ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ, ಹೆಂಡದ ಆಟ ಈ ಬಾರಿ ನಡೆಯದು’

Last Updated 12 ಏಪ್ರಿಲ್ 2014, 6:59 IST
ಅಕ್ಷರ ಗಾತ್ರ

ಹಾವೇರಿ: ಜಾತ್ಯತೀತ ತತ್ವ, ಸಿದ್ಧಾಂತಗಳ ಆಧಾರದಲ್ಲಿಯೇ ರಾಜಕಾರಣ ನಡೆಯಬೇಕು. ಹಣ, ಹೆಂಡದ ಮೂಲಕ ಮತ ಕೇಳದೇ, ನಾವು ಮಾಡಿದ, ಮಾಡಬೇಕಾದ ಕೆಲಸಗಳೇ ಮತ ಕೇಳುವ ಮಾನದಂಡ ವಾಗಿಸಬೇಕು. ಕೇವಲ ಹಣವಿದ್ದವರಿಗೆ ಮಾತ್ರ ಚುನಾವಣೆ ಎನ್ನುವ ಮನೋ ಭಾವ ತೊಲಗಿಸಬೇಕು ಎನ್ನುವ ಸದುದ್ದೇಶಗಳನ್್ನಿಟ್ಟುಕೊಂಡು ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಜೆಡಿಎಸ್‌ ಅಭ್ಯರ್ಥಿ ರವಿ ಮೆಣಸಿನ ಕಾಯಿ ಹೇಳುತ್ತಾರೆ.

ಕ್ಷೇತ್ರದ ಮತದಾರರು ಕೋಮುವಾದ ಪ್ರತಿಪಾದಿಸುವ ಬಿಜೆಪಿಯನ್ನು, ಭ್ರಷ್ಟಾ ಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ನ್ನು ತಿರಸ್ಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿ ಸುವ ಜೆಡಿಎಸ್‌ ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸದಲ್ಲಿ ಅವರಿದ್ದಾರೆ.

ಮಾತಿನ ಮೂಲಕ ಮತಗಳನ್ನು ಹೆಚ್ಚಿಸುವ ನಾಯಕರಾಗಲಿ, ಜೆಡಿಎಸ್‌ ಪರ ಘೋಷಣೆ  ಕೂಗುವ ದೊಡ್ಡ ಕಾರ್ಯಕರ್ತರ ಪಡೆ ಇಲ್ಲ. ಆದರೂ, ತಮ್ಮ ತಂದೆ ಮಾಜಿ ಸಂಸದ ದಿ. ಬಿ.ಎಂ.ಮೆಣಸಿನಕಾಯಿ ಅವರ ರಾಜಕೀಯ ಗರಡಿಯಲ್ಲಿ ಪಳಗಿ, ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಕೊಂಡು ಪ್ರಥಮ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿರುವ ಜೆಡಿಎಸ್‌ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

*ಪ್ರಜಾವಾಣಿ: ಸಂಘಟನೆ, ಅಸ್ತಿ ತ್ವವೇ ಇಲ್ಲದ ಪಕ್ಷದ ಅಭ್ಯರ್ಥಿಯಾಗಿ ರುವುದು ಸವಾಲಿನ ಕೆಲಸವಲ್ಲವೇ?
ರವಿ ಮೆಣಸಿನಕಾಯಿ: ನಿ
ಜ. ಪ್ರಸ್ತುತ ದಿನಗಳಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಅಷ್ಟಾಗಿಲ್ಲ. ಹಾಗಂತ ಇಲ್ಲಿ ಪಕ್ಷದ ಅಸ್ತಿತ್ವವೇ ಇಲ್ಲ ಎನ್ನುವುದು ಸುಳ್ಳು. ಕೇವಲ ಒಂದೆರಡು ದಶಕಗಳ ಹಿಂದೆ ಜನತಾದಳ, ಜನತಾ ಪರಿವಾರದ ಭದ್ರಕೋಟಿ ಇದಾಗಿತ್ತು. ಸಂಘಟನೆ, ಅಸ್ತಿತ್ವ ಇಲ್ಲದಿದ್ದರೇ ನಮ್ಮ ತಂದೆ ಈ ಕ್ಷೇತ್ರದ ಸಂಸದರಾಗಲು ಸಾಧ್ಯವಿರಲಿಲ್ಲ. ಅದು ಅಲ್ಲದೇ ಜಿಲ್ಲೆಯ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಜನತಾದಳದ ಶಾಸಕರು ಆಯ್ಕೆಯಾಗುತ್ತಿರಲಿಲ್ಲ. ಆದರೆ, ಪಕ್ಷದ ಕೆಲವು ಮುಖಂಡರು ತತ್ವ, ಸಿದ್ಧಾಂತ ಗಳಿಗೆ ತೀಲಾಂಜಲಿ ನೀಡಿ ಅಧಿಕಾರದ ಬೆನ್ನು ಬಿದ್ದು ಪಕ್ಷ ತೊರೆದರು. ಕಾರ್ಯ ಕರ್ತರು ಅವರ ಹಿಂದೆಯೇ ಹೋದರು. ಆ ನಂತರದಲ್ಲಿ ಪಕ್ಷದ ಸಂಘಟನೆ ಗಂಭೀರವಾಗಿ ನಡೆದಿಲ್ಲ. ಅದಕ್ಕಾಗಿ ಪಕ್ಷ ದುರ್ಬಲವಾಗಿದೆ.  ಆದರೂ ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚುನಾವಣೆ ಸಂದರ್ಭವನ್ನು ಬಳಕೆ ಮಾಡಿಕೊಂಡು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡು ವುದರ ಜತೆಗೆ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ನಾನು ಸೇರಿದಂತೆ ಜಿಲ್ಲೆಯಲ್ಲಿರುವ ಪಕ್ಷದ ಎಲ್ಲ ಮುಖಂಡರು ಮಾಡುತ್ತಿದ್ದಾರೆ.

* ಪ್ರ: ಚುನಾವಣೆಗೆ ಹೊಸಬರಾದ ನೀವು ಯಾವ ಭರವಸೆ ನೀಡಿ ಮತ ಕೇಳುತ್ತಿದ್ದೀರಿ?
ರ.ಮೆ:
ನಮ್ಮ ತಂದೆಯವರ ನಗರ ಸಭೆ ಚುನಾವಣೆ, ವಿಧಾನ ಪರಿಷತ್‌ ಚುನಾವಣೆ, ಎರಡು ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆಯವರು ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ, ಸಂಸದರಾಗಿದ್ದಾಗ ರಾಮಕೃಷ್ಣ ಹೆಗಡೆ, ಎಸ್‌.ಎರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌ ಸೇರಿದಂತೆ ರಾಜಕೀಯ ಅನೇಕ ಮುತ್ಸದ್ದಿಗಳ ಜತೆ ಸಂಪರ್ಕವಿತ್ತು. ಈಗ ಮಾಜಿ ಪ್ರಧಾನಿ ದೇವೇಗೌಡರ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾರ್ಗದರ್ಶನ ನನಗಿದೆ. ಹೀಗಾಗಿ ಚುನಾವಣಾ ಸ್ಪರ್ಧೆಗೆ ಹೊಸಬನೇ ಹೊರತು ಚುನಾವಣೆಗೆ ಹೊಸಬನೇನಲ್ಲ.

ಇನ್ನು, ಬಿಜೆಪಿ ಅಭ್ಯರ್ಥಿ ಕ್ಷೇತ್ರದವ ರಾದರೂ ಯಾವೊಬ್ಬ ಮತದಾರರನ ಕೈಗೆ ಸಿಗುವುದಿಲ್ಲ.  ಕಾಂಗ್ರೆಸ್‌ ಅಭ್ಯರ್ಥಿ ಕ್ಷೇತ್ರದವರೇ ಅಲ್ಲ. ನಾನು ಜನ ಸಾಮಾನ್ಯರ ಮಧ್ಯೆ ಇದ್ದು ಬೆಳೆದವನು. ಅದಕ್ಕಾಗಿ ನನಗೆ ಮತಕೊಡಿ ಎಂದು ಕೇಳುತ್ತಿದ್ದೇನೆ.

* ಪ್ರ: ಸಂಸದರಾದರೆ ಯಾವ ಕೆಲಸಗಳಿಗ ಆದ್ಯತೆ ನೀಡುತ್ತೀರಿ?
ರ.ಮೆ.:
ಜಿಲ್ಲೆಯಲ್ಲಿ ನಾಲ್ಕು ನದಿಗಳು ಹರಿದ್ದರೂ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ತೀವ್ರ ನೀರಿನ ಸಮಸ್ಯೆಯಿದೆ. ನನ್ನ ಮೊದಲ ಆದ್ಯತೆ ಸಮರ್ಪಕ ಕುಡಿ ಯುವ ನೀರಿನ ವ್ಯವಸ್ಥೆ ಮಾಡುವುದು. ನದಿ ನೀರನ್ನು ವ್ಯರ್ಥವಾಗಿ ಹರಿಯಲು ಬೀಡದೇ ನೀರಾವರಿ ಸೌಲಭ್ಯ ಕಲ್ಪಿ ಸುವುದು. ಹೆಚ್ಚಿನ ರೈಲು ಸೌಕರ್ಯ, ಉದ್ಯಮಗಳ ಸ್ಥಾಪನೆಗ ಒತ್ತು ನೀಡಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆದ್ಯತೆ. 

* ಪ್ರ:ಚುನಾವಣೆಯಲ್ಲಿ ನಿಮ್ಮ ಎದುರಾಳಿ ಯಾರು?
ರ.ಮೆ.:
ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿ ಗಳಿಬ್ಬರೂ ಎದುರಾಳಿಗಳೇ. ಆದರೆ, ಅವರಷ್ಟು ಹಣ ಬಲ ನನ್ನಲ್ಲಿಲ್ಲ. ಪಕ್ಷದ ತತ್ವಸಿದ್ಧಾಂತಗಳನ್ನು ಇಟ್ಟುಕೊಂಡು ಇಬ್ಬರೂ ಅಭ್ಯರ್ಥಿಗಳನ್ನು ಸಮರ್ಥ ವಾಗಿ ಎದುರಿಸಲಿದ್ದೇನೆ.

* ಪ್ರ: ನೀವು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂದು ನಿಮ್ಮ ಪಕ್ಷದ ಮುಖಂಡರೇ ಆರೋಪಿಸುತ್ತಾರಲ್ಲ.?
ರ.ಮೆ:
ಇದೊಂದು ಶುದ್ಧ ಸುಳ್ಳಿನ ಕಂತೆ. ನನಗೆ ಬೇರೆ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಚುನಾ ವಣೆ ಮಾಡುವ ಅಗತ್ಯವೂ ಇಲ್ಲ. ಅನಿವಾರ್ಯತೆಯೂ ಇಲ್ಲ. ನನ್ನದೇ ಆದ ಕೆಲ ವಿಚಾರಗಳೊಂದಿಗೆ ಚುನಾವ ಣೆಗೆ ಸ್ಪರ್ಧಿಸಿದ್ದೇನೆ. ನನ್ನದೇ ಇತಿಮಿತಿ ಯಲ್ಲಿ ಪ್ರಚಾರವನ್ನು ಕೈಗೊಂಡಿದ್ದೇನೆ. ಆದರೆ, ನಮ್ಮ ಪಕ್ಷದ ಕೆಲ ಮುಖಂಡ ರಿಗೆ ಬೇರೆ ಪಕ್ಷಗಳಂತೆ ಹಣ ಖರ್ಚು ಮಾಡಿ ಚುನಾವಣೆ ಮಾಡುವುದು ಸಾಧನೆಯಲ್ಲ ಎಂದು ಹೇಳಿದೆ. ಅದು ಅವರಿಗೆ ಸರಿ ಕಾಣಲಿಲ್ಲ. ಅದಕ್ಕೆ ಅವರು ನನ್ನ ವಿರುದ್ಧವೇ ಆರೋಪ ಮಾಡಿ ದ್ದಾರೆ. ಈ ಬಗ್ಗೆ ತಲೆ ಕೆಡಿಸಕೊಳ್ಳದೇ ಚುನಾವಣೆ ಎದುರಿಸಿ ನನ್ನ ಶಕ್ತಿಯನ್ನು ಸಾಬೀತು ಮಾಡುತ್ತೇನೆ.

* ಪ್ರ:ಪಂಚಮಸಾಲಿ ಸಮಾಜದ ಮತಗಳನ್ನು ಮಾತ್ರ ಅವಲಂಬಿಸಿದ್ದಾರೆ ಎಂಬ ಆರೋಪಗಳಿವೆಯಲ್ಲ?
ರ.ಮೆ:
ನಾನು ಪಂಚಮಸಾಲಿ ಸಮು ದಾಯಕ್ಕೆ ಸೇರಿದ್ದರಿಂದ ಹಲವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ನಮ್ಮದು ಜಾತ್ಯತೀತ ಪಕ್ಷ.  ಎಲ್ಲ ಸಮುದಾಯದ ಜನರೂ ಇದ್ದಾರೆ. ಅವರೆಲ್ಲರ ಬೆಂಬಲವೂ ನನಗಿದೆ.

*ಪ್ರ: ನಿಮಗೆ ಗೆಲ್ಲುವ ವಿಶ್ವಾಸ ಇದೆಯೇ?
ರ.ಮೆ:
ನೂರಕ್ಕೆ ನೂರರಷ್ಟು ಅನಿರೀಕ್ಷಿತ ಫಲಿತಾಂಶ ಬರಲಿದೆ. ಈ ಚುನಾವಣೆಯಲ್ಲಿ ಹಣ, ಹೆಂಡದ ವಿರುದ್ಧ ಜನ ಮತ ಚಲಾಯಿಸಿ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT