ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಿಸ್ತನಿಲ್ಲದ ಕ್ರಿಸ್‌ಮಸ್‌ ಆಚರಣೆ ಸಲ್ಲದು’

Last Updated 24 ಡಿಸೆಂಬರ್ 2013, 7:13 IST
ಅಕ್ಷರ ಗಾತ್ರ

ಧಾರವಾಡ: ಕ್ರಿಸ್ತನ ಬೋಧನೆಗಳು ಮನುಕುಲವನ್ನು ಉದ್ಧಾರಗೊಳಿಸುತ್ತವೆ. ಎಷ್ಟೋ ಪಾಪ ಮಾಡಿದವರು ಕ್ರಿಸ್ತನ ಸುವಾರ್ತೆ (ಗಾಸ್ಪೆಲ್‌)ಗಳನ್ನು ಕೇಳಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಏಸುವನ್ನು ಮರೆತೇ ಕ್ರಿಸ್‌ಮಸ್‌ ಆಚರಿಸುವ ಪ್ರವೃತ್ತಿ ಕಂಡು ಬರುತ್ತಿದೆ. ಬರೀ ಆಡಂಬರವೇ ಕ್ರಿಸ್‌ಮಸ್‌ ಹಬ್ಬವನ್ನು ಆವರಿಸಿಕೊಳ್ಳಬಾರದು. ಕ್ರಿಸ್ತನಿಲ್ಲದೇ ಕ್ರಿಸ್‌ಮಸ್‌ ಆಚರಣೆ ಸಲ್ಲದು.

–ಇದು ಚರ್ಚ್‌ ಆಫ್‌ ಸೌಥ್‌ ಇಂಡಿಯಾ (ಸಿಎಸ್‌ಐ)ದ ಉತ್ತರ ಸಭಾ ಪ್ರಾಂತದ (ಕೆಎನ್‌ಡಿ) ರೈಟ್‌ ರೆವರೆಂಡ್‌ ರವಿಕುಮಾರ್‌ ಜೆ,ನಿರಂಜನ ಅವರ ಸ್ಪಷ್ಟ ನುಡಿ.

ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತ ಧರ್ಮದ ಉಗಮ, ಅದರ ಆಚರಣೆಗಳು, ಹಳೆಯ ಕಂದಾಚಾರಗಳನ್ನು ಪ್ರಶ್ನಿಸಿದ ಮಾರ್ಟಿನ್‌ ಲೂಥರ್ ಅವರ ಬಂಡಾಯ, ಧರ್ಮದ ಮೂಲಕ ದೇಶದಲ್ಲಿ ಶಾಂತಿ ಸ್ಥಾಪನೆಯ ಕುರಿತು ತಮ್ಮ ಅನಿಸಿಕೆಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪ್ರಶ್ನೋತ್ತರ ರೂಪ ಇಲ್ಲಿದೆ.

* ಕ್ರೈಸ್ತರಲ್ಲಿ ಕ್ಯಾಥೊಲಿಕ್‌ ಮತ್ತು ಪ್ರೊಟಸ್ಟಂಟ್‌ ಎಂಬ ಪಂಗಡಗಳಿವೆ. ಇವುಗಳ ನಡುವಿನ ಮೂಲ ವ್ಯತ್ಯಾಸವೇನು?
ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಕ್ರಿಶ್ಚಿಯನ್‌ ಧರ್ಮವೂ ಒಂದು. ರೋಮನ್‌ ಕ್ಯಾಥೊಲಿಕ್ ಎಂಬುದು ವಿಶ್ವದ ಕ್ರೈಸ್ತರ ಬಹುಮುಖ್ಯ ಶ್ರದ್ಧಾಕೇಂದ್ರ. ಕ್ಯಾಥೊಲಿಕ್‌ ಎಂದರೆ ಸಾರ್ವತ್ರಿಕತೆ. ಕ್ಯಾಥೊಲಿಕ್‌ ಮತ್ತು ಪ್ರೊಟಸ್ಟಂಟ್‌ ಪಂಗಡಗಳ ಮಧ್ಯೆ ಚಾರಿತ್ರಿಕ ಹಾಗೂ ತಾತ್ವಿಕ ಭಿನ್ನತೆಗಳಿವೆ. ಮುಖ್ಯವಾಗಿ ಕ್ಯಾಥೊಲಿಕ್‌ ಪಂಗಡದವರು ಯೇಸುವಿನ ತಾಯಿ ಮೇರಿ­ಯನ್ನು ದೈವಾಂಶ ಸಂಭೂತೆಯೆಂದು ಪೂಜಿ­ಸುತ್ತಾರೆ. ಆ ಪಂಗಡದಲ್ಲಿ ಯೇಸುವಿಗಿಂತ ಯೇಸುವಿಗೆ ಹೆಚ್ಚಿನ ಮಹತ್ವ ಇದೆ. ಆದರೆ, ಪ್ರೊಟಸ್ಟಂಟರಲ್ಲಿ ಯೇಸುವೇ ಸರ್ವಸ್ವ. ಅಲ್ಲದೇ, ಕ್ಯಾಥೊಲಿಕ್‌ನಲ್ಲಿನ ಕೆಲ ಆಚರಣೆಗಳನ್ನು 1517ರಲ್ಲಿ ಜರ್ಮನಿಯ ಮಾರ್ಟಿನ್‌ ಲೂಥರ್‌ ಎಂಬುವವರು ಪ್ರತಿಭಟಿ­ಸಿದರು. ಪ್ರತಿಭಟನೆಯ ಇಂಗ್ಲಿಷ್‌ನಲ್ಲಿ ‘ಪ್ರೊಟೆಸ್ಟ್‌’ ಎಂದು ಕರೆಯುವುದರಿಂದ ಮಾರ್ಟಿನ್‌ ಲೂಥರ್‌ ಅವರ ಅನುಯಾಯಿಗಳನ್ನು ‘ಪ್ರೊಟಸ್ಟಂಟರು’ ಎಂದು ಕರೆಯಲಾಯಿತು.

*  ಪಾಪ ಮಾಡಿದವರು ಇಂತಿಷ್ಟು ದೇಣಿಗೆ ನೀಡಿ­ದರೆ ಚರ್ಚ್‌ನಲ್ಲಿ ಕ್ಷಮಿಸುವ ಪದ್ಧತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಈ ಪದ್ಧತಿಯನ್ನು ‘ಪಾಪ ಕಳೆಯಲು ಚೀಟಿಗಳನ್ನು ಮಾರುವುದು’ ಎಂದೇ ಕರೆಯಲಾಗುತ್ತದೆ. ಸಾಕಷ್ಟು ದುಡ್ಡಿದ್ದವನು ಪಾಪ ಮಾಡಿ ಚರ್ಚ್‌ಗೆ ಬಂದು ಪಾಪ ಮಾಡಿದ್ದೇನೆ ಕ್ಷಮಿಸು ಎಂದರೆ, ಪಾದ್ರಿಯು, ‘ಇಂತಿಷ್ಟು ತಪ್ಪು ದಂಡ ಕಟ್ಟಿದರೆ ನಿನ್ನ ಪಾಪ ಪರಿಹಾರ­ವಾಗುತ್ತದೆ’ ಎನ್ನುತ್ತಿದ್ದರು. ಪಾಪ ಕಳೆಯುವ ಈ ಸರಳ ಮಾರ್ಗದ ಬಗ್ಗೆ ಬೈಬಲ್‌ನಲ್ಲಿ ಎಲ್ಲಿಯೂ ಹೇಳಿಲ್ಲ. ಆದ್ದರಿಂದ ಈ ಆಚರಣೆಯನ್ನು ಮಾರ್ಟಿನ್ ಲೂಥರ್‌ ಖಂಡಿಸಿದರು. ಅಲ್ಲದೇ, ಜರ್ಮನಿಯ ವಿಟೆನ್‌ ಬರ್ಗ್‌ ನಗರದ ಚರ್ಚ್‌ ಮುಂದೆಯೂ ‘95 ಥಿಸಿಸ್‌’ ಎಂಬ ಹೆಸರಿನಲ್ಲಿ ಪತ್ರವನ್ನು ಚರ್ಚ್‌ನ ಬಾಗಿಲಿಗೆ ಬಡಿದಿದ್ದರು. ಅದರಲ್ಲಿ ಪಾಪ ಪರಿಹಾರಕ್ಕೆ ಹಣ ಪಡೆಯುವ ನಿಲುವನ್ನೂ ತೀವ್ರ ಟೀಕೆಗೆ ಒಳಪಡಿಸಿದ್ದರು.

* ಕ್ರಿಸ್‌ಮಸ್‌ ಹಬ್ಬದ ಈ ಸಂದರ್ಭದಲ್ಲಿ ನಿಮ್ಮ ಸಂದೇಶ ಏನು?
ಯೇಸು ನಮ್ಮನ್ನು ಪ್ರೀತಿಸಿದಂತೆ ನಾವು ಜಾತಿ, ಭೇದ ಎಂದೆಣಿಸದೇ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಕ್ರಿಸ್‌ಮಸ್ ಕೇವಲ ಕೈಸ್ತ ಜನಾಂಗಕ್ಕೆ ಸೀಮಿತವಾದ ಹಬ್ಬವಲ್ಲ. ಕೈಸ್ತ ಬಾಂಧವರ ಜೊತೆಯಲ್ಲಿ ಕ್ರೈಸ್ತೇತರರು ಸಕ್ರಿಯವಾಗಿ ಭಾಗವಹಿಸುವ ಹಬ್ಬ.
ಕ್ರಿಸ್ತ ಜಯಂತಿಯು ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ, ನೆಮ್ಮದಿ ನೀಡಲಿ. ಈಗ ಜಗತ್ತಿನಲ್ಲಿ ಎಲ್ಲಿ ನೋಡಿದಲ್ಲಿ ಅಶಾಂತಿ, ಹಿಂಸೆ, ಅವಿಧೇಯತೆ, ದಾಸ್ಯ, ಕೊಲೆ, ದರೋಡೆ, ಲಂಚ, ಶೋಷಣೆಗಳಿಂದ ಜನ ಕಂಗೆ­ಟ್ಟಿದ್ದಾರೆ. ಆದ್ದರಿಂದ ಜಗದ ಜನರನ್ನು ವಿಮುಕ್ತಿ­ಗೊಳಿಸಲು ಯೇಸು ಮನುಷ್ಯರೂಪ ತಾಳಿ ಈ ಲೋಕಕ್ಕೆ ಬಂದನು. ಶಾಂತಿ ಸಮಾಧಾನ ನಮಗೆ ಸಿಗ­ಬೇಕಾದರೆ ನಾವು ಇಂದು ಒಳ್ಳೆಯದರತ್ತ ಸಾಗಬೇಕು.

ಭಯೋತ್ಪಾದನೆ ಧರ್ಮದ ಹೆಸರಿನಲ್ಲಿ ಗೊಂದಲ ತಾಂಡವಾಡುತ್ತಿರುವ ಈ ಸಮಯದಲ್ಲಿ ಜನತೆಗೆ ಬೇಕಾಗಿದ್ದು ಶಾಂತಿ ಹಾಗೂ ಸಮಾಧಾನ. ಇದನ್ನು ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದ ಯೇಸು ಕ್ರಿಸ್ತನು ಈ ಲೋಕಕ್ಕೆ  ಸಾರಿದನು. ಈಗ ನಾವು ಸಹೋದರತ್ವ, ಪ್ರೀತಿ, ಅನ್ಯೋನ್ಯತೆ, ಭ್ರಾತೃತ್ವದಿಂದ ಸಾಗಬೇಕು. ಅಂದಾಗ ಕ್ರಸ್‌ಮಸ್‌ ಹಬ್ಬಕ್ಕೆ ನಿಜವಾದ ಮಹತ್ವ ಬರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT