ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಪ್ಸಿ’ಏರದೇ ಹಟ ಹಿಡಿದ ಅಲಿಖಾನ್‌

ಹೀಗೆ ವರ್ತಿಸಿದರೆ ಬಿಎಂಟಿಸಿ ಬಸ್‌ ಹತ್ತಿಸುತ್ತೇವೆ– ಕೋರ್ಟ್‌
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ಜಿ.ಜನಾ­ರ್ದನ ರೆಡ್ಡಿ ಅವರ ಆಪ್ತ ಕೆ.ಮೆಹಫೂಜ್‌ ಅಲಿಖಾನ್‌ ತನ್ನನ್ನು ಜಿಪ್ಸಿ­ಯಲ್ಲಿ ಕರೆ­ದೊಯ್ಯ­­ಬಾರದು ಎಂದು ರಚ್ಚೆಹಿಡಿದು ಸಿಟಿ ಸಿವಿಲ್‌ ನ್ಯಾಯಾ­ಲಯ­ದಲ್ಲಿ ಬುಧವಾರ ಗದ್ದಲ ಮಾಡಿದ್ದಾನೆ.

ಮತ್ತೆ ಈ ರೀತಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಬಿಐ ವಿಶೇಷ ನ್ಯಾಯಾಲಯ ಎಚ್ಚರಿಕೆ ಕೊಟ್ಟ ನಂತರ ಮೆತ್ತಗಾಗಿದ್ದಾನೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅಲಿ­ಖಾನ್‌, ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್‌ ನಾಗರಾಜ್‌ ಅವರನ್ನು ಬೇಲೆಕೇರಿ ಬಂದರಿನ ಮೂಲಕ ನಡೆದಿರುವ ಅದಿರು ಕಳ್ಳಸಾಗಣೆ ಬಗ್ಗೆ ವಿಚಾರಣೆ ನಡೆಸಲು ವಶಕ್ಕೆ ನೀಡುವಂತೆ ಸಿಬಿಐ ಮನವಿ ಸಲ್ಲಿಸಿತ್ತು.  ಇದನ್ನು ಮಾನ್ಯ ಮಾಡಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಶ್ರೀಶಾನಂದ ಅವರು, ಮೂವರು ಆರೋಪಿಗಳನ್ನೂ ಇದೇ 30ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ಬೆಳಿಗ್ಗೆ ಆದೇಶ ಹೊರಡಿಸಿದ್ದರು.

ಆರೋಪಿಗಳನ್ನು ಸಿಬಿಐ ಕಚೇರಿಗೆ ಕರೆದೊಯ್ಯಲು ಎರಡು ವಾಹನಗಳನ್ನು ತನಿಖಾ ತಂಡ ಸಿದ್ಧ ಮಾಡಿಕೊಂಡಿತ್ತು. ಟಾಟಾ ಸುಮೋದಲ್ಲಿ ಖಾರದಪುಡಿ ಮಹೇಶ್‌ ಮತ್ತು ಸ್ವಸ್ತಿಕ್‌ ನಾಗರಾಜ್‌­ನನ್ನು ಕರೆದೊಯ್ದರು. ಜಿಪ್ಸಿಯಲ್ಲಿ ಅಲಿಖಾನ್‌ನನ್ನು ಕರೆ­ದೊಯ್ಯಲು ಮುಂದಾದರು. ಆದರೆ, ಜಿಪ್ಸಿ ಹತ್ತಲು ನಿರಾಕರಿಸಿದ ಅಲಿಖಾನ್‌, ಬೇರೆ ವಾಹನ ತರುವಂತೆ ರಚ್ಚೆ ಹಿಡಿದ.

‘ನಾನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದವನು. ಜಿಪ್ಸಿಯಲ್ಲಿ ಬರಲು ನನಗೆ ಆಗುವುದಿಲ್ಲ. ಇನ್ನೋವಾ ತರಿಸಿ, ಅದರಲ್ಲಿ ನನ್ನನ್ನು ಕರೆದೊಯ್ಯಿರಿ’ ಎಂದು ಹಟ ಹಿಡಿದ.  ವಾಹನ ಹತ್ತುವಂತೆ ಸಿಬಿಐ ಪೊಲೀಸರು ಹಲವು ಬಾರಿ ಸೂಚಿಸಿದರೂ ಆತ ಒಪ್ಪಲಿಲ್ಲ. ಜೋರಾಗಿ ಕಿರುಚಾಡಿ ಗದ್ದಲ ನಡೆಸಿದ.

ಆರೋಪಿಯನ್ನು ವಾಪಸು ನ್ಯಾಯಾಲಯಕ್ಕೆ ಕರೆತಂದ ಸಿಬಿಐ ಅಧಿಕಾರಿಗಳು, ಮಧ್ಯಾಹ್ನದ ಬಳಿಕ ನ್ಯಾಯಾಧೀಶರ ಎದುರು ಹಾಜರು­ಪಡಿಸಿದರು. ಜಿಪ್ಸಿಯಲ್ಲಿ ಸಿಬಿಐ ಕಚೇರಿಗೆ ತೆರಳಲು ಅಲಿಖಾನ್‌ ನಿರಾಕರಿಸುತ್ತಿರುವ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಕಠಿಣ ಕ್ರಮದ ಎಚ್ಚರಿಕೆ: ಆರೋಪಿ­ಯನ್ನು ತೀವ್ರವಾಗಿ ತರಾಟೆಗೆ ತೆಗೆದು­ಕೊಂಡ ನ್ಯಾಯಾಧೀಶರು, ‘ಪದೇ ಪದೇ ಈ ರೀತಿ ವರ್ತಿಸಿದರೆ ನಿಮ್ಮ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸ­ಲಾಗುವುದು. ಆರೋಪಿ ಸ್ಥಾನದಲ್ಲಿ ಇರು­ವವರನ್ನು ಕೆಂಪುದೀಪದ ಕಾರಿನಲ್ಲಿ ಕರೆದೊಯ್ಯುವು­ದಿಲ್ಲ. ತನಿಖಾ ತಂಡದ ಬಳಿ ಇರುವ ವಾಹನದಲ್ಲಿ ಕರೆದೊಯ್ಯಲಾಗುತ್ತದೆ. ಇನ್ನೊಮ್ಮೆ ಹೀಗೆ ಮಾಡಿದರೆ ಬಿಎಂಟಿಸಿ ಬಸ್ಸಿನಲ್ಲೇ ಕರೆದೊಯ್ಯುವಂತೆ ಆದೇಶಿಸ­ಬೇಕಾ­ಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಆರೋಪಿಯನ್ನು ವಿಚಾರಣೆಗೆ ಕರೆದೊಯ್ಯುವಾಗ ಮತ್ತು ವಾಪಸು ಕರೆ­ದೊಯ್ಯುವಾಗ ಅನುಚಿತ­ವಾಗಿ ವರ್ತಿಸಿ­ದಲ್ಲಿ ವಿಡಿಯೊ ಸಹಿತ ವರದಿ ನೀಡುವಂತೆ ಸಿಬಿಐ ಅಧಿಕಾರಿಗಳಿಗೆ ನ್ಯಾಯಾ­ಧೀಶರು ಸೂಚಿಸಿದರು. ಮತ್ತೊಮ್ಮೆ ಈ ರೀತಿ ವರ್ತಿಸಿದಂತೆ ಆರೋಪಿಗೆ ತಾಕೀತು ಮಾಡಿ, ಅನುಚಿತ ವರ್ತನೆ ಮರು­ಕಳಿಸಿದರೆ ಹೈಕೋರ್ಟ್‌ ಮತ್ತು ಸುಪ್ರೀಂ­ಕೋರ್ಟ್‌ಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಅಲಿಖಾನ್‌ನನ್ನು ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಆತನ ತಂದೆ ಇಕ್ಬಾಲ್‌ ಖಾನ್‌ ಅಲ್ಲಿಗೆ ಬಂದಿದ್ದರು. ನ್ಯಾಯಾ­ಲಯದ ಒಳಕ್ಕೆ ಬಿಡುವಂತೆ ಅಲ್ಲಿನ ಮೊಗಸಾಲೆಯಲ್ಲಿ ನ್ಯಾಯಾಲ­ಯದ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆ­ಸಿದ್ದರು. ಈ ಬಗ್ಗೆಯೂ ಅಸಮಾ­ಧಾನ ವ್ಯಕ್ತಪಡಿಸಿದ ಕೋರ್ಟ್, ಇನ್ನೊಮ್ಮೆ ಈ ರೀತಿ ಯಾರಾದರೂ ವರ್ತಿಸಿದರೆ ಕಠಿಣ ಕ್ರಮಕ್ಕೆ ಆದೇಶಿಸುವುದಾಗಿ ಎಚ್ಚರಿಸಿದೆ.

‘ನಾನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದವನು. ಜಿಪ್ಸಿಯಲ್ಲಿ ಬರಲು ನನಗೆ ಆಗುವುದಿಲ್ಲ. ಇನ್ನೋವಾ ತರಿಸಿ, ಅದರಲ್ಲಿ ನನ್ನನ್ನು ಕರೆದೊಯ್ಯಿರಿ’
–ಮೆಹಫೂಜ್‌ ಅಲಿಖಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT