ಬುಧವಾರ, ಜೂನ್ 23, 2021
26 °C

ಮನದ ಭಾಷೆಯಲ್ಲಿ ಫುಟ್‌ಬಾಲ್ ಕೇಳಿ

ರೌಲ್ ವಿಚಿಸ್ Updated:

ಅಕ್ಷರ ಗಾತ್ರ : | |

ಪೆರುವಿನ ಕುಸ್ಕೊ ನಗರದಲ್ಲಿ ರೇಡಿಯೊ ಕೇಂದ್ರ ‘ಇಂಟಿ ರ‍್ಯಾಮಿ’ಯಲ್ಲಿ ದೈನಂದಿನ ಕ್ರೀಡಾ ಕಾರ್ಯಕ್ರಮ ನಡೆಸಿಕೊಡುತ್ತಿರುವ ಲೂಯಿ ಸುಟೊ 

ರೇಡಿಯೊದಲ್ಲಿ ಫುಟ್‌ಬಾಲ್‌ ವೀಕ್ಷಕ ವಿವರಣೆ ನೀಡುವಾಗ ಸ್ಥಳೀಯ ಆಡುಮಾತುಗಳು, ಹೋಲಿಕೆಗಳು ನಿರೂಪಕರ ಬಾಯಿಂದ ಬಂದುಬಿಡುತ್ತವೆ. ಸಮುದ್ರಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿರುವ ಪೆರು ದೇಶದ ಪೆರುವಿಯನ್ ಆಂಡ್ಸ್‌ನಲ್ಲಿ ನಿರೂಪಣೆಗೆ ಬಳಕೆಯಾಗುವ ಭಾಷೆ ಫುಟ್‌ಬಾಲ್‌ನಷ್ಟೇ ರೋಚಕ. ಇಂಟಿ ರ‍್ಯಾಮಿ ರೇಡಿಯೊ ಕೇಂದ್ರದಲ್ಲಿ 35 ವರ್ಷಗಳಿಂದ ಪೆರುವಿನ ಸ್ಥಳೀಯ ಭಾಷೆ ಕ್ವೆಂಚುವಿನಲ್ಲಿ ಪ್ರತಿದಿನ ಕ್ರೀಡಾ ಕಾರ್ಯಕ್ರಮ ನಡೆಸಿಕೊಡುವ ಲೂಯಿ ಸೊಟೊ ಇದೀಗ ತಮ್ಮ ಈ ಸಾಧನೆಯಿಂದಾಗಿಯೇ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

ಪೆರುವಿನ ಕುಸ್ಕೊ ಪಟ್ಟಣದ ಮನೆಮಾತಿನಲ್ಲಿ ಫುಟ್‌ಬಾಲ್ ಅನುಭವವನ್ನು ಒಗ್ಗಿಸಿ ವಿವರಿಸುವುದು ಲೂಯಿ ಸೊಟೊ ಅವರ ವೈಶಿಷ್ಟ್ಯ. ಮಿಡ್‌ಫೀಲ್ಡರ್ ಒಬ್ಬ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಎದುರಾಳಿಗಳನ್ನು ತಣ್ಣಗಾಗಿಸಿದಾದ, ‘ಇವನು ಚೆನ್ನಾಗಿ ನೆಲ ಉತ್ತುಕೊಟ್ಟ’ ಎಂಬುದು ಸೊಟೊ ಅವರ ಉದ್ಗಾರವಾಗಿರುತ್ತೆ. ಯಾರಾದರೂ ಜೋರಾಗಿ ಬಾಲ್ ಕಿಕ್ ಮಾಡಿದರೆ ‘ಇವನು ಇವತ್ತು ಚೆನ್ನಾಗಿನವಣಕ್ಕಿ ತಿಂದು ಬಂದಿರಬೇಕು’ ಎಂದು ಹೇಳುತ್ತಾರೆ. ತಂಡವು ಕಷ್ಟದಲ್ಲಿದ್ದಾಗ ಗೋಲ್ ಹೊಡೆದರೆ ‘ಕಾಲುದಾರಿಯೂ ಇಲ್ಲದ ಜಾಗದಲ್ಲಿ ಟಾರ್ ರೋಡ್ ಹಾಕಿದ’ ಎಂದು ಆಟಗಾರರನ್ನು ತಮ್ಮದೇ ರೀತಿಯಲ್ಲಿ ಕೊಂಡಾಡುತ್ತಾರೆ.

ಈಗೇನೋ ಸೊಟೊ ಅಂದರೆ ಪೆರು ದೇಶದಲ್ಲಿ ಬಲು ಫೇಮಸ್ಸು. ಆದರೆ ಅವರು ಮೊದಲು ಎದುರಿಸಿದ ಸಮಸ್ಯೆ ಏನು ಗೊತ್ತೆ? ಫುಟ್‌ಬಾಲ್‌ ಚೆಂಡಿಗೆ ಸೂಕ್ತವಾದ ಪದ ಹುಡುಕುವುದು. ಇಂಕಾ ನಾಗರಿಕತೆ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಬೆಳವಣಿಗೆ ಹೊಂದಿದ ಕ್ವೆಂಚು ಭಾಷೆಯಲ್ಲಿ ‘ಚೆಂಡು’ ಎಂಬ ಅರ್ಥ ಹೊಮ್ಮಿಸುವ ಪದವೇ ಇರಲಿಲ್ಲ. ‘ಚೆಂಡು’ ಪದ ಬಳಸಬೇಕಾಗಿ ಬಂದಾಗಲೆಲ್ಲಾ ಸೊಟೊ ‘ಕುಸ್ಕೊ’ ಪದ ಬಳಸುತ್ತಿದ್ದರು. ಕುಸ್ಕೊ ಎನ್ನುವುದು ಲಾಮಾ ಪ್ರಾಣಿಯ ಕತ್ತಿನ ಚರ್ಮದಿಂದ ತಯಾರಿಸಿದ ಗೋಳಾಕಾರದ ವಸ್ತು. ಇದನ್ನು ಪೆರು ಮೂಲನಿವಾಸಿಗಳು ಧಾರ್ಮಿಕ ಆಚರಣೆಗಳಲ್ಲಿ ಬಳಸುವುದು ವಾಡಿಕೆ.

‘ಅಯ್ಯೋ, ಫುಟ್‌ಬಾಲ್‌ನ ಚೆಂಡನ್ನು ವಿವರಿಸುವ ಪದವೇ ಇರಲಿಲ್ಲ. ಹೀಗಾಗಿ ನಾನು ಹಳೆಯ ಪದವೊಂದರ ಅರ್ಥ ವಿಸ್ತರಿಸಿದೆ’ ಎನ್ನುತ್ತಾರೆ ಸೊಟೊ.

ಸ್ಥಳೀಯ ಆಟಗಾರರು, ತಂಡಗಳ ಪರ ಕಾರ್ಯಕ್ರಮ ನಡೆಸಿಕೊಡುವ ವೇಳೆ ‘ಕ್ವಾರಾ ಕ್ವೊಂಪೊ’ ಎನ್ನುವ ಪದ ‘ಚೆಂಡು’ ಎನ್ನುವ ಅರ್ಥವನ್ನು ಚೆನ್ನಾಗಿ ಹೊಮ್ಮಿಸಬಲ್ಲದು ಎಂದು ಸೊಟೊ ಅವರಿಗೆ ಅನ್ನಿಸಿತು. ಕ್ವೆಂಚು ಭಾಷೆಯಲ್ಲಿ ‘ಕ್ವಾರಾ ಕ್ವೊಂಪೊ’ ಎಂದರೆ ಚರ್ಮದ ಚೆಂಡು ಅಥವಾ ಗೋಳಾಕಾರ ಎಂದು ಅರ್ಥ. ಹೀಗೆ ಸಾಕಷ್ಟು ಹಳೆಯ ಪದಗಳಿಗೆ ಹೊಸ ಅರ್ಥ ಹಚ್ಚುವ ಮೂಲಕ ಇದೀಗ ಕ್ವೆಂಚು ಭಾಷೆಯಲ್ಲಿ 500 ಪದಗಳ ಫುಟ್‌ಬಾಲ್ ನಿಘಂಟು ರೂಪಿಸಿ, ಉಚಿತವಾಗಿ ವಿತರಿಸುತ್ತಿದ್ದಾರೆ.

ಪೆರುವಿನ ಮೌಖಿಕ ಭಾಷೆ ಕ್ವೆಂಚು ಬರವಣಿಗೆಗೆ ಸ್ಪ್ಯಾನಿಷ್ ಲಿಪಿ ಬಳಸುತ್ತದೆ. ಪೆರುವಿನ ವಿವಿಧೆಡೆ ಈ ಭಾಷೆಯ ಸ್ಥಳೀಯ ಕವಲುಗಳು ಇವೆ. ಶಾಲೆಗಳಲ್ಲಿ ಕ್ವೆಂಚು ಕಲಿಕೆಗೆ ಅವಕಾಶವಿಲ್ಲ. ಸೊಟೊ ರೂಪಿಸಿರುವ ಫುಟ್‌ಬಾಲ್ ನಿಘಂಟು ಕೇವಲ ಅವರ ವೈಯಕ್ತಿಕ ಮತ್ತು ಪ್ರಾದೇಶಿಕ ಅನುಭವವನ್ನು ಪ್ರತಿನಿಧಿಸುತ್ತದೆ. ಪೆರು ದೇಶದ ಇತರ ಭಾಗಗಳಲ್ಲಿ ಭಾಷಾತಜ್ಞರು ‘ರುರ‍್ಯುಕು’ ಮತ್ತು ‘ಹಯ್ತಾನಾ’ ಪದಗಳೂ ಸಹ ಫುಟ್‌ಬಾಲ್ ಚೆಂಡನ್ನು ಧ್ವನಿಸುತ್ತವೆ ಎನ್ನುತ್ತಾರೆ.

ಇದೀಗ 44ರ ಹರೆಯಲ್ಲಿರುವ ಸೊಟೊ ವ‌ರ್ಲ್ಡ್‌ಕಪ್‌ ಫುಟ್‌ಬಾಲ್‌ನ ವೀಕ್ಷಕ ವಿವರಣೆ ನೀಡಲು ಹಲವು ತಿಂಗಳುಗಳ ಅಭ್ಯಾಸ ಮಾಡಿಕೊಂಡಿದ್ದಾರೆ. ಹಳೆಯ ವಿಡಿಯೊಗಳಿಗೆ ವೀಕ್ಷಕ ವಿವರಣೆ ಕೊಡುತ್ತಾ ತಮ್ಮ ಧ್ವನಿಯ ವೇಗ ಮತ್ತು ಮಾತಿನ ರೀತಿಯನ್ನು ಹರಿತಗೊಳಿಸಿಕೊಂಡಿದ್ದಾರೆ. ‘ನನ್ನ ಸಾವಿರಾರು ಕೇಳುಗರು ತಮ್ಮ ಸ್ವಂತ ಭಾಷೆಯಲ್ಲಿಯೇ ಪೆರುವಿನ ಮಹತ್ವದ ಸಂಗತಿಯನ್ನು ಅರಿತುಕೊಳ್ಳುತ್ತಿದ್ದಾರೆ’‌ ಎನ್ನುವ ಎಚ್ಚರ ಸೊಟೊ ಅವರಲ್ಲಿ ಸದಾ ಇರುತ್ತದೆ.

ಕಳೆದ ಶನಿವಾರ ಡೆನ್ಮಾರ್ಕ್‌ ಎದುರು ಪೆರು 1–0 ಗೋಲುಗಳ ಅಂತದಲ್ಲಿ ಸೋಲನುಭವಿಸಿತು. ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಸೊಟೊ ‘ಮಳೆ ಸುರಿಸುವ ಭರವಸೆ ಹುಟ್ಟಿಸಿದ್ದ ಮೋಡಗಳು ಹಾಗೆಯೇ ಹೊರಟುಹೋದವು’ ಎಂದು ವರ್ಣಿಸಿದ್ದರು.

ಪೆರು ಎದುರಿಸುತ್ತಿರುವ ಜನಾಂಗೀಯ ತಾರತಮ್ಯದ ಸಮಸ್ಯೆಗೂ, ಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ಪೆರು ಸರ್ಕಾರ ಇದೀಗ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೂ ಪರಸ್ಪರ ಸಂಬಂಧವಿದೆ. ಪೆರು ದೇಶದ ಒಟ್ಟು ಜನಸಂಖ್ಯೆಯಲ್ಲಿ ಮೂಲನಿವಾಸಿಗರು ಐದನೇ ಒಂದರಷ್ಟು ಇದ್ದಾರೆ. ಭಾಷೆಯನ್ನು ಉಳಿಸಿಕೊಳ್ಳುವ ಮೂಲಕ ಜನಾಂಗೀಯ ಶೋಷಣೆಗೆ ಪ್ರತಿರೋಧ ಒಡ್ಡುವುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರಕ್ಕೆ ಈ ಎಚ್ಚರ ಮೂಡುವ ಎಷ್ಟೋ ವರ್ಷಗಳಿಗೆ ಮೊದಲೇ ಸೊಟೊ ಅವರು ಕ್ವೆಂಚು ಭಾಷೆಯನ್ನು ಸಂಭ್ರಮಿಸಲು ಆರಂಭಿಸಿದ್ದರು.

ಪೆರು ಸರ್ಕಾರದ ಅಧೀನದಲ್ಲಿರುವ ಟಿ.ವಿ. ಕೇಂದ್ರವು ಕ್ಯುಚುವಾ ಭಾಷೆಯ ಸುದ್ದಿ ಪ್ರಸಾರವನ್ನು 2016ರಲ್ಲಿ ಆರಂಭಿಸಿತು. ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಪೆರು ತಂಡವಾಗಿ ಆಡಿದ್ದ ಇಬ್ಬರು ಆಟಗಾರರ ನೆರವಿನಿಂದ ಸರ್ಕಾರವು ಸಹಿಷ್ಣುತೆ ಮತ್ತು ಸೌಹಾರ್ದ ಸಮಾಜದ ಸಂದೇಶವನ್ನು ಸಾರಿಹೇ ಹೇಳಿತು.

ಕಳೆದ ವರ್ಷ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಜಯಗಳಿಸಿದ ಪೆರು ತಂಡವು ವಿಶ್ವಕಪ್‌ ಪಂದ್ಯಾವಳಿಯಲ್ಲಿತನ್ನ ಉಪಸ್ಥಿತಿಯನ್ನು ಖಾತ್ರಿಪಡಿಸಿತು. ಈ ಸಂದರ್ಭ ಪೆರುವಿನ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯ ಟಿ.ವಿ. ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜಾಹೀರಾತುಗಳನ್ನು ಬಿಡುಗಡೆ ಮಾಡಿತು. ಈ ಜಾಹೀರಾತುಗಳಲ್ಲಿ ಜನಪ್ರಿಯ ಫುಟ್‌ಬಾಲ್ ಆಟಗಾರರಾದ ಟಾಪಿಯಾ ಮತ್ತು ಫ್ಲೋರ್ಸ್ ‘ನಾನು ಆಫ್ರೊ–ಪೆರುವಿನಯನ್, ನಾನು ಇಲ್ಲಿಯವನು, ನನ್ನದು ಸಮ್ಮಿಶ್ರ ಜನಾಂಗ, ನಾನು ನಿಮ್ಮಂತೆಯೇ ಪೆರು ಪ್ರಜೆ’ ಎಂಬ ಸಂದೇಶ ಬಿತ್ತರಿಸಿದರು.

‘ಪೆರುವಿನಲ್ಲಿ ಇಂದಿಗೂ ಜನಾಂಗೀಯ ತಾರತಮ್ಯ ದೊಡ್ಡ ಸಮಸ್ಯೆ. ಫುಟ್‌ಬಾಲ್ ಕ್ರೀಡೆಯೂ ಇದಕ್ಕೆ ಹೊರತಾಗಿಲ್ಲ. ಇದನ್ನು ಗಮನಿಸಿಯೇ ನಾನು ಈ ಜಾಹೀರಾತು ಆಂದೋಲನದಲ್ಲಿ ಪಾಲ್ಗೊಂಡೆ’ ಎಂದು ಫ್ಲೋರ್ಸ್ ಹೇಳಿದರು. ಕಳೆದ ಐದು ವರ್ಷಗಳಲ್ಲಿ ನಡೆದ ಫುಟ್‌ಬಾಲ್ ಲೀಗ್ ಪಂದ್ಯಗಳಲ್ಲಿ ಅಭಿಮಾನಿಗಳು ಆಟಗಾರರ ಜನಾಂಗೀಯ ನಿಂದನೆ ಮಾಡಿರುವ ಕನಿಷ್ಠ 10 ಘಟನೆಗಳು ಪೆರು ಮಾಧ್ಯಮಗಳಲ್ಲಿ ವರದಿಯಾಗಿವೆ.

ದಿ ನ್ಯೂಯಾರ್ಕ್ ಟೈಮ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.