ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನೋದ್ಯಮಕ್ಕೆ ಜಾಗತಿಕ ಕೇಂದ್ರವಾಗುವ ಅವಕಾಶ: ಪವನ್ ಮುಂಜಾಲ್

Last Updated 5 ಸೆಪ್ಟೆಂಬರ್ 2020, 17:53 IST
ಅಕ್ಷರ ಗಾತ್ರ

ಮುಂಬೈ: ‘ಕೋವಿಡ್‌–19 ಬಿಕ್ಕಟ್ಟು ಭಾರತವನ್ನು ಸ್ವಾಲಂಬಿಯನ್ನಾಗಿ ರೂಪಿಸುತ್ತಿದೆ. ಇದರಿಂದಾಗಿ ದೇಶದ ವಾಹನೋದ್ಯಮಕ್ಕೆ ಜಾಗತಿಕ ಕೇಂದ್ರವಾಗಿ ಬೆಳೆಯುವ ಅವಕಾಶ ಸೃಷ್ಟಿಯಾಗಿದ್ದು, ಅದನ್ನು ವರ್ಥ ಮಾಡಿಕೊಳ್ಳಬಾರದು’ ಎಂದು ಹೀರೊ ಮೊಟೊಕಾರ್ಪ್‌ನ ಸಿಇಒ ಪವನ್‌ ಮುಂಜಾಲ್‌ ಹೇಳಿದ್ದಾರೆ.

ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟದ (ಎಸಿಎಂಎ) 60ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾಗತಿಕ ಕೇಂದ್ರವಾಗಿ ಬೆಳೆಯಲು ತಂತ್ರಜ್ಞಾನ, ಗುಣಮಟ್ಟದಲ್ಲಿ ಸುಧಾರಣೆ ಹಾಗೂ ಡಿಜಿಟಲೀಕರಣಕ್ಕಾಗಿ ಹೂಡಿಕೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ವಾಹನೋದ್ಯಮವು ಚಾಲಕ ಶಕ್ತಿಯಾಗಬಲ್ಲದು. ಹೊಸತನ, ಎಂಜಿನಿಯರಿಂಗ್‌ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಪರಸ್ಪರ ಸಂಪರ್ಕ, ಸಂವಹನ ಮತ್ತು ಸಹಯೋಗದಿಂದ ಇದನ್ನು ಸಾಧ್ಯವಾಗಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಕೇವಲ ನಮ್ಮ ವಲಯವನ್ನು ಸ್ವಾವಲಂಬಿಯನ್ನಾಗಿ ರೂಪಿಸುವುದಷ್ಟೇ ಅಲ್ಲದೆ ನಮ್ಮಂತೆಯೇ ಯೋಚಿಸುವವರ ಜತೆಗೂ ಕೈಜೋಡಿಸಿ ಒಟ್ಟಾಗಿ ಕೆಲಸ ಮಡಬೇಕು. ಈ ಬಿಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಸಿರುವ ಅವಕಾಶವನ್ನು ವ್ಯರ್ಥವಾಗಲು ಬಿಡದಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಆತ್ಮನಿರ್ಭರ ಭಾರತ ಗುರಿ ಸಾಧನೆಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ’ ಎಂದಿದ್ದಾರೆ.

ಆಮದು ಅವಲಂಬನೆ ತಗ್ಗಿಸಿ: ಆಮದು ಮೇಲೆ ಅವಲಂಬಿತವಾಗದೆ ಸ್ಥಳೀಯ ತಯಾರಿಕೆಗೆ ಆದ್ಯತೆ ನೀಡುವಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ವಾಹನ ಮತ್ತು ಬಿಡಿಭಾಗಗಳ ತಯಾರಕರಿಗೆ ಮನವಿ ಮಾಡಿದ್ದಾರೆ.

‘ರಫ್ತು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸ್ಥಳೀಯವಾಗಿ ತಯಾರಿಸುವುದರಿಂದ ಗಳಿಸುವ ಲಾಭದ ಪ್ರಮಾಣ ಕಡಿಮೆ ಆಗಬಹುದು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಬಂದಾಗ ರಫ್ತು ಮಾಡುವ ಪ್ರಮುಖ ಕಂಪನಿಯಾಗಿ ಹೊರಹೊಮ್ಮಬಹುದು. ನಿಮ್ಮ ಮೇಲೆ ನನಗೆ ಶೇ 100ರಷ್ಟು ವಿಶ್ವಾಸವಿದೆ’ ಎಂದಿದ್ದಾರೆ.

‘ಐದು ವರ್ಷಗಳಲ್ಲಿ ಭಾರತವನ್ನು ಜಾಗತಿಕ ತಯಾರಿಕಾ ಕೇಂದ್ರವಾಗಿ ನಾವು ರೂಪಿಸಬಹುದು. ವಾಹನೋದ್ಯಮವು ದೇಶದ ಜಿಡಿಪಿಗೆಷ್ಟೇ ಅಲ್ಲದೆ, ಉದ್ಯೋಗ ಸೃಷ್ಟಿಗೂ ಮಹತ್ವದ ಕೊಡುಗೆ ನೀಡುತ್ತಿದೆ. ಕೇಂದ್ರ ಸರ್ಕಾರದ ಸ್ವಾವಲಂಬನೆಯ ಪರಿಕಲ್ಪನೆಗೆ ವಾಹನೋದ್ಯಮ ಪ್ರಮುಖ ಪಾತ್ರ ವಹಿಸುವ ವಿಶ್ವಾಸವಿದೆ’ ಎಂದೂ ಹೇಳಿದ್ದಾರೆ.

ಹೂಡಿಕೆ ಆಕರ್ಷಿಸಲು ಮಾತುಕತೆ: ‘ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಬಹಳಷ್ಟು ಕಂಪನಿಗಳು ಚೀನಾದಾಚೆಗೆ ತಮ್ಮ ವಹಿವಾಟು ಸ್ಥಾಪಿಸುವ ಪ್ರಯತ್ನದಲ್ಲಿವೆ. ಅಂತಹ ಕಂಪನಿಗಳನ್ನು ಭಾರತಕ್ಕೆ ಕರೆತಂದು ಸ್ಥಳೀಯವಾಗಿಯೇ ತಯಾರಿಸುವಂತೆ ಮಾಡಬೇಕಿದೆ’ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ಅಧ್ಯಕ್ಷ ಕೆನೆಚಿ ಅಯುಕವಾ ಹೇಳಿದ್ದಾರೆ.

ಭಾರತದಲ್ಲಿ ತಯಾರಿಸಲು ಉತ್ತೇಜಿಸುವಂತೆ ಜಪಾನ್‌ನ ವಾಹನ ತಯಾರಿಕಾ ಕಂಪನಿಗಳೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ನಡೆಸಲಾಗುವುದು. ಇದೇ ರೀತಿ ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಯುರೋಪ್‌ನ ಕೆಲವು ದೇಶಗಳ ಕಂಪನಿಗಳೊಂದಿಗೂ ಮಾತುಕತೆ ನಡೆಸಿ, ಆತ್ಮನಿರ್ಭರ ಭಾರತ ಯೋಜನೆಯಡಿ ಸ್ಥಳೀಯ ಬಿಡಿಭಾಗಗಳು ಮತ್ತು ಕಚ್ಚಾ ಸಾಮಗ್ರಿಗಳನ್ನು ಬಳಸುವಂತೆ ಕೇಳಲಾಗುವುದು. ಈ ನಿಟ್ಟಿನಲ್ಲಿ, ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಗಮನ ಹರಿಸುತ್ತಾ ಬಿಡಿಭಾಗಗಳ ತಯಾರಿಕೆ ಹೆಚ್ಚಿಸುವಂತೆ ಅವರು ಉದ್ಯಮವನ್ನು ಕೇಳಿದ್ದಾರೆ.

‘ವಾಹನ ಮತ್ತು ಬಿಡಿಭಾಗ ತಯಾರಕರಿಗೆ ಉತ್ಪಾದನೆ ಸಂಪರ್ಕಿತ ಯೋಜನೆ (ಪಿಎಲ್‌ಐ) ಹಾಗೂ ಹಳೆಯ ವಾಹನಗಳಿಗೆ ಗುಜರಿ ಯೋಜನೆಯು ಸಿದ್ಧಗೊಂಡಿದೆ. ಶೀಘ್ರವೇ ಜಾರಿಗೆ ಬರಲಿವೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT