ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾರ್ಶನಿಕರ ಹೆಸರು ಕೆಲವರಿಗೆ ಲಾಭದಾಯಕ’

ಕನಕ ದರ್ಶನ ರೂಪಕ ನಾಟಕ ಸಮ್ಮೇಳನ
Last Updated 2 ಡಿಸೆಂಬರ್ 2013, 6:14 IST
ಅಕ್ಷರ ಗಾತ್ರ

ಶಿವಮೊಗ್ಗ: ದಾರ್ಶನಿಕರ ಹೆಸರುಗಳನ್ನು ಹೇಳಿಕೊಂಡು ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವು ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ದೂರಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಯುವಕ ಮಂಡಳಿ ಹಾಗೂ ಪತಂಜಲಿ ಸ್ವಸಹಾಯ ಸಂಘಗಳ ಒಕ್ಕೂಟ ಸಂಯುಕ್ತವಾಗಿ 526ನೇ ಕನಕದಾಸರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕನಕದಾಸರ ಗೀತಗಾಯನ, ಕನಕ ದರ್ಶನ ರೂಪಕ–ನಾಟಕ–ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ದಾರ್ಶನಿಕರ ಹೆಸರುಗಳೇ ಕೆಲವರಿಗೆ ಲಾಭದಾಯಕವಾಗಿದ್ದು, ಜಾತಿ–ಉಪಜಾತಿಗಳನ್ನು ಸೃಷ್ಟಿಸಿಕೊಳ್ಳುವ ಮೂಲಕ ಸಮಾಜ ಹೊಡೆಯುವ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶ ಒಂದು ಮಾಡಬೇಕು ಎಂಬ ದಾರ್ಶನಿಕರ ಸಂದೇಶಗಳನ್ನು ನೆಪಮಾತ್ರಕ್ಕೆ ಭಾಷಣಗಳಲ್ಲಿ ಹೇಳುವ ಕೆಲವು ಸ್ವಾಮೀಜಿಗಳು, ತಮ್ಮ ಜಾತಿ–ಉಪಜಾತಿಗಳಿಗೆ ಮಣೆಹಾಕುವ ಮೂಲಕ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದರು.

ಸಮಾಜ ಸುಧಾರಿಸಬೇಕು ಎಂದು ಪಣತೊಟ್ಟವರು ಇಂದು ಬೀದಿ ಜಗಳ ಮಾಡುತ್ತಿದ್ದಾರೆ. ಇಂತಹ ಜಗಳವನ್ನು ದೂರದರ್ಶನಗಳು ಸೆರೆಹಿಡಿದು, ಪದೇ ಪದೇ ಬಿತ್ತರಿಸುವ ಮೂಲಕ ಅವರು ಎಲ್ಲೋ ಒಂದು ಕಡೆ ಸಮಾಜ ಹೊಡೆಯುವ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ ಎಂದು ದೂರಿದರು.

ಇಂದಿನ ಸರ್ಕಾರಕ್ಕೆ ‘ಪಲ್ಲಕ್ಕಿ ಉತ್ಸವ ಬೇಕು ಅಥವಾ ಬೇಡ’, ಉಡುಪಿ ಕೃಷ್ಣ ಮಠದಲ್ಲಿ ಕನಕದಾಸರದ್ದು ಚರ್ಚೆಯಾಗುತ್ತಿದೆ. ಆದರೆ, ಸಮಾಜ ಸುಧಾರಿಸುವ ಕಾರ್ಯ ಮಾತ್ರ ಆಗುತ್ತಿಲ್ಲ. ದಾರ್ಶನಿಕರ ವಿಚಾರಧಾರೆಗಳನ್ನು ನಾವು ಅನುಸರಿಸಿದರೆ, ಯಾವುದೇ ಪಾಶ್ಚಿಮಾತ್ಯ ದೇಶಗಳು ಭಾರತ ದೇಶವನ್ನು ಎದುರಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ನಂತರ ಪತಂಜಲಿ ಜೆ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇತೃತ್ವವವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸ್ವಾಮೀಜಿ, ಬಸವಕೇಂದ್ರದ ಬಸವ ಮರುಳಸಿದ್ಧಸ್ವಾಮೀಜಿ ವಹಿಸಿದ್ದರು. ಎಂ.ಈಶ್ವರಪ್ಪ ನವುಲೆ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಗೌರಾವಾಧ್ಯಕ್ಷ ಡಾ.ಎನ್.ಎಲ್.ನಾಯಕ್, ಉಪಾಧ್ಯಕ್ಷ ಕೆ.ದೇವೇಂದ್ರಪ್ಪ, ಗರ್ತಿಕೆರೆ ರಾಘಣ್ಣ, ಹೇಮಾವತಿ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT