ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಕಲ್ಯಾಣ ಇಲಾಖೆ ಶೀಘ್ರ ಗಣಕೀಕೃತ’

ಎಸ್‌ಸಿಪಿ, ಟಿಎಸ್ಪಿ ಯೋಜನೆ ಅನುಷ್ಠಾನದಲ್ಲಿ ತಾತ್ಸಾರ ಸಲ್ಲದು : ಮಣಿವಣ್ಣನ್
Last Updated 10 ಆಗಸ್ಟ್ 2016, 7:14 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘ಈ ವರ್ಷದ ಅಕ್ಟೋಬರ್‌ ತಿಂಗಳ ಒಳಗೆ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪೂರ್ಣ ಗಣಕೀಕೃತವನ್ನಾಗಿಸಲಾಗುತ್ತಿದ್ದು, ವಿಶೇಷ ಘಟಕ ಯೋಜನೆ (ಎಸ್‌ಸಿಪಿ), ಗಿರಿಜನ ಉಪಯೋಜನೆಯಿಂದ (ಟಿಎಸ್‌ಪಿ) ಯಾವ ಇಲಾಖೆಯಿಂದ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಅಂಶವನ್ನು ಮೊಬೈಲ್‌ನಲ್ಲಿಯೇ ಪಡೆಯಬಹುದು’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ವಿಶೇಷ ಘಟಕ ಯೋಜನೆ (ಎಸ್‌ಸಿಪಿ), ಗಿರಿಜನ ಉಪಯೋಜನೆ(ಟಿಎಸ್‌ಪಿ) ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
‘ಸಮಾಜ ಕಲ್ಯಾಣ ಇಲಾಖೆಯ ಖರ್ಚು,ವೆಚ್ಚ ವ್ಯವಹಾರ, ಪ್ರಗತಿ ಆಧರಿಸಿ ರ‍್ಯಾಂಕ್‌ಕಿಂಗ್ ನೀಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ಸಿದ್ದಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಅನುದಾನವನ್ನು ಆಯಾ ವರ್ಷದಲ್ಲಿಯೇ ವಿನಿಯೋಗಿಸಬೇಕು. ಆಯಾ ಇಲಾಖೆ ಅನುಷ್ಠಾನಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ಮತ್ತು ಮಾಹಿತಿ ವಿನಿಮಯಕ್ಕಾಗಿ ಟೆಲಿಗ್ರಾಫ್ ಮೆಸೆಂಜರ್ ಆ್ಯಪ್‌ನಡಿ ಇಲಾಖೆಯ 750ಕ್ಕೂ ಹೆಚ್ಚಿನ  ಅಧಿಕಾರಿಗಳ ಗುಂಪನ್ನು ರಚಿಸಿ ಮಾಹಿತಿ ನೀಡಲಾಗುತ್ತಿದೆ.

ಅದೇ ರೀತಿ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳ ಟೆಲಿಗ್ರಾಫ್ ಮೆಸೆಂಜರ್ ಗ್ರೂಪ್‌ ರಚಿಸಿ ಯೋಜನೆಯ ಅನುಷ್ಠಾನ ಮಾಡಲಾಗುವುದು’ ಎಂದರು.‘ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅನುಷ್ಠಾನದಲ್ಲಿ ತೊಂದರೆ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಆದರೆ ತೊಂದರೆ ನೆಪದಲ್ಲಿ ವಿಳಂಬ, ತಾತ್ಸಾರ ಮಾತ್ರ ಸಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾನು ನನ್ನ ಕರ್ತವ್ಯವನ್ನು ಮಾಡುತ್ತೇನೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರವು ಪರಿಶಿಷ್ಟರ ಕಲ್ಯಾಣಕ್ಕಾಗಿ ವಿಶೇಷ ಕಾಯ್ದೆ ಜಾರಿಗೆ ತಂದಿದೆ. ಈ ಯೋಜನೆಯಡಿ ನೀಡಲಾಗುವ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಕಾಮಗಾರಿ, ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ತಾತ್ಸಾರ ಮಾಡಬಾರದು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

‘ಸಮಾಜ ಕಲ್ಯಾಣ ಇಲಾಖೆಯ ಬುರುಜನರೊಪ್ಪದಲ್ಲಿನ ಹಾಸ್ಟೆಲ್ ಕಾಂಪೌಂಡ್ ನಿರ್ಮಾಣ ಜಾಗದ ಸಮಸ್ಯೆಯಿಂದಾಗಿ ಕೆಲಸ ಬಾಕಿ ಇದೆ’ ಎಂದು ಕೆಆರ್‌ಡಿಎಲ್‌ ಎಂಜಿನಿಯರ್ ಸಭೆಗೆ ತಿಳಿಸಿದರು. ‘ಜಾಗದ ಸಮಸ್ಯೆ ಇದೆ ಎಂದು ಸುಮ್ಮನಿರಬೇಡಿ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ. ಏನೂ ಕ್ರಮ ಕೈಗೊಳ್ಳದೇ ಕಾಲಹರಣ ಮಾಡಿದರೆ, ಅದನ್ನು ಸಹಿಸುವುದಿಲ್ಲ’ ಎಂದರು.

ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ  ನಿಗಮದಲ್ಲಿ ಅನುಷ್ಠಾನ ವಾಗುತ್ತಿರುವ ಯೋಜನೆಗಳ ಪ್ರಗತಿಯ ವಿವರ, ಕೃಷಿ ಇಲಾಖೆ, ಗ್ರಾಮೀಣ ಕೈಗಾರಿಕೆ, ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳು, ರೇಷ್ಮೆ, ಬಿಸಿಎಂ ಸಮಾಜ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ವಿವರ ಪರಿಶೀಲಿಸಿದರು. 

ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಜಾರಿಗೆ ಸೂಚನೆ ನೀಡಿದರು. ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಬಾಕಿ ಇರುವ ಬಗ್ಗೆ ಬೆಸ್ಕಾಂನೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಮ್ಮ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT