ಭಾನುವಾರ, ಏಪ್ರಿಲ್ 18, 2021
30 °C
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ * ತಂದೆಯಿಂದ ಅಶೋಕನಗರ ಠಾಣೆಗೆ ದೂರು

ಮಕ್ಕಳಿಗೆ ಬೆಲ್ಟ್‌ನಿಂದ ಹೊಡೆದು ಬೆದರಿಸಿದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಶೋಕನಗರ ಬಳಿಯ ವಿಕ್ಟೋರಿಯಾ ಬಡಾವಣೆಯ ಮನೆಯೊಂದರಲ್ಲಿ ಮಕ್ಕಳಿಬ್ಬರನ್ನು ವ್ಯಕ್ತಿಯೊಬ್ಬ ಬೆಲ್ಟ್‌ನಿಂದ ಥಳಿಸಿ ಬೆದರಿಸಿದ್ದು, ಆ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೂನ್ 27ರಂದು ನಡೆದಿರುವ ಘಟನೆ ಸಂಬಂಧ ಮಕ್ಕಳ ತಂದೆ ಮೈಕಲ್ ರೆಬೆಲೊ ದೂರು ನೀಡಿದ್ದಾರೆ. ಆರೋಪಿ ಇ. ವಿಕ್ಟರ್ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅಶೋಕನಗರ ಪೊಲೀಸರು ಹೇಳಿದರು.

‘ಮೈಕಲ್ ಹಾಗೂ ಅವರ ಪತ್ನಿ ಪ್ರೆಸಿಲ್ಲಾ ರೆಬೆಲೊ, ತಮ್ಮಿಬ್ಬರು ಮಕ್ಕಳ ಜೊತೆ ವಾಸವಿದ್ದಾರೆ. ದಂಪತಿಗೆ ಪರಿಚಯಸ್ಥನಾಗಿದ್ದ ವಿಕ್ಟರ್, ರಜೆ ನಿಮಿತ್ತ ಇತ್ತೀಚೆಗೆ ಮನೆಗೆ ಬಂದು ಉಳಿದುಕೊಂಡಿದ್ದ. ದಂಪತಿ ವಾಪಸ್‌ ಹೋಗು ಎಂದರೂ ಹೋಗಿರಲಿಲ್ಲ’ ಎಂದರು.

‘ಮೈಕಲ್ ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ವಾಪಸ್ ಬರುತ್ತಿದ್ದರು. ಜೂನ್ 27ರಂದು ಅವರ ಪತ್ನಿ ಹಾಗೂ ವಿಕ್ಟರ್ ಮಾತ್ರ ಮನೆಯಲ್ಲಿದ್ದರು. ಅದೇ ವೇಳೆ ವಿಕ್ಟರ್‌, ಮಕ್ಕಳನ್ನು ಬೆಲ್ಟ್‌ನಿಂದ ಥಳಿಸಿ ಬೆದರಿಕೆ ಹಾಕಿದ್ದ.’  ‘ಸಂಜೆ ಮನೆಗೆ ಬಂದಿದ್ದ ಮೈಕಲ್‌ಗೆ ಮಕ್ಕಳು ವಿಷಯ ತಿಳಿಸಿದ್ದರು.

ಮನೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಬೆಲ್ಟ್‌ನಿಂದ ಹೊಡೆದಿದ್ದ ದೃಶ್ಯ ಸೆರೆಯಾಗಿತ್ತು. ಅದನ್ನು ಆಧರಿಸಿಯೇ ಮೈಕಲ್ ದೂರು ನೀಡಿದ್ದಾರೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ದಂಪತಿ ನಡುವೆ ಕಲಹ?: ‘ಮೈಕಲ್ ಹಾಗೂ ಪ್ರೆಸಿಲ್ಲಾ ನಡುವೆ ಕೌಟುಂಬಿಕ ಕಲಹವಿರುವ ಅನುಮಾನವಿದೆ. ಮಕ್ಕಳನ್ನು ಥಳಿಸಿದ ವೇಳೆ ತಾಯಿಯೂ ಸ್ಥಳದಲ್ಲಿದ್ದರು. ಬಿಡಿಸಲು ಪ್ರಯತ್ನಿಸಿಲ್ಲ. ಹೀಗಾಗಿ ತಾಯಿಯನ್ನೂ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಮಕ್ಕಳ ಮೇಲಿನ ಹಲ್ಲೆ ಪ್ರಶ್ನಿಸಿದ್ದ ಮೈಕಲ್, ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಪತ್ನಿ, ಅವರ ಮೇಲೆಯೇ ತಿರುಗಿಬಿದ್ದಿದ್ದರು. ಎರಡು ದಿನ ಮನೆಗೂ ಸೇರಿಸಿರಲಿಲ್ಲ. ಈ ಬಗ್ಗೆ ಮೈಕಲ್ ಹೇಳಿಕೆ ನೀಡಿದ್ದಾರೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು