ಯುದ್ಧಕ್ಕೆ ಎದೆಯೊಡ್ಡುವ ಮೊದಲಿಗ ನಾನೇ ಆಗಬೇಕು

7

ಯುದ್ಧಕ್ಕೆ ಎದೆಯೊಡ್ಡುವ ಮೊದಲಿಗ ನಾನೇ ಆಗಬೇಕು

Published:
Updated:

ತರಬೇತಿ ಮುಗಿದು, ಸೈನ್ಯದಲ್ಲಿ ಆಫೀಸರ್ ಆಗಿ ನಾವು ಹೊರ ಹೊರಡುವ ಸಮಯ ಹತ್ತಿರ ಬಂತು. ಎರಡು ತಿಂಗಳ ಮೊದಲು, ನಮಗೆ ಸೈನ್ಯದ ನಮ್ಮ ಆಯ್ಕೆಯ ಮೂರು ವಿಭಾಗಗಳನ್ನು ಕೇಳಲಾಗುತ್ತದೆ. ನನಗೂ ಹಾಗೇ ಕೇಳಿದಾಗ, ನನ್ನ ಮೂರು ಆಯ್ಕೆಗಳು- ಕಾಲಾಳು ಪಡೆ-ಕಾಲಾಳು ಪಡೆ-ಕಾಲಾಳು ಪಡೆ !!

ಯುದ್ದ ಭೂಮಿಯಲ್ಲಿ ಮೊದಲು ಮುನ್ನುಗ್ಗುವ ಪಡೆ ಕಾಲಾಳು ಪಡೆ. ಹೆಚ್ಚಿನವರಿಗೆ ಇದು ಕೊನೆಯ ಆಯ್ಕೆ ಇದಾಗಿರುತ್ತದೆ. ಆದರೆ ನನ್ನ ಮೊದಲ ಮೂರು ಆಯ್ಕೆಗಳೂ ಇವೆ. ಹೀಗೆ ನನಗೆ ಸಿಕ್ಕ ಅವಕಾಶ ಸಿಖ್ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್!!

ಹೀಗೆ ತರಬೇತಿ ಮುಗಿದ ನಂತರದ ಪೆರೇಡ್ ಸೈನಿಕನ ಜೀವನದಲ್ಲಿ ಮರೆಯಲಾರದ ಅಪೂರ್ವ ಕ್ಷಣ.

ಪೆರೇಡ್ ಮುಗಿದ ನಂತರ, ಸಭಾಂಗಣದ ಮುಂದೆ ನಿಂತು, ರಾಷ್ಟ್ರ ಧ್ವಜದ ಮೇಲೆ ಇಟ್ಟಿರುವ ನಮ್ಮ ಧರ್ಮಗ್ರಂಥ (ಗೀತೆ/ಬೈಬಲ್/ಖುರಾನ್/ಗುರುಗ್ರಂಥ್)ದ ಮೇಲೆ ಬಲ ಕೈಯನ್ನಿಟ್ಟು ನಾವೆಲ್ಲರೂ ಒಂದು ಪ್ರತಿಜ್ಞೆಯನ್ನು ಕೈಗೊಳ್ಳುತ್ತೇವೆ. ಅದೆಂದರೆ ನಮ್ಮ ಜೀವನವನ್ನು ನಾವು ದೇಶಕ್ಕಾಗಿ ಮುಡಿಪಾಗಿಡುತ್ತೇವೆ ಎಂಬುದು. ಈ ಸಂದರ್ಭದಲ್ಲಿ ನಮ್ಮ ಕುಟುಂಬವರ್ಗದವರೂ ಪಾಲ್ಗೊಳ್ಳುವ ಅವಕಾಶ ಇರುತ್ತದೆ ಮತ್ತು ಅದು ಒಂದು ಅತ್ಯಂತ ಭಾವನಾತ್ಮಕ ಕ್ಷಣವಾಗಿರುತ್ತದೆ.

ಈ ಎಲ್ಲವನ್ನೂ ಮುಗಿಸಿದ ನಾನು ಇಚ್ಲಂಪಾಡಿಯಿಂದ ದೇಶ ಕಾಯುವ ಓರ್ವ ‘ಯಂಗ್ ಆಫೀಸರ್’ ಆಗಿ ನನ್ನ ಜೀವನದ ಮಹತ್ವದ ಮಗ್ಗುಲಿಗೆ ಹೊರಳಿದೆ. 

ಅದು 1971ರ ಕಾಲ, ಅಂದು ಸಿಖ್ ಲೈಟ್ ರೆಜಿಮೆಂಟರಿಯಲ್ಲಿ ಒಂದರಿಂದ ಹತ್ತರ ತನಕ, ಒಟ್ಟೂ ಹತ್ತು ಬೆಟಾಲಿಯನ್ ಪಡೆ ಇತ್ತು. ನಾನು ಈ ರೆಜಿಮೆಂಟ್ ಆಯ್ಕೆಯ ನಂತರ ಎಂಟನೇ ನಂಬರ್ ಬೆಟಾಲಿಯನ್‍ಗೆ ನೇಮಕಗೊಂಡೆ. ಕಾರ್ಯಕ್ಷೇತ್ರ ಪಂಜಾಬ್‍ನ ಜಲಂಧರ್.  ಈ ಬೆಟಾಲಿಯನ್‌ ನ ಈಶಾನ್ಯದಲ್ಲಿ ಸತತ ಮೂರು ವರ್ಷಗಳ ಹೋರಾಟದ ನಂತರ, ವಿಶ್ರಾಂತ ವಲಯಕ್ಕೆ ಹೋಗಿತ್ತು. ಅಂದರೆ ಯಾವುದೇ ಬೆಟಾಲಿಯನ್ ಅಥವಾ ಸೈನ್ಯದ ತುಕಡಿ, ಒಂದಷ್ಟು ಕಾಲ ಯುದ್ಧ ಸನ್ನದ್ಧ ಸ್ಥಿತಿಯಲ್ಲಿದ್ದು, ಮತ್ತೆ ಸ್ವಲ್ಪ ಕಾಲ ಬಿಡುವಿನ ಸಮಯಕ್ಕೆ ಕಳುಹಿಸಲ್ಪಡುತ್ತದೆ. ಇದಕ್ಕೆ ಪೀಸ್ ಸ್ಟೇಶನ್ (ಶಾಂತಿಯ ನಿಲ್ದಾಣ) ಎನ್ನುತ್ತಾರೆ. ನಾನು ಎಂಟನೇ ಸಿಖ್ ಲೈಟ್ ರೆಜಿಮೆಂಟ್ ಸೇರುವಾಗ ಇದು ಪೀಸ್ ಸ್ಟೇಶನ್ ನಲ್ಲಿತ್ತು.

ಈ ರೆಜಿಮೆಂಟ್‍ನಲ್ಲಿ 800 ಸೈನಿಕರಿದ್ದರು. ಹವಾಲ್ದಾರರು, ಸುಬೇದಾರರು ಇದ್ದರು. ಎಲ್ಲರೂ ಹೆಸರೇ ಸೂಚಿಸುವಂತೆ ಸಿಖ್ ರಾಗಿದ್ದರು. ವಾಸ್ತವದಲ್ಲಿ ಪ್ರತೀ ರೆಜಿಮೆಂಟ್‍ನ್ನೂ ಒಂದೊಂದು ಜನಾಂಗದವರಿರುವ ಹೆಸರಿನಲ್ಲೇ ಕರೆಯುತ್ತಿದ್ದುದು, ಮತ್ತು ಅದರಲ್ಲಿ ಅವರವರೇ ಇರುವುದು ಸೈನ್ಯದ ಒಂದು ನಿಯಮ. ಈ ಮೂಲಕ ದೇಶದ ಬೇರೆ ಬೇರೆ ವಿಭಾಗದಿಂದ ಬಂದ ಸೈನಿಕರಿಗೆ ಆಚಾರ ವಿಚಾರದ ಹೊಂದಾಣಿಕೆಯ ಮೂಲಕ, ಮಾನಸಿಕವಾಗಿ ಒಂದಾಗಿಡುವುದು ಇದರ ಉದ್ದೇಶ.  ಅಡುಗೆಯವರು, ಕ್ಲೀನರ್, ದೋಬಿ,  ಟೆಕ್ನಿಕಲ್ ...ಹೀಗೆ ಬೇರೆ ಬೇರೆಯವರೂ ಇದ್ದರು.  ಆ ಕಾಲದಲ್ಲಿ ಒಂದು ಬೆಟಾಲಿಯನ್‍ನ್ನು ಓರ್ವ ಲೆಫ್ಟಿನೆಂಟ್ ಕರ್ನಲ್ (ಈಗ ಕರ್ನಲ್)ನೋಡಿಕೊಳ್ಳುತ್ತಿದ್ದರು. 15-20 ಜನ ಆಫೀಸರ್ ಗಳು ಈ ಕರ್ನಲ್‍ಗೆ ಸಹಾಯ ಮಾಡುತ್ತಿರುತ್ತಿದ್ದರು. ಆಫೀಸರ್‍ಗಳನ್ನು ಅವರ ದಕ್ಷತೆ ಮತ್ತು ಸಾಮರ್ಥ್ಯದ ಮೇಲೆ ದೇಶದ ಬೇರೆ ಬೇರೆ ಭಾಗದಿಂದ ಆಯ್ಕೆ ಮಾಡುತ್ತಿದ್ದರು. ಇವರಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್, ಏಳು ಮೇಜರ್ ಗಳು ಮತ್ತು ಉಳಿದವರು ಯಂಗ್ ಆಫೀಸರ್ ಅಥವಾ ಕ್ಯಾಪ್ಟನ್‍ಗಳು. 

ನಾನು ಯಾವುದೇ ರೀತಿಯ ಯುದ್ಧ ಸನ್ನಿವೇಶದಲ್ಲಿ ಮೊದಲು ಎದೆಯೊಡ್ಡಬೇಕಾದ ಯಂಗ್ ಆಫೀಸರ್ ಆಗಿ ಕೆಲಸ ಆರಂಭಿಸಿದೆ. 1970ರ ಮಾರ್ಚ್ ಕೊನೆಯಲ್ಲಿ ಜೀವನದಲ್ಲೇ ಮೊದಲ ಬಾರಿಗೆ ಉತ್ತರ ಭಾರತಕ್ಕೆ ಹೋದಾಗ ಭಾಷೆ, ಜೀವನ ಶೈಲಿ, ಆಹಾರ ಪದ್ಧತಿ...ಹೀಗೆ ಎಲ್ಲವೂ ಭಿನ್ನವಾದ ವಾತಾವರಣವಾಗಿತ್ತು. ಆದರೆ ಸಿಖ್ ಜನರನ್ನು ಕಂಡಾಗಲೇ ಒಂದು ರೀತಿಯ ಅಭಿಮಾನ. ಸದಾ ಕಾಲವೂ ನಗುತ್ತಲೇ ಇರುವ, ಕಣ್ಣು ಹಾಯಿಸಿದಷ್ಟಕ್ಕೂ ಹಾಸಿಕೊಂಡಂತಿರುವ ಹೊಲ ಗದ್ದೆಗಳ ಪ್ರದೇಶ, ಗುರುದ್ವಾರಗಳು, ಧಾರ್ಮಿಕವಾಗಿಯೂ ಒಂದು ಭಿನ್ನತೆ ಮತ್ತು ವಿಶಿಷ್ಟತೆ ಇರುವ ಜಲಂಧರ್‍ನ ಜನರ ಸ್ನೇಹಶೀಲತೆ ಮರೆಯಲಸದಳ.

ಈ ಸೈನಿಕ ಶಿಬಿರ ಬಹಳ ವಿಸ್ತಾರವಾಗಿದ್ದು, ಸುವ್ಯವಸ್ಥಿತವಾಗಿತ್ತು. ನನಗಿಂತ ಸೀನಿಯರ್ ಆಗಿದ್ದ ಐದು ಜನ ಯಂಗ್ ಆಫೀಸರ್ ಜೊತೆಯಲ್ಲಿ ನನಗೆ ವಾಸ್ತವ್ಯ. ಅವರೇ ನನಗೆ ಅಲ್ಲಿಯ ನಿಯಮಗಳನ್ನು, ಶಿಸ್ತುಗಳನ್ನು ಹೇಳಿಕೊಡುವ ಗೈಡ್ ಗಳು!.

ಓರ್ವ ಸಹಾಯಕನೂ ಇದ್ದ. ನನ್ನ ದೈನಂದಿನ ಕೆಲಸದ ಬಗ್ಗೆ ಪಟ್ಟಿ ಮಾಡಿಕೊಂಡು ಸಹಾಯ ಮಾಡುವುದು, ಯೂನಿಫಾರಂ ಅಥವಾ ಉಡುಗೆ ತೊಡುಗೆಗಳು, ವಸ್ತುಗಳನ್ನು ರೆಡಿ ಮಾಡಿ ಕೊಡುವುದು, ನಿಗದಿತ ಸಮಯಕ್ಕೆ ಸರಿಯಾಗಿ ನಾನಿರುವಂತೆ ನೋಡಿಕೊಳ್ಳುವುದು-ಇಂತಹ ಕೆಲಸಗಳನ್ನು ನಮ್ಮ ಸಹಾಯಕ ಮಾಡಬೇಕು. ಇವನನ್ನು ಸೈನಿಕ ಬಾಷೆಯಲ್ಲಿ ಸಾಮಾನ್ಯವಾಗಿ ‘ಬುಡ್ಡಿ’ ಎಂದೇ ಕರೆಯುವುದು. ಈತ ದಿನಚರಿಯ ಅವಿಭಾಜ್ಯ ಸಂಗಾತಿ. 

ಮೊದಲ ದಿನ ಮೇಲಧಿಕಾರಿಯಿಂದ ಮೊದಲ ಹಂತದ ಸಂದರ್ಶನ. ಅವರು ನನ್ನೆಲ್ಲಾ ಇತಿಹಾಸ, ದಾಖಲೆ ಪರಿಶೀಲಿಸಿ ನನಗೆ ಮಾಡಬೇಕಾದ, ಮಾಡ ಬಾರದ ಕೆಲಸಗಳ ಬಗ್ಗೆ ತಿಳಿ ಹೇಳಿದರು. ಕಾಯ್ದುಕೊಳ್ಳಬೇಕಾದ ಶಿಸ್ತು, ಪಾಲಿಸಲೇ ಬೇಕಾದ ನಿಯಮಗಳು ಎಲ್ಲದರ ಬಗ್ಗೆ ಹೇಳುತ್ತಾರೆ. ತುಸು ದರ್ಪವನ್ನೂ ತೋರಿಸಿದರು. 

ನಂತರ ಕಮಾಂಡಿಂಗ್ ಆಫೀಸರ್ ಕೂಡ ಸಂಪ್ರದಾಯದಂತೆ ಸಂದರ್ಶನ ಮಾಡುತ್ತಾರೆ. ಅವರಿಂದಲೂ ಮತ್ತೊಂದಿಷ್ಟು ಸಲಹೆಗಳು ಬರುತ್ತವೆ. ಅದರಂತೆ ನನಗೆ ವಿಶೇಷವಾದ ಜವಾಬ್ದಾರಿಯನ್ನೂ ವಹಿಸುತ್ತಾರೆ.  ಬೆಳಿಗ್ಗೆ ಬೇಗನೇ ಎದ್ದು 5.15ಕ್ಕೆ ಟೀ ಕುಡಿಯುವುದರಿಂದ ದಿನದ ಆರಂಭ. 6ಕ್ಕೆ ಸೈನ್ಯದ ತಂಡಗಳೊಂದಿಗೆ ದೈಹಿಕ ಶಿಕ್ಷಣ. 7ರಿಂದ 8 ರತನಕ ಬೇಗನೇ ಸ್ನಾನ ಮುಗಿಸಿ, ತಿಂಡಿ ತಿನ್ನಬೇಕು. 8 ರಿಂದ ಮಧ್ಯಾಹ್ನ 12 ರತನಕ ತರಬೇತಿ. ಮತ್ತೆ 1.30ರ ತನಕ ಊಟದ ವಿರಾಮ. 4ರಿಂದ 5 ರತನಕ ಸೈನಿಕರ ಜೊತೆಗೆ ವಿವಿಧ ಆಟೋಟಗಳು. 5.30ರಿಂದ 6.30 ಸ್ನಾನ, ರಾತ್ರಿ ಪಾಳಿಯವರಿಗೆ ಮಾಡಬೇಕಾದ ಕೆಲಸಗಳ ಬಗ್ಗೆ ಹೇಳುವುದು. ಮತ್ತೆ 7ರಿಂದ 8 ರತನಕ ಸೈನಿಕರಿಗೆ ಊಟವಾದ ನಂತರ ನಮಗೆ 8ರಿಂದ 9.30ರ ತನಕ ಆಫೀಸರ್ಸ್ ಮೆಸ್ ನಲ್ಲಿ ಊಟ. ಈ ದಿನಚರಿ ಬೇಸಿಗೆ, ಚಳಿಗಾಲ ಅಥವಾ ಮಳೆಗಾಲದಲ್ಲಿ ಕಾಲಕ್ಕನುಗುಣವಾಗಿ ಬದಲಾಗುತ್ತಲೂ ಇರುತ್ತದೆ.

ನನ್ನನ್ನು ಕಮಾಂಡೊ ಪ್ಲಟೂನ್ ಕಮಾಂಡರ್ ಆಗಿ ನೇಮಿಸಿ, 35ಜನ ಸೈನಿಕರಿರುವ ತುಕಡಿಯ ಕಮಾಂಡರ್ ಆಗಿ ಕಳಿಸಿದರು. ಈ 35ಜನರೂ, ವಿಶೇಷವಾಗಿ ಆಯ್ಕೆಗೊಂಡ ಅತ್ಯಂತ ಕಠಿಣ ಮತ್ತು ಪರಿಣಿತ ಸೈನಿಕರಾಗಿರುತ್ತಾರೆ. ಇವರಲ್ಲಿ ಐವರು ಎನ್‍ಸಿಒ ಮತ್ತು ಇನ್ನೊಬ್ಬ ಸುಬೇದಾರ್ ಇರುತ್ತಾರೆ. ಇವರೆಲ್ಲರೂ ಶೂಟಿಂಗ್, ಸಿಡಿಮದ್ದುಗಳನ್ನು ಉಪಯೋಗಿಸುವಲ್ಲಿ ಪರಿಣಿತರಾಗಿರುತ್ತಾರೆ. ಇವರನ್ನು ವಿವಿಧ ರೀತಿಯ ಆಪರೇಶನ್‍ಗಳಿಗೆ ತಯಾರು ಮಾಡುವುದು ಮತ್ತು ಅಂತಹ ಸಂದರ್ಭಗಳಲ್ಲಿ ಅವರಿಗೆ ಬೇಕಾದ ಪ್ರೋತ್ಸಾಹ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ತಯಾರಿಯಲ್ಲಿ ಪಳಗಿಸುವುದು ನನ್ನ ಜವಾಬ್ದಾರಿ.

ಮುಂದಿನ ವಾರ: ಸೇನೆಯಾಗಲೀ, ಊರಾಗಲೀ ವಿಶ್ವಾಸವೇ ಬದುಕು

ನಿರೂಪಣೆ: ಅರೆಹೊಳೆ ಸದಾಶಿವ ರಾವ್‌ 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !