ಮಂಗಳವಾರ, ಮೇ 18, 2021
30 °C

ಮಧ್ಯಮ ವರ್ಗಕ್ಕೆ ರೇಡಿಯಾನ್‌

ಉದಯ ಯು Updated:

ಅಕ್ಷರ ಗಾತ್ರ : | |

Prajavani

ದ್ವಿ ಚಕ್ರ ವಾಹನ ಖರೀದಿಸುವ ಮಧ್ಯಮ ವರ್ಗಕ್ಕೆ ಹತ್ತಾರು ನಿರೀಕ್ಷೆಗಳು ಇರುತ್ತವೆ. ಒಳ್ಳೆಯ ಮೈಲೇಜ್‌ ಇರಬೇಕು, ದೀರ್ಘ ಬಾಳಿಕೆ ಬರಬೇಕು, ನಿರ್ವಹಣೆ ಸುಲಭವಾಗಿರಬೇಕು, ನೋಡಲು ಸ್ಟೈಲಿಶ್‌ ಆಗಿರಬೇಕು... ಅಷ್ಟೇ ಅಲ್ಲ ವಾಹನ ಹೊರಹೊಮ್ಮಿಸುವ ಶಬ್ದದ ಬಗ್ಗೆಯೂ ತಲೆಕೆಡಿಸಿಕೊಳ್ಳುವರೂ ಇದ್ದಾರೆ. ಈ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸಿ ಗ್ರಾಹಕರನ್ನು ಸೆಳೆಯಲು ದ್ವಿಚಕ್ರ ವಾಹನ ತಯಾರಕರು ಪ್ರತಿ ವರ್ಷವೂ ಹೊಸ ಹೊಸ ಆವೃತ್ತಿಯಲ್ಲಿ ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ.

ಗ್ರಾಹಕರ ನಿರೀಕ್ಷೆಗೆ ಈಗ ಹೊಸ ಸೇರ್ಪಡೆ ಎಂದರೆ ‘ರೆಟ್ರೊ ಲುಕ್‌’. ಇದನ್ನು ಗಮನದಲ್ಲಿಟ್ಟು ಟಿವಿಎಸ್‌ ಕಂಪನಿ ‘ಟಿವಿಎಸ್‌ ರೇಡಿಯಾನ್‌’ ಬೈಕ್‌ ಅನ್ನು ಈಚೆಗೆ ರಸ್ತೆಗಿಳಿಸಿದೆ. ‘ಟಿವಿಎಸ್‌ ವಿಕ್ಟರ್‌’ ಮೂಲಕ ಭಾರಿ ಯಶಸ್ಸು ಕಂಡಿದ್ದ ಈ ಕಂಪನಿ ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್‌ ತಯಾರಿಸಿದೆ. ಈ ಬೈಕ್‌ ಅನ್ನು ‘ಪ್ರಜಾವಾಣಿ’ ಈಚೆಗೆ ಟೆಸ್ಟ್‌ ಡ್ರೈವ್‌ ಮಾಡಿದೆ.

110 ಸಿ.ಸಿ. ಎಂಜಿನ್‌, 18 ಇಂಚ್‌ ಟ್ಯೂಬ್‌ಲೆಸ್‌ ಟೈರ್‌ಗಳು, ಕಪ್ಪು ಬಣ್ಣದ ಅಲಾಯ್‌ ವ್ಹೀಲ್‌, ಸಾಕಷ್ಟು  ಗ್ರೌಂಡ್‌ ಕ್ಲಿಯರೆನ್ಸ್‌, ಲೀಟರ್‌ಗೆ 60 ಕಿ.ಮೀ. ಇಂಧನ ಕ್ಷಮತೆ, ಸೈಡ್‌ ಸ್ಟ್ಯಾಂಡ್‌ ಇಂಡಿಕೇಟರ್‌... ಇವು ಬೈಕ್‌ನ ಸಾಮಾನ್ಯ ಅಂಶಗಳು. ಸಂಸ್ಥೆಯವರು ಬೈಕ್‌ಗೆ ‘ರೆಟ್ರೊ ಲುಕ್‌’ ಕೊಟ್ಟಿದ್ದಾರೆ. ಹೆಡ್‌ಲ್ಯಾಂಪ್‌ ಮೇಲೆ ನೀಡಿರುವ ಡೂಮ್‌ ಮತ್ತು ಟೇಲ್‌ ಲ್ಯಾಂಪ್‌ಗಳು ಹಳೆಯ ಸ್ಪ್ಲೆಂಡರ್‌ ಬೈಕ್‌ ಅನ್ನು ನೆನಪಿಸಿದರೆ, ಇಂಧನ ಟ್ಯಾಂಕ್‌ ಎರಡೂ ಕಡೆಗಳಲ್ಲಿ ನೀಡಿರುವ ‘ಥೈ ಪ್ಯಾಡ್’ಗಳು ಹಳೆಯ ಕಾಲದ ಬುಲೆಟ್‌ ಅಥವಾ ಜಾವಾ ಬೈಕ್‌ ಅನ್ನು ನೆನಪಿಗೆ ತರುತ್ತವೆ. ಇನ್ನೊಂದು ಕೋನದಿಂದ ‘ಯಮಹ ಆರ್‌ಎಕ್ಸ್‌’ ಬೈಕ್‌ನಂತೆಯೂ ‘ರೇಡಿಯಾನ್‌’ ಕಾಣಿಸುತ್ತದೆ.

ಮಧ್ಯಮ ವರ್ಗದ ಜನರು ದ್ವಿಚಕ್ರ ವಾಹನವನ್ನು ಪ್ರಯಾಣಕ್ಕೆ ಮಾತ್ರವಲ್ಲ, ಸಣ್ಣಪುಟ್ಟ ಸರಕು ಸಾಕಾಣಿಕೆಗೂ ಬಳಸುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡಿರುವ ಕಂಪನಿಯು ಅಗಲವಾದ ಮತ್ತು ಆರಾಮದಾಯಕ ಸೀಟ್‌ ವಿನ್ಯಾಸ ಮಾಡಿದ್ದಾರೆ. ದಂಪತಿಯು ಮಧ್ಯೆ ಮಗುವನ್ನೂ ಕೂಡಿಸಿಕೊಂಡು ಆರಾಮವಾಗಿ ಪ್ರಯಾಣ ಮಾಡಬಹುದಾದಷ್ಟು ಉದ್ದವಾಗಿದೆ ಸೀಟ್‌. ಒಂದೇ ಭಾಗದಲ್ಲಿ ಕಾಲಿಟ್ಟು ಕೂರುವ ಮಹಿಳೆಯರು ಜಾರಿ ಬೀಳದಂತೆ ಹಿಡಿದುಕೊಳ್ಳಲು ಹುಕ್‌ ನೀಡಲಾಗಿದೆ. ಬೇಕಿದ್ದರೆ ಚೀಲವನ್ನೂ ಅದಕ್ಕೆ ನೇತು ಹಾಕಬಹುದು. ಸೀಟ್‌ ಹಿಂಬದಿಯಲ್ಲಿ ಕ್ಯಾರಿಯರ್‌ ಅನ್ನು ನೀಡಲಾಗಿದ್ದು, ಅದೂ ಹೊಸ ವಿನ್ಯಾಸದಲ್ಲಿದೆ. ಓಡಿಸಲು ‘ರೇಡಿಯಾನ್‌’ ಹಿತವಾಗಿದೆ. ಇದರ ಧ್ವನಿ ಸ್ವಲ್ಪ ಮಟ್ಟಿಗೆ ಸ್ಪೋರ್ಟ್ಸ್‌ ಬೈಕ್‌ನಂತಿದೆ. ವೇಗವರ್ಧನೆಯೂ ಚೆನ್ನಾಗಿರುವುದರಿಂದ ಮಧ್ಯಮ ವರ್ಗದ ಯುವಕರನ್ನು ಆಕರ್ಷಿಸಬಲ್ಲದು.

ಬೈಕ್‌ನಲ್ಲಿ ಕಾಣಿಸುವ ಪ್ರಮುಖ ಕೊರತೆ ಎಂದರೆ ಡಿಸ್ಕ್‌ ಬ್ರೇಕ್‌ನದ್ದು. ಇದರಲ್ಲಿ ಸಿಂಕ್ರನೈಸ್ಡ್‌ ಡ್ರಮ್‌ ಬ್ರೇಕ್‌ ನೀಡಲಾಗಿದೆ. ಇವು ಪರಿಣಾಮಕಾರಿಯಾಗಿದ್ದರೂ, ನಗರದಲ್ಲಿ ಡಿಸ್ಕ್‌ ಬ್ರೇಕ್‌ ಇದ್ದರೆ ಅನುಕೂಲ ಹೆಚ್ಚು. ಹೆಡ್‌ ಲ್ಯಾಂಪ್‌ನಲ್ಲಿ ಎಲ್‌ಇಡಿ ಬದಲು ಹ್ಯಾಲೊಜಿನ್‌ ಬಲ್ಬ್‌ ಬಳಸಲಾಗಿದೆ. ಹೆಡ್‌ಲ್ಯಾಂಪ್‌ ಕೆಳಗೆ ‘ಡೇಲೈಟ್‌’ ರೂಪದಲ್ಲಿ ಎಲ್‌ಇಡಿ ನೀಡಲಾಗಿದೆ. ಚೌಕಾಕಾರದ ಸ್ಪೀಡೊ ಮೀಟರ್‌ ಆಕರ್ಷಕವಾಗಿದೆ. ಅದರಲ್ಲಿ ಇಂಧನ ಉಳಿತಾಯ ಸೂಚಕವೂ ಇದೆ. ಆದರೆ ಡಿಜಿಟಲ್‌ ಡಿಸ್‌ಪ್ಲೇ ಇಲ್ಲ. ಬೈಕ್‌ನಲ್ಲಿ ಮೊಬೈಲ್‌ ಚಾರ್ಜರ್‌ಗೆ ಅವಕಾಶ ಕಲ್ಪಿಸಲಾಗಿದೆ. ಹೆಡ್‌ಲೈಟ್‌ ಹಿಂಭಾಗ, ಬಲಬದಿಯಲ್ಲಿ ಯುಎಸ್‌ಬಿ ಇದೆ. ಆದರೆ ಚಾರ್ಜ್‌ ಮಾಡುವಾಗ ಮೊಬೈಲ್‌ ಇಡುವುದೆಲ್ಲಿ ಎಂಬ ಪ್ರಶ್ನೆ ಕಾಡುತ್ತದೆ. ಆರು ಬಣ್ಣಗಳಲ್ಲಿ ಬೈಕ್‌ ಲಭ್ಯ ಇದೆ. ಎಂಜಿನ್‌ಗೆ ನೀಡಿರುವ ಚಿನ್ನದ ಬಣ್ಣವು ಬೈಕ್‌ನ ಲುಕ್‌ ಹೆಚ್ಚಿಸಿದೆ. ಬೆಲೆ ಸುಮಾರು ₹ 64 ಸಾವಿರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು