್‌.ಸತೀಶ್‌ (ಬಿಇ), ರಾಘವೇಂದ್ರ ಮುದಗಲ್‌ (ಎಂ.ಟೆಕ್‌), ಶಿವಕುಮಾರ ಹನ್ಸಿ (ಎಂಬಿಎ)­,­ರಾಕೇಶ್‌ ಸಾಳುಂಕೆ (ಎಂಎಸ್‌), ರಂಗಪ್ಪ ಜೆ.(ಬಿಇ),ಕಿರಣ ಪಾಟೀಲ (ಡಿಪ್ಲೊಮಾ ಸಿವಿಲ್‌),­ಸವಿತಾ ಎಸ್‌.ಎಂ.­(ಬಿಕಾಂ),­ರಾಘ­ವೇಂದ್ರ ಪೂಜಾರಿ (ಬಿಕಾಂ),­ಪ್ರಕಾಶ ಮಹಾಲೆ (ಬಿಬಿಎ) ಸೇರಿದ್ದಾರೆ. ಇವರಲ್ಲಿ ಸತೀಶ್‌ ಮತ್ತು ಸವಿತಾ ಹೊರತುಪಡಿಸಿದರೆ ಉಳಿದವರೆಲ್ಲ ಕ್ಲಾಸ್‌ಮೇಟ್‌ಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT