ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶ’

Last Updated 8 ಏಪ್ರಿಲ್ 2014, 8:11 IST
ಅಕ್ಷರ ಗಾತ್ರ

ಬೆಳಗಾವಿ: ಕಾಂಗ್ರೆಸ್‌ ಭದ್ರಕೋಟೆಯಂತಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರವು ಇದೀಗ ಕಳೆದ ಎರಡು ಅವಧಿಯಿಂದ ‘ಕಮಲ’ ಪಾಳಯದ ಪಾಲಾಗಿದೆ. ‘ಕಮಲ’ದ ತೆಕ್ಕೆಯಿಂದ ಬಿಡಿಸಿಕೊಳ್ಳಲು ‘ಕೈ’ ಹೊಸ ತಂತ್ರ ಹೆಣೆದಿದ್ದು, ಈ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಕಣಕ್ಕಿಳಿದಿರುವ ಲಕ್ಷ್ಮಿ ಹೆಬ್ಬಾಳ್ಕರ ಪಕ್ಷ ಸಂಘಟನೆಯಲ್ಲಿ ಹಳಬರಾದರೂ, ಚುನಾವಣಾ ಕಣದಲ್ಲಿ ಹೊಸಬರಾಗಿದ್ದಾರೆ. ಕಳೆದ 15 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿರುವ ಹೆಬ್ಬಾಳ್ಕರ ಅವರು ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ದುಡಿದಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ದುಡಿಯುತ್ತಿರುವ ಹೆಬ್ಬಾಳ್ಕರ, ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಅತ್ಯಂತ ಹುಮ್ಮಸ್ಸು, ಹುರುಪಿನಿಂದ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಹೆಬ್ಬಾಳ್ಕರ್‌ ಅವರು ತಮ್ಮ ಬಿಡುವಿಲ್ಲದ ಸಮಯದಲ್ಲೂ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

* ಪ್ರಶ್ನೆ: ಕಾಂಗ್ರೆಸ್‌ನಲ್ಲಿ ಕುಟುಂಬ ನಾಯಕತ್ವ ಇದೆಯೇ?
ಲಕ್ಷ್ಮಿ:
‘ಕಾಂಗ್ರೆಸ್‌ ವ್ಯಕ್ತಿ ಆಧಾರಿತ ಪಕ್ಷವಲ್ಲ. ಪ್ರಜಾಪ್ರಭುತ್ವದ ಗಟ್ಟಿ ತಳಹದಿಯನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ. ಯಾವುದೇ ಕುಟುಂಬದ ಅಧೀನದಲ್ಲಿರುವ ಪಕ್ಷ ಇದಲ್ಲ. ಆದರೆ, ಪಕ್ಷಕ್ಕೆ ಹಾಗೂ ದೇಶಕ್ಕೆ ಗಾಂಧಿ ಮನೆತನದವರ ತ್ಯಾಗ ದೊಡ್ಡದಿದೆ. ಸಾಮಾಜಿಕ ನ್ಯಾಯ ಒದಗಿಸಿರುವುದು ಕಾಂಗ್ರೆಸ್‌ ಪಕ್ಷ ಮಾತ್ರ. ದೇಶ ಉಳಿಯಲು ಕಾಂಗ್ರೆಸ್‌ ಪಕ್ಷ ಉಳಿಯಲೇಬೇಕು.

* ಪ್ರಶ್ನೆ: ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿವೆಯೇ?
ಲಕ್ಷ್ಮಿ: ‘
ಪಕ್ಷದ ಜಿಲ್ಲಾ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ನಾಯಕರು ನನ್ನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಸಚಿವರು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಗೆಲ್ಲಲೇಬೇಕು ಎಂದು ಪಣತೊಟ್ಟು ದುಡಿಯುತ್ತಿದ್ದಾರೆ. ಎಲ್ಲರೂ ನನ್ನೊಂದಿಗೆ ಇದ್ದಾರೆ. ನನ್ನ ಗೆಲವು ಅವರಿಗೆ ಸಲ್ಲುತ್ತದೆ.

* ಪ್ರಶ್ನೆ: ನಿಮ್ಮ ಕ್ಷೇತ್ರದ ಸಮಸ್ಯೆಗಳೇನು?
ಲಕ್ಷ್ಮಿ:
‘ಕುಡಿಯುವ ನೀರಿನ ಸಮಸ್ಯೆ ದೊಡ್ಡದಿದೆ. ಪ್ರತಿಯೊಂದು ಗ್ರಾಮದಲ್ಲಿ ಈ ಸಮಸ್ಯೆ ಇದೆ. ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕಿದೆ. ಜನರಿಗೆ ಮನೆ, ರಸ್ತೆ, ನೀರು, ವಿದ್ಯುತ್‌, ಪಡಿತರ ಚೀಟಿ ಅವಶ್ಯಕತೆ ಇದೆ. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಹಿಂದಿನ ಸಂಸದರು ಕೇವಲ ಸಮುದಾಯ ಭವನ, ಗುಡಿ–ಗುಂಡಾರಕ್ಕೆ ತಮ್ಮ ಅನುದಾನ ನೀಡಿದ್ದಾರೆ. ಇದರಿಂದ ಜನರ ಸಮಸ್ಯೆಗಳು ಬಗೆಹರಿದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೂರಾರು ಯೋಜನೆಗಳಿಂದ ಈಗ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಈಗಾಗಲೇ ಕ್ಷೇತ್ರದ 611 ಹಳ್ಳಿಗಳಲ್ಲಿ ಸುತ್ತಾಡಿದ್ದು, ಜನಸಾಮಾನ್ಯರ, ಬಡವರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಸಮಸ್ಯೆಗಳಿಗೆ ಸಾಧ್ಯವಾದಷ್ಟು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಮಾಜ ಸೇವೆಯೇ ನನ್ನ ಉಸಿರಾಗಿದೆ.

* ಪ್ರಶ್ನೆ: ನಿಮ್ಮ ಮುಂದಿನ ಯೋಜನೆಗಳೇನು?
ಲಕ್ಷ್ಮಿ:
‘ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕನಸುಗಳನ್ನು ಹೊಂದಿದ್ದೇನೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಅಗತ್ಯವಿದ್ದು, ಇದನ್ನು ಈಡೇರಿಸುವ ಗುರಿ ಹೊಂದಿದ್ದೇನೆ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು, ರೈತರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವುದು. ಕ್ಷೇತ್ರದ ಐದು ತಾಲ್ಲೂಕುಗಳಲ್ಲಿ ಮಹಿಳೆಯರಿಗಾಗಿ ಗಾರ್ಮೆಂಟ್‌ ಕಾರ್ಖಾನೆ ಆರಂಭಿಸುವ ಉದ್ದೇಶವಿದೆ. ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ಪ್ರತಿಯೊಬ್ಬರ ಆರೋಗ್ಯ ಸುಧಾರಣೆಗೆ ಒತ್ತು ನೀಡುವುದು. ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಬರಮಾಡಿಕೊಂಡು ಸಾವಿರಾರು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇನೆ.

* ಪ್ರಶ್ನೆ: ಮತ ನೀಡಬೇಕು?
ಲಕ್ಷ್ಮಿ:
‘ಕಳೆದ 15 ವರ್ಷಗಳಿಂದ ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನ ಶಕ್ತಿ ಮೀರಿ ದುಡಿದಿದ್ದೇನೆ. ನನ್ನ ಬಳಿ ಬಂದವರ ಪ್ರತಿಯೊಬ್ಬರ ಕಷ್ಟ–ಸುಖಗಳಿಗೆ ನನ್ನಿಂದಾದ ಸಹಾಯ ಮಾಡಿದ್ದೇನೆ. ಜಾತ್ಯತೀತ ನೆಲೆಗಟ್ಟಿನ ಮೇಲೆ ಈವರೆಗೆ ಕೆಲಸ ಮಾಡಿದ್ದೇನೆ. ರಾಜಕೀಯ ಅಧಿಕಾರ ಈವರೆಗೆ ಸಿಗದಿದ್ದರೂ ಸಹ ಕ್ಷೇತ್ರದ ಜನರ ಪ್ರಗತಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಅನ್ಯಾಯದ ವಿರುದ್ಧ ಹೋರಾಡುತ್ತ ಬಂದಿದ್ದೇನೆ.

‘ಒಬ್ಬ ಮಹಿಳೆಯಾಗಿ ನಾನು ಅನೇಕ ಹೋರಾಟಗಳನ್ನು ಮಾಡಿದ್ದೇನೆ, ರಾಜಕೀಯ ಹೋರಾಟದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ಜಿಲ್ಲೆಯ ಸಹೋದರ, ಸಹೋದರಿಯರು ನೀಡಿದ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಒಮ್ಮೆ ಅವಕಾಶ ಕೊಡಿ, ಅಭಿವೃದ್ಧಿಯ ಹೊಳೆಯನ್ನೇ ಹರಿಸುತ್ತೇನೆ’ ಎಂದು ಲಕ್ಷ್ಮಿ ಹೆಬ್ಬಾಳ್ಕರ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT