ಶುಕ್ರವಾರ, ಮೇ 7, 2021
20 °C

ಕೋವಿಡ್‌ ಹೆಚ್ಚಳ: ವಾಹನೋದ್ಯಮದ ಆತಂಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಾಹನ ಮಾರಾಟವು ಇಳಿಕೆ ಆಗಬಹುದು ಎಂಬ ಆತಂಕವನ್ನು ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಟೊಯೋಟಾ ಮತ್ತು ಹೋಂಡಾ ಕಾರ್ಸ್‌ ವ್ಯಕ್ತಪಡಿಸಿವೆ.

ವಾಹನ ಮಾರಾಟವು ಆರ್ಥಿಕ ಬೆಳವಣಿಗೆ ಮತ್ತು ಖರೀದಿಸಲು ಗ್ರಾಹಕರು ಎಷ್ಟರಮಟ್ಟಿಗೆ ಸಿದ್ಧರಿದ್ದಾರೆ ಎಂಬುದರ ಜೊತೆ ಬೆಸೆದುಕೊಂಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.

ಕೋವಿಡ್‌–19 ಪರಿಸ್ಥಿತಿಯು ಹದಗೆಡುತ್ತಿರುವುದರಿಂದ ಸಹಜವಾಗಿಯೇ ಗ್ರಾಹಕರ ಭಾವನೆ ನಕಾರಾತ್ಮಕವಾಗಿದ್ದು, ಅದು ಮಾರಾಟದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಮಾರುತಿ ಸುಜುಕಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದ ಗ್ರಾಹಕರಿಗೆ ಕಾರನ್ನು ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ. ಆದರೆ, ಲಾಕ್‌ಡೌನ್‌ ಇಲ್ಲದಿದ್ದರೂ ಕೋವಿಡ್‌ ಪರಿಸ್ಥಿತಿಯು ಹದಗೆಟ್ಟರೆ ಕಾರು ಖರೀದಿಸುವ ಗ್ರಾಹಕರ ಮನಃಸ್ಥಿತಿ ಬದಲಾಗುತ್ತದೆ ಎಂದಿದ್ದಾರೆ.

ಸ್ಥಳೀಯ ಮಟ್ಟದಲ್ಲಿನ ನಿರ್ಬಂಧಗಳಿಂದಾಗಿ ಖರೀದಿ ಮತ್ತು ವಿತರಣೆಯ ಮೇಲೆ ಪರಿಣಾಮ ಉಂಟಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಹೇಳಿದ್ದಾರೆ.

‘ಬೇಡಿಕೆ ಮತ್ತು ಪೂರೈಕೆ ನಡುವೆ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ. ಗ್ರಾಹಕರಿಗೆ ಕಾರು ವಿತರಿಸುವ ಸಮಯವನ್ನು ಕಡಿಮೆ ಮಾಡುವುದರತ್ತವೂ ಗಮನ ಹರಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಲಾಕ್‌ಡೌನ್‌ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಕೆಲವು ಮಾರುಕಟ್ಟೆಗಳಲ್ಲಿ ಷೋರೂಂಗಳು ಮುಚ್ಚುವಂತಾಗಿದೆ. ಇದರಿಂದ ಮಾರಾಟದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೇಶ್‌ ಗೋಯಲ್‌ ಹೇಳಿದ್ದಾರೆ.

ದ್ವಿಚಕ್ರ ವಾಹನ ಮಾರಾಟ ಇಳಿಕೆ: ಕೋವಿಡ್‌ನ ಎರಡನೇ ಅಲೆಯು ದ್ವಿಚಕ್ರ ವಾಹನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಿದೆ. ಏಪ್ರಿಲ್‌ನಲ್ಲಿ ಇಲ್ಲಿಯವರೆಗೆ ಮಾರಾಟವು ಶೇ 30ರಿಂದ ಶೇ 50ರಷ್ಟು ಇಳಿಕೆಯಾಗಿದೆ ಎಂದು ಬ್ರೋಕರೇಜ್‌ ಸಂಸ್ಥೆ ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ವರದಿ ಹೇಳಿದೆ.

ನವರಾತ್ರಿ ಮತ್ತು ಗುಡಿಪಡ್ವಾದಂತಹ ಹಬ್ಬಗಳು ವಾರ್ಷಿಕ ವಾಹನ ಮಾರಾಟದಲ್ಲಿ ಉತ್ತಮ ಪಾಲನ್ನು ಹೊಂದಿವೆ. ಈ ಹೊತ್ತಿನಲ್ಲಿ ಚೇತರಿಕೆ ಆಗದೇ ಇದ್ದರೆ ಅಕ್ಟೋಬರ್‌ವರೆಗೂ ಚೇತರಿಕೆ ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.

ಗುಡಿಪಡ್ವಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಾಹನ ವಿತರಕರು ನಿರೀಕ್ಷೆ ಮಾಡಿದ್ದ ಮಾರಾಟದಲ್ಲಿ ಪ್ರಮಾಣದಲ್ಲಿ ಶೇ 50ರಷ್ಟು ಮಾತ್ರವೇ ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಯ ಕಾರಣಕ್ಕಾಗಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು