ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಭಯ ಪ್ರಕರಣ ಮರುಕಳಿಸದಿರಲಿ’

ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಸಮಾವೇಶ
Last Updated 17 ಡಿಸೆಂಬರ್ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸ್ಸು­ಗಳ­ನ್ನು ಸರ್ಕಾರ ಶೀಘ್ರದಲ್ಲೇ ಜಾರಿ ಮಾಡಬೇಕು. ಆಶ್ಲೀಲ ಸಿನಿಮಾಗಳನ್ನು ನಿಷೇಧಿಸಲು ಮುಂದಾಗಬೇಕು ಎಂದು ಹಿರಿಯ ರಂಗಕರ್ಮಿ ಎಚ್‌.ಜಿ.ಸೋಮ­ಶೇಖರ್‌ ರಾವ್‌ ಒತ್ತಾಯಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆ­ಯರ ಮೇಲಿನ ದೌರ್ಜನ್ಯಗಳಿಗೆ ತಡೆ ಹಾಗೂ ಅವರಿಗೆ ಸೂಕ್ತ ಭದ್ರತೆ ಒದಗಿ­ಸಲು ಸರ್ಕಾರಕ್ಕೆ ಒತ್ತಾಯಿಸಿ ಬೆಂಗ­ಳೂರಿನ ಟೌನ್‌ಹಾಲ್‌ನಲ್ಲಿ ಮಂಗಳ­ವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ­ಯು ಸೇರಿದಂತೆ ಹಲವು ಸಂಸ್ಥೆಗಳು ಜಂಟಿಯಾಗಿ ಏರ್ಪಡಿಸಿದ್ದ  ‘ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ರಾಜ್ಯ ಮಟ್ಟದ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಅತ್ಯಾಚಾರ, ಅನ್ಯಾಯ­ಗಳು ಅಂತ್ಯವಾಗಿಲ್ಲ. ನಿರ್ಭಯಳ ಮೇಲೆ ನಡೆದ ದೌರ್ಜನ್ಯ ಅಮಾನವೀಯ. ಆಕೆಯ ಆಕ್ರಂದನ ಭಾರತದಲ್ಲೆಡೆ ಪ್ರತಿಧ್ವನಿಸುತ್ತಿದೆ. ದೇಶ­ದಲ್ಲಿ ಪ್ರತಿ 7 ನಿಮಿಷಗಳಿಗೊಮ್ಮೆ ಅತ್ಯಾಚಾರ ಪ್ರಕರಣಗಳು ದಾಖಲಾಗು­ತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಎಐಎಂ­ಎಸ್‌ಎಸ್‌ ಅಖಿಲ ಭಾರತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಚ್‌.ಜಿ.­ಜಯ­ಲಕ್ಷ್ಮಿ, ನಿರ್ಭಯ ಪ್ರಕರಣದಲ್ಲಿ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಈ ಪ್ರಕರಣದಲ್ಲಿ ಆಕೆಗೆ  ಪೂರ್ಣ ನ್ಯಾಯ ದೊರಕುವವ­ರೆಗೂ ಹೋರಾಟ ಮುಂದುವರಿಯ­ಬೇಕು.ಈ ಪ್ರಕರಣದ ಬಳಿಕ ದೆಹಲಿ­ಯಲ್ಲಿ ಅತ್ಯಾಚಾರ ಪ್ರಕರಣಗಳು 5 ಪಟ್ಟು ಹೆಚ್ಚಾಗಿವೆ.

ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರನ್ನೇ ಅಪರಾಧಿ­ಗಳೆಂಬಂತೆ  ಚಿತ್ರಿಸಲಾಗುತ್ತಿದೆ ಎಂದರು. ಹೋರಾಟದಿಂದ ಸಮಾಜ ಪರಿ­ವರ್ತನೆ ಮಾಡಲು ಸಾಧ್ಯ. ಹೋರಾಟ­ದ ಮನೋಭಾವ ಯುವ­ಜನಾಂಗ­­ವನ್ನು ಬದಲಾಯಿಸುತ್ತದೆ. ಹೋರಾಟ ಹೆಚ್ಚು ಹೆಚ್ಚಾದಂತೆ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಯುವ­ಜನಾಂಗಕ್ಕೆ ಅನ್ಯಾಯದ ವಿರುದ್ಧ ಹೋರಾಡಲು ಕರೆ ನೀಡಿದರು.

ರಾಜ್ಯ ಎಐಎಂಎಸ್‌ಎಸ್‌ ಕಾರ್ಯ­ದರ್ಶಿ ಅಪರ್ಣಾ.ಬಿ.ಆರ್‌ ಅಧ್ಯಕ್ಷತೆ ವಹಿಸಿದ್ದರು. ­ಉಪಾಧ್ಯಕ್ಷೆ ಡಾ.ಸುಧಾ ಕಾಮತ್‌, ಆಲ್‌ ಇಂಡಿಯಾ ಡೆಮಾ­ಕ್ರಟಿಕ್‌ ಯೂತ್‌ ಆರ್ಗನೈಶನ್‌ ಅಖಿಲ ಭಾರತ ಅಧ್ಯಕ್ಷರಾದ ಡಾ.ಬಿ.ಆರ್‌.­ಮಂಜು­ನಾಥ್‌, ಎಐಡಿವೈಓ­ ರಾಜ್ಯಾ­ಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ರಂಗ­ಕರ್ಮಿ ಅಲ್ಲಂಪ್ರಭು ಬೆಟ್ಟದೂರು, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಶನ್‌ ರಾಜ್ಯಾಧ್ಯಕ್ಷ ವಿ.ಎನ್‌.ರಾಜಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚೆಗೆ ಹೃದಯಾಘಾತದಿಂದ ಮೃತರಾದ ಸಾಮಾಜಿಕ ಹೋರಾಟ­ಗಾರ್ತಿ ಪ್ರತಿಭಾ­ಕುಮಾರಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇದಕ್ಕು ಮೊದಲು ಟೌನ್‌ಹಾಲ್‌ನ ಮುಂಭಾಗದಲ್ಲಿ ವಿದ್ಯಾರ್ಥಿಗಳು, ಸರ್ಕಾರ  ನಿರ್ಭಯ ಪ್ರಕರಣದಿಂದ ಎಚ್ಚೆತ್ತು ಅತೀ ಶೀಘ್ರ ಮಹಿಳೆಯರ ದೌರ್ಜನ್ಯ ತಡೆ ಕಾಯ್ದೆಗಳನ್ನು, ನ್ಯಾ. ವರ್ಮಾ ಆಯೋಗದ ಶಿಫಾರಸ್ಸು­ಗಳನ್ನು ಜಾರಿ ತರುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT