ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌ ರೇಸ್‌ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಡ್ರೈವರ್‌

Last Updated 23 ನವೆಂಬರ್ 2019, 6:49 IST
ಅಕ್ಷರ ಗಾತ್ರ

ದಿರಿಯಾ, ಸೌದಿ ಅರೇಬಿಯಾ: ಪುರುಷ ಪ್ರಧಾನ ಮೋಟಾರ್‌ ಸ್ಫೋರ್ಟ್ಸ್‌ ಜಗತ್ತಿಗೆ ಸೌದಿ ಅರೇಬಿಯಾದ ಮೊದಲ ಮಹಿಳಾ ಡ್ರೈವರ್‌ ತೆರೆದುಕೊಂಡಿದ್ದಾರೆ. ರೀಮಾ ಜುಫಾಲಿ(27) ಎಲೆಕ್ಟ್ರಿಕ್‌ ಎಸ್‌ಯುವಿ ರೇಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಇಸ್ಲಾಮಿಕ್‌ ಕಟ್ಟುಪಾಡುಗಳ ಸಮಾಜದಿಂದ ಮಹಿಳೆಯೊಬ್ಬಳು ಕಾರ್‌ ರೇಸ್‌ನಂತಹ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳುವುದೆಂದರೆ ಕಲ್ಪನೆಗೂ ನಿಲುಕದ್ದು ಎಂದೇ ಭಾವಿಸಲಾಗಿತ್ತು. ಆದರೆ, ಕಳೆದ ವರ್ಷ ಜೂನ್‌ನಲ್ಲಿ ಮಹಿಳೆಯರೂ ವಾಹನ ಚಾಲನೆ ಮಾಡುವ ಅವಕಾಶವನ್ನು ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮುಕ್ತಗೊಳಿಸಿದರು. ಸೌದಿ ಮಹಿಳೆಯರು ದೊರೆತ ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಂಡು ಸ್ವತಂತ್ರ ಜಗತ್ತಿನ ಮುಂದೆ ಬಂದಿರುವುದಕ್ಕೆ ರೀಮಾ ಒಂದು ಉದಾಹರಣೆಯಾಗಿ ನಿಲ್ಲುತ್ತಾರೆ.

ಮೋಟಾರ್‌ ವಾಹನಗಳ ಚಾಲನೆಗೆ ಹೇರಲಾಗಿದ್ದ ಹಲವು ವರ್ಷಗಳ ನಿಷೇಧ ಹಿಂಪಡೆದ ಬೆನ್ನಲೇ ವಾಹನ ಚಾಲನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ರೀಮಾ, ರಿಯಾಧ್‌ ಸಮೀಪದ ದಿರಿಯಾದಲ್ಲಿ ನಡೆಯುತ್ತಿರುವ ವಿದ್ಯುತ್‌ ಚಾಲಿತ ವಾಹನಗಳ 'ಜಾಗ್ವಾರ್‌ ಐ–ಪೇಸ್‌ ಇಟ್ರೋಫಿ' ರೇಸ್‌ನಲ್ಲಿ ಸ್ಪರ್ಧಿಸಿದ್ದಾರೆ.

'ನಿಷೇಧ ಕಳೆದ ವರ್ಷ ತೆರವುಗೊಂಡಿದೆ, ನಾನು ವೃತ್ತಿಪರ ರೇಸ್‌ನಲ್ಲಿ ಭಾಗಿಯಾಗಬಹುದೆಂದು ಯಾವತ್ತಿಗೂ ನಿರೀಕ್ಷಿಸಿರಲಿಲ್ಲ. ಆದರೆ, ನಾನೀಗ ಸ್ಪರ್ಧೆಯಲ್ಲಿದ್ದೇನೆ...' ಎಂದು ರೇಸಿಂಗ್‌ ಪುಳಕವನ್ನು ರೀಮಾ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ರೀಮಾ ಜುಫಾಲಿ ರೇಸ್‌ ಆಯೋಜಕರಿಂದ ವಿಐಪಿ ಅತಿಥಿ ಚಾಲಕಿಯಾಗಿ ಆಹ್ವಾನಿತರಾಗಿದ್ದಾರೆ. ಈ ಮೂಲಕ ರೀಮಾ ತನ್ನದೇ ನೆಲದಲ್ಲಿ ವೃತ್ತಿಪರ ಕಾರು ರೇಸ್‌ನಲ್ಲಿ ಸ್ಪರ್ಧಿಸಿದ ಸೌದಿ ಅರೇಬಿಯಾದ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ರೀಮಾ ಇಂಗ್ಲೆಂಡ್‌ನ ಬ್ರಾಂಡ್ಸ್‌ ಹ್ಯಾಚ್‌ ರೇಸಿಂಗ್‌ ಟ್ರ್ಯಾಕ್‌ನ 'ಎಫ್‌4 ಬ್ರಿಟಿಷ್‌ ಚಾಂಪಿಯನ್‌ಶಿಪ್‌'ನಲ್ಲಿ ಸ್ಪರ್ಧಿಸಿದ್ದರು. ಅದಕ್ಕೂ ಮುನ್ನ ಸ್ವತಃ ಚಾಲನೆ ಮಾಡಿರದಿದ್ದರೂ ವೇಗದ ಕಾರುಗಳ ಬಗ್ಗೆ ಸೆಳೆತ ಬೆಳೆಸಿಕೊಂಡಿದ್ದರು. ಫಾರ್ಮುಲಾ ಒನ್‌ ರೇಸ್‌ಗಳನ್ನು ಅತ್ಯಂತ ಕುತೂಹಲದಿಂದಲೇ ವೀಕ್ಷಿಸುತ್ತಿದ್ದರು. ರೇಸಿಂಗ್‌ ಲೈಸೆನ್ಸ್‌ ಪಡೆದಿರುವ ಸೌದಿಯ ಬೆರಳೆಣಿಕೆಯಷ್ಟು ಮಹಿಳೆಯರಲ್ಲಿ ರೀಮಾ ಮುಂಚೂಣಿಯಲ್ಲಿದ್ದಾರೆ.

'ಸೌದಿಯಲ್ಲಿ ಬಹಳಷ್ಟು ಮಹಿಳೆಯರಿಗೆ ವಾಹನ ಚಾಲನೆ, ರೇಸ್‌ ಎಂಬುದು ಸಾಕಷ್ಟು ದೂರವೇ ಉಳಿದಿರುವ ಸಂಗತಿ. ಫ್ರಾನ್ಸ್‌ನಲ್ಲಿ ನಡೆಯುವ 24 ಗಂಟೆಗಳ ಲೇ ಮ್ಯಾನ್ಸ್‌ ರೇಸ್‌ನಲ್ಲಿ ಸ್ಪರ್ಧಿಸುವುದು ನನ್ನ ಕನಸು' ಎಂದಿದ್ದಾರೆ ರೀಮಾ.

ಸೌದಿಯಲ್ಲಿ ಈಗ ಮಹಿಳೆಯರು ಕಾರುಗಳ ಷೋರೂಂಗಳಿಗೆ ಭೇಟಿ ನೀಡುವುದು ಹೆಚ್ಚಿದ್ದು, ಗಾಢ ಬಣ್ಣದ ಕಾರುಗಳ ಆಯ್ಕೆಗೆ ಮುಂದಾಗಿದ್ದಾರೆ. ರಿಯಾದ್‌ನ ಟ್ರೈವಿಂಗ್‌ ಸ್ಕೂಲ್‌ಗಳಲ್ಲಿ ಮೋಟಾರ್‌ ಬೈಕ್‌ ಚಾಲನೆ ಕಲಿಕೆಗೂ ಮಹಿಳೆಯರು ಆಸಕ್ತಿ ತೋರುತ್ತಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT