ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಿದೆ ವಾಹನ ಉದ್ಯಮ

Last Updated 19 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಭಾರತದ ಆರ್ಥವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳಲ್ಲಿ ವಾಹನ ಕ್ಷೇತ್ರವೂ ಒಂದು. ಆದರೆ, ಎರಡು ದಶಕಗಳ ಮಾರಾಟ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡರೆ ತಯಾರಿಕಾ ವೆಚ್ಚದಲ್ಲಿ ಭಾರಿ ಏರಿಕೆ, ಬಿಎಸ್‌–6 ಅನುಷ್ಠಾನ, ತೆರಿಗೆ ಹೊರೆಯಿಂದ ಇಡೀ ಕ್ಷೇತ್ರವು ಒಂದೆರಡು ವರ್ಷಗಳಿಂದ ಸತತ ಕುಸಿತ ದಾಖಲಿಸುತ್ತಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2020ರ ಬಜೆಟ್‌ನಲ್ಲಿ ಜಿಎಸ್‌ಟಿ ದರ ಕಡಿತದ ಭಾರಿ ನಿರೀಕ್ಷೆಯನ್ನು ಈ ವಲಯವು ಹೊಂದಿತ್ತು. ಜತೆಗೆ ಬ್ಯಾಟರಿ ಚಾಲಿತ ವಾಹನಗಳ ಕೆಲ ಪ್ರಮುಖ ಬಿಡಿಭಾಗಗಳ ಮೇಲಿನ ತೆರಿಗೆ ಕಡಿತವನ್ನೂ ನಿರೀಕ್ಷಿಸಿತ್ತು. ಆದರೆ, ತೆರಿಗೆ ಕಡಿತದಿಂದ ದೇಶದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರುವ ಜಿಎಸ್‌ಟಿ ಸಮಿತಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಂತಹ ಯಾವ ನೇರ ಪ್ರಯೋಜನದ ಘೋಷಣೆಗಳೂ ಬಜೆಟ್‌ ಭಾಷಣದಲ್ಲಿ ಹೊರಬೀಳಲಿಲ್ಲ. ಇದು ತಯಾರಕರಲ್ಲಿ ಸಹಜವಾಗಿ ಬೇಸರ ಮೂಡಿಸಿದೆ.

ಆದರೆ ಇದೇ ವೇಳೆ, ಆದಾಯ ತೆರಿಗೆಯಲ್ಲಿ ಒಂದಷ್ಟು ವಿನಾಯಿತಿ, ಹೂಡಿಕೆಗೆ ಉತ್ತೇಜನ ನೀಡಿರುವ ಒಂದಷ್ಟು ಕೊಡುಗೆಗಳು ವಾಹನ ಕ್ಷೇತ್ರಕ್ಕೆ ಆಸರೆಯಾಗಲಿವೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ರಾಷ್ಟ್ರೀಯ ಮೂಲಸೌಕರ್ಯ ಯೋಜನೆ ಮೂಲಕ ವಾಣಿಜ್ಯ ವಾಹನಗಳ ಹಾಗೂ ನಿರ್ಮಾಣ ಯಂತ್ರಗಳ ತಯಾರಿಕೆಗೆ ಪ್ರೋತ್ಸಾಹ ದೊರೆಯಲಿದೆ. ರೈತರ ಆದಾಯ ಹೆಚ್ಚಳಕ್ಕೆ ಪ್ರಕಟಿಸಿದ 16 ಅಂಶಗಳ ಸೂತ್ರವೂ ನೇರವಾಗಿ ವಾಹನ ಕ್ಷೇತ್ರಕ್ಕೆ ನೆರವಾಗಲಿದೆ ಎಂದೂ ಹೇಳಲಾಗುತ್ತಿದೆ.

ವಿಲೇವಾರಿಗಿಲ್ಲ ನೀತಿ:‘ಮೇಕ್‌ ಇನ್ ಇಂಡಿಯಾ’ ಯೋಜನೆಗಾಗಿ ಆಮದಾಗುವ ವಾಹನಗಳ ಕೆಲ ಬಿಡಿಭಾಗಗಳ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಇದರಿಂದ ವಾಹನ ಕ್ಷೇತ್ರ ತತ್ತರಿಸಿದೆ. ಆದರೆ, ಹೊಸ ವಾಹನ ಖರೀದಿಗೆ ಹಳೆ ಗುಜರಿ ವಾಹನಗಳ ವಿಲೇವಾರಿಗೆ ನೀತಿ ಘೋಷಣೆಯಾಗದಿರುವುದು ವಾಹನ ತಯಾರಿಕಾ ಕ್ಷೇತ್ರಕ್ಕೆ ಮತ್ತೊಂದು ಆಘಾತವನ್ನು ತಂದಿದೆ. ಇದರೊಂದಿಗೆ ಬ್ಯಾಟರಿ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಮತ್ತು ಇವುಗಳ ಸಂಶೋಧನೆ ಹಾಗೂ ಅಭಿವೃದ್ಧಿ ಕುರಿತಂತೆ ಯಾವುದೇ ಘೋಷಣೆಯಾಗದಿರುವುದೂ ವಾಹನ ಕ್ಷೇತ್ರವನ್ನು ನಿರಾಸೆಗೆ ನೂಕಿದೆ.

ಕೇಂದ್ರ ಸರ್ಕಾರವು ಹೆದ್ದಾರಿಯಲ್ಲಿ 2500 ಸಂಪರ್ಕ ಕೇಂದ್ರಗಳನ್ನು ತೆರೆಯಲು, 9 ಸಾವಿರ ಕಿಲೋ ಮೀಟರ್ ಉದ್ದದ ಪರಿಸರ ಸ್ನೇಹಿ ಅಭಿವೃದ್ಧಿ ಕಾರಿಡಾರ್, 200 ಕಡಲ ತೀರದ ರಸ್ತೆ, 2ಸಾವಿರ ಕಿಲೋ ಮೀಟರ್ ಯೋಜನಾಬದ್ಧ ಹೆದ್ದಾರಿ, ದೆಹಲಿ ಹಗೂ ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ಹಾಗೂ ಇನ್ನೂ ಎರಡು ಪ್ರಮುಖ ಕಾರಿಡಾರ್‌ಗಳು 2023ಕ್ಕೆ ಪೂರ್ಣಗೊಳಿಸುವ ಹಾಗೂ ₹1.7ಲಕ್ಷ ಕೋಟಿಯಷ್ಟು ಮೊತ್ತವನ್ನು ಸಂಚಾರ ಮೂಲಸೌಕರ್ಯಕ್ಕೆ ವಿನಿಯೋಗಿಸಲು ನಿರ್ಧರಿಸಿರುವುದೂ ವಾಹನ ಕ್ಷೇತ್ರಕ್ಕೆ ಒಂದಷ್ಟು ಉತ್ತೇಜನ ನೀಡಲಿವೆ ಎಂದೇ ಅಂದಾಜಿಸಲಾಗುತ್ತಿದ್ದರೂ, ಅದು ದೀರ್ಘಕಾಲಿಕ ಉತ್ತೇಜನ ಎಂದು ನಿರಾಶೆ ಕಂಡುಬರುತ್ತಿದೆ.

ಕಾರ್‌ ತಯಾರಿಕೆ

ಬಿಎಸ್‌–6ನಿಂದ ಮಾರಾಟ ಇಳಿಮುಖ
ವಾಹನಗಳ ಮಾರಾಟ 2019ಕ್ಕೆ ಹೋಲಿಸಿದಲ್ಲಿ ಶೇ 13.83ರಷ್ಟು ಇಳಿಮುಖವಾಗಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಸಮಿತಿ (ಎಸ್‌ಐಎಎಂ) ತಿಳಿಸಿದೆ.

ಎಲ್ಲಾ ವಿಭಾಗಗಳಲ್ಲಿ 2019ರ ಜನವರಿಯಲ್ಲಿ 20.19ಲಕ್ಷ ವಾಹನಗಳು ಮಾರಾಟವಾದರೆ, 2020ರ ಜನವರಿಯಲ್ಲಿ 17.39ಲಕ್ಷದಷ್ಟು ವಾಹನಗಳು ಮಾರಾಟವಾಗಿವೆ.

ವಾಣಿಜ್ಯ ವಾಹಗಳ ಮಾರಾಟ ಶೇ 14.04ರಷ್ಟು ಕುಸಿದಿದೆ. ಕಾರುಗಳ ಮಾರಾಟ ಶೇ 8.1ರಷ್ಟು ಕುಸಿತ ಕಂಡಿದೆ. ಮೋಟಾರು ಸೈಕಲ್‌ಗಳ ಮಾರಾಟ ಶೇ 15.17ರಷ್ಟು ಕುಸಿದಿದೆ. ಬಜೆಟ್‌ನಲ್ಲೂ ಹೆಚ್ಚಿನ ಉತ್ತೇಜನ ಸಿಗದ ಆಟೊಮೊಬೈಲ್ ಕ್ಷೇತ್ರ ಮತ್ತಷ್ಟು ತತ್ತರಿಸಿದೆ.

ಕೋವಿಡ್‌ ವೈರಾಣು ಸೋಂಕು ಚೀನಾದಲ್ಲಿ 1700ಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿರುವುದೂ ವಾಹನ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಜತೆಗೆ ಬಿಎಸ್‌–6 (ಪರಿಸರ ಮಾಲಿನ್ಯ ಕಡಿಮೆ ಇರುವ ವಾಹನಗಳು) ಅಳವಡಿಕೆಯೂ ದುಬಾರಿಯಾಗುವುದರಿಂದ ವಾಹನಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳು ಇವೆ. ಹೀಗಾಗಿ 2020–21ರ ಮೊದಲ ಅರ್ಧ ವರ್ಷದಲ್ಲಿ ವಾಹನಗಳ ಮಾರಾಟ ಪ್ರಗತಿ ಕುಂಠಿತವಾಗಿರಲಿದೆ ಎಂದು ಕ್ಷೇತ್ರದ ಪರಿಣತರು ಅಂದಾಜಿಸಿದ್ದಾರೆ.

ಸಾಕಷ್ಟು ಹೊಸ ಕಾರುಗಳು ಭಾರತದ ರಸ್ತೆಗೆ ಇಳಿದಿದ್ದರೂ, ಈ ವರ್ಷವೂ ವಾಹನ ತಯಾರಿಕೆ ಉದ್ದಿಮೆಯು ಸಂಕಷ್ಟದ ಹಾದಿಯನ್ನು ಸವೆಸಲಿದೆ ಎಂದೇ ಅಂದಾಜಿಸಲಾಗಿದೆ.

ಇದ್ದ ಪ್ರಮುಖ ಬೇಡಿಕೆಗಳು
*ಜಿಎಸ್‌ಟಿ ಶೇ28ರಿಂದ18ಕ್ಕೆ ಇಳಿಕೆ
*ಎಲೆಕ್ಟ್ರಿಕ್ ಹಾಗೂ ಹೈಬ್ರೀಡ್ ವಾಹನಗಳ ನಡುವಿನ ವ್ಯತ್ಯಾಸ ಇಳಿಕೆ
*ಪರಿಸರಕ್ಕೆ ಮಾರಕವಾಗಿರುವ ಹಳೇ ವಾಹನಗಳನ್ನು ಗುಜುರಿಗೆ ಹಾಕಲು ಉತ್ತೇಜನ
*ವೈಯಕ್ತಿಕ ಎಲೆಕ್ಟ್ರಿಕ್ ವಾಹನ ಖರೀದಿಗೂ ಉತ್ತೇಜನ ನಿರೀಕ್ಷೆ
*ಬ್ಯಾಟರಿ ಆಮದು ಮೇಲಿನ ಸುಂಕ ಕಡಿತಕ್ಕೆ ಮನವಿ
* 250ಸಿಸಿ ಒಳಗಿನ ಬೈಕ್‌ಗಳಿಗೆ ಇರುವ ‘ಕಡ್ಡಾಯ’ ಸೌಲಭ್ಯಗಳಿಂದ ವಿನಾಯ್ತಿ
*ವಿಮೆ ಪ್ರೀಮಿಯಂ ಮೊತ್ತ ತಗ್ಗಿಸಬೇಕು
*ಸುರಕ್ಷತೆಗೆ ಸಂಬಂಧಿಸಿದ ನಿಯಮಾವಳಿ ಸಡಿಲಿಕೆ
*ಇಂಧನ ಬೆಲೆ ನಿಯಂತ್ರಣಕ್ಕೆ ಕಾನೂನು
*ಬಿಎಸ್‌–6ಜಾರಿ ಕುರಿತು ಇರುವ ಅನಿಶ್ಚಿತತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT