ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅಪಾರ’

Last Updated 3 ಜನವರಿ 2014, 8:19 IST
ಅಕ್ಷರ ಗಾತ್ರ

ಗದಗ: ದೇಶದಲ್ಲಿ ಕ್ರೈಸ್ತರು ಜನಸಂಖ್ಯೆಯಲ್ಲಿ ಕಡಿಮೆ ಇರಬಹುದು ಆದರೆ ಸೇವಾರಂಗದ ಸಾಧನೆಯಲ್ಲಿ  ದೊಡ್ಡವರಾಗಿದ್ದಾರೆ ಎಂದು ತೋಂಟದಾರ್ಯ ಮಠದ ಪೀಠಾಧಿಪತಿ ಡಾ.­ಸಿದ್ದಲಿಂಗ ಸ್ವಾಮೀಜಿ ಹೇಳಿದರು. ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ರೇವರೆಂಡ್ ಲೂರ್ಧಸ್ವಾಮಿ, ರೇವರೆಂಡ್ ಹ್ಯಾರಿ ವಿಕ್ಟರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು,  ಕ್ರೈಸ್ತರು ಶಿಕ್ಷಣ, ಸಾಹಿತ್ಯ, ಮುದ್ರಣ, ವೈದ್ಯಕೀಯ, ಸಾಮಾಜಿಕ ರಂಗ ಹಾಗೂ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.

2013 ವರ್ಷಗಳ ಹಿಂದೆ ಏಸು ಜಗತ್ತಿಗೆ ನೀಡಿದ ಶಾಂತಿ, ಕ್ಷಮೆ, ಕರುಣೆ ಸಂದೇಶಗಳು ಇಂದಿಗೂ ಪ್ರಸ್ತುತ. 150 ವರ್ಷಗಳ ಹಿಂದೆ ಮಂಗಳೂರಿಗೆ ಬಂದ ಬಾಸೆಲ್ ಮಿಶನ್ ಸಂಸ್ಥೆ ಕನ್ನಡ ಪತ್ರಿಕೆ,ಪುಸ್ತಕ ಸಂಸ್ಕೃತಿ ಹುಟ್ಟು ಹಾಕಿತು. ಕಿಟಲ್ ಅವರು ಬರೆದ ಕನ್ನಡ ಶಬ್ದಕೋಶವನ್ನು ಕನ್ನಡಿಗರು ಮರೆಯು­ವಂತಿಲ್ಲ.  ಮದರ್ ಥೆರೇಸಾ ಅವರು ಅನಾಥರು, ಕುಷ್ಠರೋಗಿಗಳ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಸಿದ್ದರು ಎಂದು ತಿಳಿಸಿದರು.

ಬೆಟಗೇರಿಯ ಸೇಂಟ್‌ ಇಗ್ನೋಶಿಯಸ್ ಲೋಯಲಾ ಚರ್ಚ್‌ನ ಪಾದ್ರಿಗಳಾದ ರೇವರೆಂಡ್ ಲೂರ್ಧಸ್ವಾಮಿ ಉಪನ್ಯಾಸ ಏಸು ಕ್ರಿಸ್ತನ ಜೀವನ ಚರಿತ್ರೆ ಹಾಗೂ ಸಂದೇಶಗಳ ಕುರಿತು ಬೆಳಕು ಚೆಲ್ಲಿದರು. ಮನುಕುಲದ ಏಳ್ಗೆ, ಶಾಂತಿ, ಸನ್ಮಾರ್ಗಕ್ಕಾಗಿ ನೀಡಿದ ಸಂದೇಶ ಸದಾ ಪ್ರಸ್ತುತ ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಟಗೇರಿಯ ಬಿ.ಬಿ.ಬಣ್ಣದ ದೊಡ್ಡಾಟ ಮೇಳದ ರೂವಾರಿ ಅಶೋಕ ಬಣ್ಣದ ಅವರನ್ನು ಸ್ವಾಮೀಜಿ ಸನ್ಮಾ­ನಿಸಿದರು.  ಸೇಂಟ್‌ ಜಾನ್ಸ್‌ ಹಾಗೂ ಲೋಯಲಾ ಸಂಸ್ಥೆಯ ಪ್ರಾಥಮಿಕ, ಪ್ರೌಢ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ವೇಷ ಭೂಷಣ­ದೊಂದಿಗೆ  ನೃತ್ಯ ಪ್ರದರ್ಶಿಸಿದರು.

ಪ್ರೊ.ಶಾಂತಕುಮಾರ ಮೇಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ಫ್ರಾಂಕ್ಲಿನ್ ಧಲಬಂಜನ್ ಹಾಜರಿದ್ದರು. ಶ್ವೇತಾ ಎನ್.­ಯರಗುಡಿ, ಸವಿತಾ ವೈ.ಸೋಮನಕಟ್ಟಿ ಧರ್ಮ­ಗ್ರಂಥ ಪಠಣ, ಧರ್ಮಚಿಂತನ ನಡೆಸಿದರು. ಭಕ್ತಿಸೇವೆ ವಹಿಸಿದ್ದ ಬೆಟಗೇರಿಯ ಮೈಕೆಲ್ ಕಾಂಬಳೆ, ಸೊಂಡೂರಿನ ಕೆ.ಎಸ್.ನಾಗರಾಜ ಸಹೋದರರು, ದತ್ತಿನಿಧಿ ಸೇವಾಕರ್ತ ಸಿದ್ದರಾಮಪ್ಪ ಘಟ್ಟಿ ಅವರನ್ನು ಸ್ವಾಮೀಜಿ ಆರ್ಶಿವದಿಸಿದರು.

ಜಿ.ಪಿ.ಕಟ್ಟಿಮನಿ ಗುರು ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ,ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಕ್ಕ ಕೆ.ಕುರಡಗಿ, ಖಜಾಂಚಿ ಪ್ರಭಯ್ಯ ಹಿರೇಮಠ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಗುರುಬಸವಲಿಂಗ ತಡಸದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT