ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು, ಚರಿತ್ರೆ ನಿರ್ಮಿಸುವ ನಾಯಕರು!

Last Updated 26 ಮಾರ್ಚ್ 2018, 20:30 IST
ಅಕ್ಷರ ಗಾತ್ರ

2025ರ ಹೊತ್ತಿಗೆ ಭಾರತವನ್ನು ಕ್ಷಯಮುಕ್ತ ದೇಶವಾಗಿ ಮಾಡುತ್ತೇವೆ ಎಂದು ಪ್ರಧಾನಿ ಘೋಷಿಸಿದ್ದಾರೆ. ರಾಷ್ಟ್ರೀಯ ಕಾರ್ಯತಂತ್ರದ (ನ್ಯಾಷನಲ್ ಸ್ಟ್ರಾಟೆಜಿಕ್ ಪ್ಲಾನ್) ಮೂಲಕ ಇದನ್ನು ಮಾಡಲು ಸಾಧ್ಯವೆನ್ನುತ್ತಾರೆ ಅವರು. ಮಾರ್ಚ್‌ 24 ಅನ್ನು ‘ವಿಶ್ವ ಕ್ಷಯ ದಿನ’ವಾಗಿ ಆಚರಿಸಲಾಗಿದೆ. 1882ರ ಮಾರ್ಚ್ 24ರಂದು ಜರ್ಮನಿಯಲ್ಲಿ ರಾಬರ್ಟ್ ಕಾಖ್ ಎನ್ನುವ ವಿಜ್ಞಾನಿ ಕ್ಷಯ ರೋಗದ ರೋಗಾಣುವನ್ನು ಕಂಡುಹಿಡಿದು 1905ರಲ್ಲಿ ಅದಕ್ಕಾಗಿ ನೊಬೆಲ್‌ ಪಾರಿತೋಷಕವನ್ನೂ ಪಡೆದರು.

ಈ ಸಂಶೋಧನೆಯನ್ನು ನೆನಪಿಸಿಕೊಳ್ಳಲು ಮತ್ತು ಕ್ಷಯದ ಬಗ್ಗೆ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷವೂ ಒಂದೊಂದು ವಾರ್ಷಿಕ ಘೋಷವಾಕ್ಯವನ್ನು ಮುಂದಿಡುತ್ತದೆ. ಈ ವರ್ಷದ ಘೋಷವಾಕ್ಯ, ‘ಬೇಕಾಗಿದ್ದಾರೆ: ಕ್ಷಯಮುಕ್ತ ಜಗತ್ತಿನ ನಿರ್ಮಾಣಕ್ಕಾಗಿ ಜನನಾಯಕರು. ಕ್ಷಯವನ್ನು ಕೊನೆಗಾಣಿಸಿ ನೀವು ಚರಿತ್ರೆಯನ್ನೇ ನಿರ್ಮಿಸಬಹುದು’.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತವು ಅತಿ ಹೆಚ್ಚು ಕ್ಷಯ ರೋಗಿಗಳಿರುವ ದೇಶ. 2016ರಲ್ಲೇ ಕ್ಷಯದ 27.9 ಲಕ್ಷ ಹೊಸ ಕೇಸುಗಳು ದಾಖಲಾಗಿವೆ. ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವವರ ಸಂಖ್ಯೆ ಕೂಡ ಅತಿ ಹೆಚ್ಚು, ಅಂದರೆ 1.3 ಲಕ್ಷ ಪ್ರತಿರೋಧಕ ಕ್ಷಯ ರೋಗಿಗಳಿದ್ದಾರೆ. ಮೊದಲ ಹಂತದ ಚಿಕಿತ್ಸೆಯಲ್ಲಿ ಇವರು ಜೀವಿರೋಧಕಗಳನ್ನು (ಆ್ಯಂಟಿ ಬಯೊಟಿಕ್ಸ್‌) ನುಂಗಿದರೂ ಕ್ಷಯದ ಬ್ಯಾಕ್ಟೀರಿಯಾಗಳನ್ನು ಅವು ಕೊಲ್ಲಲಾರವು. ಐಸೋನಿಯಸಿಡ್ ಮತ್ತು ರಿಫಾಂಫಿಸಿನ್ ಇವು ಕ್ಷಯಕ್ಕೆ ಅತ್ಯಂತ ಪರಿಣಾಮಕಾರಿಯಾದ ಜೀವಿರೋಧಕ ಔಷಧಗಳು. ಈ ಔಷಧಗಳಿಗೇ ಪ್ರತಿರೋಧವನ್ನು ಬೆಳೆಸಿಕೊಂಡಿರುವ ಕ್ಷಯ ರೋಗಾಣುಗಳು, ರೋಗವನ್ನು ಹರಡುತ್ತಿವೆ. ಇದಕ್ಕೆ ಬಹು ಔಷಧ ಪ್ರತಿರೋಧಕ ಕ್ಷಯ ಎನ್ನುತ್ತಾರೆ. ಕ್ಷಯದ ಅತಿ ಮುಖ್ಯ ಔಷಧಗಳಲ್ಲಿ ನಾಲ್ಕಕ್ಕೆ ಪ್ರತಿರೋಧ ಬೆಳೆಸಿಕೊಂಡಿರುವ ರೋಗಿಗಳೂ ಇದ್ದಾರೆ.

ಪ್ರತಿರೋಧಕ ಕ್ಷಯ ರೋಗಿಗಳು ಸಮಾಜಕ್ಕೆ ಬಹಳ ಅಪಾಯಕಾರಿ. ಇವರು ಸದಾ ತಮ್ಮೊಳಗಿರುವ ಪ್ರತಿರೋಧಕ ಕ್ಷಯ ರೋಗಾಣುಗಳನ್ನು ಗಾಳಿಯಲ್ಲಿ ತೇಲಿಬಿಡುತ್ತಿರುತ್ತಾರೆ. ಸಂಪರ್ಕಕ್ಕೆ ಬಂದವರಿಗೆ ಉಡುಗೊರೆಯಾಗಿ ಕೊಡುತ್ತಿರುತ್ತಾರೆ. ಇಂಥವರಿಗೆ ಇನ್ನೂ ಹೆಚ್ಚು ದುಬಾರಿಯಾದ, ಅಡ್ಡ ಪರಿಣಾಮಗಳುಳ್ಳ ಔಷಧಗಳು ಬೇಕು. ಅಷ್ಟೇ ಅಲ್ಲ, ನುರಿತ ಕ್ಷಯ ವೈದ್ಯರ ದೇಖರೇಖೆಯಲ್ಲೇ ಇವರು ಔಷಧಗಳನ್ನು ನುಂಗಬೇಕು. ಬೆಡಾಕ್ವಿಲಿನ್ ಮತ್ತು ಡೆಲಮಿನಿಡ್ ಎಂಬ ಎರಡು ಔಷಧಗಳು.

ಪ್ರತಿರೋಧಕ ಕ್ಷಯ ರೋಗಿಗಳ ಜೀವ ಉಳಿಸಬಲ್ಲ ಔಷಧಗಳಿವು. ಆದರೇನು, ಔಷಧಗಳು ಸಿಗುವುದೇ ದುರ್ಲಭ. ಪ್ರತಿರೋಧ ಬೆಳೆಸಿಕೊಂಡಿರುವ 1.3 ಲಕ್ಷ ರೋಗಿಗಳಿದ್ದರೆ ಬೆಡಾಕ್ವಿಲಿನ್ 10,000 ಡೋಸ್ ಮತ್ತು ಡೆಲಮಿನಿಡ್ ಕೇವಲ 400 ಡೋಸ್ ಲಭ್ಯವಿದೆ. ಅದೂ ಅಮೆರಿಕದ ಜಾನ್ಸನ್ ಮತ್ತು ಜಪಾನಿನ ಒಟ್ಸುಕ ಕಂಪನಿಗಳು ಕೊಡುವ ದಾನ. ಭಾರತಕ್ಕೆ ಇಷ್ಟು ಮಾತ್ರ ಔಷಧವನ್ನು ದಾನವಾಗಿ ನೀಡಲು ಒಪ್ಪಿಕೊಂಡಿರುವ ಇವೆರಡೂ ಬಹುರಾಷ್ಟ್ರೀಯ ಲಾಭಕೋರ ಔಷಧ ಕಂಪನಿಗಳು. ಈ ಔಷಧಗಳು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಸಾಮಾನ್ಯ ರೋಗಿಗಳಿಗಂತೂ ತರಿಸಿಕೊಳ್ಳಲು, ಖರೀದಿಸಲು ಸಾಧ್ಯವೇ ಇಲ್ಲ. ಇಡೀ ದೇಶದಲ್ಲಿ ದೆಹಲಿ, ಮುಂಬೈ, ಆಹ್ಮದಾಬಾದ್, ಚೆನ್ನೈ, ಗುವಾಹಟಿ ಶಹರಗಳ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇವು ಲಭ್ಯ ಇವೆ. ಸರ್ಕಾರದ್ದೇ ಲೆಕ್ಕದ ಪ್ರಕಾರ 207 ರೋಗಿಗಳಿಗೆ ಮಾತ್ರ ಅವರು ಔಷಧವನ್ನು ಕೊಡುತ್ತಾರೆ. ಕೇವಲ ಔಷಧ ಪ್ರತಿರೋಧಕ ಕ್ಷಯವಿದ್ದರೆ ಸಾಲದು, ಯಾವ ರಾಜ್ಯಗಳಲ್ಲಿ ಔಷಧ ಲಭ್ಯವಿದೆಯೋ ಅದೇ ರಾಜ್ಯದವರಾಗಿರಬೇಕು. ಬೇರೆ ರಾಜ್ಯದವರಾಗಿದ್ದರೆ ಔಷಧ ಸಿಗುವುದಿಲ್ಲ.

ಇಂಥ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ಪ್ರತಿರೋಧಕ ಕ್ಷಯದ ರೋಗಿಗಳಿಗೆ ಚಿಕಿತ್ಸೆ ನೀಡಲು ನಮಗೀಗ ಎರಡೇ ದಾರಿಗಳಿವೆ. ಒಂದೆಂದರೆ ದೇಶಕ್ಕೆ ಔಷಧಗಳನ್ನು ದಾನ ಮಾಡಲು ತಯಾರಾಗಿರುವ ಕಂಪನಿಗಳು ರಾಯಧನ ಪಡೆದು ಆ ಔಷಧಗಳನ್ನು ತಯಾರಿಸಲು ಇಲ್ಲಿನ ಜನೆರಿಕ್ (ಜನೌಷಧ) ಉದ್ದಿಮೆಗಳಿಗೆ ಲೈಸೆನ್ಸ್ ಕೊಡಬೇಕು. ಇದಕ್ಕೆ ‘ವಾಲಂಟರಿ ಲೈಸೆನ್ಸಿಂಗ್’ ಅನ್ನುತ್ತಾರೆ. ಆದರೆ ಈ ಸಲಹೆಗೆ ಕಂಪನಿಗಳೆರಡೂ ಒಪ್ಪುತ್ತಿಲ್ಲ.

ಎರಡನೇ ದಾರಿಯೆಂದರೆ ನಮ್ಮ ದೇಶದ ಸರ್ಕಾರವು ಇಲ್ಲಿನ ಜನೌಷಧ ಕಂಪನಿಗಳಿಗೆ ‘ಕಂಪಲ್ಸರಿ ಲೈಸೆನ್ಸ್’ ಕೊಡುವುದು. ಕಂಪಲ್ಸರಿ ಲೈಸೆನ್ಸ್ ಎಂದರೆ ಪೇಟೆಂಟ್ ಹೊಂದಿರುವ ಔಷಧ ಕಂಪನಿಯ ಒಪ್ಪಿಗೆಗಾಗಿ ಕಾಯದೆ ಆ ಔಷಧ ತಯಾರಿಸಲು ತನ್ನ ದೇಶದ ಜನೌಷಧ ಕಂಪನಿಗಳಿಗೆ ಸರ್ಕಾರ ನೀಡುವ ಪರವಾನಗಿ. ಭಾರತದಲ್ಲಿ ಬೆಡಾಕ್ವಿಲಿನ್ ಔಷಧದ ಪೇಟೆಂಟ್ ಇರುವುದು ಜಾನ್ಸನ್ ಕಂಪನಿಯ ಕೈಯಲ್ಲಿ. ಆ ಕಂಪನಿಯು ಈ ದೇಶದಲ್ಲಿ ಬೆಡಾಕ್ವಿಲಿನ್ ತಯಾರಿಸಲು ಪೇಟೆಂಟ್ ಪಡೆದುಕೊಂಡಿದೆ. ಮಾರಾಟದ ಪೂರ್ತಿ ಸ್ವಾಮ್ಯವನ್ನು ತನ್ನದಾಗಿಸಿಕೊಂಡು ಜನರಿಗೆ ನಿಲುಕದ ಬೆಲೆಯನ್ನಿಟ್ಟು ‘ಬೇಕಾದರೆ ತಾನು ಸ್ವಲ್ಪ ಔಷಧವನ್ನು ದಾನ ಕೊಡುತ್ತೇನೆ’ ಎನ್ನುತ್ತಿದೆ. ಆದರೆ ಔಷಧ ತಯಾರಿಸಲು ಬೇರೆಯವರಿಗೆ ಪರವಾನಗಿ ಕೊಡುವುದಿಲ್ಲ ಎನ್ನುತ್ತಿರುವ ಕಂಪನಿಯ ಉಡಾಫೆಗೆ ಸರ್ಕಾರದ  ‘ಕಂಪಲ್ಸರಿ ಲೈಸೆನ್ಸಿಂಗ್’ ಕ್ರಮವೇ ಉತ್ತರವಾಗಬಲ್ಲದು. ತನ್ನ ಜನರ ಆರೋಗ್ಯವನ್ನು ಕಾಪಾಡಲು ದೇಶದ ಸಾರ್ವಭೌಮ ಸರ್ಕಾರವು ಕಂಪಲ್ಸರಿ ಲೈಸೆನ್ಸ್ ಕೊಡುವ ಮೂಲಕ ಆ ಕಂಪನಿಯ ಏಕಸ್ವಾಮ್ಯವನ್ನು ಮುರಿದು ಔಷಧ ತಯಾರಿಸುವ ಕ್ರಮ ಕೈಗೊಳ್ಳಬೇಕು.

ಭಾರತವು 2012ರಲ್ಲಿ ಕೇವಲ ಒಂದು ಬಾರಿ ನೆಕ್ಸಾವಾರ್ ಔಷಧ ತಯಾರಿಸಲು ನೆಟ್ಕೋ ಎಂಬ ಜನೌಷಧ ಕಂಪನಿಗೆ ಕಂಪಲ್ಸರಿ ಲೈಸೆನ್ಸ್ ನೀಡಿದಂದಿನಿಂದಲೂ ಸರ್ಕಾರದ ಮೇಲೆ ಇನ್ನಿಲ್ಲದಷ್ಟು ಒತ್ತಾಯ ಇದೆ. ಜನೌಷಧ ತಯಾರಿಕಾ ಉದ್ದಿಮೆಯ ಮೇಲೆ ಹಲವಾರು ಬಗೆಯ ಗೂಂಡಾಗಿರಿಗಳು ನಡೆದೇ ಇವೆ. ದೊಡ್ಡ ಕಂಪನಿಗಳನ್ನು, ಪಾಶ್ಚಿಮಾತ್ಯ ಸರ್ಕಾರಗಳನ್ನು ಎದುರು ಹಾಕಿಕೊಳ್ಳುವಂಥ ಎದೆಗಾರಿಕೆಯನ್ನು ಸರ್ಕಾರವು ತೋರಿಸಬೇಕು. ನಮ್ಮ ಪ್ರಧಾನಿ ಅಮೆರಿಕದ ಅಧ್ಯಕ್ಷರನ್ನು ಅಪ್ಪಿಕೊಂಡಾಗಲೆಲ್ಲ ಬಡ ರೋಗಿಗಳಿಗೆ ಔಷಧ ಸಿಗಬೇಕೆನ್ನುವವರ ಎದೆಯಲ್ಲಿ ನಡುಕವುಂಟಾಗುತ್ತದೆ. ದೇಶಭಕ್ತಿ ಮಾತ್ರ ಸಾಲದು. ದೇಶದ ಜನರನ್ನುಳಿಸುವ ಕಳಕಳಿ ಬೇಕು. ಅಂಥ ಮುಖಂಡರೇ ವಿಶ್ವ ಆರೋಗ್ಯ ಸಂಸ್ಥೆ ಕೇಳಿಕೊಂಡ ಹಾಗೆ ‘ಚರಿತ್ರೆ ನಿರ್ಮಿಸುತ್ತಾರೆ’. ಅಲ್ಲಿಯವರೆಗೆ ಕ್ಷಯ ರೋಗಿಗಳು ತಾವು ಸಾಯುತ್ತ ಸಾವಿನೆಡೆಗೆ ಇನ್ನೊಬ್ಬರನ್ನೂ ಸೆಳೆಯುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT