ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ವಿಮೆ ಏಕೆ, ಥರ್ಡ್‌ ಪಾರ್ಟಿ ವಿಮೆ ಎಂದರೇನು, ಪ್ರಯೋಜನವೇನು? ಇಲ್ಲಿದೆ ಮಾಹಿತಿ

Last Updated 19 ಸೆಪ್ಟೆಂಬರ್ 2019, 7:11 IST
ಅಕ್ಷರ ಗಾತ್ರ

ದೇಶಿ ವಾಹನ ವಿಮಾ ಕ್ಷೇತ್ರವು ಸಂಪೂರ್ಣವಾಗಿ ಪರಿಪಕ್ವವಾಗಿಲ್ಲ. ಈಗಲೂ ಹಲವು ವಾಹನಗಳಿಗೆ ವಿಮೆ ಭಾಗ್ಯ ಸಿಕ್ಕಿಲ್ಲ. ವಿಮೆ ಮಾಡಿಸಿದ್ದರೂ ಸಮರ್ಪಕವಾಗಿ ವಿಮಾ ಸೌಲಭ್ಯಕ್ಕೆ ಒಳಪಟ್ಟಿಲ್ಲ. ವಾಹನ ನೋಂದಣಿ ವೇಳೆ ಥರ್ಡ್ ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ಮತ್ತು ದಂಡ ಪಾವತಿಸಬೇಕಾಗುತ್ತದೆ ಎಂಬ ಭಯದಿಂದಲೇ ಈ ವಿಮೆಯನ್ನು ಮಾಡಿಸುತ್ತಿದ್ದಾರೆ.

ಪ್ರವಾಹದಲ್ಲಿ ವಾಹನ ಕೊಚ್ಚಿ ಹೋಗಿದ್ದರೆ ಅಥವಾ ಅಗ್ನಿ ಅವಘಡದಲ್ಲಿ ಸಿಲುಕಿ ದುರಸ್ತಿ ಮಾಡಲಾಗದಂತೆ ಹಾಳಾಗಿದ್ದರೂ ವಿಮೆ ಪಡೆಯಲು ಸಾಧ್ಯವಿದೆ.ಇಂತಹ ಸಂದರ್ಭಗಳಲ್ಲಿ ಉತ್ತಮ ಮತ್ತು ಸಮಗ್ರವಾದ ವಿಮೆ (ಕಾಂಪ್ರಹೆನ್ಸಿವ್‌ ಮೋಟರ್‌ ಇನ್ಶುರೆನ್ಸ್‌) ಹಲವು ರೀತಿಯಲ್ಲಿ ನೆರವಾಗುತ್ತದೆ. ಇದರಿಂದ ವಾಹನಕ್ಕೆ ‘360 ಡಿಗ್ರಿ’ ರಕ್ಷಣೆ ಸಿಗುತ್ತದೆ. ಈ ವಿಮೆಯನ್ನು ಮಾಡಿಸುವುದರಿಂದ ಆಗುವ ಕೆಲವು ಉಪಯೋಗಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಥರ್ಡ್‌ ಪಾರ್ಟಿ ಬಾಧ್ಯತೆ: ವಿಮೆ ಸೌಲಭ್ಯಕ್ಕೆ ಒಳಪಟ್ಟ ವಾಹನದಿಂದ ಆಗುವ ಅಪಘಾತದಿಂದ ಮೂರನೇ ವ್ಯಕ್ತಿ ಅಥವಾ ಆಸ್ತಿಗೆ ಆಗುವ ಹಾನಿಗೆ ವಿಮೆ ಪರಿಹಾರ ಒದಗಿಸುವುದಕ್ಕೆ ಥರ್ಡ್‌ ಪಾರ್ಟಿ ಕಾರ್‌ ವಿಮೆ ಎನ್ನುತ್ತಾರೆ. ಈ ಯೋಜನೆಯಡಿ, ವಿಮೆ ಪಾಲಿಸಿದಾರನ ತಪ್ಪಿನಿಂದ ಆಗುವ ಆಕಸ್ಮಿಕ ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿಗೆ ಆಗುವ ಹಾನಿಯಿಂದ ಉದ್ಭವಿಸುವ ಕಾನೂನು ಹೊಣೆಗಾರಿಕೆಯ ವಿರುದ್ಧ ಪರಿಹಾರ ಒದಗಿಸಬಹುದು.

ವಾಹನ ಚಲಾಯಿಸಲು ಅಗತ್ಯವಾದ ಕನಿಷ್ಠ ಮಟ್ಟದ ವಿಮೆ ಪರಿಹಾರ ಸೌಲಭ್ಯ ಇದಾಗಿದೆ. ಕಾರ್‌ ಚಾಲಕ ಅಥವಾ ಮಾಲೀಕ ಅಪಘಾತ ನಡೆಸಿ ಇನ್ನೊಬ್ಬರಿಗೆ ಅಥವಾ ಇನ್ನೊಬ್ಬರ (ಮೂರನೇ ವ್ಯಕ್ತಿಯ) ಆಸ್ತಿಗೆ ಹಾನಿ ಒದಗಿಸಿದ ಮತ್ತು ವಾಹನದಲ್ಲಿ ಪ್ರಯಾಣಿಸುತ್ತಿದ್ದವರಿಗೂ ವಿಮೆ ಪರಿಹಾರ ಒಳಗೊಂಡಿರುತ್ತದೆ.

ಅಪಘಾತ ಸಂದರ್ಭದಲ್ಲಿ ಪಾಲಿಸಿದಾರನಷ್ಟೇ ಅಲ್ಲದೇ ಇನ್ನೊಬ್ಬರಿಗೆ ಆಗುವ ದೈಹಿಕ ಗಾಯಕ್ಕೆ ಚಿಕಿತ್ಸಾ ವೆಚ್ಚ ದೊರೆಯುತ್ತದೆ. ಸಮಗ್ರ ವಿಮೆಯಲ್ಲಿ ಈ ವಿಮೆ ಕೂಡ ಇರಬೇಕು ಎಂಬ ನಿಯಮವಿದೆ. ಆಪತ್ತಿನ ಸಂದರ್ಭಗಳಲ್ಲಿ ಹಣಕಾಸು ಸಮಸ್ಯೆ ಎದುರಾಗದಂತೆಯೂ ಈ ವಿಮೆ ನೆರವಾಗುತ್ತದೆ. ಮುಖ್ಯವಾಗಿ ಗರಿಷ್ಠ ಸೌಲಭ್ಯ ಪಡೆಯಲು ಸಾಧ್ಯವಿದೆ. ಅಪಘಾತದಲ್ಲಿ ಮೃತಪಟ್ಟರೆ, ದೊಡ್ಡ ಮೊತ್ತದ ಪರಿಹಾರವು ಕುಟುಂಬಸ್ಥರಿಗೆ ತಲುಪುತ್ತದೆ. ಕಾರುಗಳಿಗಾದರೆ ಈ ವಿಮೆ 1ರಿಂದ 3 ವರ್ಷಗಳ ವರೆಗೆ ಇರುತ್ತದೆ. ದ್ವಿಚಕ್ರ ವಾಹನಗಳಿಗಾದರೆ ಗರಿಷ್ಠ 5 ವರ್ಷ ಇರುತ್ತದೆ.

ವಾಹನಕ್ಕೆ ರಕ್ಷಣೆ: ಅಗ್ನಿ ಅವಘಡ, ಮನೆ ಕುಸಿತ, ಕಳ್ಳತನ, ನೈಸರ್ಗಿಕ ವಿಕೋಪಗಳು, ಪ್ರತಿಭಟನೆಗಳಲ್ಲಿ ವಾಹನ ಜಖಂ ಆದರೆ, ಭಯೋತ್ಪಾದನಾ ಚಟುವಟಿಕೆಗಳಿಂದ ಹಾಳಾದರೆ, ಕಿಡಿಗೇಡಿಗಳಿಂದ ವಾಹನಕ್ಕೆ ಹಾನಿಯಾದರೆ, ಗರಿಷ್ಠ ಪ್ರಮಾಣದಲ್ಲಿ ವಿಮಾ ಹಣ ಪಡೆಯಲು ಸಾಧ್ಯವಿದೆ.

ಪ್ರತಿಯೊಂದು ವಾಹನಕ್ಕೂ ಘೋಷಿತ ವಿಮಾ ಮೌಲ್ಯ (ಐಡಿವಿ) ಇರುತ್ತದೆ. ಇದರ ಪ್ರಕಾರವೇ ವಾಹನಕ್ಕೆ ವಿಮೆ ಮಾಡಿಸಲಾಗಿರುತ್ತದೆ. ಅಪಘಾತದಲ್ಲಿ ವಾಹನ ಯಾವ ಪ್ರಮಾಣದಲ್ಲಿ ಹಾಳಾಗಿದೆ, ಆ ಪ್ರಕಾರದಲ್ಲಿ ವಿಮಾ ಹಣ ದೊರೆಯುತ್ತದೆ. ಆದರೆ ನಿಗದಿತ ಅವಧಿಯೊಳಗೆ ವಿಮಾ ಹಣಕ್ಕಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ವೈಯಕ್ತಿಕ ವಿಮೆ: ಕಾನೂನಿನ ಪ್ರಕಾರ, ವಾಹನದ ಮಾಲೀಕ ಅಥವಾ ಚಾಲಕ ₹ 15 ಲಕ್ಷದ ವಿಮೆ ಮಾಡಿಸುವುದು ಕಡ್ಡಾಯ. ಥರ್ಡ್ ಪಾರ್ಟಿ ಲಯಬಿಲಿಟಿ ವಿಮೆ ಅಥವಾ ಸಮಗ್ರ ವಿಮೆಯಲ್ಲಿ ಈ ವಿಮೆಯೂ ಇರುತ್ತದೆ. ಅಪಘಾತದಲ್ಲಿ ಗಾಯಗೊಂಡರೆ ಅಥವಾ ಮೃತಪಟ್ಟರೆ ಷರತ್ತುಗಳ ಅನ್ವಯ ವಿಮೆ ಪಡೆಯಬಹುದು.

ಹೆಚ್ಚುವರಿ ಸೌಲಭ್ಯ:ಸಮಗ್ರ ವಿಮೆಯಿಂದ ಹಲವು ಸೌಲಭ್ಯಗಳಿವೆ. ವಾಹನದ ವಯಸ್ಸು ಮತ್ತು ನಿರ್ದಿಷ್ಟ ಅವಶ್ಯಕತೆಗಳಿಗೆ ತಕ್ಕಂತೆ ವಿಮೆ ಪಡೆಯಬಹುದು. ಇದರಿಂದ ಶೂನ್ಯ ಮೌಲ್ಯ ವಿಮೆ, ಎಂಜಿನ್ ರಕ್ಷಣೆ, 24 ಗಂಟೆ ಸಲಹೆ, ಸೂಚನೆ ಮತ್ತು ಪ್ರಯಾಣಿಕರಿಗೂ ವಿಮಾ ಸೌಲಭ್ಯ ಸಿಗುತ್ತದೆ. ವಿಮಾ ಕಂಪನಿ ಮತ್ತು ವಿಮೆ ಮಾಡಿಸಿಕೊಳ್ಳುತ್ತಿರುವವರಿಗೆ ಅನುಗುಣವಾಗಿ ವ್ಯತ್ಯಾಸಗಳು ಇರುತ್ತವೆ.

(ಲೇಖಕ: ಬಜಾಜ್‌ ಅಲಯನ್ಸ್‌ ಜನರಲ್‌ ಇನ್ಶುರೆನ್ಸ್‌ನ ಮೋಟರ್‌ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT