ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಎಲೆಕ್ಟ್ರಿಕ್‌ ಕಾರ್‌!

ಐಷಾರಾಮಿ ವಿದ್ಯುಚ್ಛಾಲಿತ ಕಾರ್‌ ಬಿಡುಗಡೆಗೆ ಕ್ಷಣಗಣನೆ
Last Updated 16 ಜನವರಿ 2019, 19:45 IST
ಅಕ್ಷರ ಗಾತ್ರ

ಇಂಗ್ಲೆಂಡ್ ಮೂಲದ ಮಿನಿ ಕಾರ್‌ನ ಜನಕ ‘ಪಾರ್ಮುಲಾ ಒನ್‘ ರೇಸರ್ ಜಾನ್ ಕೂಪರ್. ಈತ 1946ರಲ್ಲಿ ಒಂದು ಸಣ್ಣ ಗ್ಯಾರೇಜ್‌ನಲ್ಲಿ ಮಿನಿ ಕೂಪರ್‌ ಕಾರುಗಳನ್ನು ತಯಾರಿಸಿದ್ದು ಮುಂದೆ ವಿಶ್ವದ ಮುಂಚೂಣಿ ಕಾರ್‌ಗಳಲ್ಲಿ ಹೆಸರು ಮಾಡಿದ್ದು ವಿಶೇಷವೇ ಸರಿ. ಈ ಕಾರುಗಳ ಹೆಸರೇ ಹೇಳುವಂತೆ ಇವು ಸಣ್ಣ ಕಾರುಗಳೇ. ಆದರೆ, ಇವುಗಳ ಕೀರ್ತಿ ನಿಜಕ್ಕೂ ದೊಡ್ಡದು. ಕಾರ್ಯಕ್ಷಮತೆ, ಸೌಕರ್ಯದಲ್ಲಿ ಈ ಕಾರುಗಳನ್ನು ಮೀರಿಸುವುದು ಅಷ್ಟು ಸುಲಭದ ಮಾತಲ್ಲ.

ಮಿನಿ ಕಂಪನಿ ಬಳಿ ಜಾನ್ ಕೂಪರ್, ಮಿನಿ 3 ಡೋರ್ ಹ್ಯಾಚ್, ಮಿನಿ 3 ಡೋರ್ ಕನ್ವರ್ಟಬಲ್, ಮಿನಿ ಕ್ಲಬ್‌ಮ್ಯಾನ್ ಮಾದರಿಗಳೆಲ್ಲವೂ ಹೆಸರುವಾಸಿಯೇ. ಹೆಸರು ‘ಮಿನಿ’ ಎಂದಿರುವ ಕಾರಣ ಸೆಡಾನ್‌ ಗಳನ್ನು ತಯಾರಿಸುವುದಿಲ್ಲ (ಈ ಹಿಂದೆ ಕೆಲವು ಪ್ರಾಯೋಗಿಕ ಸೆಡಾನ್ ಮಾದರಿಯನ್ನು ಹೊರಬಿಡಲಾಗಿತ್ತು). ಬದಲಿಗೆ ಎಲ್ಲವೂ ಹ್ಯಾಚ್‌ಬ್ಯಾಕ್‌ಗಳೇ. ಅದರಲ್ಲೂ ‘ಜಾನ್ ಕೂಪರ್‌‘ ಮಾದರಿ ವಿಶ್ವಪ್ರಸಿದ್ಧ. ಈ ಕಾರುಗಳು ತನ್ನ ಕಿರಿದಾದ ಆಕೃತಿಯ ಕಾರಣದಿಂದಾಗಿ ಅತ್ಯಂತ ಬಿರುಸಾಗಿ, ಚುರುಕಾಗಿ ನಗರ ಮಿತಿಯಲ್ಲಿ ಚಾಲನೆ ಮಾಡುತ್ತ, ಪಾರ್ಕಿಂಗ್‌ಗೆ ಸಹಕರಿಸುತ್ತ, ದೂರದ ಪ್ರಯಾಣಗಳಿಗೂ ಹೇಳಿ ಮಾಡಿಸಿದ ಗುಣವನ್ನು ಹೊಂದಿರುವುದು ವಿಶೇಷ. ಡೀಸೆಲ್‌ ಎಂಜಿನ್‌ ಈ ಕಾರುಗಳ ಆತ್ಮ. ಚಿಕ್ಕ ಕಾರಾದ ಕಾರಣ ಅತ್ಯಂತ ಶ್ರೇಷ್ಠ ಕಾರ್ಯಕ್ಷಮತೆ ಜತೆಗೆ ಸಮಾಧಾನಕರ ಮೈಲೇಜನ್ನೂ ನೀಡುತ್ತದೆ.

ಇದೀಗ ಎಲೆಕ್ಟ್ರಿಕ್‌ ಕಾರುಗಳ ಜಮಾನ ನಡೆಯುತ್ತಿದೆ. ಬಹುತೇಕ ಎಲ್ಲ ಕಾರ್‌ ಕಂಪನಿಗಳೂ ವಿದ್ಯುಚ್ಛಾಲಿತ ಕಾರುಗಳನ್ನು ತಯಾರಿಸುತ್ತಿವೆ. ಅದರಲ್ಲೂ ಬಿಎಂಡಬ್ಲ್ಯೂ ಕಂಪನಿಯು ಅತ್ಯಂತ ಶ್ರೇಷ್ಠ ಐಷಾರಾಮಿ ‘ಐ3–ಎಸ್’ ವಿದ್ಯುತ್‌ ಕಾರನ್ನು ಹೊರಬಿಡುವ ಮೂಲಕ ತನ್ನ ಬಗ್ಗೆ ಇದ್ದ ಬೆಲೆಯನ್ನು ಹೆಚ್ಚಿಸಿಕೊಂಡಿದೆ. ಅಂತೆಯೇ, ಇದೀಗ ಮಿನಿ ಸರದಿ. ಈ ಮುಂಚೆ ವಿದ್ಯುತ್‌ – ಡೀಸೆಲ್ ಮಿಶ್ರಣದ ಹೈಬ್ರಿಡ್ ಕಾರನ್ನು ಹೊರಬಿಡುವ ಮೂಲಕ ಗಮನಸೆಳೆದಿದ್ದ ಮಿನಿ, ಈಗ ಸಂಪೂರ್ಣ ವಿದ್ಯುಚ್ಛಾಲಿತ ಕಾರನ್ನು ಹೊರಬಿಡಲು ಸಕಲ ಸಿದ್ಧತೆ ನಡೆಸಿದೆ.

ಪರಿಪೂರ್ಣ ಎಲೆಕ್ಟ್ರಿಕ್‌

‘ಮಿನಿ ಕೂಪರ್– ಎಸ್ ಇ’ ಹೆಸರಿನ ಈ ಹೊಸ ಸಂಪೂರ್ಣ ವಿದ್ಯುಚ್ಛಾಲಿತ ಕಾರ್‌ ಹೈಬ್ರಿಡ್‌ ಅಲ್ಲ ಎನ್ನುವುದು ವಿಶೇಷ. ಅಂದರೆ, ಇದರಲ್ಲಿ ಡೀಸೆಲ್‌ ಎಂಜಿನ್ ಹಾಗೂ ವಿದ್ಯುತ್‌ ಮೋಟಾರ್ ಎರಡೂ ಇಲ್ಲ. ಬದಲಿಗೆ, ವಿದ್ಯುತ್‌ ಮೋಟಾರು ಮಾತ್ರ ಇರುತ್ತದೆ. ಈ ಮೋಟಾರಿಗೆ ಲಿಥಿಯಂ ಅಯಾನ್‌ ಬ್ಯಾಟರಿ ಪ‍್ಯಾಕ್‌ ಶಕ್ತಿ ನೀಡುತ್ತದೆ. ಸಾಮಾನ್ಯವಾಗಿ ವಿದ್ಯುಚ್ಛಾಲಿತ ವಾಹನಗಳ ಮೇಲೆ ಇರುವ ಆರೋಪವೆಂದರೆ, ಈ ಕಾರುಗಳು ಹೆಚ್ಚು ಮೈಲೇಜ್‌ ನೀಡುವುದಿಲ್ಲ ಎಂದು.

ಹಾಗಾಗಿ, ಈ ಕಾರುಗಳು ನಗರಮಿತಿಗೆ ಸೀಮಿತ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ, ‘ಮಿನಿ ಕೂಪರ್‌ ಎಸ್‌ ಇ’ ಇದಕ್ಕೆ ಅಪವಾದ. ಈ ಕಾರನ್ನು ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 322 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಅಂದರೆ, ಬೆಂಗಳೂರು– ಮೈಸೂರು ನಡುವಿನಷ್ಟು ಅಂತರವನ್ನು ಇದು ಸುಲಭವಾಗಿ ಕ್ರಮಿಸಬಲ್ಲದು.

ಅಂತೆಯೇ, ಈ ಕಾರಿನ ವಿಶೇಷ ಇದರ ಅತಿ ವೇಗದ ಚಾರ್ಜಿಂಗ್ ಸಾಮರ್ಥ್ಯ. ಈ ಕಾರಿನ ಬ್ಯಾಟರಿಗಳು ಕೇವಲ ಅರ್ಧ ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್‌ ಆಗುತ್ತವೆ. ಗುರಿಯನ್ನು ತಲುಪಿಯಾದ ಮೇಲೆ, ಅಲ್ಲಿ ಚಾರ್ಚ್ ಮಾಡಿಕೊಂಡರೆ, ಸರಿಸುಮಾರು 322 ಕಿಲೋಮೀಟರ್‌ ದೂರವನ್ನು ಮತ್ತೆ ಅನಾಯಾಸವಾಗಿ ಕ್ರಮಿಸುವ ಅವಕಾಶ ಸಿಗುತ್ತದೆ.

ಕಾರನ್ನು ಅರ್ಧ ಗಂಟೆ ಚಾರ್ಜಿಗೆ ಇಡುವುದು ದೊಡ್ಡ ವಿಚಾರ ಅಲ್ಲವೇ ಅಲ್ಲ. ಪ್ರಯಾಣದ ನಡುವೆ ಟೀ– ಕಾಫಿಗೆಂದು ಇಳಿದಾಗ ಅಲ್ಲಿ ಚಾರ್ಜ್‌ ಹಾಕಿದರೆ ಆಯಿತು. ಕಾರು ಮತ್ತೆ ಶಕ್ತಿ ತುಂಬಿಕೊಳ್ಳುತ್ತದೆ. ಸದ್ಯಕ್ಕೆ ಭಾರತದಲ್ಲಂತೂ ಈ ರೀತಿಯ ಸೌಲಭ್ಯವುಳ್ಳ ವಿದ್ಯುತ್ ಕಾರು ಯಾವುದೂ ಇಲ್ಲ. ಹಾಲಿ, ಬಿಎಂಡಬ್ಲ್ಯೂ ಕಂಪನಿಯ ‘ಐ–3 ಎಸ್‌’ ಕಾರಿನಲ್ಲಿ ಇಷ್ಟು ವೇಗವಾಗಿ ಚಾರ್ಜ್ ಮಾಡಿಕೊಳ್ಳುವ ಸೌಲಭ್ಯವಿದೆ.

ಐಷಾರಾಮಿ ಸೌಲಭ್ಯ

ಅಂತೆಯೇ, ಇದು ಬಾಕಿ ಮಿನಿ ಕಾರುಗಳಂತೆ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಎಲೆಕ್ಟ್ರಿಕ್‌ ಕಾರ್ ಎಂದಾಕ್ಷಣ ಇದು ಹಗುರ, ಗುಣಮಟ್ಟದಲ್ಲಿ ಕಳಪೆ ಎಂದು ಬೇಸರ ಪಡುವಂತಿಲ್ಲ. ಮಿನಿಯ ಸಾಂಪ್ರದಾಯಿಕ ಕೂಪರ್ ಕಾರುಗಳಲ್ಲಿ ಯಾವ ಯಾವ ಸೌಲಭ್ಯಗಳು ಇರುವುದೊ, ಆ ಎಲ್ಲ ಐಷಾರಾಮಿ ಸೌಲಭ್ಯಗಳೂ ಈ ಕಾರಿನಲ್ಲಿ ಇರಲಿವೆ. ವಾಸ್ತವದಲ್ಲಿ ಕೆಲವು ಹೆಚ್ಚುವರಿ ಸೌಲಭ್ಯಗಳೂ ಇರಲಿವೆ. ಉದಾಹರಣೆಗೆ ಅತ್ಯಂತ ನಿಖರವಾಗಿ ಬಾಕಿ ದೂರ ಕ್ರಮಿಸಬಲ್ಲ ಮಾಹಿತಿ ಪ್ರದರ್ಶನ ಸೌಲಭ್ಯ.

ಪೆಟ್ರೋಲ್, ಡೀಸೆಲ್‌ ಎಂಜಿನ್ ಇರುವ ಕಾರುಗಳಲ್ಲಿ ಈ ಸೌಲಭ್ಯ ಇದ್ದರೂ ಇಷ್ಟು ನಿಖರವಾಗಿ ಹೇಳುವುದು ಸಾಧ್ಯವಿಲ್ಲ. ಏಕೆಂದರೆ, ಇಂಧನದ ಗುಣಮಟ್ಟ, ಎಂಜಿನ್‌ನ ವಯಸ್ಸು, ಅದರ ನಿರ್ವಹಣೆ ಮುಂತಾದ ವಿಚಾರಗಳು ಮೈಲೇಜ್‌ ನಿರ್ಧರಿಸುತ್ತವೆ. ಆದರೆ, ವಿದ್ಯುತ್‌ ವಿಚಾರದಲ್ಲಿ ಹಾಗಲ್ಲ. ವಿದ್ಯುತ್‌ ಕಳಪೆಯಾಗಿರಲು ಸಾಧ್ಯವಿಲ್ಲ. ಆದರೆ, ಬ್ಯಾಟರಿ ವರ್ಷಗಳು ಕಳೆದಂತೆ ಹಾಳಾಗುವ ಸಾಧ್ಯತೆ ಇರುತ್ತದೆ.

ಭವಿಷ್ಯದಲ್ಲಿ ಲಿಥಿಯಂ ಅಯಾನ್‌ ಅಥವಾ ಪಾಲಿಮರ್‌ ಬ್ಯಾಟರಿ ಪ್ಯಾಕ್‌ಗಳ ಬದಲಿಗೆ ಫ್ಯೂಯೆಲ್‌ ಸೆಲ್‌ ಸೌಲಭ್ಯ ಬಂದಲ್ಲಿ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಲಿದೆ. ಅಲ್ಲದೇ, ಆ ದಿನಗಳು ಹೆಚ್ಚು ದೂರವೂ ಇಲ್ಲ.

‘ಮಿನಿ ಕೂಪರ್ ಎಸ್‌ ಇ’ ಈಗಾಗಲೇ, 2017ರಲ್ಲಿ ಜರ್ಮನಿಯಲ್ಲಿ ನಡೆದ ‘ಫ್ರಾಂಕ್‌ಫರ್ಟ್‌ ಮೋಟಾರ್‌ ಶೋ’ನಲ್ಲಿ ಪ್ರದರ್ಶನ ನೀಡಿದೆ. ಮಿನಿ ಕಂಪನಿಗೆ 60 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ 2019ರ ಮಧ್ಯ ಭಾಗದ ನಂತರ ಬಿಡುಗಡೆಗೊಳ್ಳಲಿದೆ. ಭಾರತದಲ್ಲೂ ಇದೇ ಅವಧಿಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಳ್ಳಲಿರುವುದು ವಿಶೇಷ. ಮಿನಿ ಕೂಪರ್‌ ಸಾಂಪ್ರದಾಯಿಕ ಕಾರಿನ ಬೆಲೆ ₹ 27 ಲಕ್ಷದಿಂದ ₹ 42 ಲಕ್ಷವಿದೆ. ಇದರ ವಿದ್ಯುತ್‌ ಅವತರಣಿಕೆಯ ಬೆಲೆ ಶೇ 20ರಷ್ಟು ಹೆಚ್ಚಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT