ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೂರ್ವ ತಯಾರಿಯೊಂದಿಗೆ ಸ್ಪರ್ಧೆ ಎದುರಿಸಿ’

Last Updated 14 ಡಿಸೆಂಬರ್ 2013, 4:29 IST
ಅಕ್ಷರ ಗಾತ್ರ

ಹಾವೇರಿ: ‘ವಿದ್ಯಾರ್ಥಿ ಜೀವನಕ್ಕೆ ಸ್ಪರ್ಧೆ ಬಹಳ ಮಹತ್ವ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧೆಗೆ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಸಿದ್ಧರಾದಾಗ ಮಾತ್ರ ಯಶಸ್ಸು ಲಭಿಸುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಹೇಳಿದರು.

ನಗರದ ಚನ್ನಬಸಪ್ಪ ಮಾಗಾವಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯ್ತಿ, ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ಸಹಕಾರ, ಕರುಣೆ, ಸಂಸ್ಕಾರಗಳನ್ನು ಬಿತ್ತುವ ಕೆಲಸ ಮಾಡಬೇಕು’ ಎಂದರು.

ಡಯಟ್‌ ಕಾಲೇಜಿನ ಪ್ರಾಚಾರ್ಯ ಎಂ.ಡಿ.ಬಳ್ಳಾರಿ ಮಾತನಾಡಿ, ‘ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವ ಮೂಲಕ ಅವರಲ್ಲಿ ಓದು, ಬರಹ ರೂಢಿಸುವ ಹಾಗೂ ವಿವಿಧ ಕೌಶಲಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ, ನೀರೆರೆದು ಪೋಷಿಸಿದಾಗ ಅಂತಹ ಪ್ರತಿಭಾವಂತ ಮಕ್ಕಳು ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮಶೆಟ್ಟಿ ಮಾತನಾಡಿ, ‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯಗಳ ಜತೆಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಸೋಲು ಗೆಲವು ಸಮಾನವಾಗಿ ಸ್ವೀಕರಿಸಬೇಕು. ನಿರ್ಣಾಯಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಪ್ರತಿಭೆಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಬೇಕು’ ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಫ್‌.ಭಜಂತ್ರಿ, ತಾಲ್ಲೂಕು ನೋಡಲ್‌ ಅಧಿಕಾರಿ ನಾಗರಾಜ ಕೆ.ಎಸ್‌., ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್‌.ಐ.ಇಚ್ಚಂಗಿ, ಮಾಗಾವಿ ಶಾಲೆಯ ಮುಖ್ಯ ಶಿಕ್ಷಕ ಬಣಕಾರ, ಶಿಕ್ಷಕರ ಸಂಘದ ಅಧ್ಯಕ್ಷ ಕಾಡದೇವರಮಠ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಕಲ್ಮನಿ, ಜಾವೂರ, ಆರ್‌.ಎನ್‌.ಕರ್ಜಗಿ ಸೇರಿದಂತೆ ಇತರರು ಹಾಜರಿದ್ದರು.

ಚನ್ನಬಸಪ್ಪ ಮಾಗಾವಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ನಾಗರಾಜ ದೇಸಳ್ಳಿ ನಿರೂಪಿಸಿದರು. ಶಿಕ್ಷಕ ಕೆ. ಶೇಖರಪ್ಪ ವಂದಿಸಿದರು. ನಂತರ ಹಾವೇರಿ ತಾಲ್ಲೂಕು ಆಯ್ದ ಪ್ರೌಢ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT