ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಮಾಣಿಕತೆಯಿಂದ ಆತ್ಮವಿಶ್ವಾಸ ವೃದ್ಧಿ’

Last Updated 11 ಡಿಸೆಂಬರ್ 2013, 9:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನೈತಿಕತೆ, ಪ್ರಾಮಾಣಿಕತೆ, ತಿಳಿವಳಿಕೆ ಹಾಗೂ ಜೀವನಾನುಭವ ಆತ್ಮವಿಶ್ವಾಸ ಕಲಿಸುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ನರಹಳ್ಳಿ ಬಾಲಸುಬ್ರಮಣ್ಯ ತಿಳಿಸಿದರು. ನಗರದ ಯುರೇಕಾ ಅಕಾಡೆಮಿಯಲ್ಲಿ ಶನಿವಾರ ನಡೆದ ಮಾತು-ಕತೆ ವಿಶಿಷ್ಟ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಪರಿಸರದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಕೊಡದ ಸ್ಥಿತಿ ಇದೆ. ಮಕ್ಕಳಿಂದು ಬಹಷ್ಟು ಸೂಕ್ಷ್ಮ ಮನಸ್ಥಿತಿಯವರಾಗಿ ಬದುಕು ಎದುರಿಸಲಾಗದ ಹಂತವನ್ನೂ ತಲುಪಿದ್ದಾರೆ.  ಸಣ್ಣ ಕಾರಣಕ್ಕೂ ಜೀವಹಾನಿ ಸಾಮಾನ್ಯವಾಗಿದೆ ಎಂದು ವಿಷಾದಿಸಿದರು.

ಮಕ್ಕಳಿಗೆ ಕೆಲ ಜವಾಬ್ದಾರಿಯನ್ನು ಆಯಾಯ ನೆಲೆಗೆ ತಕ್ಕಂತೆ ವಹಿಸಬೇಕು. ಕೆಲ ಅನುಭವ ತಾವೇ ಪಡೆಯುವಂತಹ ವಾತಾವರಣ ಮಕ್ಕಳಿಗೆ ಸೃಷ್ಟಿಯಾಗಬೇಕು. ಸ್ವಾತಂತ್ರ್ಯ ಸ್ವೇಚ್ಛಾರವಲ್ಲ. ಅವಮಾನವೂ ಪಾಠ ನಕಲಿಸುತ್ತದೆ. ಪ್ರೀತಿಯಿಂದ ತಿಳಿವಳಿಕೆ ಹೇಳಬೇಕು. ಸದಾ ಸ್ಪರ್ಧೆಯ ಮುಂಚೂಣಿಯಲ್ಲಿರಬೇಕೆಂಬುದರಿಂದ ಮಕ್ಕಳನ್ನು ದೂರವಿಡಿ. ಪ್ರತಿಭೆಯ ರೂಪ ಅಂಕವಷ್ಟೇ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಂದೆ-ತಾಯಿಗಳಿಂದ ಮಕ್ಕಳಿಗೆ ಸಹಜ ಪ್ರೀತಿ ಸಿಗದಿರುವುದರಿಂದ ಅವರು ಬೇರೆಕಡೆ ಪ್ರೀತಿ ಹುಡುಕುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಇಂದು ಕಡಿಮೆಯಾಗುತ್ತಿದೆ. ಹಿಂದಿನ ಗುರುಕುಲ ಪದ್ಧತಿ, ಪಾಶ್ಚಾತ್ಯ ಶಿಕ್ಷಣದಲ್ಲಿ ಹೀಗಿಲ್ಲ. ನಚಿಕೇತನ ಪ್ರಶ್ನೆಗೆ ಉತ್ತರಿಸಲು ಗುರುಗಳೇ ಅನೇಕ ದಿನ ತಡಕಾಡಿದ ಸಂದರ್ಭ ನಮಗೆ ಗೊತ್ತಿದೆ.  ವಿದ್ಯಾರ್ಥಿ ಪ್ರತಿಭಾವಂತನಾಗಿದ್ದರೆ ಶಿಕ್ಷಕರೂ ಚುರುಕಾಗಿರುತ್ತಾರೆ. ಉತ್ತರ ಹೇಳುವುದಷ್ಟೇ ಅಲ್ಲ, ಗಂಭೀರ ಪ್ರಶ್ನೆ ಕೇಳುವುದೂ ಮುಖ್ಯ. ಪ್ರಶ್ನೆ ಚಿಂತನೆಗೆ ಹಚ್ಚುವಂತಿರಬೇಕು. ಗೌರವ, ಜವಾಬ್ದಾರಿ, ತಿಳಿದುಕೊಳ್ಳುವ ಕುತೂಹಲ ಪ್ರಶ್ನಿಸುವವರಿಗಿದ್ದರೆ ಪರಸ್ಪರ ಅರಿವಿನ ಹರವು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ಜೀವನದಲ್ಲಿ ಬಹುದೊಡ್ಡ ಮೌಲ್ಯವೆಂದರೆ ತಾಳ್ಮೆ.  ತಾಳ್ಮೆಯಿಂದ ಅನೇಕ ಸಮಸ್ಯೆಗಳು ತನ್ನಷ್ಟಕ್ಕೆ ಪರಿಹಾರವಾಗುತ್ತವೆ.  ಸಂಬಂಧಗಳು ಸುಧಾರಿಸುತ್ತವೆ.  ಕಳೆದುಕೊಂಡವರನ್ನು ಮರಳಿ ಪಡೆಯುತ್ತೇವೆ.  ಕಥೆಗಳ ಮೂಲಕ ಮೌಲ್ಯವನ್ನು ಪೋಷಕರು ಹಾಗೂ ಗುರುಗಳು ಪ್ರೀತಿಯಿಂದ ಪಾಠ ಹೇಳಿದರೆ ಸಮಾಜ ಪರಿವರ್ತನೆಯಾಗಲು ಸಾಧ್ಯ. ಬುದ್ಧಿ-ಹಣ ಮಾತ್ರ ನಮ್ಮೆಲ್ಲ ಅಗತ್ಯ ಪೂರೈಸುವುದಿಲ್ಲ.

ಅದ್ದೆಲ್ಲಕ್ಕಿಂತ ಮೀರಿದ ಭಾವ-ಪ್ರೀತಿ ಬೇಕು. ಆದರೆ, ಇಂದು ಸಮಾಜವೆ ಪ್ರೀತಿಸುವ ಶಕ್ತಿ ಕಳೆದುಕೊಳ್ಳುತ್ತಿದೆ. ಕಾಲವನ್ನು ಗೆಲ್ಲಬಲ್ಲ ಒಂದೇ ಶಕ್ತಿ ಸಾಹಿತ್ಯ ಮತ್ತು ಕಲೆ ಎಂದರು. ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಪ್ರೀತಿಯ ಹೂ ಅರಳಲು ಋತುವಿನ ಅಗತ್ಯವಿಲ್ಲ.  ಪರಸ್ಪರ ಪ್ರೀತಿ ವಿಶ್ವಾಸದ ಬದುಕಿಗೆ ಸಾಹಿತ್ಯ, ಸಂಸ್ಕೃತಿ ಕಲೆ ಪೂರಕ ಎಂದರು. 

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಿ.ಎಚ್.ನಟರಾಜ್ ಉದ್ಘಾಟಿಸಿದರು. ಸಾಹಿತಿ ಮಂಜುನಾಥ, ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್, ಶ್ರೀಮತಿ ನರಹಳ್ಳಿಬಾಲಸುಬ್ರಮಣ್ಣ, ಪ್ರಭುಲಿಂಗಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT