ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿಶಾ’ ದೆಸೆ

Last Updated 24 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

‘ಆಶೀರ್ವಾದ’ ಚಿತ್ರದಲ್ಲಿ ಬಿಡುಬೀಸಾಗಿ ಕಾಣಿಸಿಕೊಂಡು ಪಡ್ಡೆಗಳ ಕೆಣಕಿದ್ದ ದಿಶಾ ಪೂವಯ್ಯ ಸದ್ಯ ಮಂದಹಾಸದ ಮೂಡಿನಲ್ಲಿದ್ದಾರೆ. ‘ಹುಡುಗರು’ ಚಿತ್ರದಲ್ಲಿ ಕಂಡು ಮರೆಯಾಗುವ ಸಣ್ಣ ಪಾತ್ರದಿಂದ ಆರಂಭವಾದ ಅವರ ಸಿನಿಮಾ ಪಟ್ಟಿಗಳ ಸಂಖ್ಯೆ ಸದ್ಯ ಹೆಚ್ಚುತ್ತಿರುವುದೇ ಅವರ ಸಂತಸಕ್ಕೆ ಕಾರಣ. ದಿಶಾರ ಮೂರು ಚಿತ್ರಗಳು ಈವರೆಗೆ ತೆರೆಕಂಡಿದ್ದರೆ, ನಾಲ್ಕು ಚಿತ್ರಗಳು ಪರದೆಗೆ ಬರುವ ಹವಣಿಕೆಯಲ್ಲಿವೆ. ಮುಂದಿನ ‘ದಂಡು’ ಮತ್ತು ‘ಸ್ಲಂ’ ಚಿತ್ರ ಅವರಲ್ಲಿ ಅಪಾರ ನಿರೀಕ್ಷೆ ಮೂಡಿಸಿವೆ.

ಕೊಡಗಿನ ಈ ಕನ್ಯೆ ನಟನೆಯ ಜಾಡು ಹಿಡಿದಿದ್ದು ಆಕಸ್ಮಿಕವಾಗಿ. ‘ಕಾಲೇಜು ಅಂಗಳದಲ್ಲಿ ಜಾಹೀರಾತೊಂದರ ಚಿತ್ರೀಕರಣ ನಡೆಯುತ್ತಿತ್ತು. ಮತ್ತೊಂದೆಡೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕಾಗಿ ನಾವು ನೃತ್ಯ ತಾಲೀಮು ನಡೆಸುತ್ತಿದ್ದೆವು. ನನ್ನ ನಾಟ್ಯಾಭಿನಯ ಮೆಚ್ಚಿದ ನಿರ್ದೇಶಕ ರುದ್ರೇಶ್‌ ಚಿತ್ರರಂಗಕ್ಕೆ ಆಹ್ವಾನ ನೀಡಿದರು’ ಎಂದು ಚಿತ್ರರಂಗ ಪ್ರವೇಶಕ್ಕೆ ದೊರೆತ ಪರ್ಮಿಟ್ಟನ್ನು ನೆನಪಿಕೊಳ್ಳುತ್ತಾರೆ ದಿಶಾ.

ದಿಶಾ ‘ಪೊಲೀಸ್‌ ಸ್ಟೋರಿ ಭಾಗ 3’ ಚಿತ್ರದ ನಾಯಕಿ ಪಟ್ಟ ಗಿಟ್ಟಿಸುವ ಮೂಲಕ ಸಹಕಲಾವಿದೆಯಿಂದ ನಾಯಕಿ ಸ್ಥಾನಕ್ಕೆ ಬಡ್ತಿ ಪಡೆದವರು. ಆನಂತರ ನಟಿಸಿದ ‘ಅಗಮ್ಯ’ ಮತ್ತು ‘ಆಶೀರ್ವಾದ’ ಚಿತ್ರಗಳೂ ಅವರ ಕೈ ಹಿಡಿಯಲಿಲ್ಲ. ‘ಆಶೀರ್ವಾದ’ ಚಿತ್ರಕ್ಕೆ ‘ಎ’ ಬ್ರಾಂಡ್‌ ಮಾರ್ಕು ಸಿಕ್ಕಿದ್ದಕ್ಕೆ ಈಗಲೂ ಆಶ್ಚರ್ಯಪಡುವ ದಿಶಾ– ‘ಆ ಸಿನಿಮಾದಲ್ಲಿ ಅಂಥದ್ದೇನೂ ಇಲ್ಲ. ‘ಎ’ ಪ್ರಮಾಣಪತ್ರ ಸಿಕ್ಕಾಗ ನನಗೆ ಬೇಸರವಾಯಿತು. ನನ್ನ ಚಿತ್ರ ಜೀವನ ಇಲ್ಲಿಯವರೆಗೂ ಖುಷಿಯಿಂದಲೇ ಸಾಗುತ್ತಿದೆ.

ಆದರೆ ಆ ಗಳಿಗೆ ಮಾತ್ರ ಬೇಸರಕ್ಕೆ ಕಾರಣವಾಯಿತು. ಚಿತ್ರದಲ್ಲಿ ನನ್ನದು ಎರಡು ಆಯಾಮದ ಪಾತ್ರ. ಒಂದು ಮುಗ್ಧತೆಯಾದರೆ, ಮತ್ತೊಂದು ತುಸು ಮುಕ್ತವಾಗಿರುವ ಬಿಡುಬೀಸಿನ ಪಾತ್ರ. ಆ ಪಾತ್ರ ಅಪೇಕ್ಷಿಸಿದ್ದೂ ಮುಕ್ತತೆಯನ್ನೇ’ ಎಂದು ಆಶೀರ್ವಾದ ಚಿತ್ರದ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಾರೆ. ‘ಮಳ್ಳಿ’ ಮತ್ತು ‘ಜನ್ಮ ನಕ್ಷತ್ರ’ ಸೆಟ್ಟೇರಿರುವ ಅವರ ಮತ್ತೆರಡು ಚಿತ್ರಗಳು.

ಪೊಲೀಸ್‌ ಸ್ಟೋರಿಯಲ್ಲಿ ಪತ್ರಕರ್ತೆ, ‘ಸ್ಲಂ’ ನಲ್ಲಿ ಅನಾಥೆ ಹುಡುಗಿಯಾಗಿಯೊಬ್ಬಳು ಭೂಗತ ಜಗತ್ತು ಪ್ರವೇಶಿಸುವ ಬಗೆ, ದಂಡು ಚಿತ್ರದಲ್ಲಿ ಬಬ್ಲಿ... ಹೀಗೆ ಚಿತ್ರದಿಂದ ಚಿತ್ರಕ್ಕೆ ಅವರ ಪಾತ್ರ ಚೌಕಟ್ಟುಗಳು ಬದಲಾಗುತ್ತಿವೆ.

ಪೂರ್ಣವಾಗಿ ನೆಗೆಟಿವ್‌ ಶೇಡ್‌ನಲ್ಲಿರುವ ಪಾತ್ರವನ್ನು ಆವಾಹಿಸಿಕೊಳ್ಳುವುದು ಅವರ ಚಿತ್ರಜೀವನದ ಬಹು ಮುಖ್ಯ ಕನಸು. ಆ ಪಾತ್ರದ ಹಾಡುಗಳೂ ನೆಗೆಟಿವ್‌ ಆಯಾಮದಲ್ಲೇ ಇರಬೇಕು ಎನ್ನುವ ಬಯಕೆ ಅವರದ್ದು. ‘ನಟಿಯರೆಂದರೆ ಗ್ಲಾಮರ್‌, ನಗು, ಅಂದ, ಚೆಂದ. ಇದೇ ಸಿನಿಮಾ ಗ್ರಾಮರ್‌ ಆಗಿದೆ. ಆದರೆ ಇದಕ್ಕೆ ವಿರುದ್ಧವಾದ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎಂದು ನೆಗೆಟಿವ್‌ ಪಾತ್ರ ಪ್ರೇಮವನ್ನು ಬಯಲು ಮಾಡುತ್ತಾರೆ ದಿಶಾ.   

ಪರಭಾಷೆಗಳತ್ತಲೂ ಗಮನವಿಟ್ಟಿದ್ದಾರೆ ದಿಶಾ. ತೆಲುಗಿನ ಚಿತ್ರ ನಿರ್ದೇಶಕರೊಬ್ಬರಿಂದ ಕಥೆ ಕೇಳಿರುವ ಅವರು ಎಲ್ಲವೂ ಅಂತಿಮವಾದಾಗಲೇ ಈ ಬಗ್ಗೆ ಮಾತು ಎಂದು ಮೌನ ತಾಳುತ್ತಾರೆ. ‘ಕಥೆ ಕೇಳುತ್ತಲೇ ಆ ಪಾತ್ರಕ್ಕೆ ಅಗತ್ಯವಿರುವ ಉಡುಗೆ ತೊಡುಗೆಗಳನ್ನೂ ತಿಳಿದುಕೊಳ್ಳುವೆ. ಸುಖಾಸುಮ್ಮನೆ ಬಿಚ್ಚಮ್ಮನಾಗಲು ನಾ ಒಲ್ಲೆ’ ಎನ್ನುತ್ತಲೇ ಇಂದಿನ ಚಿತ್ರಗಳಿಗೆ ಗ್ಲಾಮರ್‌ ಅಗತ್ಯವನ್ನು ಅವರು ಒಪ್ಪಿಕೊಳ್ಳುತ್ತಾರೆ.

ದಿಶಾ ಪ್ರಸ್ತುತ ಎಂಜಿನಿಯರಿಂಗ್‌ ವಿದ್ಯಾರ್ಥಿನಿ. ಪ್ರೌಢಶಾಲೆ ಹಂತದಲ್ಲಿ ಅವರು ವಾಲಿಬಾಲ್‌ ಮತ್ತು ಬ್ಯಾಡ್ಮಿಂಟನ್‌ನಲ್ಲಿ ರಾಷ್ಟೀಯ ತಂಡ ಪ್ರತಿನಿಧಿಸಿದ್ದರಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT